spot_img
Friday, March 21, 2025
spot_img

ರಾಜ್ಯದ ಮೊದಲನೇ ಹಂತದ ಚುನಾವಣೆ : ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಮತ ಚಲಾವಣೆ !

ಜನಪ್ರತಿನಿಧಿ (ಬೆಂಗಳೂರು) : ಏಪ್ರಿಲ್ 26 ರಂದು ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದೇಶದ ಎರಡನೇ ಹಂತದ ಹಾಗೂ ರಾಜ್ಯದ ಮೊದಲನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡುವ ಪ್ರಕ್ರಿಯೆಯಲ್ಲಿ ಮಹಿಳೆಯರ ಹಿಂದೆ ಪುರುಷರಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಪ್ರವೃತ್ತಿ ಮುಂದುವರೆದಿದ್ದು ರಾಜ್ಯದ ಮೊದಲನೇ ಹಂತದ ಚುನಾವಣೆಯಲ್ಲಿ ಗಮನಿಸಬಹುದಾಗಿದೆ.

ಭಾರತದ ಚುನಾವಣಾ ಆಯೋಗವು ಹಂಚಿಕೊಂಡಿರುವ ಇತ್ತೀಚಿನ ಅಂಕಿಅಂಶಗಳಲ್ಲಿರುವ ಮಾಹಿತಿಯ ಪ್ರಕಾರ, ಪುರುಷರ ಮತದಾನ ಶೇಕಡಾ 69.48 ಆಗಿದ್ದರೆ, ಮಹಿಳೆಯರು ಶೇ. 69.65 ರಷ್ಟು ಮತದಾರರು ಮತದಾನ ಮಾಡಿದ್ದಾರೆ. ಒಟ್ಟು 1,00,16,921 ಪುರುಷರು ಮತ ಚಲಾಯಿಸಿದರೆ 1,00,20,796 ಮಹಿಳೆಯರು ಮತದಾನ ಮಾಡಿದ್ದಾರೆ. ಅಂದರೆ  ಪುರುಷರು ಹಾಗೂ ಮಹಿಳೆಯರ ನಡುವೆ 3,875 ಮತದಾರರ ವ್ಯತ್ಯಾಸವಿದೆ.

ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಮತ್ತು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾವಣೆ ಮಾಡಿದ್ದಾರೆ. 2019 ರ ಮತದಾನದ ಸಂದರ್ಭದಲ್ಲಿ, ಪುರುಷರ ಶೇಕಡಾವಾರು ಪ್ರಮಾಣವು ಮಹಿಳೆಯರಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಶೇ. 69.55 ಪುರುಷರು ಮತ್ತು ಶೇ. 67.65 ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. 2014 ರಲ್ಲಿ, ಮತದಾನದ ಶೇಕಡಾವಾರು ಪ್ರಮಾಣವು ಕ್ರಮವಾಗಿ 68.59 ಮತ್ತು 65.79 ಆಗಿತ್ತು.

ಮಹಿಳಾ ಮತದಾರರನ್ನು ಹೆಚ್ಚಿಸುವ ಪ್ರವೃತ್ತಿ ಅವರ ಸಬಲೀಕರಣದ ವಿಸ್ತರಣೆಯಾಗಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಿಭಿನ್ನ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಎಂದು ವಿವರಿಸಿದರು.

ಹೆಣ್ಣು ಮಕ್ಕಳ ಸಬಲೀಕರಣ, ಸುಧಾರಿತ ಶಿಕ್ಷಣ ಮತ್ತು ಹೆಚ್ಚಿದ ಜಾಗೃತಿಯು ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಏಳು ರಾಜ್ಯಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಹೆಚ್ಚಿತ್ತು ಎಂದು ಅವರು ತಿಳಿಸಿದರು.

ಇಸಿಐ ನೀಡಿರುವ ಅಂಕಿಅಂಶಗಳ ಪ್ರಕಾರ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷ್ವದೀಪ್, ಮಣಿಪುರ, ಮೇಘಾಲಯ, ಪುದುಹೇರಿ, ನಾಗಾಲ್ಯಾಂಡ್, ತಮಿಳುನಾಡು, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಲೋಕಸಭೆ ಚುನಾವಣೆಯ ಹಂತ-1 ಮತ್ತು ಹಂತ-2 ರಲ್ಲಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!