Monday, September 9, 2024

ವ್ಯಕ್ತಿಗತ ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ…

ಸ್ವಾತಂತ್ರ್ಯ ಎಲ್ಲರಿಗೂ ಬೇಕು. ಸಕಲ‌ ಜೀವ ರಾಶಿಗಳಿಗೂ ಸ್ವಾತಂತ್ರ್ಯ ಸುಖದ ಅನುಭವಿರುತ್ತದೆ. ಮನುಷ್ಯ ಸ್ವತಂತ್ರರಾಗಿರಲು ಬಯಸುವುದು ಸಹಜ ಪ್ರವೃತ್ತಿ. ಹಾಗದರೆ ಸ್ವಾತಂತ್ರ್ಯ ಎಂದರೇನು ಎನ್ನುವುದನ್ನು ವಿಚಾರಪೂರ್ಣವಾಗಿ ಯೋಚಿಸಲೇ ಬೇಕು. ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛೆ ಅಲ್ಲ ಒಂದು ರೀತಿಯ ಬಿಡುಗಡೆ. ಒಂದು ನಿರ್ಬಂಧದಿಂದ ಮುಕ್ತರಾಗುವುದು ಎನ್ನಬಹುದು. ತೊಟ್ಟಲಿನ ಮಗುವೂ ತನ್ನ ಕೊರಳಿಗೆ ಕಟ್ಟಿದ ಚಿನ್ನದ ಸರಪಣಿಯನ್ನೋ, ಬಳೆಯನ್ನೋ ಎಳೆದು ತೆಗೆಯಲು ಪ್ರಯತ್ನಸುತ್ತದೆ. ಮಗುವಿಗೆ  ಕಿರಿಕಿರಿ ಉಂಟಾಗುವಿಕೆಯನ್ನು ಬಯಸುವುದಿಲ್ಲ. ಅದನ್ನು ತೆಗೆಯಲು ಪ್ರಯತ್ನಿಸುತ್ತ ಅದೊಂದು ರೀತಿಯ ಸ್ವಾತಂತ್ರ್ಯವನ್ನು ಬಯಸುತ್ತದೆ. ಮನಸ್ಸು ಅನಗತ್ಯ ದಿನ ನಿತ್ಯದ ವಿಷಯದಲ್ಲಿ ಗೊಂದಲ್ಲಕ್ಕೀಡಾದಾಗ ಸ್ವಾತಂತ್ರ್ಯವನ್ನು ಬಯಸುತ್ತದೆ. ಹಾಗಂತ ಕೆಲವೊಮ್ಮೆ ಪರಿಸ್ಥಿತಿಯು  ಉಸಿರುಗಟ್ಟುವಿಕೆ ಅಥವಾ ಅಹಿತಕರವಾಗಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಸ್ವಾತಂತ್ರ್ಯ ಅಲ್ಲ. ಅದು ನಿಮ್ಮ ಭಾವನಾತ್ಮಕವಾದ ಮುಕ್ತತೆ ಆಗಿರಬೇಕು. ಕಾಡುವ ಆಲೋಚನೆಗಳ ಕಾಡುವಿಕೆಯಿಂದ ಮುಕ್ತವಾಗಿರಬೇಕು. ಭಯ ಆತಂಕದಿಂದ ಮುಕ್ತವಾಗಿರಬೇಕು. ತೊಡಕುಗಳಿಂದ ಮುಕ್ತವಾಗಿರಬೇಕು.

ನಮ್ಮ ಜೀವನದಲ್ಲಿ ಯಾವುದನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಬಾಲ್ಯದಲ್ಲಿ ಆಟಿಕೆಗಳನ್ನು, ಕೆಲವೊಂದು ವಸ್ತುಗಳನ್ನು ಬಯಸಿ ಪಡೆಯುತ್ತೇವೆ. ಹಾಗಂತ ಅದನ್ನು ನಾವು ದೊಡ್ಡವರಾದ ಮೇಲೂ ಅದೇ ಆಟಿಕೆಗಳನ್ನು, ವಸ್ತುಗಳನ್ನು ಬಯಸಲಾರೆವು. ಹಂತ ಹಂತವಾಗಿ ಅದರಿಂದ ದೂರವಾಗುತ್ತ ಕಡು ಬಯಕೆಗಳ ಮತ್ತು ಅಸಹ್ಯಗಳಿಂದ ಮುಕ್ತರಾಗುತ್ತಾ ಹೋಗುತ್ತೇವೆ. ಅದೊಂದು ರೀತಿಯ ಭಾವನಾತ್ಮಕ ಬಿಡುಗಡೆ.

ತಮ್ಮದೇ ಭಾವನೆಗಳಿಂದ ಬಂಧಗಳನ್ನು ತ್ಯಜಿಸಿ ಸ್ವಾತಂತ್ರ್ಯ ಪಡೆದುಕೊಳ್ಳುವ ಬಗೆ ಹೇಗೆ. ಒಬ್ಬೊಬ್ಬರ ವ್ಯಕ್ತಿ ಸ್ವಾತಂತ್ರ್ಯ ಒಂದೊಂದು ಬಗೆಯಾಗಿದ್ದರೂ ಅದೊಂದು ಸಕಾರಾತ್ಮಕವಾಗಿದ್ದರೆ ಮಾತ್ರ ಸ್ವತಂತ್ರ್ಯದ ಹಕ್ಕು ಎನ್ನಬಹುದು ಇಲ್ಲದಿದ್ದರೆ ಅದು ಸ್ವೇಚ್ಛೆಯಾಗಿ ಬಿಡುತ್ತದೆ.

“ನಾನು ನನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟ ಪಟ್ಟಿರುವೆ. ಹಾಗೆ ಸಾಗಲು ನನಗೆ ಸ್ವಾತಂತ್ರ್ಯ ಇದೆ. ಒಂದು ವೇಳೆ ಅಂದುಕೊಂಡಷ್ಟು ಆಗದೆ ಹೋದರೆ ಚಿಂತೆ ಇಲ್ಲ. ಇದರಿಂದ ನಾನು ಹೊಸತನವನ್ನು ಕಲಿಯುತ್ತೇನೆ. ಅಲ್ಲದೆ ಅದರಿಂದ ಸ್ವತಂತ್ರ ವ್ಯಕ್ತಿಯಾಗಿರಲು ಅನುಕೂಲವಾಗುತ್ತದೆ. ಆ ಮೂಲಕ ಇನ್ನೊಬ್ಬ ವ್ಯಕ್ತಿಯ ಊರುಗೋಲಿನಂತೆ ಆಶ್ರಯ ಪಡೆಯುವುದು ತಪ್ಪುತ್ತದೆ‌‌‌” ಎಂದು ಒಬ್ಬ  ಕಾಲೇಜು ಹುಡುಗ ಹೇಳಿದರೆ, ” ಸ್ವಾತಂತ್ರ್ಯ ಎನ್ನುವುದು ಶಾಲೆ ಅಥವಾ ಮನೆ ಎಲ್ಲೆ ಆಗಲಿ ನನಗೇ ಇರಬೇಕು. ನಾನೆ ಎಲ್ಲವನ್ನೂ ಆನಂದಿಸಲು ಸಾಧ್ಯವಾಗಬೇಕು. ನಿರ್ಬಂಧ ಇರಬಾರದು. ಪೋಷಕರು ತೀರಾ ಯಾವುದೇ ಹಕ್ಕನ್ನು ಚಲಾಯಿಸಬಾರದು” ಎಂದು ಶಾಲಾ ಬಾಲಕಿಯೋರ್ವಳ ಮಾತಾದರೆ.” ದಣಿವನ್ನು ಸೃಷ್ಟಿಸುವ ತೊಡಕುಗಳಿಂದ ಮುಕ್ತರಾಗಲು ಬಯಸುತ್ತೇನೆ. ಭಾವನಾತ್ಮಕ ಸಂಬಂಧಗಳು ಮತ್ತು ಸಾಮಾಜಿಕ ಈ ತೊಡರುಗಳು ಕೆಲವೊಮ್ಮೆ ನನ್ನ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ನಿರ್ಬಂಧ ಹೇರುತ್ತದೆ.. ” ಎನ್ನುವುದು ಒಬ್ಬ ಮಹಿಳೆಯ ಮಾತಾಗಿರುತ್ತದೆ.

ಈ ಮೂವರ ಮಾತುಗಳು ತಮ್ಮ ತಮ್ಮ ವ್ಯಕ್ತಿ ಸ್ವಾತಂತ್ರ್ಯದ ವಿಚಾರಗಳನ್ನು ಮಂಡಿಸುತ್ತದೆ. ಒಬ್ಬ ಬಾಲಕಿ ತನ್ನ ಬಾಲ್ಯದಲ್ಲಿನ ಸ್ವಾತಂತ್ರ್ಯಕ್ಕೆ ಹೆತ್ತವರು ನಿರ್ಬಂಧ ಹೇರಕೂಡದು ಎನ್ನುವಾಗ ಆ ವಯಸ್ಸಿನಲ್ಲಿ ತಮ್ಮ ಅಸೀಮ ಬಯಕೆಗಳಿಗೆ ಅಡೆತಡೆಗಳಿದ್ದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರಾದರೂ,  ಹೆತ್ತವರು ನೀಡುವ ಸ್ವಾತಂತ್ರ್ಯವನ್ನು ಮೀರಬಾರದು.

ಇನ್ನು, ಯುವ ಜನತೆಯ ಅಭಿಪ್ರಾಯ ಭಿನ್ನವಾಗಿರುತ್ತದೆ. ತಮ್ಮದೇ ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಆ ವಯಸ್ಸಿನಲ್ಲಿ ಇರುತ್ತದೆ. ಉದ್ಯೋಗ ಪಡೆಯುವಾಗಲೂ,‌ ಪಡೆದ ಸಂಬಳವನ್ನು ವ್ಯಯಮಾಡುವಾಗಲೂ, ಜವಾಬ್ದಾರಿ ವಿಚಾರದಲ್ಲಿ ತಮ್ಮ ನಿಲುವುಗಳ ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತು ನೀಡಿ ಭವಿಷ್ಯದಲ್ಲಿ ಇನ್ನೊಬ್ಬರಿಗೆ ಪರಾವಲಂಬಿಯಾಗಲು ಬಯಸದೇ ಇರುವುದು  ಸಹಜ. ತಾಯಿಯಾದವಳು ತನ್ನ ಜೀವನದಲ್ಲಿ ದಣಿವರಿಯದ ದುಡಿಮೆಯನ್ನು ಮನೆ ಯಜಮಾನತಿಯಾಗಿ ಯಶಸ್ವಿಯಾಗಿ ನಡೆಸಿದರೂ..ಆಕೆಯ ದಣಿವಾರಲು ಸಂಬಂಧಗಳಿಂದಾಗಲೀ…ಸಮಾಜದಿಂದಾಗಲಿ ಯಾವುದೇ ಒತ್ತಡಗಳ   ನಿರ್ಬಂಧ ಇಲ್ಲದಿರುವುದೆ ಅವಳಿಗೆ ಸಿಗುವ ಸ್ವಾತಂತ್ರ್ಯವಾಗಿರುತ್ತದೆ.

ಸ್ವಾತಂತ್ರ್ಯೋತ್ತರದಲ್ಲಿ ದೇಶ ಜನರಿಗೆ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಿದೆ. ಎಲ್ಲಾ ಕ್ಷೇತ್ರದಲ್ಲಿ ನಮ್ಮ ಸ್ವಾತಂತ್ರ್ಯ ವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡಲ್ಲಿ ಮಾತ್ರ ಹಕ್ಕಿನ ಸ್ವಾತಂತ್ರ್ಯ ಅರ್ಥ ಪೂರ್ಣವಾಗಿರುತ್ತದೆ.

ಆದರೆ ಸ್ವಾತಂತ್ರ್ಯದ ಅತಿರೇಕದಿಂದ ಸ್ವೇಚ್ಛೆಯಾಗಿ ನಡೆದುಕೊಂಡರೆ ಅದನ್ನು ಹಕ್ಕಿನ ಸ್ವಾತಂತ್ರ್ಯ ಎನ್ನಲಾಗದು. ಜನರಿಗೆ, ಸಮಾಜಕ್ಕೆ, ದೇಶಕ್ಕೆ ಮಾರಕವೆನಿಸುವ ಸ್ವೇಚ್ಛೆಯನ್ನು ಒಪ್ಪಿಕೊಳ್ಳುವುದಿಲ್ಲ. ಸ್ವ ಇಚ್ಚೆಯಿಂದ ಬೇಕಾಬಿಟ್ಟಿಯಾಗಿ ಬಯಸುವುದೇ ಸ್ವೇಚ್ಛೆಯಾಗಿದೆ. ಸ್ವಾತಂತ್ರ್ಯದ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವುದನ್ನು ಸಮಾಜ ಒಪ್ಪುವುದಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮನಸೋ ಇಚ್ಚೆ ಸಮಾಜ ಘಾತುಕ ಕೆಲಸದಲ್ಲಿ ತೊಡಗುವುದು, ವಾಕ್ ಸ್ವಾತಂತ್ರ್ಯ ಎಂದು ಬೇಕಾಬಿಟ್ಟಿ ವ್ಯಕ್ತಿಯನ್ನು ಅವಹೇಳನ ಮಾಡುವದು, ಧರ್ಮದ ಹೆಸರಿನಲ್ಲಿ ಅಪಚಾರ ಮಾಡುವುದೆಲ್ಲವೂ ಸ್ವೇಚ್ಛೆಯಾಗಿರುತ್ತದೆ. ಮನುಷ್ಯನ ವರ್ತನೆಯಲ್ಲಿ ಆತನ ಸ್ವಾತಂತ್ರ್ಯದ ಪ್ರಭಾವವನ್ನು ಕಾಣಬಹುದು.

ಶಿಷ್ಯನೊಬ್ಬ ಗುರುಗಳ ಹತ್ತಿರ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಗೆ ವ್ಯತ್ಯಾಸ ಏನು ಕೇಳಿದಾಗ, ಗುರುಗಳು ಶಿಷ್ಯನಲ್ಲಿ ನೀನು ಹಸಿವಾದಾಗ  ಮರದ ಹಣ್ಣನ್ನು ತಿನ್ನಲು ಬಯಸುವೆ .ಆ ಸ್ವಾತಂತ್ರ್ಯ ನಿನಗಿದೆ. ಹಾಗಂತ ಎಲ್ಲಾ ಹಣ್ಣುಗಳ ಜೊತೆ ಮರವನ್ನು ಕಡಿದು ಮನೆ ಒಯ್ಯುತ್ತೇನೆ ಎನ್ನುವ ಮನಸೋ ಇಚ್ಛೆ ಎನ್ನುವುದು ಸ್ವೇಚ್ಛೆಯಾಗಿದೆ.  ಗುರುಗಳು ವಿವರಿಸಿ ಹೇಳುತ್ತ ನಿಯಮ ಪ್ರಕಾರ ನಡೆಯುವ ಕ್ರಿಯೆ ತನ್ನ ಸ್ವಾತಂತ್ರ್ಯವನ್ನು ತೋರ್ಪಡಿಸುತ್ತದೆ. ನಿಯಮದ ವಿರುದ್ದ ,ಅತಿಯಾದ ಸ್ವಾತಂತ್ರ್ಯವೇ ಸ್ವೇಚ್ಛೆಯಾಗಿ ಪರಿಣಮಿಸುತ್ತದೆ ಎನ್ನುತ್ತಾರೆ.

        ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಭಾರತದೇಶ ಬ್ರಿಟಿಷ್ ರ ನಿರ್ಬಂಧಕ್ಕೆ ಒಳ ಪಟ್ಟಿತ್ತು. ಸತ್ಯ ಹಾಗೂ ಅಹಿಂಸೆಯಿಂದಲೇ ಭಾರತ ಬಂಧಮುಕ್ತವಾಗಿ ಇಂದು ಪ್ರಜಾಪ್ರಭುತ್ವವನ್ನು ಸಾಧಿಸಿದ್ದು ಇತಿಹಾಸ. ಇಂದು ಭೌಗೋಳಿಕವಾಗಿ ಸ್ವತಂತ್ರ ದೇಶವನ್ನು ಪಡೆದ ನಾವು ನಮ್ಮತನದ  ಹಕ್ಕು ಚಲಾಯಿಸಲು ನಾವು ಸ್ವತಂತ್ರರು. ಇಂದು ದೇಶದಲ್ಲಿ ಅನೈತಿಕ ತೆ, ಅನಾಚಾರ, ವ್ಯಭಿಚಾರ, ಅತ್ಯಚಾರ, ಭ್ರಷ್ಟಾಚಾರ, ಕೊಲೆ, ಸುಲಿಗೆ, ಭಯೋತ್ಪಾದನೆ ಮುಂತಾದ ದೇಶ ದ್ರೋಹದಂತಹ ಕೃತ್ಯಗಳು ನಡೆಯುವುದೆಲ್ಲವೂ ಸ್ವೇಚ್ಛೆಯಿಂದ. ಅದನ್ನು ಎದುರಿಸಿ ಧ್ವನಿಯಾಗಿ ನಿಲ್ಲುವ ಸ್ವಾತಂತ್ರ್ಯ ನಮ್ಮ ಕೈಯಲ್ಲಿದೆ. ಕ್ರಾಂತಿಯೋಗಿ ಬಸವಣ್ಣನವರು ಸಮಾಜದಲ್ಲಿ ಸಮಾನತೆಯ ಕ್ರಾಂತಿಗೆ ಮುಂದಾದುದರಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೂ ಒತ್ತು ನೀಡಿದ್ದರು. ನಡುರಾತ್ರಿಯಲ್ಲಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧೀಜಿಯವರು “ಮಧ್ಯರಾತ್ರಿಯಲ್ಲಿ ಒಬ್ಬ ಹೆಣ್ಣು ತನ್ನ ಮನೆಗೆ ಸುರಕ್ಷಿತವಾಗಿ ಮನೆಗೆ ತಲುಪಿದಂದೇ  ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ ” ಎಂದು ಸೂಚ್ಯವಾಗಿ ಹೇಳಿ ಮಹಿಳಾ ಸ್ವಾತಂತ್ರ್ಯದ ಘನತೆ ಭವಿಷ್ಯದಲ್ಲಿ ಕಾಣಸಿಗಲಿ ಎನ್ನುವುದು ಪ್ರಸ್ತುತ ಪ್ರಶ್ನೆಯಾಗಿದೆ.

ನಮ್ಮ ಬಾಲ್ಯ,ಯೌವನ, ಮುಪ್ಪು ಇವೆಲ್ಲವುಗಳ ಕಾಲಘಟ್ಟದಲ್ಲಿ ಅದರದ್ದೇ ಆದ ಸ್ವಾತಂತ್ರ್ಯದ ನಿಷ್ಠೆಯ ಚೌಕಟ್ಟಿನೊಳಗಿದ್ದರೆ ಬದುಕು ಮತ್ತು ಸಮಾಜದ ಸ್ವಾಸ್ಥ್ಯ ಪೂರ್ಣವಾಗಿ ಇರುತ್ತದೆ.ಪ್ರತಿಯೊಬ್ಬ ಪ್ರಜೆಯ ಸ್ವಾತಂತ್ರ್ಯವನ್ನು ಯಾರೂ ಬಲವಂತವಾಗಿ ಪಡೆದುಕೊಳ್ಳು ಸಾಧ್ಯವಿಲ್ಲ. ಅಥವಾ ನಿರ್ಬಂಧಿಸಲೂ ಸಾಧ್ಯವಿಲ್ಲ.ಇಂದಿನ ಆಧುನಿಕತೆಯ ವ್ಯಸನಿಯಾದ ಸಮಾಜ ನಿಜವಾದ ಸ್ವಾತಂತ್ರ್ಯದ ಅರ್ಥ ವನ್ನು ಕಳೆದುಕೊಂಡಿದೆ.ಸುಖ, ಸಂಪತ್ತು, ವೈಭೋಗಗಳೇ ವಿಜೃಂಭಿಸುವ ಈ ಕಾಲಘಟ್ಟದಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯವನ್ನು ನಡೆಸುವ ವ್ಯವಧಾನ ನಮ್ಮ ನಮ್ಮೊಳಗಿರಲಿ.

-ಉಮೇಶ್ ‌ಆಚಾರ್ಯಉಡುಪಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!