Sunday, September 8, 2024

ತೆರೆಮರೆಯ ಯಕ್ಷಸಾಧಕ ಹಂದಟ್ಟು ಸೂರ್ಯನಾರಾಯಣ ಉರಾಳರಿಗೆ ಸನ್ಮಾನ

ಕೋಟ: ಆಧುನಿಕ ಸೌಲಭಗಳಿಲ್ಲದ ಕಾಲಘಟ್ಟದಲ್ಲಿ ವೈಯಕ್ತಿಕ ಸುಖ, ಸಂತೋಷವನ್ನು ತೊರೆದು ಸಮರ್ಪಣಾಭಾವದಿಂದ ಸೇವೆಗೈದ ಕಲಾವಿದರು, ಸಂಘಟಕರು, ಕಲಾ ಪರಿಚಾರಕರಿಂದಲೇ ಯಕ್ಷಗಾನ ಕಲೆ ಇಂದಿಗೂ ಶ್ರೀಮಂತವಾಗಿ ಉಳಿದಿದೆ. ಹಂದಟ್ಟು ಸೂರ್ಯನಾರಾಯಣ ಉರಾಳರು ಬಡಗುತಿಟ್ಟಿನ ಹಲವು ವೃತ್ತಿ ಮೇಳಗಳಲ್ಲಿ ಮೂರು ದಶಕಗಳ ಕಾಲ ತ್ಯಾಗ ಮನೋಭಾವನೆಯಿಂದ ಮೆನೆಜರ್ ಆಗಿ ಸೇವೆಯನ್ನು ಸಲ್ಲಿಸಿರುವುದಲ್ಲದೇ ಸಾಮಾಜಿಕ ಕಳಕಳಿಯೊಂದಿಗೆ ಸಾರ್ಥಕ ಜೀವನ ನಡೆಸಿರುವ ಯಕ್ಷಾರಾಧಕ ಸೂರ್ಯನಾರಾಯಣ ಉರಾಳರ ಸಾಧನೆ ಅನನ್ಯವಾದುದು ಹಾಗೂ ಅವರ ಬದುಕು – ವೃತ್ತಿ ಬದುಕು – ಸಾಮಾಜಿಕ ಬದುಕು ಅನುಕರಣೀಯವಾದುದು ಎಂದು ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಅವರು ಕೋಟ ಹಂದಟ್ಟಿನಲ್ಲಿ ಮೇ 1ರಂದು ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಿತೈಷಿಗಳು ಹಮ್ಮಿಕೊಂಡ ಸೂರ್ಯನಾರಾಯಣ ಸನ್ಮಾನ ಮತ್ತು ಯಕ್ಷಗಾನ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಬಂಗಾರದ ಸರ, ಉಂಗುರ, ಬೆಳ್ಳಿಯ ಹರಿವಾಣ ಮತ್ತು ಒಂದು ಲಕ್ಷ ರೂಪಾಯಿ ನಗದಿನೊಂದಿಗೆ ಮಾಡಿದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಮಾತನಾಡಿ ಉರಾಳರು ನಮ್ಮ ನಡುವೆ ಇರುವ ಅಪರೂಪದ ವ್ಯಕ್ತಿ ತೆರೆಮರೆಯ ಸಾಧಕರನ್ನು ಗುರುತಿಸುವುದು ಸ್ಥಳೀಯ ಸಂಘ ಸಂಸ್ಥೆಗಳ ಅಭಿಮಾನದ ಸಂಕೇತ ಅವರ ಈ ಕೆಲಸ ಮೆಚ್ಚುವಂತಹದು ಎಂದರು.

ಯಕ್ಷಗಾನ ವಿಮರ್ಶಕ ಸುರೇಂದ್ರ ಪಣಿಯೂರು, ಗೋಳಿಗರಡಿ ಮೇಳದ ಯಜಮಾನ ವಿಠಲ ಪೂಜಾರಿ, ಕಲಾ ಸಾಹಿತಿ ಜನಾರ್ದನ ಹಂದೆ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಹೇರ್ಳೆ, ವಿವಾಹ ಸಂಪರ್ಕ ವೇದಿಕೆ ಹಂದಟ್ಟಿನ ಡಾ|| ಶ್ರೀನಿವಾಸ ಭಟ್, ಗೆಳೆಯರ ಬಳಗ ಯುವಕ ಸಂಘ (ರಿ.), ದಾನಗುಂದು ಹಂದಟ್ಟು ಇದರ ಪ್ರಕಾಶ್, ಬಾರಿಕೆರೆ ಯುವಕ ಮಂಡಲದ ರವೀಂದ್ರ ಕುಂದರ್ ಅಭಿಮಾನ ಫ್ರೆಂಡ್ಸ್ ನಾಗಬನ ಹಂದಟ್ಟು ಅಧ್ಯಕ್ಷ ವಿಶ್ವನಾಥ ಪೂಜಾರಿ, ಸ್ಥಳೀಯರಾದ ಆನಂದ ಉರಾಳ, ಸುದರ್ಶನ ಉರಾಳ, ಮಂಜುನಾಥ ಉರಾಳ, ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಅಧ್ಯಕ್ಷ ಸತೀಶ್ ಹಂದೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉರಾಳ ಕುಟುಂಬಸ್ಥರ ಪರವಾಗಿ ಅಮೃತೇಶ್ವರೀ ಮೇಳದ ಚಂಡೆವಾದಕ ಜನಾರ್ದನ ಆಚಾರ್ ಅವರನ್ನು ಸನ್ಮಾನಿಸಲಾಯಿತು.

ಮಯ್ಯ ಯಕ್ಷ ಬಳಗ ಹಾಲಾಡಿಯ ರಾಘವೇಂದ್ರ ಮಯ್ಯ ಅಭಿನಂದನಾ ಮಾತುಗಳನ್ನಾಡಿದರು. ಕೆ.ಎಂ.ಸಿ. ಮಣಿಪಾಲದ ವೈದ್ಯ ಡಾ|| ಕೌಶಿಕ್ ಉರಾಳ ಸ್ವಾಗತಿಸಿದರು. ಉಡುಪಿ ಎಂ.ಜಿ.ಎಂ. ಕಾಲೇಜಿನ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.

ನಂತರ ಯಕ್ಷದೇಗುಲ ಬೆಂಗಳೂರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕೆ. ಮೋಹನ್ ನಿರ್ದೇಶನದ, ಸುದರ್ಶನ ಉರಾಳ್ ಸಂಯೋಜನೆಯ ‘ಪಾಂಚಜನ್ಯ’ ಯಕ್ಷಗಾನ ಪ್ರದರ್ಶನಗೊಂಡಿತ್ತು. ರಾಘವೇಂದ್ರ ಮಯ್ಯ ಹಾಲಾಡಿ, ಚಂದ್ರಕಾಂತ ಮೂಡುಬೆಳ್ಳೆ, ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಶಿವಾನಂದ ಕೋಟ, ಸುದೀಪ್ ಉರಾಳ, ಸ್ಕಂದ ಉರಾಳ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಸ್ಫೂರ್ತಿ ಭಟ್, ದಿನೇಶ್ ಕನ್ನಾರ್, ಜಯರಾಮ ಕೊಠಾರಿ, ರಾಘವೇಂದ್ರ ತುಂಗ, ರಾಜು ಪೂಜಾರಿ, ಉದಯ ಭೋವಿ ಕಲಾವಿದರಾಗಿ ಭಾಗವಹಿಸಿದ್ದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!