Wednesday, September 11, 2024

ಭಾಷೆ ನಮ್ಮ ನೆಲದ ಸಂಸ್ಕೃತಿಯ ಪ್ರತಿಬಿಂಬ | ಕನ್ನಡ ಶಾಲೆಗಳು ಸೋತರೆ, ನಮ್ಮ ಸಂಸ್ಕೃತಿಯೇ ಸೋತಂತೆ : ಮೋಹನ್‌ ಆಳ್ವ ಅಭಿಮತ

ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಜನಪ್ರತಿನಿಧಿ (ಬಿದ್ಕಲ್ ಕಟ್ಟೆ) : ಸಹಸ್ರ ಸಹಸ್ರ ಪ್ರಾದೇಶಿಕ ಭಾಷೆಗಳನ್ನು ಒಟ್ಟುಗೂಡಿಸಿಕೊಂಡಿರುವ ಕನ್ನಡ ಭಾಷೆಯನ್ನು ಸೂರ್ಯ ಚಂದ್ರರಿರುವವರೆಗೆ ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ ಕಟ್ಟೆಯ ಆವರಣದಲ್ಲಿರುವ ಮೊಳಹಳ್ಳಿ ಶಿವರಾವ್ ವೇದಿಕೆಯಲ್ಲಿ ನಡೆದ ಕುಂದಾಪುರ ತಾಲೂಕು ಹತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ತಾರ್ಕಣಿ’ಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು‌.

ಕನ್ನಡ ಶಾಲೆಗಳು ಸೋತರೇ ನಮ್ಮ ಅಸ್ಮಿತೆಯ ಸೋತಂತೆ, ಕನ್ನಡ ಶಾಲೆಗಳು ಸೋತರೆ ನಮ್ಮ ಸಂಸ್ಕೃತಿಯ ಸೋತಂತೆ. ಶ್ರೀಸಾಮಾನ್ಯ ಸೋತಂತೆ. ಕನ್ನಡ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಮನೆಮನೆಗಳ ಮನಸ್ಸು ಮನಸ್ಸುಗಳಲ್ಲಿ ಮೊಳಗಬೇಕಿದೆ. ಕನ್ನಡ ಭಾಷೆಯ ಮೇಲೆ ಪರಕೀಯ ಭಾಷೆಗಳಿಂದಾಗುತ್ತಿರುವ ಪ್ರಭಾವದಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿರುವುದು ಶೋಚನೀಯ. ಸರ್ಕಾರಗಳು ಕನ್ನಡ ಶಾಲೆಗಳನ್ನು ಉಳಿಸುವ ಕನಿಷ್ಠ ಪಕ್ಷ ಸೌಜನ್ಯದ ಪ್ರಯತ್ನವೂ ಮಾಡದೇ ಇರುವುದು ವಿಷಾದನೀಯ. ಯಾವ ಸರ್ಕಾರ ಬಂದರೂ ಸರ್ಕಾರಿ ಶಾಲೆಗಳ ಪರಿಸ್ಥಿತಿಗಳ ಬಗ್ಗೆ ಕಣ್ಣು ಹಾಯಿಸಿಯೂ ನೋಡುವುದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಚೆಂಡೆ ಭಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ.ಎಂ ಮೋಹನ್‌ ಆಳ್ವ ವಿದ್ಯುಕ್ತ ಚಾಲನೆ ನೀಡಿದರು.

ಭಾಷೆ ನಮ್ಮ ನೆಲದ ಸಂಸ್ಕೃತಿಯ ಪ್ರತಿಬಿಂಬ ಎನ್ನುವ ಪಾಠವನ್ನು ಮುಂದಿನ ಪೀಳಿಗೆಗೆ ಕಲಿಸುವ ಅನಿವಾರ್ಯತೆ ಬಂದಿದೆ. ನಮ್ಮ ಭಾಷೆ ಎಂದಿಗೂ ನಮ್ಮ ಭವಿಷ್ಯಕ್ಕೆ ತೊಡಕಾಗುವುದಿಲ್ಲ. ನಮ್ಮ ಭಾಷೆ ಮರೆತರಷ್ಟೇ ತೊಡಕಾಗಬಹುದು. ಕನ್ನಡ ಶಾಲೆಗಳನ್ನು ಕೇವಲ ಭಾವನಾತ್ಮಕ ವಿಷಯಗಳಿಂದಷ್ಟೇ ಉಳಿಸುವುದಕ್ಕೆ ಸಾಧ್ಯವಿಲ್ಲ. ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಮನ್ವಯತೆಯ ಜೋಡಣೆ ರಾಜ್ಯದ ಉದ್ದಗಲಕ್ಕೂ ಇರುವ ಕನ್ನಡ ಶಾಲೆಗಳಲ್ಲಿ ಕಾರ್ಯರೂಪಕ್ಕೆ ಬರುವಂತಾಗುವಲ್ಲಿ ರಾಜ್ಯ ಸರ್ಕಾರ ಪ್ರಯತ್ನಿಸಿದರಷ್ಟೇ ಕನ್ನಡ ಶಾಲೆಗಳು ಉಳಿಯುತ್ತವೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಹೇಶ್ ಹೆಗ್ಡೆ ಮೊಳಹಳ್ಳಿ, ಸಮ್ಮೇಳನದ ಆರ್ಥಿಕ ಸಮಿತಿಯ ಅಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ , ಕಸಾಪ ಗೌರವ ಕಾರ್ಯದರ್ಶಿ  ನರೇಂದ್ರ ಕುಮಾರ್ ಕೋಟ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ‌ಶೆಟ್ಟಿ ಮೊಳಹಳ್ಳಿ, ಹಾರ್ದಳ್ಳಿ ಮಂಡಳ್ಳಿ ಗ್ರಾ. ಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾ. ಪಂ ಅಧ್ಯಕ್ಷೆ ಜಯಂತಿ‌ ಶೆಟ್ಟಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಡಾ. ಎಂ ಮೋಹನ್‌ ಆಳ್ವ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು  ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಧನ್ಯವಾದ ಸಮರ್ಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ವಿದ್ಯಾರ್ಥಿಗಳು ಅಭಿನಯಿಸುವ, ಸಾಹಿತಿ ವೈದೇಹಿ ಅವರು ರಚಿಸಿದ, ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ನಿರ್ದೇಶನದ ‘ನಾಯಿಮರಿ’ ನಾಟಕ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!