Saturday, October 12, 2024

ದೈವ ದೇವರ ಅತೀತ ಶಕ್ತಿಯನ್ನು ಸಿನೆಮಾ ಮಾಡಿ ತೋರಿಸಬೇಕೆ !?

ಗಟ್ಟಿತನವಿಲ್ಲದ ʼಕಲ್ಜಿಗʼದಲ್ಲಿ ಕೊರಗಜ್ಜ ಅಪಾತ್ರ !

ಸಿನೆಮಾ‌ ಮಾಧ್ಯಮಗಳಲ್ಲಿ ದೃಶ್ಯಗಳು ಮಾತನಾಡುತ್ತವೆ. ದೃಶ್ಯಗಳೆ ಕಥೆಗಳಾಗಿ ಮಾತನಾಡುತ್ತವೆ. ಬಹುಶಃ ಯಾವ ರಂಗವೂ ಕಟ್ಟಿಕೊಡದ ಮಾತನ್ನು ಸಿನೆಮಾ ರಂಗ ಆಡುತ್ತದೆ. ಅದು ಸಿನೆಮಾ ಕ್ಷೇತ್ರದ ಹೆಚ್ಚುಗಾರಿಕೆ. ಸಿನೆಮಾದ ವಿಷಯದ ಆಳ ವಿಸ್ತಾರ ಗಟ್ಟಿ ಇಲ್ಲದೆ ಇದ್ದರೂ, ದೃಶ್ಯಗಳು ಸಿನೆಮಾಗಳಿಗೆ ಗಟ್ಟಿ ಬೇಕು. ಸಿನೆಮಾಗಳಲ್ಲಿ ಒಮ್ಮೊಮ್ಮೆ ದೃಶ್ಯಗಳೇ ಎಲ್ಲವನ್ನೂ ಹೇಳಿಬಿಡುತ್ತವೆ. ಅಥವಾ ಸಿನೆಮಾಗಳಲ್ಲಿ ದೃಶ್ಯಗಳೇ ಎಲ್ಲವನ್ನೂ ಹೇಳಿಬಿಡಬೇಕು ಎಂದರೆ ಸೂಕ್ತ ಆಗುತ್ತದೆ ಇರಬೇಕು. ಒಂದು ವೇಳೆ ಇವೆರಡರಲ್ಲಿ ಯಾವುದಾರೂ ಒಂದು ಸೋತರೂ ಪ್ರೇಕ್ಷಕರ ಮನಸ್ಸಲ್ಲಿ ಸಿನೆಮಾ ಗೆದ್ದು ಬಿಡಬಹುದು. ಆದರೆ, ಎರಡೂ ಸೋತರೆ ತೀರಾ ಯಕಶ್ಚಿತ್ ಎಂಬ ಧೋರಣೆಯಲ್ಲೇ ಸಿನೆಮಾವನ್ನು ನೋಡುಗರು ತ್ಯಜಿಸಿಬಿಡುತ್ತಾರೆ.

ಪ್ರೇಕ್ಷಕರು ಸಿನೆಮಾ ನಿರ್ಮಾಪಕರು ಅಲ್ಲದೆ ಇರಬಹುದು, ಸಿನೆಮಾ ನಿರ್ದೇಶಕರು ಅಲ್ಲದೆ ಇರಬಹುದು, ಸಿನೆಮಾ ನಟ, ನಟಿಯರು ಅಲ್ಲದೆ ಇರಬಹುದು, ಸಿನೆಮಾ ಟೆಕ್ನಿಶಿಯನ್ಸ್ ಅಲ್ಲದೆ ಇರಬಹುದು. ಆದರೆ, ಸಿನೆಮಾ ತಂಡವೊಂದು ನಿರ್ಮಿಸಿದ ಎಂಥದ್ದೇ ಒಂದು ಸಿನೆಮಾ ನೋಡುವಾಗ ಶಿಳ್ಳೆ, ಕೇಕೆ, ಚಪ್ಪಾಳೆ ಹೊಡೆಯುವ ಸಿನೆಮಾ ಪ್ರೇಕ್ಷಕರ ಪೈಕಿಯಲ್ಲಿ ಒಬ್ಬ ಪ್ರಾಮಾಣಿಕ ವಿಮರ್ಶಕನಿರಬಹುದು. ಒಬ್ಬ ಒಳ್ಳೆಯ ವಿಶ್ಲೇಷಕನಿರಬಹುದು ಎಂಬುವುದನ್ನು ಸಿನೆಮಾ ತಂಡ ಮರೆಯಬಾರದು. ಈ ವಿಷಯವನ್ನು ಮರೆತ ಸಿನೆಮಾ ತಂಡ ಸಿನೆಮಾವನ್ನು ಮಾಡುವುದಕ್ಕೆ ಮುಂದಾಗಲೇಬಾರದು. ಸಿನೆಮಾ ಕ್ಷೇತ್ರ ʼಜನಪ್ರೀತಿಗಳಿಸುವುದನ್ನು ಬಿಟ್ಟು ಜನಪ್ರಿಯʼ ಮನರಂಜನಾ ಮಾಧ್ಯಮವಾದಂತಿದೆ. ಇದು ಜವಾಬ್ದಾರಿಯನ್ನು ಮರೆತ ಸ್ಥಿತಿ ಅಂತಲೇ ಹೇಳಬಹುದು.

ಸಿನೆಮಾ ನೋಡುವುದಕ್ಕೆ ಬರುವ ಪ್ರೇಕ್ಷಕರನ್ನು ವಂಚಿಸುವ ಯಾವ ಅಧಿಕಾರವೂ ಸಿನೆಮಾ ತಂಡಕ್ಕೆ ಇಲ್ಲ. ಕಾಲ ಬದಲಾಗಿದೆ. ಸಿನೆಮಾ ಕ್ಷೇತ್ರದ ಮುಂದೆ ದೊಡ್ಡ ಸವಾಲಿದೆ, ಸಿನೆಮಾ ಕ್ಷೇತ್ರದ ವ್ಯಾಪ್ತಿ ವಿಸ್ತಾರಗೊಂಡಿದೆ. ಬದಲಾವಣೆಯ ತುರ್ತಿದೆ. ಈ ಎಲ್ಲವನ್ನು ಸಾರ್ಥಕವಾಗಿ ಪ್ರೇಕ್ಷಕರಿಗೆ ಒಪ್ಪಿಸಬೇಕಾದರೇ ಸುದೀರ್ಘ ಪರಿಶ್ರಮ, ಅಧ್ಯಯನ ಬೇಕು. ಪರಿಶ್ರಮ ಅಥವಾ ಅಧ್ಯಯನ ರಹಿತವಾಗಿ ಬರುವ ಸಿನೆಮಾ ಖಂಡಿತ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ನಿರ್ಮಾಣ ಸಂಖ್ಯೆಯನ್ನು ಹೆಚ್ಚಿಸುವುದಕ್ಕೋ, ದಾಖಲೀಕರಣದ ಕಾರಣಕ್ಕೋ ಏನನ್ನೊ ಮಾಡಿದರೆ ಈಗಿನ ಜನರಂತೂ ಒಪ್ಪುವ ಮನಸ್ಥಿತಿಯಲ್ಲಿಲ್ಲ‌.

‘ಕಾಂತಾರ’ ಸಿನೆಮಾ ಬಂದ ಮೇಲೆ ಸಿನೆಮಾಕ್ಕೆ ದೈವ ದೇವರುಗಳನ್ನು ಅನಗತ್ಯವಾಗಿ ತರುವ ಕೆಟ್ಟ ಅಭ್ಯಾಸ ಸಿನೆಮಾ ಕ್ಷೇತ್ರದಲ್ಲಿ ಬಂದುಬಿಟ್ಟಿದೆ ಎಂದರೆ ತಪ್ಪಿಲ್ಲ. ಕಣ್ಣಿಗೆ ಕಾಣದೆ ಇರುವ ಅತೀತ ಶಕ್ತಿಯನ್ನು ನಂಬುವ ಜನ ಇಲ್ಲಿದ್ದಾರೆ ಎಂಬ ಕಾರಣಕ್ಕೆ, ದೈವ ದೇವರುಗಳನ್ನು ಸಿನೆಮಾದಲ್ಲಿ ಸೇರಿಸಿಕೊಂಡರಾಯ್ತು, ಸಿನೆಮಾದಲ್ಲಿ ಕಥೆ ಏನಾದರೂ ಪರವಾಗಿಲ್ಲ ಜನ ಬರುತ್ತಾರೆ ಎಂಬ ಧೋರಣೆ ಸಿನೆಮಾ ಕ್ಷೇತ್ರದಲ್ಲಿ ಕೆಲವರಿಗೆ ಬಂದು ಬಿಟ್ಟಿದೆ ಅಂತನ್ನಿಸುತ್ತಿದೆ. ಏನೇನೋ ಅರ್ಥವಿಲ್ಲದ, ಗಟ್ಟಿತನವಿಲ್ಲದ ಕಥೆಗೆ ದೈವ ದೇವರುಗಳನ್ನು ಎಳೆತಂದು ಮನಬಂದಂತೆ ವೈಭವೀಕರಿಸುವ ಛಾಳಿ ಸಿನೆಮಾ ರಂಗಕ್ಕೆ ಹೊಸತಲ್ಲದೆ ಇದ್ದರೂ, ಈಗ ಅದು ತೀವ್ರ ಸ್ವರೂಪ ಕಂಡುಕೊಂಡಿದೆ ಅಂತನ್ನಿಸುತ್ತಿದೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ವಿವಾದಕ್ಕೊಳಗಾಗುತ್ತಲೇ ಇದೆ.

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನೆಮಾ ತನ್ನಲ್ಲಿನ ಕಥೆಯ ಆಳ, ವಿಸ್ತಾರದ ನಡುವೆಯೂ ವಿವಾದಕಕ್ಕೊಳಗಾಗಿತ್ತು. ಇನ್ನು, ಗಂಭೀರ ಕಥೆ, ವಿಷಯ, ವಸ್ತು ಆಳ ಅಗಲವಿಲ್ಲದ ಸಿನೆಮಾ ವಿವಾದಕ್ಕೊಳಗಾಗದೇ ಇರುತ್ತದೆಯೆ? ಸಿನೆಮಾದಲ್ಲಿ ದೈವ ದೇವರುಗಳಿಗೆ ಅಥವಾ ಧಾರ್ಮಿಕ ನಂಬಿಕೆಗೆ ಅಪಚಾರ ಮಾಡಿದ್ದಾರೆ ಎನ್ನುವ ವಾದವನ್ನು ಬದಿಗಿಟ್ಟು ನೋಡಿದರೆ, ಸಿನೆಮಾದಲ್ಲಿ ಏನಿದೆ ಎನ್ನುವುದು ಕೂಡ ಚರ್ಚೆಯಾಗಬೇಕಲ್ಲವೆ ? ಇತ್ತೀಚೆಗೆ ತೆರೆಕಂಡ ‘ಕಲ್ಜಿಗ’ ಸಿನೆಮಾದಲ್ಲಿ ಏನಿದೆ ? ತಲೆಮಾರುಗಳಿಂದ ಈ ನೆಲದ ಒಂದು ಅತೀತ ಶಕ್ತಿಯನ್ನು ನಂಬಿಕೊಂಡು, ಆರಾಧಿಸಿಕೊಂಡು ಬಂದ ಜನರಿಗೆ ಕಾರಣಿಕ ದೈವ ಎಂದು ದೈವ ಶಕ್ತಿಯನ್ನು ತೋರಿಸುವ ಯಾವ ಅಗತ್ಯವಿತ್ತು ಎನ್ನುವುದೇ ಪ್ರಶ್ನೆ.

‘ಕಲ್ಜಿಗ’ ಸಿನೆಮಾ ವಿವಾದಕ್ಕೊಳಗಾದಾಗ, ಸಿನೆಮಾ ತಂಡ ʼಸಿನೆಮಾ ನೋಡಿ ಮಾತನಾಡಿʼ ಎಂದು ಸಮರ್ಥಿಸಿಕೊಂಡಿತ್ತು. ಈಗ ನೋಡಿದವರು ಮಾತಾಡುತ್ತಿದ್ದಾರೆ, ಸಿನೆಮಾ ತಂಡ ಕೇಳಿಸಿಕೊಳ್ಳಲಿ. ‘ಕಲ್ಜಿಗ’ ಸಿನೆಮಾದ ಕಥೆ ಏನು ? ಕಥೆಯಲ್ಲಿ ಯಾವ ವಿಚಾರ ಹೊಸತನ್ನು ನೀಡಲಾಗಿದೆ ? ಕೊರಗಜ್ಜ ದೈವ ಕಾರಣಿಕ ಎಂದು ತೋರಿಸಿಕೊಡುವ ಅಗತ್ಯ ಸಿನೆಮಾ ತಂಡಕ್ಕೆ ಏನಿತ್ತು ? ಕೊರಗಜ್ಜ ದೈವದ ಕಾರಣಿಕದ ಬಗ್ಗೆ ಈ ನೆಲದವರಿಗೆ ಯಾರಿಗೆ ತಿಳಿದಿಲ್ಲ ? ಆಸ್ತಿಕ ವರ್ಗದವರಿಗಾಗಿಯೇ ಈ ಸಿನೆಮಾವನ್ನು ಮಾಡಿದ್ದೆ? ಆಸ್ತಿಕ ವರ್ಗದವರಿಗೆ ದೈವ ದೇವರುಗಳಿಗೆ ಶಕ್ತಿ ಇದೆ ಎಂದು ಸಿನೆಮಾ ತಂಡ ಹೇಳಿಕೊಡುವಂತದ್ದೇನಿದೆ ? ಅಥವಾ ನಾಸ್ತಿಕ ವರ್ಗಕ್ಕಾಗಿ ಸಿನೆಮಾ ನಿರ್ಮಾಣ ಮಾಡಿದ್ದೆ ? ನಾಸ್ತಿಕ ವರ್ಗ ದೈವ ದೇವರುಗಳ ಅತೀತ ಶಕ್ತಿಯನ್ನು ಯಾವ ರೀತಿಯಲ್ಲಿ ವೈಭವಿಕರಿಸಿ ತೋರಿಸಿದರೂ ನಾಸ್ತಿಕ ವರ್ಗ ಒಪ್ಪುವುದಿಲ್ಲ. ಅಥವಾ ಮುಂದಿನ ಪೀಳಿಗೆಗಾಗಿ ಮಾಡಿದ ಸಿನೆಮಾವೆ ? ಆಸ್ತಿಕ ವರ್ಗದಲ್ಲಿ ಹುಟ್ಟಿದ ಒಂದು ಹೊಸ ಪೀಳಿಗೆ ದೈವ ದೇವರುಗಳ ಮೇಲೆ ನಂಬಿಕೆಯಿರಿಸಿಕೊಂಡೇ ಬೆಳೆಯುತ್ತದೆ. ನಾಸ್ತಿಕ ವರ್ಗದಲ್ಲಿ ಹುಟ್ಟಿದ ಹೊಸ ಪೀಳಿಗೆ ಬಹುಶಃ ಖಂಡಿತ ದೈವ ದೇವರುಗಳನ್ನು ಒಪ್ಪುವುದಿಲ್ಲವೇನೋ. ಯಾವುದಕ್ಕೂ ಅಲ್ಲ ಎನ್ನುವುದಾದರೇ ಯಾಕೆ ಬೇಕಿತ್ತು? ಸಾಧ್ಯವಾದರೇ ಒಂದು ದೈವದ ಬಗ್ಗೆಯೇ ದಾಖಲೀಕರಣ ಮಾಡುವುದಾದರೇ ಅಧ್ಯಯನಶೀಲ ಡಾಕ್ಯುಮೆಂಟರಿಯನ್ನು ಯಾಕೆ ಹೊರತರಬಾರದು ? ಈ ಪೊಳ್ಳು, ಗಟ್ಟಿತನವಿಲ್ಲದ ಕಥೆಯಲ್ಲಿ ನಿಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳುವುದಕ್ಕೆ ಬೇಕಾಗಿ, ಲಾಭಗಳಿಸುವುದಕ್ಕೆ ಬೇಕಾಗಿ ಸಿನೆಮಾದ ಮೂಲಕ ಧಾರ್ಮಿಕ ವಂಚನೆ ಮಾಡುವುದ್ಯಾಕೆ ?

‘ಕಾಂತಾರ’ ಸಿನೆಮಾವನ್ನು ಜನ ಸುಮ್ಮನೇ ಒಪ್ಪಿದ್ದಲ್ಲ, ಅಥವಾ ಪಂಜುರ್ಲಿ, ಗುಳಿಗ ದೈವರಿದ್ದಾರೆ ಎನ್ನುವುದಕ್ಕೂ ಅಲ್ಲ. ʼಕಾಂತಾರʼದಲ್ಲಿ ಜಾಗ ಒತ್ತುವರಿ, ಅಲ್ಲಿನ ಜನರ ಆಚರಣೆಗಳ ಬಗ್ಗೆ ಕಥೆಯ ಗಟ್ಟಿತನವಿತ್ತು. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸ ʼಕಾಂತಾರಾʼ ಸಿನೆಮಾ ಮಾಡಿದೆ. ಮಣ್ಣಿನ ಕಥೆಯನ್ನು ಹೆಣೆಯುವುದರ ಜೊತೆಗೆ ಸಂಘರ್ಷದ ಮಿಳಿತದಲ್ಲಿ ಸೌಹಾರ್ದದ ತೆರೆ ಎಳೆಯುವ ಪ್ರಯತ್ನ ಮಾಡಿದ್ದಕ್ಕಾಗಿ ʼಕಾಂತಾರʼ ಸಿನೆಮಾವನ್ನು  ಜನ ಒಪ್ಪಿದರು. ʼಕಾಂತಾರʼವನ್ನು ಒಪ್ಪಿದರು ಎನ್ನುವ ಮಾತ್ರಕ್ಕೆ ಕೊರಗಜ್ಜ ದೈವ ಇದ್ದಾರೆಂದು ‘ಕಲ್ಜಿಗ’ ಸಿನೆಮಾವನ್ನು ಒಪ್ಪಬೇಕಂತಿಲ್ಲ. ಸಿನೆಮಾದಲ್ಲಿ ಕಥೆ ಗಟ್ಟಿ ಇದ್ದರೆ ಜನ ಒಪ್ಪಿಯೇ ಒಪ್ಪುತ್ತಾರೆ. ದೈವಕ್ಕೆ ಶಕ್ತಿ ಇದೆ ಅಂತ ಸಿನೆಮಾ ಮಾಡಿ ತೋರಿಸಬೇಕಂತಿಲ್ಲ. ದೈವ ದೇವರನ್ನು ನಂಬುವವರಿಗೆ ಆ ವಿಷಯ ಗೊತ್ತಿದೆ. ‘ಕಲ್ಜಿಗ’ ಗಟ್ಟಿತನವಿಲ್ಲದ, ಒಂದು ಕಿರುಚಿತ್ರವಾಗಬಲ್ಲ ಕಥೆ ಅಷ್ಟೇ. ಕರಾವಳಿಯ ಆಚರಣೆ, ಸಂಸ್ಕೃತಿಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ ಎಂದು ಹೇಳುವ ʼಕಲ್ಜಿಗʼ ಸಿನೆಮಾ ತಂಡ, ‘ಮೀನು ಸಾರು ಮಾಡುವುದು, ಮರುವಾಯಿ ಹೆಕ್ಕುವುದು, ಸುಕ್ಕ ಮಾಡುವುದಷ್ಟನ್ನೇ ಇಲ್ಲಿನ ಆಚರಣೆಗಳು, ಸಂಸ್ಕೃತಿ ಎಂದು ಭಾವಿಸಿದೆಯೇ ?’.

ದೈವ ದೇವರುಗಳು ಸಿನೆಮಾದಲ್ಲಿ ಇದ್ದರೆ ಜನ ಬರುತ್ತಾರೆ ಎಂಬ ಧೋರಣೆ ಸಿನೆಮಾ ನಿರ್ಮಾಣ ಮಾಡುವವರು ಬಿಡಲಿ. ಜನರನ್ನು ವಂಚಿಸುವುದನ್ನು ಬಿಡಲಿ. ಎಲ್ಲವೂ ‘ಕಾಂತಾರ’ ಆಗುವುದಿಲ್ಲ. ‘ಕಾಂತಾರ’ದ ಕಥೆಯಲ್ಲಿ ಒಂದು ಅಧ್ಯಯನಶೀಲತೆ ಎದ್ದು ಕಾಣಿಸುತ್ತದೆ.‌ ನಂಬಿಕೆಯೂ ಆ ಸಿನೆಮಾದ ಜೊತೆಗಿದೆ. ‘ಕಲ್ಜಿಗ’ ಸಿನೆಮಾದಲ್ಲಿ ಏನಿದೆ ? ದೈವದ ಹೆಸರಿನಲ್ಲಿ ಏನು ಮಾಡಿದರೂ ಜನ ನೋಡುವುದಕ್ಕೆ ಬರುತ್ತಾರೆ ಎನ್ನುವ ಧೋರಣೆಯೇ ?. ʼಕಲ್ಜಿಗʼ ಸಿನೆಮಾದಲ್ಲಿ ಕೊರಗಜ್ಜ ದೈವಕ್ಕೆ ನಿಂದನೆ ಮಾಡಲಾಗಿದೆ ಎಂದು ವಿರೋಧಿಸುವಂತಹ ಯಾವ ನಿಂದನೆಯೂ ಸಿನೆಮಾದಲ್ಲಿ ಕಾಣಿಸುವುದಿಲ್ಲ ಎನ್ನುವುದು ಸತ್ಯ. ಆದರೇ ಸಿನೆಮಾ ಎನು ಕೊಟ್ಟಿದೆ ? ಮನರಂಜನೆಯೇ? ಪಾಠವೇ ? ಕಥೆಯೇ ? ಖುಷಿಯೇ ? ಏನು ? ಕೊಟ್ಟಿದ್ದು ಬರೀ ನಿರಾಸೆಯನ್ನಷ್ಟೆ. ದೈವ ದೇವರುಗಳನ್ನು ಸುಖಾಸುಮ್ಮನೆ ಅನಗತ್ಯವಾಗಿ ತಂದು ಸಿನೆಮಾ ಮಾಡುವವರಿಗೆ ‘ಕಲ್ಜಿಗ’ ಸಿನೆಮಾ ಎದುರಿಸಿದ ವಿವಾದ ದೊಡ್ಡ ಪಾಠ. ಬಹುಶಃ ಈ ಸಿನೆಮಾದಿಂದ ಆದ ವಿವಾದ, ಚರ್ಚೆಯನ್ನು ಸಿನೆಮಾ ತಂಡ ಪರಾಮರ್ಶಿಸಿಕೊಳ್ಳಲಿ ಎನ್ನುವುದೇ ಈ ಲೇಖನದ ಉದ್ದೇಶ.

ಶ್ರೀರಾಜ್ ವಕ್ವಾಡಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!