Monday, July 15, 2024

ಕಾಂಗ್ರೆಸ್‌ ಇನ್ನೂ ʼಪಾಲಿಟಿಕಲ್‌ ಮೈಂಡ್‌ ವಾಶ್‌ʼ ಕಲೆಯನ್ನು ಕಲಿತಿಲ್ಲ !

2024ರ ಚುನಾವಣೆಯಲ್ಲಿ ಗ್ರಹಿಕೆಯನ್ನೂ ಮೀರಿ ದಿಢೀರ್‌ ಬದಲಾವಣೆ ಸಾಧ್ಯವೇ ?

 ಕಾಂಗ್ರೆಸ್‌ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಇನ್ನೂ ಅನಿಶ್ಚಿತತೆಯಲ್ಲೆ ಇದೆಯೇ ಎನ್ನುವ ಸಾಮಾನ್ಯ ಪ್ರಶ್ನೆಯೊಂದು ಸದ್ಯ ನಮ್ಮ ಮುಂದಿದೆ. ಆಡಳಿತರೂಢ ಬಿಜೆಪಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸವಾಲು. ಈ ಸುತ್ತಿನ ಲೋಕಸಭಾ ಚುನಾವಣೆ ಮುಗಿಯುವ ಹೊಸ್ತಿಲಲ್ಲಿ ಯಾರಿಗೆ ಗೆಲುವು ದಕ್ಕಬಹುದು, ಯಾರ ವಿಶ್ವಾಸ ಹುಸಿಯಾಗಬಹುದು, ನಿರೀಕ್ಷೆಗೂ ಮೀರಿ ಒಂದು ಹಂತದಲ್ಲಿ ಅಚ್ಚರಿಯ ಫಲಿತಾಂಶ ಬಂದು ಎಲ್ಲಾ ಸಮೀಕ್ಷೆಗಳನ್ನು ಅಡಿಮೇಲಾಗಿಸಬಹುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮೇಲೆದ್ದಿದೆ.

ಕಳೆದ ಹತ್ತು ವರ್ಷಗಳಲ್ಲಿ ದೇಶದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸುವುದಾದರೇ ಸಂಪೂರ್ಣ ಭಿನ್ನವೇ ಸರಿ. ಬಹುಷಃ ಬದಲಾಗಬಾರದ ರೀತಿಯಲ್ಲಿ ರಾಜಕೀಯ ಕ್ಷೇತ್ರ ಬದಲಾವಣೆಯನ್ನು ಪಡೆದುಕೊಂಡಿತ್ತು. ಒಂದು ವಿಚಿತ್ರವಾದ ಉನ್ಮಾದ ಈ ದೇಶದ ರಾಜಕೀಯಕ್ಕೆ ಅಂಟಿಕೊಂಡುಬಿಟ್ಟಿದೆ. ಇದರ ಸುತ್ತ ಸೃಷ್ಟಿಯಾದ ಒಂದು ಥರದ ಅಸ್ಪಷ್ಟ ವೈಬ್‌ ಗಮನಿಸಿದ್ದೀರಾ ? ರಾಜಕೀಯ ಕ್ಷೇತ್ರದಲ್ಲಿ ಬಹುಷಃ ಅಸಹಜ ಎನ್ನಿಸುವ ಈ ಬಗೆಯ ಒಂದು ಮಾನಸಿಕ ಧೋರಣೆ ರಾಜಕೀಯದಲ್ಲಿ ತೊಡಗಿಕೊಂಡವರಲ್ಲಿ ಮೂಡಿದೆ. ಒಂದು ರಾಜಕೀಯ ವಲಯ ತಾನು ಯೋಚಿಸುವ, ರೂಪಿಸುವ ಹಾಗೂ ಕಾರ್ಯರೂಪಕ್ಕೆ ತರುವ ನೆಲೆಯೂ ಅದಕ್ಕೆ ಕಾರಣವಿರಬಹುದು.

ಬದುಕನ್ನು ಹಿಂಡಿದ ಒಂದು ದಶಕದ ಆಡಳಿತವನ್ನು ಈ ದೇಶ ನೋಡುವ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿ ಉಳಿಯ ಬೇಕಾಗಿದ್ದ ಪ್ರತಿಪಕ್ಷಗಳು ಧ್ವನಿ ಇಲ್ಲದಂತಾಗಿದ್ದವು. ನಿಖರವಾದ ವೈಚಾರಿಕ ಒಲವು ಕಳೆದುಕೊಂಡ ಹಾಗೆ ಬಹುತೇಕ ಎಲ್ಲಾ ಪ್ರತಿಪಕ್ಷಗಳು ವರ್ತಿಸಿದ್ದವು. ತಪ್ಪುಗಳನ್ನು ಗಟ್ಟಿಯಾಗಿ ಪ್ರಶ್ನಿಸುವ ತಾಕತ್ತನ್ನೇ ಕಳೆದುಕೊಂಡಿದ್ದವು ಎಂಬ ಹಾಗಾಗಿತ್ತು. ಆಡಳಿತಾರೂಢ ಪಕ್ಷದ ಸ್ವಯಂಕೃತ ಅಪರಾಧ ಹಾಗೂ ದುರಾಡಳಿತ ಮೆರೆಯುತ್ತಿರುವ ಕಾಲದಲ್ಲಿಯೂ ಅದನ್ನು ವಿರೋಧಿಸುವ ಗಟ್ಟಿತನ ಕಳೆದುಕೊಂಡಿದ್ದವು ಎಂಬ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿತ್ತು. ಅದು ಈ ದೇಶದ ಪ್ರಜಾಪ್ರಭುತ್ವದ ದುರಿತ ಕಾಲವೂ ಹೌದು.

ಕಳೆದ ಹತ್ತು ವರ್ಷಗಳಲ್ಲಿ ವಿಪರೀತವಾಗಿ ಈ ದೇಶದ ನಾಗರಿಕರನ್ನು ಕಾಡಿದ ದುರಾಡಳಿತ ಪ್ರತಿಪಕ್ಷಗಳಿಗೆ ಒಂದು ಪ್ರಬಲ ರಾಜಕೀಯ ಅಸ್ತ್ರವಾಗಿಯೇ ದೊರಕ್ಕಿತ್ತಾದರೂ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್‌ ಸೇರಿ ಎಲ್ಲಾ  ಪ್ರತಿಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ರಾಜಕೀಯ ಸುಸ್ಥಿರ ಸ್ಥಿತಿಯನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ ವಿಪಕ್ಷಗಳು ಮುಂದಡಿ ಇಟ್ಟಿದ್ದು ಎಲ್ಲಿಯೂ ಕಾಣಿಸಲೇ ಇಲ್ಲ.

2024 ರಲ್ಲಿ ದೇಶದ ಅತ್ಯಂತ ಹಳೆಯ ಪಕ್ಷ ಹಾಗೂ ಈ ದೇಶದವನ್ನು ಸುದೀರ್ಘ 55 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದ ವಿರುದ್ಧ ದಿಢೀರ್‌ ಅಂತ ಸೃಷ್ಟಿಯಾದ, ದೇಶದಾದ್ಯಂತ ರಾಜಕೀಯ ವಲಯದಲ್ಲಿ ಮುಂಪಂಕ್ತಿಗೆ ಬಂದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಗುಜರಾತ್‌ನ ರಾಜಧಾನಿಯನ್ನು ತೋರಿಸಿಕೊಂಡು ಮತ್ತು ಉದುರಿ ಬೀಳಬಹುದೇನೋ ಎಂಬ ಹಾಗಿದ್ದ ಹಾಳಾದ ಗೋಡೆಗೆ ಚೆಂದದ ಬಣ್ಣ ಹಚ್ಚಿ ʼಇದೇ ದೇಶದ ಪರಮ ಶ್ರೇಷ್ಠ ಸೋ ಕಾಲ್ಡ್‌ ಅಭಿವೃದ್ಧಿʼ ಎಂದು ಬಿಂಬಿಸಿ ಕೇಂದ್ರಕ್ಕೆ ಬಿಜೆಪಿ ಎಳೆತಂದ ನರೇಂದ್ರ ಮೋದಿ ʼಅಚ್ಛೇ ದಿನ್‌ ಆನೆ ವಾಲಾ ಹೇʼ ಎಂಬ ಹಸಿ ಹಸಿ ಸುಳ್ಳು ಹೇಳುತ್ತಲೇ ದೇಶದಾದ್ಯಂತ ಪ್ರಚಾರ ಗಿಟ್ಟಿಸಿಕೊಂಡರು. ದೇಶದಾದ್ಯಂತ ʼಗುಜರಾತ್‌ ಮಾಡೆಲ್‌ʼ  ಅಭಿವೃದ್ಧಿಯನ್ನು ಒರಗೆ ಹಚ್ಚಲಾಯಿತು.  ಇದು ರಾಜಕೀಯ ವಲಯದಲ್ಲಿ ಪ್ರಭಾವ ಬೀರುವಂತೆ ಕೇಂದ್ರ ಸರ್ಕಾರದ ಕೃಪಾಪೋಷಿತ ಮಾಧ್ಯಮ ಸಂಸ್ಥೆಗಳು ಕೂಡ ಸಾಥ್‌ ನೀಡಿದವು. ಈ ದೇಶದಲ್ಲಿ ಮಹತ್ತರವಾದ್ದೇನೋ ಆಗುತ್ತದೆ ಎಂಬ ಕುರುಡು ನಂಬಿಕೆಯಲ್ಲಿದ್ದ ಈ ದೇಶದ ನಾಗರಿಕರಿಗೆ ಮೋದಿ ಪ್ರಧಾನಿಯಾಗಿ ಕೇವಲ ಎರಡು ವರ್ಷಗಳಲ್ಲೇ ಭ್ರಮನಿರಸನ ಮೂಡಿಸಿದರು. ನೋಟು ಅಮಾನ್ಯೀಕರಣ, ರಫೇಲ್‌ ಹಗರಣ, ಆರ್ಥಿಕ ಬಿಕ್ಕಟ್ಟು, ಕೋವಿಡ್‌ ಕಾಲದ ಅವ್ಯವಹಾರ, ರೈತರ ಪ್ರತಿಭಟನೆ, ಮಣಿಪುರ ಪ್ರಕರಣಗಳನ್ನೆಲ್ಲಾ ರಾಜಕೀಯವಾಗಿ ಲಾಭವಾಗುವ ಹಾಗೆ ಧ್ವನಿ ಎತ್ತುವಲ್ಲಿ ಪ್ರತಿಪಕ್ಷಗಳು ಸೋತವು ಎಂದರೇ ತಪ್ಪಿಲ್ಲ.

ಈ ಸುತ್ತಿನ ಲೋಕಸಭಾ ಚುನಾವಣೆ ಉಭಯ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ. ಕಳೆದ ಲೋಕಸಭಾ ಚುನಾವಣೆ ಫಲಿತಾಂಶವನ್ನು ಗಮನಿಸುವುದಾದರೇ, ಭಾರತೀಯ ಜನತಾ ಪಕ್ಷವು ಕಳೆದ ಚುನಾವಣೆಯಲ್ಲಿ ಶೇ. 37.36ರಷ್ಟು ಮತಗಳನ್ನು ಪಡೆದುಕೊಂಡಿತು, ಇದು 1989ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದರಿಂದ ಅತ್ಯಧಿಕ ಮತ ಗಳಿಕೆಯಾಗಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮಾತ್ರವಲ್ಲದೇ, 303 ಕ್ಷೇತ್ರಗಳನ್ನು ಗೆದ್ದು, ಅದರ ಗಣನೀಯ ಬಹುಮತವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತ್ತು. ಜೊತೆಗೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿಯು ಶೇ. 37.76 ರಷು ಮತಗಳನ್ನು ಗಳಿಸಿದರೆ, ಎನ್‌ಡಿಎ ಯ ಸಂಯೋಜಿತ ಮತ ಪ್ರಮಾಣವು ಶೇ. 45ರಷ್ಟು ಆಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 52 ಕ್ಷೇತ್ರಗಳನ್ನು ಗೆದ್ದುಕೊಂಡಿತು, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಬೇಕಾದ ಶೇ.10ರಷ್ಟು ಸ್ಥಾನಗಳನ್ನು ಪಡೆಯಲು ವಿಫಲವಾಯಿತು. ಅದು ಕಾಂಗ್ರೆಸ್‌ನ ದುರಿತ ಕಾಲ. ಜೊತೆಗೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) 91 ಕ್ಷೇತ್ರಗಳನ್ನು ಗೆದ್ದರೆ, ಇತರ ಪಕ್ಷಗಳು 98 ಕ್ಷೇತ್ರಗಳನ್ನು ಗೆದ್ದವು. ಆದರೇ ಈ ಸುತ್ತಿನ ಲೋಕಸಭಾ ಚುನಾವಣೆಯಲ್ಲಿ ತನ್ನ ನೇತೃತ್ವದ ಮೈತ್ರಿಕೂಟವೇ ಅಧಿಕಾರ ಹಿಡಿಯುವುದು ನಿಶ್ಚಿತ ಎನ್ನುವ ವಿಶ್ವಾಸದಲ್ಲಿದೆ ಕಾಂಗ್ರೆಸ್. ಈ ದಿಢೀರ್‌ ಚೇಂಜ್‌ ಓವರ್‌ ಈಗಿನ ರಾಜಕೀಯದಲ್ಲಿ ಸಾಧ್ಯವಿದೆಯೇ ಎನ್ನುವುದೇ ಸದ್ಯದ ಪ್ರಶ್ನೆ. ಆದರೇ, ಮೋದಿ ನೇತೃತ್ವದ ಬಿಜೆಪಿ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ತುಸು ರಾಜಕೀಯವಾಗಿ ಬೆದರಿದ್ದು ಸತ್ಯ.

ಕಾಂಗ್ರೆಸ್‌ ದೇಶ ಮಟ್ಟದಲ್ಲಿ ಅನುಭವಿಸುತ್ತಿರುವ ಸಂಘಟನಾತ್ಮಕ ಕೊರತೆ ಒಂದು ಹಂತದಲ್ಲಿ ಗಮನಿಸುವುದಾದರೇ, ಅದು ಈ ದೇಶದ ರಾಜಕೀಯ ಬಿಕ್ಕಟ್ಟು. ಈ ದೇಶದ ರಾಜಕೀಯದ ಬದಲಾವಣೆಯಲ್ಲಿ ಕಾಂಗ್ರೆಸ್‌ನಂತಹ ಹಿರಿಯ ಪಕ್ಷ ತನ್ನ ಇರುವಿಕೆಯ ಭದ್ರತೆಯ ಅಗತ್ಯವನ್ನು ಅರ್ಥೈಸಿಕೊಳ್ಳುವಾಗಲೇ ಸಮಯ ಮೀರಿ ಇಲ್ಲಿನ ರಾಜಕೀಯ ಮತ್ತೆಲ್ಲೋ ಹೊಸ ದಿಕ್ಕಿನೆಡೆಗೆ ಹೆಜ್ಜೆ ಊರಿತ್ತು. ಈ ದೇಶಕ್ಕೆ ಕಾಂಗ್ರೆಸ್‌ ಕೊಟ್ಟ ಕೊಡುಗೆ ಅಪಾರವಾದದ್ದೇ ಆಗಿದೆ. ಅವೆಲ್ಲವನ್ನೂ ಅಳಿಸಿ ಹಾಕುವಷ್ಟರ ಮಟ್ಟಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಳೆಯುತ್ತದೆ ಎಂಬ ಊಹೆ ಬಹುಷಃ ಕಾಂಗ್ರೆಸ್‌ಗೆ ಇರಲಿಲ್ಲ. ಒಂದು ರಾಜಕೀಯ ಪಕ್ಷವಾಗಿ ತನ್ನ ಯಶಸ್ಸಿನ ರಹದಾರಿಯನ್ನೇ ಕ್ರಮಿಸಿ ಬಂದ ಕಾಂಗ್ರೆಸ್‌, ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿರುವ ದುರ್ಬಲ ಸ್ಥಿತಿಯನ್ನು ಬಹುಷಃ ಈ ದೇಶದ ರಾಜಕೀಯವೇ ಒಪ್ಪುವುದಿಲ್ಲ ಅನ್ನಿಸುತ್ತದೆ.

2013 ರಿಂದ ಕಾಂಗ್ರೆಸ್ ಪಕ್ಷ ನಾಯಕತ್ವಕ್ಕಾಗಿ ರಾಹುಲ್ ಗಾಂಧಿಯ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ ಹೈಲೈಟ್ ಮಾಡಿಕೊಂಡೇ ಬಂದಿದೆ, ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರಗಳನ್ನು ನೇರವಾಗಿ ಟೀಕೆ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ, ಪತ್ರಿಕಾ ಸ್ವಾತಂತ್ರ್ಯ ಮತ್ತು ಭಾರತೀಯ ಸರ್ಕಾರಿ ಸಂಸ್ಥೆಗಳು “ತೀವ್ರ ತೊಂದರೆಗಳನ್ನು ಅನುಭವಿಸಿವೆ” ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ, ಬಿಜೆಪಿ ನಾಯಕರು 1975 ರ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸುತ್ತಲೇ ಟೀಕಿಸಿದ್ದಾರೆ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಮಾನವ ಹಕ್ಕುಗಳ ವ್ಯಾಪಕ ದುರುಪಯೋಗ ಪಡಿಸಿಕೊಂಡಿದೆ ಎಂಬ ಗಂಭಿರ ಆರೋಪಗಳ ಸುರಿಮಳೆಗೈದಿದೆ. ಈ ಎಲ್ಲಾ ಆರೋಪಗಳು ಜನರ ಮನಸ್ಸಲ್ಲಿ ಮಾಸದೇ ಇರುವ ಹಾಗೆ ಬಿಜೆಪಿ ಒಂದು ಹಂತದಲ್ಲಿ ʼಪಾಲಿಟಿಕಲ್ ಮೈಂಡ್‌ ವಾಶ್ʼ ಮಾಡುವಲ್ಲಿ ಯಶಸ್ವಿಯಾಗಿದೆ.‌ ಈ ಪಾಲಿಟಿಕಲಿ ಮೈಂಡ್‌ ವಾಶ್‌ ಮಾಡುವ ಕಲೆಯನ್ನು ಕಾಂಗ್ರೆಸ್‌ ಇದುವರೆಗೆ ಕರಗತ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಅದು ಈ ಸ್ಥಿತಿಯನ್ನು ಕಾಣುತ್ತಿದೆ.

ಈಗ ಆಡಳಿತವನ್ನು ವಿರೋಧಿಸುವುದಕ್ಕೆ ಸಾಕಷ್ಟು ಅಸ್ತ್ರಗಳಿದ್ದರೂ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎನ್ನುವ ರಾಜಕೀಯ ತಂತ್ರಗಾರಿಕೆಗೆ ಕಾಂಗ್ರೆಸ್‌ ಒಗ್ಗಿಕೊಳ್ಳಲಿಲ್ಲ ಎಂದೇ ಕಾಣಿಸುತ್ತಿದೆ. ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾದಾಗ ಕಾಂಗ್ರೆಸ್‌ನ ಒಳಗೆಯೇ ಅಪಸ್ವರ ಕೇಳಿ ಬಂತು. ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ರಾಹುಲ್‌ ಗಾಂಧಿಯೇ ನೇರ ಕಾರಣ ಎಂಬ ಆರೋಪಗಳನ್ನು ಸ್ವತಃ ಕಾಂಗ್ರೆಸ್‌ ಕೆಲ ಹಿರಿಯರು ಹೊರಿಸಿದರು. ಆದರೇ, ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ನ್ಯಾಯ ಯಾತ್ರೆಯಿಂದ ಹೊಸ ಚೈತನ್ಯ ತಂದು ಕೊಟ್ಟರು ಎನ್ನುವುದನ್ನು ಅಂದು ರಾಗಾ ವಿರುದ್ಧ ಯಾರು ಆರೋಪ ಹೊರಿಸಿದ್ದರೋ ಅವರೆ ಮೆಚ್ಚುವ ಮಟ್ಟಕ್ಕೆ ಪಕ್ಷವನ್ನು ತಂದು ನಿಲ್ಲಿಸಿದರು. ಆದರೂ, ಕಾಂಗ್ರೆಸ್‌ನಲ್ಲಿ ರಾಹುಲ್‌ ಒಬ್ಬರೇ ಆಗಿ ಬಿಟ್ಟರು ಎನ್ನುವ ವಾತಾವರಣ ಇನ್ನೂ ಇದೆ.

ಇಂತಹ ಸ್ಥಿತಿಯಲ್ಲಿ, ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಒಂದೆಡೆ ಸೇರದೇ ಇದ್ದಿದ್ದರೆ ಕಷ್ಟವಿತ್ತು. ಇಂಡಿಯಾ ಮೈತ್ರಿಕೂಟ ತುಂಬಾ ಸರಾಗವಾಗಿ ಮತ್ತು ವೇಗವಾಗಿ ನಡೆಯುತ್ತದೆ ಎಂದು ಆಡಳಿತ ಪಕ್ಷ ಬಹುಶಃ ಊಹಿಸಿರಲಿಲ್ಲ. ಇಂಡಿಯಾ ಮೈತ್ರಿಕೂಟದ ಬಗ್ಗೆ ಒಂದಿಷ್ಟು ಟೀಕೆ ಮಾಡಿ ಸಂಘಟನಾತ್ಮಕವಾಗಿ ಕುಗ್ಗಿಸುವ ಸಹಜ ರಾಜಕೀಯವನ್ನು ಬಿಜೆಪಿ ಮಾಡಿದ್ದರೂ ಸ್ಥಿರವಾಗಿ ʼಇಂಡಿಯಾʼ ನಿಂತಿತು. ಇನ್ನು, ಬಹಳ ಮುಖ್ಯವಾಗಿ ಪ್ರತಿಪಕ್ಷಗಳು ಒಗ್ಗೂಡಿದಾಗಲೆಲ್ಲಾ ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕು ಉಂಟಾಗಿದೆ ಎಂದು ಬಿಜೆಪಿಯು ಅಗತ್ಯವಾಗಿ ತಿಳಿದುಕೊಳ್ಳಬೇಕಿದೆ. 1967, 1977 ಮತ್ತು 1989ರ ಉದಾಹರಣೆಗಳು ನಮ್ಮ ಮುಂದಿವೆ. ಇದು ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮೇರು ಸ್ಥಾನದಲ್ಲಿದ್ದ ಕಾಲ. ವಿರೋಧ ಪಕ್ಷಗಳು ಕಾಂಗ್ರೆಸ್ ನನ್ನು ಎದುರಿಸಲು ಚಿಕ್ಕದಾಗಿದ್ದವು. ಆದರೆ ಒಟ್ಟಾರೆಯಾಗಿ ಅಂದು ಕಾಂಗ್ರೆಸ್‌ಗೆ ದೊಡ್ಡ ಆಘಾತವನ್ನೇ ಪ್ರತಿಪಕ್ಷಗಳು ಕೊಟ್ಟಿದ್ದವು. ಇಲ್ಲಿ ಈಗ, 2024 ಭಿನ್ನವಾಗಿದೆ ಎಂಬ ವಾದ ಏಳಬಹುದು. ಆದರೆ ಅಂತಹ ವಾದಗಳು 1967, 1977 ಮತ್ತು 1989 ರಲ್ಲಿ ಉಲ್ಟಾ ಹೊಡೆದಿತ್ತು ಎನ್ನುವುದು ಗಮನಾರ್ಹ. ಇಂದು, ರಾಜಕೀಯ ವಲಯದ ಸಾಮಾನ್ಯ ಗ್ರಹಿಕೆಯನ್ನು ಮೀರಿ ವಿರೋಧ ಪಕ್ಷಗಳ ಮೈತ್ರಿ ಹಿಂದೆಂದಿಗಿಂತಲೂ ಬಲವಾಗಿ ಚುನಾವಣೆಯನ್ನು ಎದುರಿಸಿದೆ. ಮಾತ್ರವಲ್ಲದೇ ಮೈತ್ರಿಕೂಟ ಬಹಳಷ್ಟು ರಾಜ್ಯಗಳಲ್ಲಿ ಸರ್ಕಾರಗಳನ್ನ ಹೊಂದಿವೆ. ಹೀಗೆ ಹಿಂದೆಂದೂ ಇರಲಿಲ್ಲ ಎಂಬುವುದು ಇಲ್ಲಿ ಮುಖ್ಯ. ಫಲಿತಾಂಶಕ್ಕಾಗಿ ಕಾಯೋಣ.

-ಶ್ರೀರಾಜ್‌ ವಕ್ವಾಡಿ

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!