Sunday, November 3, 2024

ಕಾಸರಗೋಡು : ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತ | 150ಕ್ಕೂ ಹೆಚ್ಚು ಮಂದಿಗೆ ಗಾಯ

ಜನಪ್ರತಿನಿಧಿ (ಕಾಸರಗೋಡು) : ದೀಪಾವಳಿ ಹಬ್ಬ ಆಚರಣೆಗೆ ಮುನ್ನವೇ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ದೇವಸ್ಥಾನವೊಂದರ ಉತ್ಸವಸ ಸಂದರ್ಭದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ.

ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ಸಂದರ್ಭದಲ್ಲಿ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗಾಯಗೊಂಡವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು, ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಜಿಲ್ಲಾಧಿಕಾರಿ ಇಂದು(ಮಂಗಳವಾರ) ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪಟಾಕಿ ಸಂಗ್ರಹಣಾ ಕೇಂದ್ರ ಮತ್ತು ಪಟಾಕಿ ಸಿಡಿಸುವ ಸ್ಥಳವು ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ.

ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಾಗಾರಕ್ಕೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರಲಿಲ್ಲ. ಇವೆರಡರ ನಡುವೆ ಕನಿಷ್ಠ 100 ಮೀಟರ್ ಅಂತರವನ್ನು ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಅನುಸರಿಸಿಲ್ಲ. ಪಟಾಕಿಗಳನ್ನು ಸಂಗ್ರಹಿಸಲು ಯಾವುದೇ ಅನುಮತಿಯನ್ನು ತೆಗೆದುಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೇವಸ್ಥಾನದ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಕಾಸರಗೋಡು ಸಂಸದ ರಾಜಮೋಹನ್ ಉನ್ನಿತಾನ್ ಘಟನೆಯ ಬಗ್ಗೆ ವಿಸ್ತೃತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!