Sunday, September 8, 2024

ಗಂಗೊಳ್ಳಿಯಲ್ಲಿ ನಿರಂತರ ವಿದ್ಯುತ್ ಕಡಿತ ವಿರೋಧಿಸಿ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ

ಗಂಗೊಳ್ಳಿ : ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿ ನಿರಂತರ ವಿದ್ಯುತ್ ಕಡಿತ ವಿರೋಧಿಸಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಗಂಗೊಳ್ಳಿ ಮೆಸ್ಕಾಂ ಕಛೇರಿ ಎದುರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕಳೆದ ಅನೇಕ ದಿನಗಳಿಂದ ಗಂಟೆಗಟ್ಟಲೆ ಹಗಲು ರಾತ್ರಿಯೆನ್ನದೆ ನಿರಂತರವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದು, ಮೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡುವ ತನ ಮೆಸ್ಕಾಂ ಕಛೇರಿಯಿಂದ ತೆರಳುದಿಲ್ಲ ಎಂದು ಎಚ್ಚರಿಕೆ ನೀಡಿದ ಗ್ರಾಮಸ್ಥರು, ಸ್ಥಳೀಯ ವಿದ್ಯುತ್ ಕಡಿತ ಸಮಸ್ಯೆ ಬಗ್ಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ಸಂಪರ್ಕಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ತಲ್ಲೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಹರೀಶ್ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಿದ್ಯುತ್ ಕಡಿತ ಸಮಸ್ಯೆ ಬಗೆಹರಿಸಲು ವಿಫಲವಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಸ್ಥಳೀಯರಾದ ರಾಮಪ್ಪ ಖಾರ್ವಿ ಮತ್ತು ಉಮಾನಾಥ ದೇವಾಡಿಗ, ಕಳೆದ ಕೆಲವು ದಿನಗಳಿಂದ ಲೈನ್ ಫಾಲ್ಟ್ ಮತ್ತಿತರ ನೆವವೊಡ್ಡಿ ಪ್ರತಿನಿತ್ಯ ೧೦ ಗಂಟೆಗೂ ಮಿಕ್ಕಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಮೀನುಗಾರರು, ಹೊಟೇಲ್ ಉದ್ಯಮಿಗಳು, ಐಸ್ ಕ್ರೀಮ್ ವಿತರಕರು ಸೇರಿದಂತೆ ಅನೇಕರು ಭಾರಿ ನಷ್ಟ ಅನುಭವಿಸಿದ್ದಾರೆ. ಅರ್ಧ ಗಂಟೆ ಕರೆಂಟ್ ಇದ್ದರೆ ಒಂದು ಗಂಟೆ ವಿದ್ಯುತ್ ಕಡಿತ. ಸ್ವಲ್ಪ ಮಳೆ ಬಿದ್ದರಂತೂ ಕೇಳುವುದೇ ಬೇಡ. ಎಷ್ಟು ಹೊತ್ತಿಗೆ ಕರೆಂಟ್ ಬರುತ್ತದೆ ಎಂದು ಹೇಳುವುದೇ ಕಷ್ಟ. ಗುಡ್ಡಗಾಡು ಪ್ರದೇಶದಲ್ಲಿನ ಸ್ಥಿತಿ ಇಲ್ಲಿ ಕೂಡ ನಿರ್ಮಾಣವಾಗಿದೆ. ಲೈನ್ ಫಾಲ್ಟ್, ರಿಪೇರಿ ನೆಪದಲ್ಲಿ ಗಂಟೆ ಗಟ್ಟಲೆ ವಿದ್ಯುತ್ ಕಡಿತ ಮಾಡುತ್ತಿದ್ದರೆ, ಒಂದೇ ವಾರದಲ್ಲಿ ಎರಡು ದಿನ ರಾತ್ರಿಯಿಂದ ಮಧ್ಯಾಹ್ನದ ತನಕ ಮತ್ತು ಬೆಳಿಗ್ಗೆಯಿಂದ ಸಂಜೆ ತನಕ ವಿದ್ಯುತ್ ಕಡಿತ ಮಾಡಲಾಗಿದೆ. ನಿರಂತರ ವಿದ್ಯುತ್ ಕಡಿತ ಹಾಗೂ ಸಕಾಲದಲ್ಲಿ ದೋಷ ಸರಿಪಡಿಸಲು ಮುಂದಾಗದಿರುವ ಮೆಸ್ಕಾಂನ ಧೋರಣೆ ಖಂಡನೀಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಂಗೊಳ್ಳಿ ಸುತ್ತಮುತ್ತ ಗಾಳಿ ಮಳೆ ಇಲ್ಲದಿದ್ದರೂ ಸ್ವಲ್ಪ ಮಳೆ ಬಿದ್ದರೆ ಸಾಕು ಗಂಟೆಗಟ್ಟಲೆ ವಿದ್ಯುತ್ ಕಡಿತ. ಗಾಳಿ ಮಳೆ ಇಲ್ಲದೆಯೂ ದಿನಗಟ್ಟಲೆ ವಿದ್ಯುತ್ ಕಡಿತ, ವಿದ್ಯುತ್ ಕಣ್ಣುಮುಚ್ಚಾಲೆ ಆಟ ನಡೆಯುತ್ತಿದೆ. ವಿದ್ಯುತ್ ಕಡಿತದಿಂದ ಜನರು ರೋಸಿ ಹೋಗಿದ್ದು ಜನರು ಸಹನೆ, ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆಕ್ರೋಶದ ಕಟ್ಟೆ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಕಡಿತ ಮುಂದುವರಿದಲ್ಲಿ ಗಂಗೊಳ್ಳಿಯ ಗ್ರಾಹಕರೊಡಗೂಡಿ ಗಂಗೊಳ್ಳಿ ಬಂದ್ ಹಾಗೂ ರಸ್ತೆ ತಡೆ ನಡೆಸುವುದಾಗಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಹಾಗೂ ಸಂಚಾಲಕ ರಾಘವೇಂದ್ರ ಪೈ ಎಚ್ಚರಿಸಿದರು.

ಬಳಿಕ ಮಾತನಾಡಿದ ತಲ್ಲೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ಹರೀಶ್, ಮುಖ್ಯ ವಿದ್ಯುತ್ ಮಾರ್ಗದಲ್ಲಿ ನಿರಂತರ ದೋಷ ಕಂಡು ಬರುತ್ತಿರುವುದರಿಂದ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿ ನಿರಂತರ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಗಂಗೊಳ್ಳಿಯ ಮುಖಂಡರಾದ ವಾಸುದೇವ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ ಬಿ.ಗಣೇಶ ಶೆಣೈ, ಬಿ.ಪ್ರಕಾಶ ಶೆಣೈ, ಅಶೋಕ ಪೂಜಾರಿ, ಗೋಪಾಲ ಪೂಜಾರಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಚಂದ್ರ ಖಾರ್ವಿ, ನಿತಿನ್ ಖಾರ್ವಿ, ಸಂದೀಪ ಖಾರ್ವಿ, ಮಧುಕರ ಪೂಜಾರಿ, ರಾಮಚಂದ್ರ ಪೂಜಾರಿ, ಶಂಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!