spot_img
Saturday, December 7, 2024
spot_img

ರಾಜಸ್ಥಾನದಲ್ಲಿ ಕರ್ನಾಟಕ ಸಂಸ್ಕೃತಿಯ ಮಹಾ ಅನಾವರಣ |ನಾವಡರ ಹಾಡಿಗೆ ಹೆಜ್ಜೆ ಹಾಕಿದ ನಾಗರತ್ನ ಹೇರ್ಳೆ

ಕುಂದಾಪುರ: ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ ಇದರ ವತಿಯಿಂದ “ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ, ಉದಯಪುರ, ರಾಜಸ್ಥಾನ” ಇಲ್ಲಿ ಜುಲೈ 19 ರಿಂದ ಆಗಸ್ಟ್ 2 ರ ವರೆಗೆ “ಶಿಕ್ಷಣದಲ್ಲಿ ಬೊಂಬೆಯಾಟದ ಪಾತ್ರ” ಎಂಬ ವಿಚಾರದ ಬಗ್ಗೆ ನಡೆದ ತರಬೇತಿಯಲ್ಲಿ ದೇಶದ 9 ರಾಜ್ಯಗಳಿಂದ 53 ಜನ ಪ್ರಶಿಕ್ಷಣಾರ್ಥಿಗಳು ಆಗಮಿಸಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಾದ ಉಡುಪಿ, ಮಂಡ್ಯ, ಕೊಡಗು, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಂದ 10 ಪ್ರಶಿಕ್ಷಣಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಲು ತೆರಳಿದ್ದರು. ಅಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಕರ್ನಾಟಕದ ಸರದಿ ಬಂದಾಗ ವಿಭಿನ್ನವಾಗಿ ಸಂಸ್ಕೃತಿಯ ಅನಾವರಣ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಎಂದಿನ ಸಂಪ್ರದಾಯದಂತೆ ಕೇಂದ್ರದ ಮೇಲ್ವಿಚಾರಕರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಾಡಗೀತೆಯನ್ನು ಹಾಡಿ ಪಿಪಿಟಿಯ ಮೂಲಕ ಕರ್ನಾಟಕದ ವೈವಿಧ್ಯಮಯ ಇತಿಹಾಸದ ಮಹಾನ್ ದರ್ಶನ ಮಾಡಿಸಲಾಯಿತು. ಆ ಬಳಿಕ ಉಡುಪಿ ಜಿಲ್ಲೆಯವರೇ ಆದ ಆಲೂರು ಶಾಲಾ ಶಿಕ್ಷಕಿ ನಾಗರತ್ನ ಹೇರ್ಳೆ ಇವರು ಯಕ್ಷ ಮೇರು ದಿ| ಕಾಳಿಂಗ ನಾವಡರ ಕಂಚಿನ ಕಂಠದಿಂದ ಹೊರಹೊಮ್ಮಿದ “ನೀಲಗಗನದೊಳು” ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕರಾವಳಿ ಗಂಡುಗಲೆ ಯಕ್ಷಗಾನದ ಪರಿಚಯ ಮಾಡಿಕೊಟ್ಟರು.

ಮೈಸೂರಿನ ಶಿಕ್ಷಕಿ ಸವಿತಾ ಇವರು “ಸೋಜುಗಾದ ಸೂಜುಮಲ್ಲಿಗೆ” ಹಾಡು ಮತ್ತು ಒನಕೆ ಓಬವ್ವನ ಪ್ರಸ್ತುತಿ ಮೂಲಕ ಗಮನ ಸೆಳೆದರು. ಬೆಂಗಳೂರಿನ ಶಿಕ್ಷಕ ಮಲ್ಲಿಕಾರ್ಜುನ ಇವರು “ಅಡವಿ ದೇವಿಯ ಕಾಡು ಜನಗಳ” ಹಾಡಿಗೆ ನರ್ತಿಸಿ ಕಾಡು ಜನರ ಸಂಸ್ಕೃತಿಯ ಒಂದು ಝಲಕ್ ನೀಡಿದರು. ನಂತರ ಕೊಡಗಿನ ಶಿಕ್ಷಕರಾದ ಸಂದೇಶ ಮತ್ತು ಮಧುಸೂದನ, ಮೈಸೂರಿನ ಶಿಕ್ಷಕಿ ಲಕ್ಷ್ಮೀ ಕೊಡಗಿನ ಉಡುಗೆಯ ಮೂಲಕ ವಿಶೇಷವಾಗಿ ಗುರುತಿಸಿಕೊಂಡರು. ಮಂಡ್ಯ ಹಾಗೂ ಬೆಂಗಳೂರಿನ ಶಿಕ್ಷಕರಾದ ಧನಂಜಯ, ಸುರೇಶ್ ಮತ್ತು ಷಣ್ಮುಖ ಅವರು ಬಿಳಿ ಪಂಚೆ, ಅಂಗಿ ಮತ್ತು ಶಾಲು ಧರಿಸಿ ಕರ್ನಾಟಕದ ಸಾಂಸ್ಕೃತಿಕ ದಿರಿಸಿನಲ್ಲಿ ಮಿಂಚಿದರು. ಉಡುಪಿ ಜಿಲ್ಲೆಯ ಶಿಕ್ಷಕಿ ಆಸ್ಮಾ ಬಾನು ಇವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು. ನಂತರ ಎಲ್ಲರೂ ಸೇರಿ “ಹಚ್ಚೇವು ಕನ್ನಡದ ದೀಪ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಜಾನಪದ ನೃತ್ಯ, ಕೋಲಾಟ, ಕೊಡವ ನೃತ್ಯ, ಹುಲಿ ಕುಣಿತ”ದ ಮೂಲಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ಇವೆಲ್ಲವುಗಳಿಗೆ ಕಲಶವಿಟ್ಟಂತೆ ಜ್ಞಾನ ಪೀಠ ಪ್ರಶಸ್ತಿ ವಿಜೇತರ ವೇದಿಕೆ, ರಂಗೋಲಿ, ಕರ್ನಾಟಕದ ನಕ್ಷೆ, ಹಳದಿ ಕೆಂಪು ಬಣ್ಣದಿಂದ ಕೂಡಿದ ದೀಪಗಳ ರಚನೆ, ಬಲೂನುಗಳು, ಕಾಗದದ ಹೂವುಗಳು, ಸುಸ್ವಾಗತ ಬೋರ್ಡ್, ಕನ್ನಡದ ಶಾಲು, ಧ್ವಜ ಇತ್ಯಾದಿಗಳು ವಿಶೇಷ ಆಕರ್ಷಣೆ ಆಗಿದ್ದವು.

ಜೊತೆಗೆ ಬೇರೆ, ಬೇರೆ ರಾಜ್ಯಗಳ ಪ್ರಸ್ತುತಿಯಲ್ಲಿ ಮೂಡಿಬಂದ ಅವರು ಹಬ್ಬ, ನೃತ್ಯ, ಪೋಷಾಕು, ಸಂಸ್ಕೃತಿ, ಆಹಾರ, ಆಚಾರ, ವಿಚಾರಗಳ ಕುರಿತ ನೈಜ ಚಿತ್ರಣ ಅವರ ಅನುಭವವನ್ನು ಹೆಚ್ಚಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!