Monday, September 9, 2024

ತಾಲೂಕು ಸಾಹಿತ್ಯ ಸಮ್ಮೇಳನಗಳಿಗೂ ಸರಕಾರದ ಅನುದಾನ ಅತ್ಯಗತ್ಯ-ಶಾಸಕ ಕಿರಣ್ ಕುಮಾರ್ ಕೊಡ್ಗಿ |ಬಿದ್ಕಲ್‌ಕಟ್ಟೆಯಲ್ಲಿ ಕುಂದಾಪುರ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ ಉದ್ಘಾಟನೆ

 

ಕುಂದಾಪುರ, ಸೆ.೧: ಕನ್ನಡ ಭಾಷೆ, ಅಭಿವೃದ್ಧಿ ವಿಚಾರ ಕನ್ನಡ ನಾಮಫಲಕಗಳಿಗಷ್ಟೇ ಕಡ್ಡಾಯವಾಗದೆ ಇಂಥಹ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದಿಂದ ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಅಗತ್ಯ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಬಿದ್ಕಲ್‌ಕಟ್ಟೆಯ ಕೆ.ಪಿ‌ಎಸ್ ಸಭಾಂಗಣದ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾರ್ಕಣಿ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ, ಸಾಹಿತ್ಯ ವಿಶಿಷ್ಟ ಸ್ಥಾನವಿದೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಈ ಭಾಗದ ಕೊಡುಗೆ ಅಪಾರವಾದುದು. ಯಕ್ಷಗಾನ ಪ್ರಸಂಗ ಸಾಹಿತ್ಯವೆನ್ನುವುದು ತುಂಬಾ ಕಷ್ಟದ ಪ್ರಕಾರ. ಆದರೆ ಇಲ್ಲಿ ಪ್ರಸಂಗ ರಚನೆ ಸಾಹಿತ್ಯ ಉತ್ತಮವಾಗಿ ಬೆಳೆದಿದೆ. ಸಾಹಿತ್ಯದ ಬಗ್ಗೆ ತುರ್ತಾದ ವಿಮರ್ಶೆ ನಡೆಯದೆ ಸಾಹಿತ್ಯ ಕ್ಷೇತ್ರವನ್ನು ಅಧ್ಯಯನಶೀಲವಾಗಿ ನೋಡಬೇಕು ಎಂದರು.

ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಅಧ್ಯಕ್ಷೀಯ ಮಾತುಗಳನ್ನಾಡಿ, ನಂದುವ ಕ್ರಿಯೆಯಲ್ಲಿ ಜೊತೆಯಲ್ಲಿ ಉರಿಯುವ ಕ್ರಿಯೆಯೂ ನಡೆಯುತ್ತದೆ. ಸ್ವಾತಂತ್ರ್ಯ ಹೋರಾಟದಷ್ಟೇ ಏಕೀಕರಣವೂ ಅಷ್ಟೇ ಮಹತ್ವ ಪಡೆದಿದೆ. ಪ್ರಸ್ತುತ ಭಾಷೆ ವಿಚಾರದಲ್ಲಿ ಗೊಂದಲವಿದೆ. ಆಂಗ್ಲ ಭಾಷೆ ಕಲಿಯುವುದು ಅನಿವಾರ್ಯವಾದರೂ ಮಾತೃಭಾಷೆಯನ್ನು ಕಲಿಯಲೇಬೇಕು. ಮಾತೃಭಾಷೆಯನ್ನು ಯಾವತ್ತೂ ಮರೆತು ಬದುಕಬಾರದು. ಮಾತೃಭಾಷೆಯನ್ನು ಮರೆತು ಬದುಕಲು ಸಾಧ್ಯವೇ ಇಲ್ಲ ಇವತ್ತು ೧೮೦೦ ಕನ್ನಡ ಶಾಲೆಗಳು ಮುಚ್ಚಿವೆ. ಆದರೆ ಮೂರು ಸಾವಿರಕ್ಕೂ ಹೆಚ್ಚು ಆಂಗ್ಲಮಾಧ್ಯಮ ಶಾಲೆಗಳು ಆರಂಭಗೊಂಡಿವೆ. ಇದನ್ನು ನಾವು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ ಎಂದರು.

ನಮ್ಮ ಭಾಷೆ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಮನೆ ಮಂದಿಯಲ್ಲಿ ಪರಿವರ್ತನೆಯಾಗಬೇಕು. ಮನಯಲ್ಲಿ ಕನ್ನಡ ವಾತಾವಣವಿದ್ದರೆ ಮಕ್ಕಳು ಅನ್ನೆ ಉಸಿರಾಡುತ್ತಾರೆ. ತಂದೆತಾಯಿ ಆಂಗ್ಲ ಭಾಷೆಯಲ್ಲಿ ಸಂವಹನ ಮಾಡುವುದರಿಂದ ಮಗು ಮಾತೃಭಾಷೆ ಮರೆತು ಬಿಡುತ್ತದೆ. ಮುಂದೆ ಮಗು ಯಾವ ಭಾಷೆಯನ್ನೂ ಸರಿಯಾಗಿ ಕಲಿಯಲಾಗದೆ ಸಂದಿಗ್ದ ಸ್ಥಿತಿಗೆ ಬರುತ್ತದೆ. ಈ ದುಸ್ಥಿತಿಗೆ ತಂದೆ-ತಾಯಿ ಅಧ್ಯಾಪಕರನ್ನು ದೂರುತ್ತಾ ಮಕ್ಕಳನ್ನು ಸಾಧನಾ ಶೂನ್ಯ ಹಂತಕ್ಕೆ ನೂಕುತ್ತಿದ್ದಾರೆ. ನಾವು ಪೂರ್ಣ ನಿರಾಶರಾಗಬೇಕಾಗಿಲ್ಲ. ಆಧುನಿಕ ರೀತಿಯಲ್ಲಿ ಕನ್ನಡ ಶಾಲೆಯನ್ನು ಕಟ್ಟಿದರೆ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಾರೆ. ಇದಕ್ಕೆ ಅನೇಕ ಉದಾಹರಣೆಗಳನ್ನು ಕಾಣಬಹುದು. ಹಾಗೆಯೇ ಕನ್ನಡ ಉಳಿಯಬೇಕಾದರೆ ಕನಿಷ್ಠ ೭ನೇ ತರಗತಿಯ ತನಕವಾದರೂ ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂದರು.

ಸಾಹಿತ್ಯಕ್ಕೆ ಒಟ್ಟು ಗೂಡಿಸುವ ಶಕ್ತಿಯಿದೆ. ಸಾಹಿತ್ಯ ನೆಪದಿಂದ ನಾವೆಲ್ಲ ಇಲ್ಲಿ ಒಟ್ಟುಗೂಡಿದ್ದೇವೆ. ಸಾಹಿತ್ಯ ಜಾತ್ರೆಯಲ್ಲಿ ಮಾತ್ರ ಮನುಷ್ಯರನ್ನು ಒಟ್ಟುಗೂಡಿಸುತ್ತದೆ, ಎಂದ ಅವರು ಇವತ್ತು ಬದಲಾವಣೆ ಪರಿವರ್ತನೆ ಹೊಡೆತಕ್ಕೆ ಸಿಲುಕಿದ್ದೇವೆ. ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಕ್ಕೆ ಸಿಕ್ಕಿ ಸಂಸ್ಕೃತಿ ಕೂಡಾ ಬದಲಾಗಿದೆ. ಭಾಷೆ, ಪರಂಪರೆ ಮತ್ತು ಕಲೆಗಳ ಮೇಲೆ ಪರಿಣಾಮ ಬೀರಿದೆ. ಮಾನವೀಯ ಸಂಬಂಧಗಳು ಕಳಚಿಕೊಳ್ಳುತ್ತಿವೆ. ಅಲ್ಲಲ್ಲಿ ಅಡ್ಡ ಬಂದಿರುವ ರೈಲ್ವೆ ಗೇಟು ಮತ್ತು ಟೋಲುಗಳು ನಮ್ಮ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿವೆ ಎಂದರು.

ಕುಂದಾಪ್ರ ಕನ್ನಡ ಬಹು ವಿಶಿಷ್ಟವಾದ ಭಾಷೆ. ಇದನ್ನು ಅತ್ಯಂತ ಸಂಕ್ಷೀಪ್ತವಾಗಿಯೂ ಬಳಸಬಹುದು ಅಷ್ಟೇ ದೀರ್ಘವಾಗಿಯೂ ಬಳಕೆ ಮಾಡಬಹುದು. ಕುಂದಾಪುರದ ಹೃದಯ ಭಾಗದಲ್ಲಿ ಬೇರೆ ಭಾಷೆಯ ಸಂಕರವಾಗದೆ ಮೂಲ ಸ್ವರೂಪ ಉಳಿದಿರುವುದನ್ನು ಗಮನಿಸಬಹುದು. ಕುಂದಗನ್ನಡ ಭಾಷೆ ಜೀವಂತವಾಗಿರುವುದು ಹಳ್ಳಿಯಲ್ಲಿ, ನಟ್ಟಿ ಗದ್ದೆಯಲ್ಲಿ, ವಾರದ ಸಂತೆಯಲ್ಲಿ, ಕೃಷಿ ಕಾರ್ಯಗಳಲ್ಲಿ ಮಾತ್ರ ಎಂದರು.

ಪತ್ರಿಕಾ ರಂಗ ಕುಂದಾಪುರದಲ್ಲಿ ವಿಫುಲವಾಗಿ ಬೆಳೆದಿವೆ. ೨೦ಕ್ಕೂ ಹೆಚ್ಚು ಪತ್ರಿಕೆಗಳು ಇಲ್ಲಿ ಹುಟ್ಟಿವೆ. ಹಾಗೆಯೇ ಕಥೆಗಾರರು, ಕವಿಗಳು, ಲೇಖಕರು ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಕುಂದಾಪುರದ ಕೊಡುಗೆ ಗಣನೀಯವಾದುದು. ಕಲೆ, ಜಾನಪದ ಕೂಡಾ ಭಾಷೆ ಸಂಸ್ಕೃತಿಯನ್ನು ಬೆಳೆಸಿದೆ ಎಂದರು.
ಯಕ್ಷಗಾನ ಪ್ರಸಂಗಕರ್ತರ ಪ್ರಸಂಗಗಳ ಬಗ್ಗೆ ವಿಶೇಷವಾಗಿ ಎಲ್ಲೂ ಉಲ್ಲೇಖವಾಗಿಲ್ಲ. ಶಿಷ್ಟ ಸಾಹಿತ್ಯ ಚರಿತ್ರೆಯಲ್ಲಿ ಪೌರಾಣಿಕ ಹಿನ್ನೆಲೆ, ಸಂಗೀತ ಜ್ಞಾನ, ರಂಗಭೂಮಿಯ ಬಗ್ಗೆ ಪರಿಕಲ್ಪನೆ ಎಲ್ಲವೂ ಇದ್ದು ಪ್ರಸಂಗ ಬರೆಯುವ ಪ್ರಸಂಗಕರ್ತರ ಬಗ್ಗೆ ಉಲ್ಲೇಖ ಆಗದೇ ಇರುವುದು ಖೇದಕರ ಸಂಗತಿ, ಡಾ. ಶಿವರಾಮ ಕಾರಂತರು ಯಕ್ಷಗಾನ ಬಯಲಾಟ ಕೃತಿಯಲ್ಲಿ ಕ್ರಿಶ.೧೫೦೦ರಲ್ಲಿ ವಿಷ್ಣು ವಾರಂಬಳ್ಳಿ ಬರೆದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ದೇವಿದಾಸ ೧೫-೧೬ನೇ ಶತಮಾನದಲ್ಲಿ ಬರೆದ ದೇವಿಮಹಾತ್ಮೆ, ಸಾಸ್ತಾನ ವೆಂಕಟ, ಹಟ್ಟಿಯಂಗಡಿ ರಾಮಭಟ್ಟ, ಅಜಪುರ ಸುಬ್ಬ ಮೊದಲಾದ ಪ್ರಾಚೀನ ಪ್ರಸಂಗಕರ್ತರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೂ ಗಮನಾರ್ಹವಾದುದು ಎಂದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೋಣಿ ಶಿವಾನಂದ ಕಾರಂತರ ನುಡಿಯನ್ನು ಯು.ಎಸ್ ಶೆಣೈ ವಾಚಿಸಿದರು. ಈ ಸಂದರ್ಭದಲ್ಲಿ ಅಶ್ವಿನಿ ಕುಲಾಲ್ ಕೆ.ಎಂ.ಸಿ ಮಣಿಪಾಲ ಇವರ ಸುಧಾಂಶು ಹಾಗೂ ಪ್ರದೀಪ್ ಕುಮಾರ್ ಬಸ್ರೂರು ಇವರ ಹೊಂಬೆಳಕು ಪುಸ್ತಕಗಳನ್ನು ಹಿರಿಯ ವೈದ್ಯರು, ಕನ್ನಡ ಪುಸ್ತಕ ಪ್ರಕಾಶಕರು ಆದ ಡಾ.ಭಾಸ್ಕರ ಆಚಾರ್ಯ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಮಹೇಶ ಹೆಗ್ಡೆ, ಸಮ್ಮೇಳನ ಆರ್ಥಿಕ ಸಮಿತಿ ಅಧ್ಯಕ್ಷ ಬಿ.ಅರುಣ್ ಕುಮಾರ್ ಹೆಗ್ಡೆ, ಸಮ್ಮೇಳನ ಕಾರ್ಯದರ್ಶಿ ರಾಘವೇಂದ್ರ ಅಡಿಗ,ಕೆ.ಪಿ.ಎಸ್ ಬಿದ್ಕಲ್ ಕಟ್ಟೆ ಪ್ರಾಂಶುಪಾಲರಾದ ವಿಘ್ನೇಶ್ವರ ಭಟ್, ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಎಂ.ಚಂದ್ರಶೇಖರ ಶೆಟ್ಟಿ, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ದೀಪಾ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಕ.ಸಾಪ ಉಡುಪಿ ಜಿಲ್ಲೆ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಗೌರವ ಕೋಶಾಧ್ಯಕ್ಷ ಮನೋಹರ ಪಿ., ಕ.ಸಾ.ಪ ಬ್ರಹ್ಮಾವರ ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್, ಕಾಪು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಉಡುಪಿ ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ. ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಹೆಬ್ರಿ ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಬೈಂದೂರು ಘಟಕದ ಅಧ್ಯಕ್ಷ ಡಾ.ರಘು ನಾಯ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.೧೦೦ ಅಂಕ ಪಡೆದ ಪ್ರೌಢಶಾಲೆಗಳನ್ನು ಗುರುತಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪಟ್ಟಿಯನ್ನು ಕೆ.ಪಿ.ಎಸ್ ಬಿದ್ಕಲ್‌ಕಟ್ಟೆಯ ಅಧ್ಯಾಪಕ ಸತೀಶ್ ಶೆಟ್ಟಿಗಾರ್ ವಾಚಿಸಿದರು.

ಗಾಯಕ ಡಾ.ಗಣೇಶ ಗಂಗೊಳ್ಳಿ ನಿರ್ದೇಶನದಲ್ಲಿ ಕೆ.ಪಿ.ಎಸ್.ಬಿದ್ಕಲ್ ಕಟ್ಟೆ ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ.ಉಮೇಶ ಪುತ್ರನ್ ಸ್ವಾಗತಿಸಿದರು. ನೆಲದ ಮಾತನ್ನು ಎಂ.ಮಹೇಶ್ ಹೆಗ್ಡೆ ಆಡಿದರು. ತಾಲೂಕು ಘಟಕದ ಕೋಶಾಧ್ಯಕ್ಷ ಮಂಜುನಾಥ ಕೆ.ಎಸ್ ವಂದಿಸಿದರು. ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮೊಳಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಎಂ.ಚಂದ್ರಶೇಖರ ಶೆಟ್ಟಿ ನೆರವೇರಿಸಿದರು. ಪರಿಷತ್ತು ಧ್ವಜಾರೋಹಣವನ್ನು ಕಸಾಪ ಕುಂದಾಪುರ ಘಟಕದ ಅಧ್ಯಕ್ಷರಾದ ಡಾ.ಉಮೇಶ ಪುತ್ರನ್ ನೆರವೇರಿಸಿದರು.

ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನದ ಮುಖಮಂಟಪದಿಂದ ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಕನ್ನಡ ಮಾತೆ ಶ್ರೀ ಭುವನೇಶ್ವರೀ ದೇವಿಯ ಶೋಭಾಯಾತ್ರೆ ನಡೆಯಿತು. ಮೆರವಣಿಗೆಯಲ್ಲಿ ಕುಂದಾಪುರ ಭಾಗದ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ, ಕೋಳಿಪಡೆ ಮೊದಲಾದ ಆಕರ್ಷಣೆಗಳು, ಯಕ್ಷಗಾನ, ಭಜನೆ, ವಿವಿಧ ವೇಷಭೂಷಣಗಳು ಗಮನ ಸಳೆದವು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!