spot_img
Thursday, December 26, 2024
spot_img

ಡಿ.ಉಮಾಪತಿಯವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ “ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ” ಪ್ರಶಸ್ತಿಗೆ ಹೆಸರಾಂತ ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ ,ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು ೨೦೨೪ ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ “ವಡ್ಡರ್ಸೆ ರಘುರಾಮ ಶೆಟ್ಟಿ” ಅವರ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು. ನ್ಯಾ.ಅಶೋಕ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿಯು ಒಮ್ಮತದಿಂದ ಹಿರಿಯ ಪತ್ರಕರ್ತ ಡಿ.ಉಮಾಪತಿಯವರನ್ನು “ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಪ್ರಶಸ್ತಿಯು ೨ ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಡಿ.ಉಮಾಪತಿ ಅವರು ಮಾರ್ಚ್ 18, 1959ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದರು. ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡನೆ ರ್‍ಯಾಂಕ್ ಪಡೆದವರು.

ನ್ಯೂ ಇಂಡಿಯನ್ ಎಕ್ಸಪ್ರೆಸ್ ಸಮೂಹ ಸಂಸ್ಥೆಯ ಕನ್ನಡಪ್ರಭ, ಈ ಟಿವಿಯ ದೆಹಲಿ ಕರೆಸ್ಪಾಂಡೆಂಟ್ ಅಗಿ ೨೭ ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರು ಗಳಿಸಿದವರು.

ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು, ಸುಪ್ರೀಂ ಕೋರ್ಟು ಗಳಲ್ಲಿನ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.

ದೆಹಲಿಯಲ್ಲಿ ನೆಲೆಸಿರುವ ಡಿ. ಉಮಾಪತಿ ಅವರು ಆಂದೋಲನ, ರೈತ ಚಳವಳಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ. ಪ್ರಸ್ತುತ ’ನ್ಯಾಯಪಥ (ಗೌರಿ ಮಿಡಿಯಾ)’ ಮತ್ತು ಈ ದಿನ’ ವೆಬ್ ಜರ್ನಲ್ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೆಹಲಿ ನೋಟ’, ’ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳು ಪ್ರಕಟವಾಗಿವೆ.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!