Sunday, September 8, 2024

ಕರಾವಳಿಗೆ ಎಂಟ್ರಿಕೊಟ್ಟ ಖತರ್ನಾಕ್‌ ಚಡ್ಡಿಗ್ಯಾಂಗ್‌ | ಉಡುಪಿ, ಕುಂದಾಪುರ, ಬೈಂದೂರಿನಲ್ಲೂ ಪೊಲೀಸ್‌ ಕಣ್ಗಾವಲು !

ಜನಪ್ರತಿನಿಧಿ (ಮಂಗಳೂರು) : ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ “ಚಡ್ಡಿ ಗ್ಯಾಂಗ್‌’ ಎಂಬ ಕಳ್ಳರ ತಂಡ ಕ್ರಿಯಾಶೀಲವಾಗಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮಂಗಳೂರು ನಗರದಲ್ಲಿ ಹೊಸ ಕಳ್ಳರ ಗ್ಯಾಂಗ್ ಹೆಜ್ಜೆಯಿಟ್ಟಿದ್ದು, ದರೋಡೆಗೆ ಕುಖ್ಯಾತಿ ಪಡೆದಿರುವ ಚಡ್ಡಿ ಗ್ಯಾಂಗ್‌ ಕರಾವಳಿಯತ್ತ ತನ್ನ ವಕ್ರದೃಷ್ಟಿಯನ್ನಿಟ್ಟಂತೆ ಕಾಣಿಸುತ್ತಿದೆ.

ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಈ ಹಿಂದೆಯೂ ಈ ಚಡ್ಡಿಗ್ಯಾಂಗ್‌ ಮನೆ ಕಳ್ಳತನ ಕೃತ್ಯವೆಸಗಿತ್ತು. ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ಸೇರಿ ಮುಂತಾದ ಭಾಗದವರಿರುವ ಕಳ್ಳರ ಗುಂಪು ಚಡ್ಡಿ, ಬನಿಯಾನ್‌, ತಲೆ ಮೇಲೊಂದು ಬಟ್ಟೆ ಸುತ್ತಿಕೊಂಡು ಮೈಗೆ ಎಣ್ಣೆ ಸವರಿಕೊಂಡು ಮನೆ ಕಳ್ಳತನ ಕೃತ್ಯವೆಸಗುತ್ತಿರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಮಂಗಳೂರು ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಶನಿವಾರ ರಾತ್ರಿ ಮನೆ ಕಳ್ಳತನ ಘಟನೆ ನಡೆದಿದ್ದು ಇದೇ ತಂಡ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಚಡ್ಡಿಗ್ಯಾಂಗ್‌ ಕಳ್ಳತನಕ್ಕೆ ಮುಂದಾಗಿತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಖತರ್ನಾಕ್ ಚಡ್ಡಿ ಗ್ಯಾಂಗ್‌ :
ಬರೀ ಚಡ್ಡಿ, ಬನಿಯಾನ್‌, ತಲೆ ಮೇಲೊಂದು ಬಟ್ಟೆ ಸುತ್ತಿಕೊಳ್ಳುವ ಈ ಖತರ್ನಾಕ್ ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಮಾರಕಾಯುಧಗಳನ್ನು ಇಟ್ಟುಕೊಂಡು ಮನೆ ಕಳ್ಳತನಕ್ಕೆ ಹೊಂಚು ಹಾಕುವ ಈ ಚಡ್ಡಿಗ್ಯಾಂಗ್‌ ಮಂಗಳೂರಿನಲ್ಲಿ ಬೀಡುಬಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಮಾನ್ಯವಾಗಿ ನಿರಂತರ ಮಳೆಯಾಗುವ ರಾತ್ರಿ ವೇಳೆ ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ಇಂತಹ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ ಎನ್ನುತ್ತಾರೆ ಪೊಲೀಸರು.

ಮಂಗಳೂರಿನ ವಿವಿಧ ಭಾಗಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದು, ಇದರ ಹಿಂದೆ ಕುಖ್ಯಾತ ಚಡ್ಡಿಗ್ಯಾಂಗ್‌ನ ಕೈವಾಡ ಇರುವ ಶಂಕೆ ಇದೆ ಎಂದು ಹೇಳಲಾಗ್ತಿದೆ. ಮಂಗಳೂರಿನ ಕೋಡಿಕಲ್‌ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ಈ ಕೃತ್ಯವನ್ನು ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ಮೂಲದ ಚಡ್ಡಿಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಉರ್ವ ಠಾಣೆಯಲ್ಲಿಯೂ ಈ ಸಂಬಂಧಿಸಿದಂತೆ  ಪ್ರಕರಣ ದಾಖಲಾಗಿದ್ದು, ಈ ಕೃತ್ಯ ನಡೆದ ಮನೆಯ ಸಿಸಿಟಿವಿ ನೋಡಿದಾಗ ಕಳ್ಳರ ಕೆಲವು ದೃಶ್ಯಗಳು ಕಂಡು ಬಂದಿದೆ. ಅಪರಾತ್ರಿಯಲ್ಲಿ ಕಳ್ಳರು ಟಾರ್ಚ್‌ ಹಿಡಿದು ಮನೆಯ ಬಳಿ ನಸುಕಿನ ಸಮಯದಲ್ಲಿ ಮನೆಗೆ ಪ್ರವೇಶಿಸಿ ಬೆಳಗಿನ ಜಾವ 3.42ಕ್ಕೆ ವಾಪಾಸಾಗಿದ್ದು ಸೆರೆಯಾಗಿದೆ. ಇದರಲ್ಲಿ ಓರ್ವನ ಬಳಿ ಬ್ಯಾಗ್‌ ಇತ್ತು. ಕಳ್ಳರು ಮನೆಯಿಂದ ಹೊರಗೆ ಬರುವ ಸಮಯದಲ್ಲಿ ರಸ್ತೆಯಲ್ಲಿ ವಾಹನವೊಂದು ಹಾದು ಹೋಗಿದೆ. ಹಾಗಾಗಿ ಮನೆಯ ಗೇಟ್‌ ಬಳಿಯೇ ನಿಂತ ಕಳ್ಳರು ನಂತರ ರಸ್ತೆಗೆ ಬಂದಿದ್ದಾರೆ.

ನಿದ್ರೆಯಲ್ಲಿರುವಾಗ ಶುರುವಾಗುತ್ತದೆ ಚಡ್ಡಿಗ್ಯಾಂಗ್‌ ಕಾರ್ಯಾಚರಣೆ :
ರವಿವಾರ ನಸುಕಿನ ಸಮಯದಲ್ಲಿ ಕೋಡಿಕಲ್‌ನ ವಿವೇಕಾನಂದ ನಗರದಲ್ಲಿ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದಾರೆ. 2.04ರ ಸುಮಾರಿಗೆ ಮನೆಯ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗ್ಗಿರುವ ಸುಮಾರು 5 ಮಂದಿ ಕಳ್ಳರ ತಂಡ ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಬೆಡ್‌ರೂಮ್‌ಗೂ ಪ್ರವೇಶಿಸಿದೆ. ಕಪಾಟಿನಲ್ಲಿ ಇಟ್ಟಿದ್ದ 10,000 ರೂ. ನಗದು ಕಳವು ಮಾಡಿದೆ. ಘಟನೆ ಮರುದಿನ ಎದ್ದಾಗಲೇ ಮನೆ ಮಂದಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಸಂಬಂಧಿಸಿದಂತೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ಅಪರಾತ್ರಿ ಉರ್ವ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರು ಕಳ್ಳರು ವೃದ್ಧ ದಂಪತಿಗೆ ಹಲ್ಲೆ ನಡೆಸಿ ಚಿನ್ನಾಭರಣ, ಮೊಬೈಲ್‌ ಸೇರಿ ಕಾರು ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ. ಕಾರನ್ನು ಹೆಜಮಾಡಿ ಬಳಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಎಚ್ಚರಿಕೆಯಿಂದರಲು ಮಂಗಳೂರು ಪೊಲೀಸರ ಸೂಚನೆ :
* ಚಡ್ಡಿ ಗ್ಯಾಂಗ್‌’ ಅಥವಾ ಇತರ ಕಳ್ಳರ ಕೃತ್ಯಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.
* ರಾತ್ರಿ ಸಮಯ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳಬೇಕು.
* ಬೆಲೆಬಾಳುವ ಸ್ವತ್ತುಗಳನ್ನು ಮನೆಯಲ್ಲಿಡದೆ ಬ್ಯಾಂಕ್‌ನ ಸೇಫ್‌ ಲಾಕರ್‌ನಲ್ಲಿಡಬೇಕು.
* ತಮ್ಮ ಮನೆಯ ಮತ್ತು ವಾಸ್ತವ್ಯದ ಪರಿಸರದಲ್ಲಿ ಇರುವ ಸಿಸಿ ಕೆಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
* ಯಾವುದೇ ಅಪರಿಚಿತ/ಸಂಶಯಾಸ್ಪದ ವ್ಯಕ್ತಿಗಳು, ಮಹಿಳೆಯರು ಕಂಡು ಬಂದಲ್ಲಿ ಕೂಡಲೇ ತುರ್ತು ಕರೆ ಸೇವೆ 112 ಅಥವಾ ಪೊಲೀಸ್‌ ಠಾಣೆಗೆ ಕರೆ ಮಾಡಿ ತಿಳಿಸಬೇಕು.
* ವಸತಿ/ಬಡಾವಣೆ/ಪರಿಸರದಲ್ಲಿ ದಾರಿ ದೀಪ, ಸಾರ್ವಜನಿಕ ದೀಪಗಳು ಉರಿಯುತ್ತಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೆಸ್ಕಾಂ/ಮಂಗಳೂರು ಮಹಾನಗರ ಪಾಲಿಕೆ/ಸ್ಥಳೀಯ ಕಾರ್ಪೊರೇಟರ್‌ಗಳಿಗೆ ತಿಳಿಸಬೇಕು.
* ಒಂಟಿ ಮನೆಗಳು/ಲಾಕ್ಡ್ ಹೌಸ್‌/ಹಿರಿಯ ನಾಗರಿಕರು/ಮಹಿಳೆಯರು ಮಾತ್ರ ವಾಸ್ತವ್ಯ ಇರುವ ಮನೆಗಳು ಇದ್ದಲ್ಲಿ ಬೀಟ್‌ ಪೊಲೀಸ್‌ರಿಗೆ ಮಾಹಿತಿಯನ್ನು ನೀಡಬೇಕು.

ಕುಂದಾಪುರ, ಬೈಂದೂರಿನಲ್ಲಿ ಚಡ್ಡಿಗ್ಯಾಂಗ್‌ ಕಾರ್ಯಾಚರಣೆ !?
ದಕ್ಷಿಣ ಕನ್ನಡದ ಮೂಲಕ ಕರಾವಳಿಗೆ ಕಾಲಿಟ್ಟ . ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ಮೂಲದ ಈ ಖತರ್ನಾಕ್‌ ಚಡ್ಡಿಗ್ಯಾಂಗ್‌ ಕುಂದಾಪುರ, ಬೈಂದೂರು ಭಾಗಗಳಲ್ಲಿಯೂ ಆತಂಕ ಮೂಡಿಸಿದೆ. ಉರ್ವ ಠಾಣೆ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೇರಾದಲ್ಲಿ ಸೆರೆಯಾದ ದೃಶ್ಯಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಕುಂದಾಪುರ, ಬೈಂದೂರು ಭಾಗಗಳಲ್ಲಿಯೂ ಚಡ್ಡಿಗ್ಯಾಂಗ್‌ ಮನೆಕಳ್ಳತನಕ್ಕೆ ಮುಂದಾಗಿದೆ ಎಂಬ ವೀಡಿಯೋ ಹರಿದಾಡುತ್ತಿದ್ದು, ಇದು ಫೇಕ್‌. ಕುಂದಾಪುರ, ಬೈಂದೂರು ಭಾಗಗಳಲ್ಲಿ ಅಂತಹ ಯಾವ ಕೃತ್ಯವೂ ನಡೆದಿಲ್ಲ. ಈಗಾಗಲೇ ಪೊಲೀಸ್‌ ಇಲಾಖೆ ಈ ಸಂಬಂಧಿಸಿದಂತೆ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾತ್ರಿ ಬೀಟ್‌ ಜಾಸ್ತಿ ಮಾಡಲಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಡ್ಡಿಗ್ಯಾಂಗ್‌ ಎಂಬ ಕಳ್ಳರ ತಂಡ ಕಳೆದ ಕೆಲವು ದಿನಗಳಿಂದ ಮನೆಕಳ್ಳತನದಲ್ಲಿ ತೊಡಗಿದೆ. ಉಡುಪಿಯ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಈ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹಾಗೂ ರಾತ್ರಿ ಬೀಟ್‌ಗಳನ್ನು ಹೆಚ್ಚು ಮಾಡುವಂತೆ  ಸೂಚಿಸಲಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಅನುಮಾನಾಸ್ಪದರು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ.
-ಡಾ. ಅರುಣ್‌ ಕೆ.
ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

 

ಕುಂದಾಪುರದಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲ. ಜನರು ಆತಂಕ ಪಡಬೇಕಾಗಿಲ್ಲ. ಪೊಲೀಸ್‌ ಇಲಾಖೆ ಈಗಾಗಲೇ ಮಂಗಳೂರಿನಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಅಪರಿಚಿತ ವ್ಯಕ್ತಿಗಳು, ಅನುಮಾನಸ್ಪದರು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ.
-ಬೆಳ್ಳಿಯಪ್ಪ ಕೆ.ಯು
ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ


ಕೊಲ್ಲೂರಿನಲ್ಲಿ ಚಡ್ಡಿಗ್ಯಾಂಗ್ ಫೇಕ್‌ ಸುದ್ದಿ‌  

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಚಡ್ಡಿಗ್ಯಾಂಗ್‌ ಮನೆಕಳ್ಳತನ ಕೃತ್ಯವೆಸಗಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು ಸುದ್ದಿ. ಮಂಗಳೂರಿನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಅಂತಹ ಯಾವ ಘಟನೆಯೂ ನಡೆದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು. ಮಂಗಳೂರಿನ ಘಟನೆಯ ಹಿನ್ನೆಲೆಯಲ್ಲಿ ರಾತ್ರಿ ಬೀಟ್‌ಗಳನ್ನು ಜಾಸ್ತಿ ಮಾಡಲಾಗುತ್ತಿದೆ.
-ಜಯಶ್ರೀ ಹೊನ್ನೂರು
ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌, ಕೊಲ್ಲೂರು ಠಾಣೆ  

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!