spot_img
Wednesday, November 19, 2025
spot_img

ದೇಶದಲ್ಲಿ ಬಿಜೆಪಿ 400 ಕ್ಕೂ ಅಧಿಕ ಸೀಟ್ ಗೆಲ್ಲಲಿದೆ-ಬಿ.ಎಸ್.ಯಡಿಯೂರಪ್ಪ ವಿಶ್ವಾಸ| ಬೈಂದೂರಿನಲ್ಲಿ ಬಿಜೆಪಿ ರೋಡ್ ಶೋ

ಬೈಂದೂರು: ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಹಾಗೆಯೇ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಈ ದೇಶದ ಪ್ರಧಾನ ಮಂತ್ರಿಯಾಗುವುದು ಅಷ್ಟೇ ಸತ್ಯ. ದೇಶದಲ್ಲಿ ಬಿಜೆಪಿ 400 ಕ್ಕೂ ಅಧಿಕ ಸೀಟ್ ಗೆಲ್ಲಲಿದೆ. ಕರ್ನಾಟಕದಲ್ಲಿ 28ಕ್ಕೆ 28 ಸೀಟುಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಬೃಹತ್ ರೋಡ್ ಶೋಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಅಲೆ, ಮೋದಿ ಅಲೆ ಎದ್ದಿದೆ. ಶಿವಮೊಗ್ಗ ಕ್ಷೇತ್ರದಿಂದ ಬಿ.ವೈ.ರಾಘವೇಂದ್ರ ಅವರು ಕನಿಷ್ಠ 3ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದಾರೆ. ಬೈಂದೂರಿನಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ಬರುವ ವಿಶ್ವಾಸವಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ. ವಿಶ್ವವೇ ಮೆಚ್ಚಿದ ನರೇಂದ್ರ ಮೋದಿಯವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಎಂದು ಎಲ್ಲರೂ ಬಯಸಿದ್ದಾರೆ. ಹೀಗಾಗಿ ನೂರಕ್ಕೆ ನೂರು ರಾಘವೇಂದ್ರ ಅವರು ಅತ್ಯಧಿಕ ಅಂತರದಲ್ಲಿ ಗೆಲ್ಲದ್ದಾರೆ ಎಂದರು.

ದಕ್ಷಿಣದಲ್ಲೂ ಟೆಂಪಲ್ ಕಾರೀಡಾರ್:
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮಾತನಾಡಿ, ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಅವರು 3ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಿಸಲಿದ್ದಾರೆ. ಕಾಂಗ್ರೆಸ್ ನವರು ಹತಾಶೆಯಿಂದ ರಾಹುಲ್‌ಗಾಂಧಿಯವರನ್ನು ಶಿವಮೊಗ್ಗಕ್ಕೆ ಕರೆಸಿದ್ದಾರೆ. ಸಮಾರಂಭದಲ್ಲಿ ಏನೇನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ ಮತ್ತು ಕಾಂಗ್ರೆಸ್ ಎಷ್ಟು ಅಸಂಘಟಿತವಾಗಿದೆ ಎಂಬುದು ತಿಳಿಯುತ್ತದೆ. ಮತದಾರರು ಬಿಜೆಪಿ ಜತೆಗೆ ಇದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟತೆ ನೀಡಿದ್ದಾರೆ ಎಂದರು

ದಕ್ಷಿಣ ಭಾರತದಲ್ಲಿ ಟೆಂಪಲ್ ಕಾರೀಡಾರ್ ಗೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಕಾಶೀ-ವಾರಣಸಿ, ಉಜ್ಜನಿ, ಅಯೋಧ್ಯೆ ಕಾರೀಡಾರ್ ಆಗಿದೆ. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ ತಿರು‌ಅಣ್ಣಾಮಲೈ ಕಾರಿಡಾರ್ ಮಾಡುವುದಾಗಿ ನಾವು ಹೇಳಿದ್ದೇವೆ. ಕರ್ನಾಟಕದಲ್ಲಿ ಮೂಕಾಂಬಿಕಾ ಕಾರೀಡಾರ್ ಮಾಡುವ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇಲ್ಲಿಗೆ ಕರೆದುಕೊಂಡು ಬಂದು, ದೇವಿಯ ದರ್ಶನ ಪಡೆಯಲಿದ್ದಾರೆ. ಕೊಲ್ಲೂರಿನಲ್ಲಿ ಮೂಕಾಂಬಿಕಾ ಕಾರೀಡಾರ್ ಆಗಿಯೇ ಆಗಲಿದೆ. ಈ ಬಗ್ಗೆ ಸ್ಪಷ್ಟ ರೂಪುರೇಷೆ ನಮ್ಮ ಬಳಿಯಿದೆ. ಬೈಂದೂರಿನಿಂದಲೇ ೧ ಲಕ್ಷಕ್ಕೂ‌ಅಧಿಕ ಲೀಡ್ ನೀಡುವ ವಿಶ್ವಾಸ ವ್ಯಕ್ತವಾಗಿದೆ. ಮೂಕಾಂಬಿಕಾ ಕಾರೀಡಾರ್ ಆದರೆ ಬೈಂದೂರು ಮತ್ತು ಕೊಲ್ಲೂರು ಕ್ಷೇತ್ರ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ನಿಂದ ಯಾರೇ ಪ್ರಚಾರ ಮಾಡಲಿ. ನಾವಂತೂ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅಷ್ಟೇ ಪರಿಣಾಮಕಾರಿಯಾಗಿ ಪ್ರಚಾರ ಪ್ರಕ್ರಿಯೆ ನಡೆಸುತ್ತಿದ್ದೇವೆ. ಬೈಂದೂರು ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶ ಮತ್ತು ಸ್ವಾಭಿಮಾನದಿಂದ ಇಲ್ಲಿನ ಜನರು ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅಣ್ಣಾಮಲೈ ಅವರ ನೇತೃತ್ವದಲ್ಲಿ ಬೃಹತ್ ರೋಡ್ ಶೋ ಬೈಂದೂರಿನಿಂದ ಆರಂಭಗೊಂಡು, ಉಪ್ಪುಂದ ಭಾಗದಲ್ಲಿ ಸಂಚರಿಸಿದೆ. ಶಾಸಕರಾದ ಗುರುರಾಜ ಗಂಟಿಹೊಳೆ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷರ ಕಿಶೋರ್ ಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಪ್ರಮುಖರಾದ ನಟಿ ತಾರಾ, ಬ್ರಿಜೇಶ್ ಚೌಟ, ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು. ಬೈಕ್ ರ್‍ಯಾಲಿಯಲ್ಲಿ ಕಾರ್ಯಕರ್ತರು, ಮುಖಂಡರು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!