Tuesday, October 8, 2024

ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ: ಕೃಷ್ಣಮೂರ್ತಿ ಮಂಜರು ಕೊಡಮಾಡಿದ ಸಮವಸ್ತ್ರ, ನೋಟ್ ಪುಸ್ತಕ, ಕಲಿಕಾ ಪರಿಕರ ವಿತರಣೆ

ವಂಡ್ಸೆ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಪ್ರತಿವರ್ಷದಂತೆ ಕೊಡಮಾಡಿದ ಸಮವಸ್ತ್ರ, ನೋಟ್ ಪುಸ್ತಕ, ಕಲಿಕಾ ಪರಿಕರಗಳ ವಿತರಣೆ ಕಾರ್ಯಕ್ರಮ ಹಾಗೂ ಪೋಷಕರ ಸಭೆ ಜೂನ್ 27 ಗುರುವಾರ ನಡೆಯಿತು.

ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು, ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು, ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸಲು ಶಾಲೆಯಲ್ಲಿ ಶಿಕ್ಷಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಅಂತೆಯೇ ಪೋಷಕರು ಕೂಡಾ ತಮ್ಮ ಮೇಲಿನ ಜವಬ್ದಾರಿಯನ್ನು ಅರಿತು ಪಾಲಿಸಬೇಕು, ಮಗು ಶಿಸ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೆಪಿಸಬೇಕು. ಹಾಗೆ ಇದು ಮಳೆಗಾಲ ಮಕ್ಕಳ ಬಗ್ಗೆಯೂ ವೈಯಕ್ತಿಕ ಕಾಳಜಿ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೆಗೌಡರ ಜಯಂತಿ ಆಚರಿಸಲಾಯಿತು. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅಂಬಿಕಾ, ರೇವತಿ, ಪಲ್ಲವಿ, ಆಶಾ ಅವರನ್ನು ಸನ್ಮಾನಿಸಲಾಯಿತು.

ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ.ಪೂರ್ಣಿಮಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯದ ಜೊತೆಯಲ್ಲಿ ಹೆಚ್ಚುವರಿಯಾಗಿ ಕರಾಟೆ, ಅಬಾಕಾಸ್, ವೇದಗಣಿತ, ಸಂಗೀತ ತರಬೇತಿಗಳನ್ನು ನೀಡಲು ಚಿಂತನೆ ನಡೆಸಿದ್ದು ವಿದ್ಯಾರ್ಥಿಗಳ ಆಸಕ್ತಿಯ ಅನುಗುಣವಾಗಿ ತರಗತಿಯನ್ನು ಆಯ್ದುಕೊಳ್ಳಬಹುದಾಗಿದೆ. ಜುಲೈಯಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಗತಿ ನಡೆಸಲು ಯೋಚಿಸಲಾಗಿದೆ ಎಂದರು.

ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಜಿ.ಶ್ರೀಧರ ಶೆಟ್ಟಿ, ವಂಡ್ಸೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಜು ವಂಡ್ಸೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿಗೆ ತೆರವಾದ ಎರಡು ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪೋಷಕರು ತಮ್ಮ ಅನಿಸಿಕೆ ಹಂಚಿಕೊಂಡರು.

ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು. ಮುಖ್ಯೋಪಾಧ್ಯಾಯರಾದ ಸದಾಶಿವ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕ ಸುಧಾಕರ ಕಾರ್ಯಕ್ರಮ ನಿರ್ವಹಿಸಿ, ಸಹಶಿಕ್ಷಕ ಪ್ರತಾಪಕುಮಾರ ಶೆಟ್ಟಿ ವಂದಿಸಿದರು. ಅಧ್ಯಾಪಕ ವೃಂದದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

ವಿಡಿಯೋ ವೀಕ್ಷಿಸಿ

https://fb.watch/s_nyhMa34A/

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!