Sunday, September 8, 2024

ದಿನೇಶ್ ಕಾರ್ತಿಕ್ ಈಗ ಕಾಮೆಂಟೇಟರ್

*ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ
‘ಡಿಕೆ’ ಅಂತನೇ ಫೇಮಸ್ ಆಗಿರುವ ದಿನೇಶ್ ಕಾರ್ತಿಕ್ ಈಗ ಕಾಮೆಂಟೇಟರ್ ಆಗಿ ಕ್ರಿಕೆಟ್ ರಂಗದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್  ಈಚೆಗೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ ತಿಂಗಳು ಐಪಿಎಲ್​ಗೆ ಗುಡ್​ ಬೈ ಹೇಳಿದ್ದ ಇವರು ಈ ತಿಂಗಳ  ಜೂನ್ -1ರಂದು ತಮ್ಮ ಹುಟ್ಟುಹಬ್ಬದಂತೆ ವೃತ್ತಿ ಬದುಕಿಗೆ ಅಂತ್ಯ ಹಾಡಿದ್ದಾರೆ. 2004ರಲ್ಲಿ ಟೀಂ ಇಂಡಿಯಾ  ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟಿದ ದಿನೇಶ್ ಕಾರ್ತಿಕ್  ಸುಮಾರು ಎರಡು ದಶಕಗಳ ತಮ್ಮ  ಸುದೀರ್ಘ ಕ್ರಿಕೆಟ್ ಜರ್ನಿಗೆ  ಫುಲ್​ ಸ್ಟಾಪ್ ಹಾಕಿದ್ದಾರೆ. ಈ ಹಿಂದೆ ಕೂಡ ಐಸಿಸಿ ಟೂರ್ನಿಗಳಲ್ಲಿ ಮತ್ತು ಇತರೆ ಸರಣಿಗಳಲ್ಲಿ ಇವರು ಕಾಮೆಂಟೇಟರ್ ಕಾಣಿಸಿಕೊಂಡು ಗಮನ ಸೆಳೆದಿದ್ದರು.ಇದೀಗ ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟ್ವೆಂಟಿ -20 ವಿಶ್ವಕಪ್ ಕಾಮೆಂಟರಿ ಪ್ಯಾನೆಲ್​ನಲ್ಲಿ ಮತ್ತೆ  ಕಾಣಿಸಿಕೊಂಡಿರುವ ದಿನೇಶ್ ಕಾರ್ತಿಕ್  ಮುಂಬರುವ ದಿನಗಳಲ್ಲಿ ಇದೇ ವೃತ್ತಿಯನ್ನು ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.

ಟೀಂ ಇಂಡಿಯಾದಲ್ಲಿ  ‘ ಗ್ರೇಟ್ ಫಿನಿಶರ್ ‘ ಆಗಿ ಗುರುತಿಸಿಕೊಂಡ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ  ತನ್ನದೆ ಆದ ‘ ಖದರ್ ‘ ತೋರಿಸಿದ ಅದ್ಭುತ ಆಟಗಾರ. ಸಮರ್ಪಣಾಭಾವದಿಂದ ತನ್ನನ್ನೇ ತಾನು ಕ್ರಿಕೆಟ್ ರಂಗಕ್ಕೆ ಅರ್ಪಿಸಿಕೊಂಡಿದ್ದ ಇವರು ಒಬ್ಬ  ಅಪರೂಪದ ಕ್ರಿಕೆಟರ್.ಕ್ರಿಕೆಟಿನಲ್ಲಿ ನಿಜವಾಗಿಯೂ  ಏರಿಳಿತವನ್ನು ಕಂಡರೂ ಆಟದ ಬಗ್ಗೆ ಬದ್ದತೆಯನ್ನು ಹೊಂದಿದ್ದರು. ಟೀಂ ಇಂಡಿಯಾದಿಂದ ಹೊರಬಿದ್ದಾಗಲೆಲ್ಲ ದೇಶಿಯ ಹಾಗೂ ಐಪಿಎಲ್‌ನಂತಹ ಪೈಪೋಟಿಯ ಸ್ಪರ್ಧಾಕಣದಲ್ಲಿ ತನ್ನ ತಾಕತ್ತನ್ನು ತೋರಿಸಿ ಇವರು ಟೀಂ ಇಂಡಿಯಾಕ್ಕೆ  ಕಂಬ್ಯಾಕ್ ಮಾಡುತ್ತಿದ್ದರು.ಕ್ರಿಕೆಟಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಇವರ ಮೇರು ವ್ಯಕ್ತಿತ್ವ ಇಂದಿನ ಯುವ ಆಟಗಾರರಿಗೆ ಮಾದರಿಯಾಗಿದೆ.

19ನೇ ವಯಸ್ಸಿನಲ್ಲೇ ಪದಾರ್ಪಣೆ : ಅತ್ಯಂತ ಪ್ರತಿಭಾವಂತ ಆಟಗಾರರಾಗಿದ್ದ ದಿನೇಶ್ ಕಾರ್ತಿಕ್  2004ರ ಸೆಪ್ಟೆಂಬರ್ 5ರಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಮೊದಲ  ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅವರು ಇಂಗ್ಲೆಂಡ್ ತಂಡದ ನಾಯಕ ಮೈಕೆಲ್ ವಾನ್ ರನ್ನು ಮಿಂಚಿನ ಸ್ಪಂಪಿಂಗ್ ಮಾಡುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಅವಿಸ್ಮರಣೀಯವನ್ನಾಗಿಸಿಕೊಂಡಿದ್ದರು. ಈ ನಡುವೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ , ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ನಾಯಕತ್ವದಲ್ಲೂ ಆಡಿದ್ದಾರೆ.

ಧೋನಿ ಅಬ್ಬರದಲ್ಲಿ ಕಳೆದು ಹೋದ ಕಾರ್ತಿಕ್ :  ದಿನೇಶ್ ಕಾರ್ತಿಕ್ ಅವರು ಟೀಂ ಇಂಡಿಯಾದಲ್ಲಿ ಖಾಯಂ ಆಗಿ ಸ್ಥಾನ ಪಡೆಯುವಲ್ಲಿ ವಿಫಲರಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ. ಇವರು 2007ರಲ್ಲಿ ಐಸಿಸಿ ಟ್ವೆಂಟಿ- 20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡದಲ್ಲಿದ್ದರು. ಆದರೆ, ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಅಬ್ಬರದ ಮಧ್ಯೆ ಕಳೆದು ಹೋಗಿದ್ದ ದಿನೇಶ್  ಕಾರ್ತಿಕ್ , 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದರು. ನಂತರ ಕ್ರಿಕೆಟ್’ನಿಂದ ದೂರವಾಗಿದ್ದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಕ್ಕೆ ಆಗೊಮ್ಮೆ ಈಗೊಮ್ಮೆ ಕಂಬ್ಯಾಕ್ ಮಾಡಿದ್ದೇ ದೊಡ್ಡ ಸಾಹಸ.

ದಿನೇಶ್ ಕಾರ್ತಿಕ್ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಆರಂಭಿಸಿ 20 ವರ್ಷಗಳ ಕಾಲ ಭಾರತದ ಕ್ರಿಕೆಟ್​ನಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಆಟಗಾರ. 94 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 30.21ರ ಬ್ಯಾಟಿಂಗ್ ಸರಾಸರಿಯಲ್ಲಿ 1752 ರನ್ ಗಳಿಸಿದ್ದಾರೆ. 26 ಟೆಸ್ಟ್​​ಗಳಲ್ಲಿ ಬ್ಯಾಟ್ ಬೀಸಿರುವ ಇವರು, 25.00ರ ಸರಾಸರಿಯಲ್ಲಿ 1025 ರನ್ ಕಲೆ ಹಾಕಿದ್ದಾರೆ. ಇನ್ನೂ 60 ಟ್ವೆಂಟಿ -20 ಅಂತಾರಾಷ್ಟ್ರೀಯ  ಪಂದ್ಯಗಳಲ್ಲಿ 26.38ರ ಸರಾಸರಿಯಲ್ಲಿ 686 ರನ್ ಬಾರಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 1 ಶತಕ (ಟೆಸ್ಟ್​ನಲ್ಲಿ) ಮಾತ್ರ ದಾಖಲಿಸಿದ್ದಾರೆ.ಬಹಳ ಮುಖ್ಯವಾಗಿ 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟ್ವೆಂಟಿ- 20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದಾಗ ದಿನೇಶ್ ಕಾರ್ತಿಕ್ ಕೂಡ ಆ ತಂಡದ ಪ್ರಮುಖ ಭಾಗವಾಗಿದ್ದರು ಎಂಬುದು ಅವರ ಸಾಧನೆಗಳಲ್ಲಿ ಪ್ರಮುಖವಾದುದ್ದಾಗಿದೆ. 2022ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಅವರು ಟೀಂ ಇಂಡಿಯಾದ ಪರ ತಮ್ಮ ಕೊನೆಯ ಪಂದ್ಯವಾಡಿದ್ದರು.

ಐಪಿಎಲ್ ಸಾಧನೆ : ದಿನೇಶ್ ಕಾರ್ತಿಕ್ ಐಪಿಎಲ್‌ ಪಂದ್ಯಾಟದಲ್ಲಿ ತನ್ನ ಬ್ಯಾಟಿಂಗ್‌ನಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. 2008ರಿಂದ ಈವರೆಗೂ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ಇವರು 17 ವರ್ಷಗಳಲ್ಲಿ ಹಲವು ತಂಡಗಳ ಪರ ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ದಿನೇಶ್ ಕಾರ್ತಿಕ್ 257 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್​ನಲ್ಲಿ 250ಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರ ಪೈಕಿ ದಿನೇಶ್  ಕಾರ್ತಿಕ್ ಕೂಡ ಒಬ್ಬರು. ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಐಪಿಎಲ್ ವೃತ್ತಿಜೀವನದುದ್ದಕ್ಕೂ ಆರು ತಂಡಗಳನ್ನು ಪ್ರತಿನಿಧಿಸಿರುವ ದಿನೇಶ್ ಕಾರ್ತಿಕ್, 2008ರಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡದೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಡೆಲ್ಲಿ ನಂತರ 2011ರಲ್ಲಿ ಪಂಜಾಬ್ ತಂಡಕ್ಕೆ ತೆರಳಿದರು. ಆ ಬಳಿಕ ಎರಡು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದರು.  2014ರಲ್ಲಿ ಮತ್ತೆ ಡೆಲ್ಲಿ ತಂಡಕ್ಕೆ ಸೇರಿಕೊಂಡರು. ನಂತರ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ತಂಡದ ಆಡಿದ ಇವರು ಬಳಿಕ 2022ರವರೆಗೂ ಕೋಲ್ಕತ್ತಾ ನೈಟ್ ರೈಡರ್ಸ್ಸ್ ಪರ ಆಡಿದ್ದರು. ಕೊನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲೂ ದಿನೇಶ್ ಕಾರ್ತಿಕ್  ಉತ್ತಮ ಆಟ ಆಡಿದ್ದರು. ಆರ್‌ಸಿಬಿ ಪರ ಆಡಿರುವ 15 ಮ್ಯಾಚ್‌ಗಳಲ್ಲಿ  326 ರನ್‌ ಬಾರಿಸಿದ್ದರು. ಇವರು ಆಡಿದ 257 ಪಂದ್ಯಗಳ  234 ಇನ್ನಿಂಗ್ಸ್​​ಗಳಲ್ಲಿ 26.32ರ ಬ್ಯಾಟಿಂಗ್ ಸರಾಸರಿಯಲ್ಲಿ 4842 ರನ್​ ಗಳಿಸಿದ್ದಾರೆ.  ಇದರಲ್ಲಿ   22 ಅರ್ಧಶತಕಗಳು , 466 ಬೌಂಡರಿ , 161 ಸಿಕ್ಸರ್​​ಗಳು ಸೇರಿವೆ. ಐಪಿಎಲ್‌ನಲ್ಲಿ ಇವರ  ಸ್ಟ್ರೈಕ್​ರೇಟ್​ 135.36 .

ಅಂದಹಾಗೆ, ತುಂಬಾ ಭಾವುಕರಾಗಿ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿರುವ ದಿನೇಶ್ ಕಾರ್ತಿಕ್, ಈ ಸಂದರ್ಭದಲ್ಲಿ  ಎಲ್ಲಾ ಕೋಚ್‌ಗಳು, ನಾಯಕ, ತಂಡದ ಸಹ ಆಟಗಾರರು, ಆಯ್ಕೆದಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದ್ದಾರೆ.ದೇಶದಲ್ಲಿ ಬಹಳಷ್ಟು ಜನರು ಕ್ರಿಕೆಟ್ ಆಡುತ್ತಾರೆ. ಈ ಪೈಕಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿದ್ದು ಅವರ ಅದೃಷ್ಟ ಎಂದು ಭಾವಿಸಿದ್ದಾರೆ. ಅವರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಹಲವು ಏರಿಳಿತಗಳು ಬಂದರೂ ಅದಕ್ಕೆ ಅಂಜದೇ, ಕ್ರಿಕೆಟಿನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳದ ಧೀಮಂತ ವ್ಯಕ್ತಿತ್ವ ಅವರದ್ದಾಗಿತ್ತು. ತನ್ನ ಪತ್ನಿಯನ್ನು ಗೆಳೆಯ ಮುರಳಿ ವಿಜಯ್ ಮದುವೆಯಾದಾಗ ದಿನೇಶ್ ಕಾರ್ತಿಕ್ ಸಾಕಷ್ಟು ಖಿನ್ನತೆಗೂ ಒಳಗಾಗಿದ್ದರು. ಆದರೂ ಧೈರ್ಯ ಕಳೆದುಕೊಳ್ಳದೆ ವೈಯಕ್ತಿಕ ಬದುಕಿನ ಎರಡನೇ ಇನಿಂಗ್ಸ್ ನಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಎಂಟ್ರಿಕೊಟ್ಟ ನಂತರ ದಿನೇಶ್ ಕಾರ್ತಿಕ್ ಬದುಕಿಗೂ ಹೊಸ ತಿರುವನ್ನು ನೀಡಿತ್ತು. ಅಲ್ಲಿಂದ ಅವರದ್ದು ಹೋರಾಟದ ಬದುಕು ಆಗಿತ್ತು. ಹೋರಾಟದ ಬದುಕಿನಲ್ಲಿ ಅವರು ಯಶಸ್ಸನ್ನು ಗಳಿಸುತ್ತಾ ಬಂದಿರುವುದೇ ಅವರಲ್ಲಿದ್ದ ಬಲವಾದ ಆತ್ಮವಿಶ್ವಾಸ. ಕ್ರಿಕೆಟ್‌ನ್ನು ಉಸಿರಾಗಿಸಿಕೊಂಡ ಇವರ ಮುಂದಿನ ಹೊಸ ಕ್ರಿಕೆಟ್ ಅಧ್ಯಾಯ ಯಶಸ್ಸನ್ನು  ಕಾಣುವಂತಾಗಲಿ ಎಂದು ಆಶಿಸೋಣ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!