Tuesday, October 22, 2024

ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ-ತಲ್ಲೂರು ಶಿವರಾಮ ಶೆಟ್ಟಿ

ತೆಕ್ಕಟ್ಟೆ: ನಿರಂತರವಾಗಿ ಯಕ್ಷಗಾನ ಚಿಂತನೆಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಸಂದಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿದ್ವಾನ್ ಹಾಗೂ ಹಂದೆಯವರಿಗೆ ಪ್ರಶಸ್ತಿ ಲಭಿಸಿದೆ. ಇಪ್ಪತ್ತೈದು ವರ್ಷ ನೆಲೆಯನ್ನು ಕಂಡುಕೊಂಡು 108 ಕಾರ್ಯಕ್ರಮವನ್ನು ಹಮ್ಮಿಕೊಂಡ ಯಶಸ್ವೀ ಕಲಾವೃಂದಕ್ಕೆ ಸರ್ವರೂ ನೆರವಾಗಬೇಕು. ಅನೇಕ ಮಕ್ಕಳನ್ನು ರಂಗಕ್ಕೆ ತಂದ ಸಂಸ್ಥೆಯನ್ನು ಸರಕಾರವೂ ಗುರುತಿಸಬೇಕು ಎಂದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿಗೆ ಭಾಜನರಾದ ಗೌರವಾನ್ವಿತರನ್ನು ಅಭಿನಂದಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಸಿನ್ಸ್ ೧೯೯೯ ಶ್ವೇತಯಾನ-೭೬ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ ೧೭ರಂದು ಬೆಂಗಳೂರು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಗಣಪತಿ ಭಟ್ ಹಾಗೂ ಸುಜಯೀಂದ್ರ ಹಂದೆ ಕೋಟ ಇವರಿಗೆ ಅಭಿನಂದನೆ ಸಲ್ಲಿಸಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನ್ನಾಡಿದರು.

ಮಕ್ಕಳ ಮೇಳ ಸಾಲಿಗ್ರಾಮ ವಿಶ್ವದಲ್ಲಿಯೇ ಗುರುತಿಸಿಕೊಂಡಿದೆ. ಅಂತಹ ಮೇಳವನ್ನು ಮುನ್ನಡೆಸುತ್ತಿರುವ ಸುಜಯೀಂದ್ರ ಹಂದೆಯವರಿಗೆ ಯಕ್ಷ ದೀವಿಗೆ ಪುಸ್ತಕ ಪ್ರಶಸ್ತಿ ಲಭಿಸಿದೆ. ಹಾಗೆಯೇ ವಿದ್ವಾನ್ ಗಣಪತಿ ಭಟ್‌ರೂ ವಿದ್ವತ್ತಿನಲ್ಲಿ ಪರಿಪೂರ್ಣರು. ಇವರೀರ್ವರಿಗೂ ಪ್ರಶಸ್ತಿ ಲಭಿಸಿದ್ದು ಯೋಗ್ಯವಾಗಿದೆ. ಯಶಸ್ವೀ ಕಲಾವೃಂದ ಪ್ರತೀ ವರ್ಷ ಪ್ರಶಸ್ತಿ ಪ್ರಧಾನ ಪೂರ್ವದಲ್ಲಿಯೇ ಅಭಿನಂದನೆಯನ್ನು ಸಲ್ಲಿಸಿಕೊಂಡು ಹೆಸರಾಗಿದೆ ಎಂದು ಬಹು ಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿ ಮಾತನ್ನಾಡಿದರು.

ಯಕ್ಷಗಾನದಲ್ಲಿ ತೆಗೆದಷ್ಟು ಮೊಗೆದಷ್ಟು ವಿಚಾರಗಳಿವೆ. ಜಗತ್ತಿನ ಎಲ್ಲ ಕಲೆಗಳಿಗಿಂತ ಶ್ರೇಷ್ಠವಾದ ಕಲೆ ಯಕ್ಷಗಾನವು ನಿಲ್ಲುತ್ತದೆ ಎನ್ನುವುದನ್ನು ಯಾರೂ ಅಭಿಮಾನದಿಂದ ಹೇಳಿಕೊಳ್ಳಬಹುದು. ಆದರೆ ಹೊಸಬರಿಗೆ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗೆ ತಲುಪಬೇಕಾದರೆ ಯಕ್ಷಗಾನದೊಳಗಿನ ನ್ಯೂನತೆಗಳನ್ನು ಸರಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ವಾನ್ ಗಣಪತಿ ಭಟ್‌ರು ಯಕ್ಷಗಾನದ ಹೊರ ವಲಯಕ್ಕೂ ಸಂಗೀತದ ಸಾಹಿತ್ಯದ ವಿಶೇಷತೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಜೊತೆಗೆ ನನ್ನನ್ನೂ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಅಭಿನಂದನೆ ಸಲ್ಲಿಸಿಕೊಂಡ ಸುಜಯೀಂದ್ರ ಹಂದೆ ಮಾತನ್ನಾಡಿದರು.

ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್, ಯಕ್ಷಗುರು ಲಂಬೋದರ ಹೆಗಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವೀ ಕಲಾವೃಂದದವರಿಂದ ಹೂವಿನಕೋಲು ಹಾಗೂ ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರಿಂದ ತೆಂಕು ತಿಟ್ಟು ಯಕ್ಷಗಾನ ಭೂಮಿ ಪುತ್ರ ಭೌಮಾಸುರ ಯಕ್ಷಗಾನ ರಂಗದಲ್ಲಿ ಪ್ರದರ್ಶನಗೊಂಡಿತು.

 

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!