Sunday, September 8, 2024

ಕೇಜ್ರಿವಾಲ್‌ಗೆ ಜೈಲಿನಿಂದಲೇ ಸರ್ಕಾರ ನಡೆಸಲು ಪೂರಕ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿ ಹೈಕೋರ್ಟ್‌ ಆದೇಶ !

ಜನಪ್ರತಿನಿಧಿ (ನವದೆಹಲಿ) : ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಜೈಲಿನಿಂದಲೇ ಸರ್ಕಾರ ನಡೆಸಲು ಪೂರಕ ವ್ಯವಸ್ಥೆ ಮಾಡುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು(ಬುಧವಾರ) ವಜಾಗೊಳಿಸಿದ್ದಲ್ಲದೇ, 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಕೇಜ್ರಿವಾಲ್ ರಾಜೀನಾಮೆಗೆ ಯಾವುದೇ ‘ಅನಗತ್ಯ ಒತ್ತಡ’ ಹೇರದಂತೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರನ್ನು ನಿರ್ಬಂಧಿಸುವಂತೆ ಅರ್ಜಿದಾರರು ತಮ್ಮ ಪಿಐಎಲ್‌ ಮೂಲಕ ಕೋರಿದ್ದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ನ್ಯಾಯಮೂರ್ತಿ ಮನ್ಮೀತ್ ಪಿಎಸ್ ಅರೋರಾ ಅವರನ್ನೊಳಗೊಂಡ ನ್ಯಾಯಪೀಠ, ತಮ್ಮ ಬಂಧನದ ವಿರುದ್ಧ ಎಎಪಿ ನಾಯಕ ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವುದರಿಂದ, ನ್ಯಾಯಾಂಗ ಬಂಧನದಲ್ಲಿರುವಾಗ ಅವರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಯಾವುದೇ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಾಲಯ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ವಿಧಿಸಲು ಅಥವಾ ರಾಜಕೀಯ ಪ್ರತಿಸ್ಪರ್ಧಿಗಳು ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಸಾಧ್ಯವಿಲ್ಲ. ಪತ್ರಿಕಾ ಅಥವಾ ರಾಜಕೀಯ ವಿರೋಧಿಗಳನ್ನು ಮೌನಗೊಳಿಸಲು ನ್ಯಾಯಾಲಯವು ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕೇ ಅಥವಾ ಸೆನ್ಸಾರ್‌ಶಿಪ್ ಜಾರಿಗೊಳಿಸಬೇಕೇ ಅಥವಾ ಮಾರ್ಷಲ್ ಕಾನೂನನ್ನು ಹೇರಬೇಕೇ ಎಂದು ನ್ಯಾಯಪೀಠ ಪ್ರಶ್ನಿಸಿತು.

‘1 ಲಕ್ಷ ರೂ.ಗಳ ಬ್ಯಾಂಕ್ ಡ್ರಾಫ್ಟ್ ಸಿದ್ಧವಾಗಿಡಿ’ ಎಂದು ಅರ್ಜಿದಾರರಿಗೆ ನ್ಯಾಯಾಲಯ ಹೇಳಿದೆ.

ಜೈಲಿನಿಂದ ಸರ್ಕಾರವನ್ನು ನಡೆಸುವುದು ಪ್ರಾಯೋಗಿಕವಾಗಿ ಅಸಾಧ್ಯವಾದರೂ, ತಂತ್ರಜ್ಞಾನದ ಬಳಕೆಯಿಂದ ಅದನ್ನು ಸಾಧ್ಯವಾಗಿಸಬಹುದು ಎಂದು ವಾದಿಸಿದ ಅರ್ಜಿದಾರರು, ಜೈಲಿನಲ್ಲಿ ಕೇಜ್ರಿವಾಲ್‌ಗೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಕೇಜ್ರಿವಾಲ್ ಅವರ ರಾಜೀನಾಮೆ ಹಾಗೂ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಬಗ್ಗೆ ಮಾಧ್ಯಮಗಳು ಸಂವೇದನಾಶೀಲ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕೆಂದು ಪಿಐಎಲ್‌ನಲ್ಲಿ ಮನವಿ ಮಾಡಿಕೊಂಡಿದ್ದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಅರ್ಜಿಯು ತಪ್ಪು ತಿಳುವಳಿಕೆಯಿಂದ ಕೂಡಿದೆ ಹಾಗೂ ದುರುದ್ದೇಶದಿಂದ ಸಲ್ಲಿಸಲಾಗಿದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!