Tuesday, October 22, 2024

ಬಗ್ವಾಡಿ: ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’ ಶರನ್ನವರಾತ್ರಿ ವಿಶೇಷ

ಕುಂದಾಪುರ: (ಜನಪ್ರತಿನಿಧಿ ವರದಿ) ಶರನ್ನವರಾತ್ರಿಯ ಶುಭವಸರದಲ್ಲಿ ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ‘ಮನೆಮನದಲ್ಲಿ ಮಹಿಷಾಸುರಮರ್ದಿನಿ’  ವಿನೂತನ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ.
ಶರನ್ನವರಾತ್ರಿಯ ಸಂದರ್ಭದಲ್ಲಿ ಶ್ರೀದೇವಿ ಮಹಿಷಾಸುರಮರ್ದಿನಿ ಬಗ್ವಾಡಿ ಗ್ರಾಮದ ಪ್ರತಿ ಮನೆಮನೆಗೆ ತೆರಳುವ ಅಪರೂಪದ ಪ್ರಕ್ರಿಯೆ ಪ್ರಥಮ ನವರಾತ್ರಿಯಂದು ಆರಂಭಗೊಂಡಿದೆ. ಮಧ್ಯಾಹ್ನದ ಮಹಾಪೂಜೆಯ ಬಳಿಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೇವಿಯನ್ನು ಅಲಂಕೃತ ಮಂಟಪದಲ್ಲಿರಿಸಿ ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಗ್ರಾಮದ ಮನೆಮನೆಗೆ ತೆರಳಲಾಗುತ್ತದೆ. ಇದರೊಂದಿಗೆ ಭಜನಾ ತಂಡ, ಅರ್ಚಕರು, ಪ್ರತಿನಿಧಿಗಳು ಇರುತ್ತಾರೆ. ಮನೆಮನೆಗೆ ಆಗಮಿಸುವ ದೇವಿಯನ್ನು ಭಕ್ತಾದಿಗಳು ಭಕ್ತಿ ಗೌರವದಿಂದ ಸ್ವಾಗತಿಸಿಕೊಳ್ಳುತ್ತಾರೆ. ಮನೆಯ ಒಳಗೆ ದೇವಿಯನ್ನು ಇರಿಸಿ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಜನಾ ತಂಡದಿಂದ ಮನೆಯಲ್ಲಿ ಭಜನೆ ನೆಡೆಯುತ್ತದೆ. ಮನೆಯಲ್ಲಿ ಪೂಜೆ ಸಲ್ಲಿಕೆಯ ಬಳಿಕ ಕ್ಷೇತ್ರದ ಗಂಧ ಪ್ರಸಾದವನ್ನು ನೀಡಿ ಮತ್ತೊಂದು ಮನೆಗೆ ತಂಡ ತೆರಳುತ್ತದೆ. ಈ ಹೀಗೆ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಬಗ್ವಾಡಿ ಗ್ರಾಮದ 180ಮನೆಗಳನ್ನು ಒಂಭತ್ತು ದಿನಗಳಲ್ಲಿ ತಲುಪಲಾಗುತ್ತದೆ. ಶರನ್ನವರಾತ್ರಿಯ ಸಂದರ್ಭ ಶ್ರೀದೇವಿಯೇ ಮನೆಗೆ ಬರುವ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಈ ಕಾರ್ಯಕ್ರಮದ ರೂಪುರೇಷೆ, ಪರಿಕಲ್ಪನೆಯ ಬಗ್ಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ವಿವರಿಸುತ್ತಾ, ಬಗ್ವಾಡಿಯಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳು, ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನವರಾತ್ರಿಯ ಸಮಯದಲ್ಲಿ ಶಕ್ತಿಸ್ವರೂಪಿಣಿ ಮಹಿಷಾಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಮನೆಮನ ಅಲಂಕರಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಬಗ್ವಾಡಿ ಗ್ರಾಮದ ಪ್ರತಿಮನೆಗೆ ಭಜನೆ ತಂಡದೊಂದಿಗೆ ಪೂಜಿಸಲ್ಪಟ್ಟ ಮಹಿಷಾಸುರಮರ್ದಿನಿ ದೇವಿಯೊಂದಿಗೆ ತೆರಳಿ ಪ್ರತಿಮನೆಯಲ್ಲಿ ಆರಾಧಿಸುವ ಧಾರ್ಮಿಕ ಪ್ರಕ್ರಿಯೆ ಇದಾಗಿದೆ. ಇಡೀ ಬಗ್ವಾಡಿ ಗ್ರಾಮದ ಎಲ್ಲ ಮನೆಗಳನ್ನು ತಲುಪುವ ನಿಟ್ಟಿನಲ್ಲಿ ಸಭೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ೯ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಸ್ಥಳೀಯ ಪ್ರತಿನಿಧಿಗಳು, ಆಡಳಿತ ಸಮಿತಿ ಪ್ರತಿನಿಧಿಗಳು, ಭಜನಾ ತಂಡದವರು ಇರುತ್ತಾರೆ. ಪ್ರತಿದಿನ 15-20 ಮನೆ ತಲುಪುವ ಗುರಿ ಹೊಂದಲಾಗಿದೆ. ಮನೆಮನೆಗೆ ದೇವಿಯೊಂದಿಗೆ ತೆರಳಿ ಮನೆಯಲ್ಲಿ ಪೂಜಿಸಿ, ಭಜನೆ ಮಾಡಿ ಗಂಧಪ್ರಸಾದವನ್ನು ನೀಡಲಾಗುತ್ತದೆ. ಮೊದಲ ದಿನ ಭಾಸ್ಕರ ಭಟ್ ಅವರ ಮನೆಯಿಂದ ಆರಂಭಗೊಂಡು ೨೬ ಮನೆಯನ್ನು ತಲುಪಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಣೇಶ ಮೆಂಡನ್ ಮುಂಬಯಿ, ಎನ್.ಡಿ ಚಂದನ್, ಕೃಷ್ಣಮೂರ್ತಿ ನಾಯ್ಕ್ ಮುಂಬಯಿ, ರಾಘವೇಂದ್ರ ಚಂದನ್ ಮುಂಬಯಿ, ಎಂ.ಎಂ.ಸುವರ್ಣ, ಎಂ.ಆರ್ ನಾಯ್ಕ್, ಸಂತೋಷ್ ಶೆಟ್ಟಿ ಬಗ್ವಾಡಿ, ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜೀವ ಶೆಟ್ಟಿ ಬಗ್ವಾಡಿ, ಆನಂದ ಕೆ.ನಾಯ್ಕ್, ನಾಗೇಶ ಪಿ.ಕಾಂಚನ್, ದಿನೇಶ ಕಾಂಚನ್, ಪ್ರಭಾಕರ ಸೇನಾಪುರ, ಶ್ಯಾಮಲ ಜಿ.ಚಂದನ್, ರಾಜೀವ ಸೌರಭ, ಶೋಭಾ ಪುತ್ರನ್, ವಾಸು ಜಿ.ನಾಯ್ಕ್, ಕ್ಷೇತ್ರದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.
ಶ್ರೀಮಹಿಷಾಸುರಮರ್ದಿನಿ ಭಜನಾ ತಂಡದ ಸದಸ್ಯರು, ಶ್ರೀ ಮಾತಾ ಭಜನಾ ಮಂಡಳಿ ಹಕ್ರೆಮಠ ಕೊಡೇರಿ ಇಲ್ಲಿನ ಭಜನಾ ತಂಡದವರು ಭಾಗವಹಿಸಿದ್ದರು.
ಮನೆಯಲ್ಲಿ ತಾಳ, ಘಂಟೆ, ಜಾಗಟೆ ನಾದದೊಂದಿಗೆ ಭಜನೆಯಿಂದ ಧಾರ್ಮಿಕ ಶಕ್ತಿ ಸಂಚಯವಾಗುತ್ತದೆ. ಧನಾತ್ಮಕವಾದ ಲವಲವಿಕೆ ಮೂಡುತ್ತದೆ. ಹೊಸ ಉತ್ಸಾಹ ಜಾಗೃತವಾಗುತ್ತದೆ. ಧಾರ್ಮಿಕವಾಗಿ ಭಕ್ತಿ ಭಾವುಕತೆ ತುಂಬಿ ಬರುತ್ತದೆ. ಶರನ್ನವರಾತ್ರಿಯ ಸಂದರ್ಭದಲ್ಲಿ ಈ ಉತ್ಸವ ಹೊಸ ಸಂಚಲನ ಮೂಡಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!