Tuesday, October 22, 2024

ಯಕ್ಷದೇಗುಲದ ರಾಮಾಯಣ ದರ್ಶನದ ಯಕ್ಷಗಾನ ಉತ್ಸವ

 

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ 45ವರ್ಷಗಳಿಂದ ಸದಾ ಚಟುವಟಿಕೆಯಿಂದಿರುವ ಹಾಗೂ ಗುಣಾತ್ಮಕ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿರುವ ಯಕ್ಷದೇಗುಲ ತಂಡವು ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ 5-10-2024ರಂದು ಬೆಂಗಳೂರಿನ ಗವಿಪುರಂನ ಉದಯಭಾನು ಸಭಾಂಗಣದಲ್ಲಿ ರಾಮಾಯಣ ದರ್ಶನದ ಯಕ್ಷಗಾನ ಉತ್ಸವವನ್ನು ಹಮ್ಮಿಕೊಂಡಿತ್ತು.

ಶಿಕ್ಷಾಲೋಕಮ್ ಮ್ಯಾನೇಜರ್ ಶ್ರೀವಾತ್ಸವ್ ರವರು ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಹೆರಂಜಾಲ್ ಸುಬ್ಬಣ್ಣ ಗಾಣಿಗರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಹಿರಿಯ ಮತ್ತು ಯುವ ಕಲಾವಿದರ ಕೂಡುವಿಕೆಯಲ್ಲಿ ಪಾರ್ಥಿ ಸುಬ್ಬ ವಿರಚಿತ ಭರತಾಗಮನ ತಾಳಮದ್ದಲೆ ನಡೆಯಿತು. ನಂತರ ಯಕ್ಷದೇಗುಲ ಮಕ್ಕಳ ತಂಡದಿಂದ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯ ಕೃಷ್ಣಂ ವಂದೇ ಜಗದ್ಗುರುಂ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಮಧ್ಯಾಹ್ನ ೨ ರಿಂದ ರಾಮಾಯಣ ದರ್ಶನದ ನೃತ್ಯ ಸ್ಪರ್ಧೆ ನಡೆಯಿತು. ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದರಾದ ಆರ್ಗೋಡು ಮೋಹನ್ ದಾಸ್ ಶೆಣೈ ಯವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ| ಆನಂದ ರಾಮ ಉಪಾಧ್ಯರು ಮಾತನಾಡಿ ಜನಮೆಚ್ಚಿದ ಸಂಸ್ಥೆ ಯಕ್ಷದೇಗುಲ, ತಂದೆ ಮೋಹನರು ದಾಖಲೆಯ ಮಟ್ಟಕೇರಿಸಿದ ಸಂಸ್ಥೆ ಯಕ್ಷದೇಗುಲವನ್ನು ಮಗಳು ಪ್ರಿಯಾಂಕ ಹೊಸ ಪರಿಕಲ್ಪನೆಯೊಂದಿಗೆ ಹೊಸ ಆಯಾಮದಲ್ಲಿ ಯಕ್ಷಗಾನವನ್ನು ಉಣಪಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘ್ಯಯೋಗ್ಯ ವಿಚಾರ. ನಾವು ಯಕ್ಷದೇಗುಲ ಸಂಸ್ಥೆಯ ಕಲಾವಿದನಾಗಿರುವೆ ಎನ್ನುವುದು ನನಗೆ ಹೆಮ್ಮೆ ಎಂದರು. ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕರಾದ ನಾಗರಾಜ ಶೇರ್ವೆಗಾರರು ಕಲೆಗಳಿಂದ ಸಿಗುವ ಆನಂದ ಬೇರೆ ಯಾವುದರಿಂದಲೂ ಸಿಗದು, ಕಲೆಯನ್ನು ಕಲಾವಿದರನ್ನು ಗೌರವಿಸುವುದು ಒಂದು ಸಂಸ್ಕಾರ. ಅಂತೆಯೇ ಕಲಾವಿದರು ಇಂತಹ ವಿಭಾಗದಲ್ಲಿ ಕೃತಜ್ಞತೆಯನ್ನು ಸಲ್ಲಿಸಬೇಕಾದದ್ದು ಸಂಸ್ಕಾರ. ಹಲವು ಕಲಾವಿದರು ಗೌರವವನ್ನು ಮರೆಯುತ್ತಿರುವುದು ವಿ?ದ ಸಂಗತಿ. ನಮ್ಮ ಮಕ್ಕಳಿಗೆ ಯಕ್ಷ ಸಂಸ್ಕಾರವನ್ನು ನೀಡಬೇಕು. ಏಕೆಂದರೆ ಯಕ್ಷಗಾನದಲ್ಲಿ ಸತ್ವಶಕ್ತಿ ಇದೆ. ಗೀತೆ, ನೃತ್ಯ, ವಾದ್ಯ, ವೇಷ, ವಾಕ್ಚಾತುರ್ಯ ಎಲ್ಲವನ್ನು ಒಳಗೊಂಡು ಯಕ್ಷಗಾನ ಶ್ರೀಮಂತವಾಗಿದೆ ಎಂದರು.

ಸನ್ಮಾನಿತರಾದ ಆರ್ಗೋಡು ಮೋಹನ್ ದಾಸ್ ಶೆಣೈಯವರು ತಮ್ಮ ಸನ್ಮಾನ ನುಡಿಯಲ್ಲಿ ಹಿರಿಯ ಅನೇಕ ಕಲಾವಿದರನ್ನು ನೋಡುತ್ತ ನೋಡುತ್ತ ಕಲಿಯಬೇಕಾದಂತಹ ಕಾಲಘಟ್ಟದಲ್ಲಿ ಆಸಕ್ತಿಯೊಂದೇ ಯಕ್ಷಗಾನ ಕಲಿಯುವಿಕೆಗೆ ಮಾನದಂಡವಾಗಿತ್ತು. ಆರ್ಥಿಕ ಬಲವಿಲ್ಲದ ಆ ಕಾಲದಲ್ಲಿ ಕಾಲಾಯಾಪನೆ ಮಾಡಲು ಯಕ್ಷಗಾನವೇ ಪ್ರಾಮುಖ್ಯವಾಗಿತ್ತು. ಪ್ರಸಂಗ ಸಾಹಿತ್ಯವನ್ನು ಮಾನಸಿಕ ಒತ್ತಡಗಳಿಲ್ಲದ ಕಾಲದಲ್ಲಿ ಕೇವಲ ಬೇರೆಯವರಲ್ಲಿ ಕೇಳುತಾ, ಕೇಳುತ್ತಾ ಕಲಿಯಬೇಕಾದಂತಹ ಅನಿವಾರ್ಯತೆ ನಮಗಿತ್ತು. ಹೊಸ ಹೊಸ ಪ್ರೇಕ್ಷಕರನ್ನು ಆಕರ್ಷಿಸುತ್ತಾ ಇರುವ ಪ್ರೇಕ್ಷಕರನ್ನು ಉಳಿಸಿಕೊಂಡು, ಯಕ್ಷಗಾನವನ್ನು ವಿಶ್ವಗಾನವಾಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು. ವೇದಿಕೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸಕರಾದ ಡಾ. ಗಣೇಶ್ ಶೆಣೈ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್‌ರು ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಮೋಹನ್ ರವರು ವಂದಿಸಿದರು. ವಿಶ್ವನಾಥ ಉರಾಳರು ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ನಿರ್ದೇಶಕಿ ಪ್ರಿಯಾಂಕ ಕೆ. ಮೋಹನ್ ಉಪಸ್ಥಿತರಿದ್ದರು. ನಂತರ ನುರಿತ ಕಲಾವಿದರಿಂದ ಕಾಸರಗೋಡು ಸುಬ್ರಾಯ ಪಂಡಿತ್ ವಿರಚಿತ ರಾವಣವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕೋಟ ಸುದರ್ಶನ ಉರಾಳರು ಸಂಯೋಜಿಸಿದರು.

 

 

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!