Wednesday, September 11, 2024

ಪಾತ್ರ ಮುಗಿಸಿ ನಿರ್ಗಮಿಸಿದ ಹಿರಿಯ ಕಲಾವಿದ ಗಂಗಾಧರ ಪುತ್ತೂರು

ಕೋಟ: ಯಕ್ಷಗಾನ ಚೌಕಿಯಲ್ಲಿ ಮುಖದ ಬಣ್ಣ ತಗೆಯುತ್ತಿರುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಧರ್ಮಸ್ಥಳ ಮೇಳದ ಕಲಾವಿದ ಗಂಗಾಧರ ಪುತ್ತೂರು (60ವ) ನಿಧನರಾದ ಘಟನೆ ಮೇ.1ರ ರಾತ್ರಿ 12.25ಕ್ಕೆ ಕೋಟದಲ್ಲಿ ಸಂಭವಿಸಿದೆ.

ಕೋಟದ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಮೇಳದವರ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಗಂಗಾಧರ ಅವರು ಕುಕ್ಕಿತ್ತಾಯ ಪಾತ್ರ ನಿರ್ವಹಿಸಿದ್ದರು. ಅವರು ಧರ್ಮಸ್ಥಳ ಮೇಳವೊಂದರಲ್ಲಿಯೇ 42 ವರ್ಷಗಳ ತಿರುಗಾಟ ನಡೆಸಿದ್ದರು. ತೆಂಕುತಿಟ್ಟು ಯಕ್ಷಗಾನ ಸರ್ವಾಂಗೀಣ ಕಲಾವಿದರಾಗಿ ಅವರು ಪ್ರಸಿದ್ಧರಾಗಿದ್ದರು. ಪೂರ್ವರಂಗದ ಹೊಗಳಿಕೆಯಿಂದ ಆರಂಭಿಸಿ ಎಲ್ಲಾ ರೀತಿಯ ಪಾತ್ರಗಳನ್ನು ಅವರು ನಿರ್ವಹಿಸಿದ್ದರು. ಬಹಳ ಮುಖ್ಯವಾಗಿ ಹೆಣ್ಣು ಬಣ್ಣದ ವೇಷಗಳನ್ನು ಅತ್ಯಂತ ಅದ್ಬುತವಾಗಿ ನಿರ್ವಹಿಸುತ್ತಿದ್ದರು. ಬಣ್ಣದ ವೇಷದಲ್ಲಿ ಸಂಪ್ರದಾಯ, ಹೊಸತನ, ಬಣ್ಣದ ರೇಖೆಗಳ ವಿನ್ಯಾಸದಲ್ಲಿ ವಿನೂತನತೆಯನ್ನು ರೂಡಿಸಿಕೊಂಡಿದ್ದರು.

ಕೆ. ನಾರಾಯಮಯ್ಯ ಮತ್ತು ಲಕ್ಷ್ಮೀ ದಂಪತಿಯ ಪುತ್ರರಾಗಿ ದಿನಾಂಕ 22-8-1964ರಂದು ಸೇಡಿಯಾಪು ಎಂಬಲ್ಲಿ ಜನಿಸಿದ ಇವರು, ೭ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಯಕ್ಷಗಾನದ ಬಗ್ಗೆ ಆಸಕ್ತಿಯಿಂದ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರವರಿಂದ ಯಕ್ಷಗಾನ ಅಭ್ಯಾಸ ಮಾಡಿದರು. ತನ್ನ ಹದಿನೆಂಟನೇ ವಯಸ್ಸಿನಿಂದ ಮೇಳ ತಿರುಗಾಟವನ್ನು ಆರಂಭಿಸಿದ ಇವರು ಧರ್ಮಸ್ಥಳ ಮೇಳವೊಂದರಲ್ಲೇ ಸುದೀರ್ಘ ಅವಧಿಯ ತಿರುಗಾಟ ಮಾಡಿದ್ದಾರೆ.

ಪ್ರಾರಂಭದಲ್ಲಿ ಸ್ತ್ರೀವೇಷಗಳನ್ನೇ ಹೆಚ್ಚಾಗಿ ಮಾಡುತ್ತಿದ್ದ ಇವರು ಮಾಲಿನಿ, ಚಿತ್ರಾಂಗದೆ, ಮಾಲತಿ, ಕದ್ರು, ಚೈದ್ಯರಾಣಿ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ, ಶ್ರೀದೇವಿ, ಸೀತೆ, ನೇತ್ರಾವತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು. ದೇವೇಂದ್ರ, ದುಶ್ಯಾಸನ, ಶೂರ್ಪನಖಾ, ಲಂಕಿಣಿ, ಹಿಡಿಂಬೆ, ಪೂತನಿ ಮುಂತಾದ ಪಾತ್ರಗಳನ್ನು ನಿರ್ವಹಿಸಿದ ಇವರು ಬಣ್ಣದ ವೇಷದತ್ತ ಹೆಚ್ಚು ಒತ್ತು ನೀಡಿದರು. ನಾಟಕೀಯ ವೇಷಗಳಲ್ಲಿಯೂ ಕೂಡಾ ಮಿಂಚಿದ್ದರು. ಒಟ್ಟಾರೆ ರಂಗದಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಇವರು ಸವ್ಯಸಾಚಿ ಎನಿಸಿಕೊಂಡವರು. ಪ್ರತೀ ವರ್ಷ ನೂರಾರು ಪ್ರದರ್ಶನ ಕಾಣುವ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿತ್ತು.

ಮಳೆಗಾಲದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಸೇರಿದಂತೆ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು. ಬೇಡಿಕೆಯ ಕಲಾವಿದರಾಗಿಯೂ ಬೆಳೆದಿದ್ದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ.

(ಚಿತ್ರಗಳು: ಯಕ್ಷಾನುಗ್ರಹ ವಾಟ್ಸಾಪ್ ಗ್ರೂಪ್)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!