Monday, September 9, 2024

ಪ್ರಚಾರಕ್ಕಷ್ಟೇ ಸೀಮಿತ ಬೈಂದೂರು ಶಾಸಕರ ಅಭಿವೃದ್ಧಿ : ವಿಕಾಸ್‌ ಹೆಗ್ಡೆ ಆಕ್ರೋಶ

ಶಾಸಕರು, ಸಂಸದರು ಬೈಂದೂರಿನ ಜನರಿಗೆ ಮಾತಿನ ಮೂಲಕ ಕಟ್ಟಿ ತೋರಿಸಿದ ಕನಸಿನ ಗೋಪುರವನ್ನು ನನಸು ಮಾಡಿ ತೋರಿಸಲಿ : ವಿಕಾಸ್‌ ಆಗ್ರಹ  

ಜನಪ್ರತಿನಿಧಿ (ಉಡುಪಿ/ಬೈಂದೂರು) : ಚುನಾವಣೆಯಲ್ಲಿ ಅಭಿವೃದ್ಧಿ ಕನಸಿನ ಗೋಪುರ ಕಟ್ಟಿದ ಶಾಸಕ ಗುರುರಾಜ್ ಗಂಟಿಹೊಳೆಯವರು ಚುನಾವಣೆ ನಂತರ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದ್ದಾರೆ. ಈಗ ಜನತೆ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ರಾಜ್ಯ ಸರ್ಕಾರ ಅನುದಾನ ನೀಡುವುದಿಲ್ಲ ಎನ್ನುವುದು ಒಬ್ಬ ಜನಪ್ರತಿನಿಧಿಯಾಗಿ ಇವರ ವೈಫಲ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್‌ ಹೆಗ್ಡೆ ಗಂಭೀರ ಆರೋಪ ಮಾಡಿದ್ದಾರೆ.

ಗಂಟಿಹೊಳೆ ಅವರಿಗೆ ಅಭಿವೃದ್ಧಿಯ ಬಗ್ಗೆ ಚಿಂತನೆಯೇ ಇಲ್ಲ, ಬರೀ ಪ್ರಚಾರ ಅಷ್ಟೇ. ಮೂರು ಅವಧಿಯಿಂದ ಕೇಂದ್ರದಲ್ಲಿ ಇವರದ್ದೇ ಸರ್ಕಾರವಿದೆ, ಸತತವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಬಿ. ವೈ. ರಾಘವೇಂದ್ರ ಆಯ್ಕೆಯಾಗುತ್ತಿದ್ದಾರೆ ಆದರೆ ಇವರಿಬ್ಬರು ಕೇವಲ ಅಭಿವೃದ್ಧಿಯ ವಿಚಾರದಲ್ಲಿ ಮನವಿ ಕೊಟ್ಟು ಅದರ ಫೋಟೋ ಹಾಕಿ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಆದ ಘೋರ ಅನ್ಯಾಯದ ಬಗ್ಗೆ ಇವರು ಮಾತನಾಡುತ್ತಿಲ್ಲ. ನೆರೆಯಿಂದ ಸಂಪೂರ್ಣ ಬೈಂದೂರು ಕ್ಷೇತ್ರದ ಜನತೆ ತತ್ತರಿಸಿ ಹೋಗಿದ್ದಾರೆ, ಕೃಷಿ ಸಂಪೂರ್ಣ ಹಾಳಾಗಿದೆ, ಮೀನುಗರಾರು, ಮೂರ್ತೆದಾರರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ, ಇವರಿಗೆ ಕೇಂದ್ರ ಸರ್ಕಾರದಿಂದ ಅತೀ ಹೆಚ್ಚಿನ ಆರ್ಥಿಕ ನೆರವು ಒದಗಿಸುವುದನ್ನು ಬಿಟ್ಟು ಇವರು ಕೇವಲ ರಾಜಕಾರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಾಸಕರು ಹಾಗೂ ಸಂಸದರಿಗೆ ಕ್ಷೇತ್ರದ ಬಗ್ಗೆ ಹಿತ ಚಿಂತನೆ ಇದ್ದರೆ ಕೇಂದ್ರ ಸರ್ಕಾರದಿಂದ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಿ. ಇವರ ಕೆಲವೊಂದು ಅಭಿವೃದ್ಧಿಯ ಯೋಚನೆ, ಯೋಜನೆಗಳು ಪ್ರಕೃತಿ ನಾಶ ಮಾಡಿ ಭೂ ವ್ಯವಹಾರ ಮಾಡುವವರಿಗೆ ಲಾಭ ಮಾಡುವ ಉದ್ದೇಶವನ್ನು ಮಾತ್ರ ಹೊಂದಿವೆ. ಬೈಂದೂರು ಶಾಸಕರು ಹಾಗೂ ಸಂಸದರು ಇನ್ನಾದರೂ ಕ್ಷೇತ್ರದ ಜನರಿಗೆ ಮಾತಿನ ಮೂಲಕ ಕಟ್ಟಿ ತೋರಿಸಿದ ಅಭಿವೃದ್ಧಿ ಎನ್ನುವ ಕನಸಿನ ಗೋಪುರವನ್ನು ನನಸು ಮಾಡುವ ಪ್ರಾಮಾಣಿಕ ಕಾರ್ಯಕೈಗೊಳ್ಳಲಿ ಎಂದು ವಿಕಾಸ್‌ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!