Tuesday, October 22, 2024

ನೆರವಿನ ನಿರೀಕ್ಷೆಯಲ್ಲಿ ಯಕ್ಷಗಾನದ ಸಭ್ಯ ಹಾಸ್ಯಗಾರ ಹಳ್ಳಾಡಿ

ಎರಡೂ ಕಾಲುಗಳ ಮಂಡಿ ಶಸ್ತ್ರಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ

ಜನಪ್ರತಿನಿಧಿ (ಕುಂದಾಪುರ / ಉಡುಪಿ) : ನಗಿಸುವುದು ಅಷ್ಟು ಸುಲಭವಲ್ಲ. ನಗಿಸುವುದಕ್ಕೆ ಎಲ್ಲರಿಂದ ಸಾಧ್ಯವೂ ಇಲ್ಲ. ನಗಿಸುವುದಕ್ಕೆ ವಿಶೇಷವಾದ ಹಾಸ್ಯಪ್ರಜ್ಞೆಯನ್ನು ಇರಿಸಿಕೊಳ್ಳಬೇಕು. ತನ್ನೊಳಗೆ ವಿಶೇಷ ಸುಸಂಸ್ಕೃತ ಸಭ್ಯ ಹಾಸ್ಯ ಪ್ರಜ್ಞೆಯನ್ನು ಇರಿಸಿಕೊಂಡು ಸುಮಾರು 58 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಬೇರೆ ಬೇರೆ ಮೇಳಗಳಲ್ಲಿ ದುಡಿದು ಯಕ್ಷಾಭಿಮಾನಿಗಳನ್ನು ನಕ್ಕು ನಗಿಸಿದ ಬಡಗು ತಿಟ್ಟಿನ ಶ್ರೇಷ್ಠ ಹಾಸ್ಯ ಕಲಾವಿದರು ಹಳ್ಳಾಡಿ ಜಯರಾಮ ಶೆಟ್ಟಿ ಅವರು.

ಈ 67ರ ಇಳಿವಯಸ್ಸಿನಲ್ಲಿಯೂ ಯಕ್ಷಗಾನದಲ್ಲಿ ತೊಡಗಿಕೊಂಡಿರುವ ಹಳ್ಳಾಡಿಯವರು ಎಳವೆಯಿಂದಲೇ ಕಷ್ಟದ ಜೀವನ ಕಂಡವರು. ಯಕ್ಷಗಾನದಲ್ಲಿ ಸುದೀರ್ಘ 58 ವರ್ಷಗಳ ಕಾಲ ದುಡಿದವರಾದರೂ ಕೂಡ ತನಗಾಗಿ ಸಂಪಾದಿಸಿ ಉಳಿಸಿಕೊಂಡಿದ್ದು ಏನೂ ಇಲ್ಲ. ಯಕ್ಷಗಾನದಲ್ಲಿ ಹಾಸ್ಯ ಕಲಾವಿದರಾಗಿ ರಾಜನಂತೆ ಮೆರೆದ ಹಳ್ಳಾಡಿ ಜಯರಾಮ ಶೆಟ್ಟಿಯವರು ಎರಡೂ ಕಾಲಿನ ಮಂಡಿ ಸವೆತ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ತುರ್ತು ಚಿಕಿತ್ಸೆಗೆ ಸೂಚಿಸಿದ್ದಾರೆ.

ಜನಪ್ರತಿನಿಧಿ ಪತ್ರಿಕೆಯ ಯೂಟ್ಯೂಬ್‌ ವಾಹಿನಿ ಇತ್ತೀಚೆಗೆ ಅವರನ್ನು ʼರಂಗಸ್ಥಳʼ ವಿಶೇಷ ಕಾರ್ಯಕ್ರಮದ ಮೂಲಕ ಸಂದರ್ಶಿಸಿತ್ತು. ಸಂದರ್ಶನ ಕಾರ್ಯಕ್ರಮದಲ್ಲಿಯೂ ಕೂಡ ಹಳ್ಳಾಡಿಯವರು ಇದೇ ನೋವನ್ನು ವ್ಯಕ್ತಪಡಿಸಿಕೊಂಡಿದ್ದರು. ರಂಗದಲ್ಲಿ ದುಡಿಯುವ ಆಸಕ್ತಿ ಇದ್ದರೂ ಅವರಿಗೆ ಸದ್ಯ ಬಾಧಿಸಿರುವ ಮಂಡಿ ನೋವಿನ ಸಮಸ್ಯೆ ಬಿಡುತ್ತಿಲ್ಲ. ʼರಂಗದಲ್ಲಿ ಉಳಿಯಬೇಕೆಂದು ಅಭಿಮಾನಿಗಳು ಬಯಸಿದರೆ, ಅಭಿಮಾನಿಗಳೇ ಜೀವನಕ್ಕೆ ಪೂರಕವಾಗುವಲ್ಲಿ ಸಹಕರಿಸಬೇಕುʼ ಎಂದು ಅವರು ಸಂದರ್ಶನದಲ್ಲಿ ಬಹಳ ದುಃಖದಲ್ಲಿ ಹೇಳಿಕೊಂಡಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಸದ್ಯ, ಹಳ್ಳಾಡಿ ಜಯರಾಮ ಶೆಟ್ಟಿ ಅವರು ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿದ್ದು, ಮಂಡಿನೋವು ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಬೇಕಾಗಿದೆ. ಜೀವನದ ಇಳಿವಯಸ್ಸಿನಲ್ಲಿರುವ ಹಳ್ಳಾಡಿಯವರು ಜೀವನಕ್ಕೆ ಆಸರೆಯಾಗುವಂತೆ ಕಲಾಭಿಮಾನಿಗಳು, ದಾನಿಗಳ ಮುಂದೆ ಕೈಯೊಡ್ಡಿ ನಿಂತಿದ್ದಾರೆ.

ಮೂರು ವರ್ಷಗಳ ಹಿಂದೆ ಹಳ್ಳಾಡಿಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸದ್ಯಕ್ಕೆ ಆ ಸಮಸ್ಯೆಯಿಂದ ತುಸು ಚೇತರಿಸಿಕೊಂಡಿರುವ ಅವರು ಈಗ ಎರಡೂ ಕಾಲುಗಳ ಮಂಡಿ ಸವೆತದ ನೋವಿನಿಂದ ಬಳಲುತ್ತಿದ್ದಾರೆ. ಈ ಬದುಕು, ಆರೋಗ್ಯದಲ್ಲಿ ಎದುರಾದ ನೋವನ್ನು ನುಂಗಿಕೊಂಡು ಯಕ್ಷಗಾನದಲ್ಲಿ ದುಡಿದು ಅಸಂಖ್ಯ ಕಲಾಭಿಮಾನಿಗಳ ಹೃದಯವನ್ನು ಹಳ್ಳಾಡಿಯವರು ಗೆದ್ದಿದ್ದರು ಎನ್ನುವುದು ಮೆಚ್ಚಲೇಬೇಕಾದ ವಿಷಯ.

ಸಭ್ಯ ಹಾಸ್ಯದ ಶ್ರೇಷ್ಠ ಕಲಾವಿದ ಹಳ್ಳಾಡಿ : ಹಳ್ಳಾಡಿಯವರು ಗಂಭೀರ ವ್ಯಕ್ತಿತ್ವದವರು. ತಮ್ಮ ವಿಶೇಷ ಕಲಾ ಪ್ರತಿಭೆಯಿಂದ ಅಸಂಖ್ಯ ಯಕ್ಷಾಭಿಮಾನಿಗಳನ್ನು ರಂಜಿಸಿದ ಹಳ್ಳಾಡಿಯವರು ಅಮೃತೇಶ್ವರಿ, ಮಂದಾರ್ತಿ, ಕುಂಬಳೆ, ಸಾಲಿಗ್ರಾಮ ಹಾಗೂ ಹಟ್ಟಿಯಂಗಡಿ ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಸ್ಯಕ್ಕೆ ಬೇಕಾದ ಶ್ರುತಿಭರಿತ ಮಾತುಗಾರಿಕೆ ಅಪಾರ ಪ್ರತ್ಯುತ್ಪನ್ನ ಮತಿತ್ವವನ್ನು ಹೊಂದಿದ್ದ ಅವರು ಅಪಾರ ವಿಷಯಸಂಪತ್ತು ಹೊಂದಿರುವ ಶ್ರೇಷ್ಠ ಹಾಸ್ಯ ಕಲಾವಿದರು. ಪೌರಾಣಿಕ ಹಾಸ್ಯ ಪಾತ್ರಗಳಲ್ಲಿ ಇವರಿಗೆ ಇರುವ ಹಿಡಿತ ಬಹುಶಃ ಯಾರಿಗೂ ಇರಲಿಕ್ಕಿಲ್ಲ. ಇವೇ ಕೆಲವು ಹೆಚ್ಚುಗಾರಿಕೆ ಇವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯ ಚಕ್ರವರ್ತಿ ಎಂದು ಗುರುತಿಸಿದೆ. ಭೀಷ್ಮವಿಜಯದ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ಬಲರಾಮ ದೂತ, ರಕ್ಕಸದೂತ, ಸಮುದ್ರ ಮಥನದ ಮೂಖಾಸುರ, ಕಾರ್ತವೀರ್ಯದ ಮೂಗ, ಮಂಥರೆ, ಕಂದರ ಬಾಹುಕ ಪಾತ್ರಗಳು ಇವರದ್ದೇ ಮರುಸೃಷ್ಟಿ ಎಂದರೂ ತಪ್ಪಿಲ್ಲ. ಶ್ರೀ ದೇವಿ ಬನಶಂಕರಿ ಪ್ರಸಂಗದ ಕಂಚೂಕಿ ಪಾತ್ರ ಇವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿದೆ.

ಬಹಳ ವಿಶೇಷವಾಗಿ ಯಕ್ಷಗಾನ ಹಾಸ್ಯಪಾತ್ರಗಳಲ್ಲಿ ಕುಂದಾಪುರ ಕನ್ನಡವನ್ನು ಬಳಸಿ ಮಲೆನಾಡು, ಕರಾವಳಿ ಉದ್ದಗಲ, ಬೇರೆ ಬೇರೆ ಆಯೋಜನೆ ಸಂದರ್ಭಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕುಂದಗನ್ನಡಕ್ಕೆ ಯಕ್ಷಗಾನದಲ್ಲಿ ವಿಶೇಷ ಸ್ಥಾನ ಲಭಬಿಸುವಲ್ಲಿ ಇವರ ಕೊಡುಗೆ ಗಮನಾರ್ಹ.

ರಂಗದಲ್ಲಿ ಇನ್ನೂ ಒಂದೆರಡು ವರ್ಷಗಳ ಕಾಲ ದುಡಿಯಬೇಕು ಎಂಬ ಆಸೆಯಲ್ಲಿದ್ದೆ. ಕುಣಿಯುವ ಕಾಲಿಗೆ ಈಗ ಕಂಟಕ ಬಂದಿದೆ. ತೃಪ್ತಿಯಿಂದ ಯಕ್ಷಗಾನಕ್ಕೆ ನಿವೃತ್ತಿ ಹೊಂದಬೇಕು ಅಂದುಕೊಂಡಿದ್ದೆ. ಆದರೇ, ನನಗೆ ಬಾಧಿಸಿದ ಮಂಡಿನೋವಿನ ಕಾರಣದಿಂದ ರಂಗಕ್ಕೇರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದೆ. ಎರಡೂ ಕಾಲುಗಳ ಮಂಡಿ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸುಮಾರು ಏಳು ಲಕ್ಷಕ್ಕೂ ಅಧಿಕ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಯಕ್ಷಗಾನದಲ್ಲಿ 58 ವರ್ಷಗಳ ಕಾಲ  ದುಡಿದಿದ್ದರೂ, ನನಗಾಗಿ ಸಂಪಾದಿಸಿ ಉಳಿಸಿಕೊಂಡಿದ್ದು ಏನೂ ಇಲ್ಲ. ಮುಂದೆ ದಿಕ್ಕು ಕಾಣದಂತಾಗಿದೆ. ಅಭಿಮಾನಿಗಳು ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ.
-ಹಳ್ಳಾಡಿ ಜಯರಾಮ ಶೆಟ್ಟಿ, ಯಕ್ಷಗಾನ ಹಾಸ್ಯ ಕಲಾವಿದರು.

ಹಳ್ಳಾಡಿ ಜಯರಾಮ ಶೆಟ್ಟಿ ಅವರು ನಮ್ಮ ಹಟ್ಟಿಯಂಗಡಿ ಮೇಳದಲ್ಲಿ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ನೋವನ್ನು ನುಂಗಿಕೊಂಡು ಪ್ರೇಕ್ಷಕರ ಮುಖದಲ್ಲಿ 58 ವರ್ಷಗಳ ಕಾಲ ನಿರಂತರವಾಗಿ ನಗು ತರಿಸಿದ ಕಲಾವಿದರು. ವಿಪರೀತ ಮಂಡಿ ನೋವಿನಿಂದ ಅವರು ಬಳಲುತ್ತಿದ್ದರಿಂದ ಅವರಿಗೆ ರಂಗವೇರಲು ಈಗ ಸಾಧ್ಯವಾಗುತ್ತಿಲ್ಲ. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಮನಸ್ಸು ಮಾಡಿದರೇ ತಮ್ಮಿಷ್ಟದ ಕಲಾವಿದರೊಬ್ಬರು ಮತ್ತೆ ರಂಗದಲ್ಲಿ ಪ್ರದರ್ಶನ ನೀಡುವಂತೆ ಮಾಡುವುದು ಕಷ್ಟವೇನಲ್ಲ.
-ರಂಜಿತ್‌ ಕುಮಾರ್‌ ಶೆಟ್ಟಿ , ಯಜಮಾನರು, ಹಟ್ಟಿಯಂಗಡಿ ಮತ್ತು ಮೆಕ್ಕೆಕಟ್ಟು ಮೇಳ.

ನೆರವು ನೀಡಿ : ಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡಲು ಬಯಸುವವರು ಕರ್ಣಾಟಕ ಬ್ಯಾಂಕ್ ಕಕ್ಕುಂಜೆ ಶಾಖೆಯ ಉಳಿತಾಯ ಖಾತೆ  3942500100172001, ಐಎಫ್‌ಎಸ್‌ಸಿ ಕೋಡ್: ಕೆಎಆರ್‌ಬಿ0000394  ಗೆ ಸಲ್ಲಿಸಬಹುದು.
ಸಂಪರ್ಕ ಸಂಖ್ಯೆ : 9353834772

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!