Thursday, November 14, 2024

ಪ್ಯಾರಿಸ್‌ ಒಲಿಂಪಿಕ್ಸ್‌ :  ಮನು ಭಾಕರ್ ‘ಡಬಲ್ ‘ ಶೂಟರ್

*ಎಸ್. ಜಗದೀಶ್ಚಂದ್ರ ಅಂಚನ್|
ಪ್ರತಿಯೊಬ್ಬ ಕ್ರಿಡಾಪಟುವಿನ ಕನಸು ಸಾಕಾರಗೊಳ್ಳುವುದು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಾಗ. ಆದರೆ, ಈ ಕನಸ್ಸನ್ನು  ಎರಡೆರಡು ಬಾರಿ ಒಂದೇ ಒಲಿಂಪಿಕ್ಸ್ ನಲ್ಲಿ ಸಾಕಾರಗೊಳಿಸುವುದೆಂದರೆ ಅದೊಂದು ಮಹತ್ಸಾಧನೆ ಎನ್ನಲೇಬೇಕು.ಇದೀಗ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಹೆಮ್ಮೆಯ ಕ್ರೀಡಾಪಟು ಮನು ಭಾಕರ್ ಶೂಟಿಂಗ್ ಸ್ಪರ್ಧೆಯಲ್ಲಿ  ಎರಡು ಪದಕಗಳನ್ನು ಗೆದ್ದು ಹೊಸ ಇತಿಹಾಸವನ್ನು ನಿರ್ಮಿಸಿದ್ದು ಮಾತ್ರವಲ್ಲ ಡಬಲ್ ಶೂಟರ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಪದಕದ ಬೇಟೆಯನ್ನು ಆರಂಭಿಸಿದ್ದೇ ಮನು ಭಾಕರ್ ಅವರಿಂದ. 10 ಮೀಟರ್‌ ಏರ್‌ ಪಿಸ್ತೂಲ್‌  ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಮನು ಭಾಕರ್‌ ಭಾನುವಾರ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು .ಮೂರು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮನು ಭಾಕರ್ ತನ್ನ ಅತ್ಯುತ್ತಮ ಪ್ರದರ್ಶನದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ  ಕಂಚಿನ ಪದಕ ಗೆದ್ದರು. ಈ ಮೂಲಕ ಅಭಿನವ್ ಬಿಂದ್ರಾ , ರಾಜ್ಯವರ್ಧನ್ ಸಿಂಗ್ ರಾಥೋಡ್ , ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ ಪದಕ ಗೆದ್ದ ಐದನೇ ಶೂಟರ್ ಮನು ಭಾಕರ್ ಆಗಿದ್ದಾರೆ. ಇದೊಂದು ನಿಜಕ್ಕೂ ಭಾರತದ ಪಾಲಿಗೆ ಐತಿಹಾಸಿಕ ಪದಕ. ಮನು ಭಾಕರ್ ಅವರ ಈ ಸಾಧನೆ ಒಲಿಂಪಿಕ್ಸ್‌ ಕಣದಲ್ಲಿರುವ ಇತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಯಿತು.

ಕಿರಿಯ ವಯಸ್ಸಿನಲ್ಲೇ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗಾಗಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಹರಿಯಾಣದ ಝಜ್ಜರ್ ಜಿಲ್ಲೆಯ ಯುವ ಶೂಟರ್ ಮನು ಭಾಕರ್, ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಅರ್ಹತಾ ಪ್ರದರ್ಶನ ನೀಡಿದ್ದರು. 97 ಪಾಯಿಂಟ್‌ಗಳೊಂದಿಗೆ ಶುಭಾರಂಭ ಮಾಡಿ, ಸರಣಿ 1ರ ಅಂತ್ಯದಲ್ಲಿ ನಾಲ್ಕನೇ ಸ್ಥಾನ ಪಡೆದರು. ಎರಡನೇ ಸರಣಿಯಲ್ಲೂ 97 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿ ಉಳಿದರು. ಮೂರನೇ ಸರಣಿಯಲ್ಲಿ ಅತ್ಯುತ್ತಮ 98 ಅಂಕ ಗಳಿಸಿ, ಅಗ್ರ ಎರಡನೇ ಸ್ಥಾನಕ್ಕೆ ಮರಳಿದ್ದರು. ಐದನೇ ಸರಣಿಯಲ್ಲಿ 8ನೇ ಸ್ಥಾನ ಗಳಿಸಿದ ಮನು ಭಾಕರ್ ಅಂತಿಮವಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಒಲಿಂಪಿಕ್ ಪದಕ ಗಳಿಸಲು ಪ್ರಯತ್ನಿಸುತ್ತಿದ್ದ 22 ವರ್ಷದ ಮನು ಭಾಕರ್‌ ಅವರಿಗೆ ಭಾನುವಾರ ಶುಭ ದಿನವಾಗಿತ್ತು. ಫ್ರಾನ್ಸ್‌ನ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯ ಅಂತಿಮ ಸುತ್ತಿನ ಫೈನಲ್‌ನಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಭಾವಂತ ಶೂಟರ್‌ಗಳಲ್ಲಿ ಒಬ್ಬರಾದ ಮನು ಭಾಕರ್ ಮೂರನೇ ಸ್ಥಾನ ಪಡೆದು, ಕಂಚಿನ ಪದಕಕ್ಕೆ ಕೊರಳೊಡ್ಡಿ ತಮ್ಮ ಕನಸುಗಳನ್ನು ನನಸಾಗಿಸಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸುಮಾರು 20 ವರ್ಷಗಳ ಹಿಂದೆ, ಅಂದರೆ 2004ರಲ್ಲಿ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು. ಅದೇ ಇಲ್ಲಿಯವರೆಗಿನ ದೊಡ್ಡ ಸಾಧನೆ ಆಗಿತ್ತು. ಆದರೆ, ಮನು ಭಾಕರ್ ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸುಮಾ ಶಿರೂರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಮನು ಭಾಕರ್ ಅವರ ಕಂಚಿನ ಪದಕದ ಸಾಧನೆಯ ಮೂಲಕ ಭಾರತ  ಶೂಟಿಂಗ್‌ ಸ್ಪರ್ಧೆಯಲ್ಲಿ 12 ವರ್ಷಗಳ ಒಲಿಂಪಿಕ್ಸ್‌ ಪದಕದ ಬರವನ್ನು ನೀಗಿಸಿತು. ಮನು ಭಾಕರ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಪದಕ ಗೆದ್ದು ಖಾತೆ ತೆರೆದಿದ್ದಾರೆ.

10 ಮೀ. ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಮೊದಲು ಕಂಚಿನ ಪದಕ ಗೆದ್ದಿದ್ದ ಮನು ಭಾಕರ್ ಇದಾದ ಎರಡೇ ದಿನದಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಎರಡನೇ ಬಾರಿ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಸರಬ್ಜೋತ್ ಜೊತೆ ಮನು ಭಾಕರ್ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದುವರೆಗೆ ಇಂತಹದ್ದೊಂದು ದಾಖಲೆಯನ್ನೂ ಯಾವುದೇ ಭಾರತೀಯ ತಾರೆ ಮಾಡಿರಲಿಲ್ಲ. ಇದೀಗ ಮನು ಭಾಕರ್  ಭಾರತದ ಪರ ಒಂದಕ್ಕಿಂತ ಹೆಚ್ಚು ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಮಹಿಳಾ ತಾರೆಯಾಗಿದ್ದಾರೆ. ಪಿವಿ ಸಿಂಧು ಬ್ಯಾಡ್ಮಿಂಟನ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ,  ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಸಾಧನೆ ಯಾವುದೇ ಭಾರತೀಯ ಮಹಿಳಾ ತಾರೆಯರು ಇದುವರೆಗೆ ಮಾಡಿರಲಿಲ್ಲ.

ಇದೀಗ ಇಂತಹ ಅದ್ಭುತ ಪ್ರತಿಭೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಮನು ಭಾಕರ್ ರಾತ್ರೋರಾತ್ರಿ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರೀಡಾತಾರೆಯಾಗಿ ಮಿನುಗಿದ್ದಾರೆ. ಕ್ರೀಡೆಯಲ್ಲಾಗಲಿ ಇತರ ಯಾವುದೇ ಕ್ಷೇತ್ರದಲ್ಲಾಗಲಿ ಗೆಲುವಿಗಷ್ಟೇ ಮಾನ್ಯತೆ. ಆದರೆ, ಮನು ಭಾಕರ್ ಒಲಿಂಪಿಕ್ಸ್ ಪದಕ ಗೆದ್ದ ಒಂದೇ ಕಾರಣಕ್ಕೆ ಭಾರತೀಯರಿಗೆ ಸ್ಪೂರ್ತಿಯಾಗಿಲ್ಲ. ಜೀವನದಲ್ಲಿ ಸ್ಪಷ್ಟ ಗುರಿ, ಸಾಧಿಸುವ ಹಂಬಲ ಮತ್ತು ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಮನು ಭಾಕರ್ ಉದಾಹರಣೆ ಯಾಗಿದ್ದಾರೆ. ಕ್ರೀಡೆ ಹೊರತಾಗಿಯೂ ದೇಶದ ಯುವ ಸಮುದಾಯಕ್ಕೆ ಅವರು ಮಾದರಿಯಾಗಿದ್ದಾರೆ.

ಬಾಲ್ಯದಿಂದಲೂ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಭಾಕರ್, ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಟೆನಿಸ್, ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ನಂತರ ‘ತಂಗ್ ಟಾ’ ಎಂಬ ಪ್ರಾಚೀನ ಮಣಿಪುರಿ ಸಮರ ಕಲೆ ಕಲಿತು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರು. ತನ್ನ 14ನೇ ವಯಸ್ಸಿನಲ್ಲಿ ಶೂಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ಅವರಿಗೆ ತಂದೆ ರಾಮಕಿಶನ್ ಭಾಕರ್ ಆಸರೆಯಾಗಿ ನಿಂತಿದ್ದರು. ಕೇವಲ ಎರಡೇ ವರ್ಷ ಗಳಲ್ಲಿ ತಮ್ಮ 16ನೇ ವಯಸ್ಸಿಗೆ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ 9 ಚಿನ್ನದ ಪದಕ, 2 ಬೆಳ್ಳಿ ಮತ್ತು 2 ಕಂಚು ಗೆದ್ದು ವಿಶ್ವದಾಖಲೆ ಬರೆದರು. 2017ರ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ ಹೀನಾ ಸಿಧು ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದರು.2018ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್‌ನಲ್ಲಿ ಚಿನ್ನದ ಪದಕ ಗೆದ್ದು ಭರವಸೆಯ ಶೂಟರ್ ಎನಿಸಿಕೊಂಡಿದ್ದರು. 2021ರಲ್ಲಿ ನವದೆಹಲಿಯಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ 10ಮೀ  ಏರ್ ಪಿಸ್ತೂಲ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ತೆರಳಿದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾದ ಈ ಆಘಾತದಿಂದ ಚೇತರಿಕೊಳ್ಳದ ಮನು ಭಾಕರ್ ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪಾದಾರ್ಪಣ ಒಲಿಂಪಿಕ್ಸ್​ ಕೂಟವಾಗಿತ್ತು. ಅಂದಿನ ಸೋಲಿನಿಂದ ಮನನೊಂದು ಶೂಟಿಂಗ್​ಗೆ ವಿದಾಯ ಹೇಳಲು ಬಯಸಿದ್ದ ಮನು ಭಾಕರ್  ತಂದೆಯ ಆತ್ಮವಿಶ್ವಾಸದ ಮಾತಿನಂತೆ ಶೂಟಿಂಗ್​ನಲ್ಲಿ ಮುಂದುವರಿದಿದ್ದರು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅತ್ಯುತ್ತಮ ಸಾಧನೆಯೊಂದಿಗೆ 2 ಕಂಚಿನ ಪದಕ ಗೆದ್ದು ಭಾರತೀಯ ಒಲಿಂಪಿಕ್ಸ್​ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಭಗವದ್ಗೀತೆ ಓದಿದ್ದು ಫಲ ನೀಡಿತು 

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ಕಂಚಿನ ಪದಕ ಸ್ವೀಕರಿಸಿದ ನಂತರ ತನ್ನ ಸಾಧನೆ ಕುರಿತು ಮಾತನಾಡಿದ ಮನು ಭಾಕರ್ , ನಾನು ಭಗವದ್ಗೀತೆಯನ್ನು ಸಾಕಷ್ಟು ಓದಿದ್ದೇನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ,  ‘ ನಿನ್ನ ಕೆಲಸ ನೀನು ಮಾಡು ಫಲಾನು ಫಲ ನನಗೆ ಬಿಡು ‘ ಎಂದು . ಆ ಗೀತೆಯ ಸಾರ ಮನು ಭಾಕರ್ ತಲೆಯಲ್ಲಿ ಓಡುತ್ತಿತ್ತಂತೆ. ಅವರು ಸಹ ಅದೇ ರೀತಿ ಯೋಚಿಸಿದರಂತೆ.  ಪ್ಯಾರಿಸ್‌ ಒಲಿಂಪಿಕ್ಸ್‌ ಅಂಗಳದಲ್ಲಿ  ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿದ ಮನು ಭಾಕರ್ ಗೆ ಹಣೆಬರಹದಲ್ಲಿ ಬರೆದಿದ್ದ ಕಂಚಿನ ಪದಕ ಗೆಲ್ಲಲು ಸಾಧ್ಯವಾಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!