Saturday, October 12, 2024

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ದಂಪತಿಗಳ ಬಳಿ ಒಟ್ಟು 89.04 ಕೋಟಿ ರೂ. ಆಸ್ತಿ !

ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್‌ ಕುಮಾರ್‌ ಅವರ ಪತ್ನಿ, ಮಾಜಿ ಸಿಎಂ ದಿವಂಗತ ಎಸ್‌. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ 40.04 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಪತಿ ಶಿವರಾಜ್‌ ಕುಮಾರ್‌ ಬಳಿ 49 ಕೋಟಿ ರೂ. ಆಸ್ತಿ ಇರುವುದಾಗಿ ಅವರು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಒಟ್ಟಾರೆ ಪತಿ-ಪತ್ನಿ ಇಬ್ಬರ ಬಳಿ 89.04 ಕೋಟಿ ರೂ. ಆಸ್ತಿ ಇರುವುದಾಗಿ ಹೇಳಿದ್ದಾರೆ.

2022-23ರಲ್ಲಿ ತಮ್ಮ ವಾರ್ಷಿಕ ಆದಾಯ 1.48 ಕೋಟಿ ರೂ. ಎಂದು ಗೀತಾ ಶಿವರಾಜ್‌ ಕುಮಾರ್‌ ಹೇಳಿದ್ದು, ಪತಿ ಆದಾಯ 2.97 ಕೋಟಿ ರೂ. ಎಂದು ತಿಳಿಸಿದ್ದಾರೆ. ತಮ್ಮ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಗೀತಾ ಶಿವರಾಜ್‌ ಕುಮಾರ್‌ ನಗದು 2 ಲಕ್ಷ ರೂ. ಹಣವಿದ್ದರೆ, ಶಿವರಾಜ್‌ ಕುಮಾರ್ ನಗದು 22 ಲಕ್ಷ ರೂ. ಇದೆ.

ಮುತ್ತು ಸಿನಿ ಸರ್ವೀಸಸ್‌ಗೆ ಗೀತಾ ಶಿವರಾಜ್‌ ಕುಮಾರ್‌ 25.60 ಲಕ್ಷ ರೂ. ಸಾಲ ನೀಡಿದ್ದರೆ, ಶಿವರಾಜ್‌ ಕುಮಾರ್‌ 1.64 ಕೋಟಿ ರೂ. ಸಾಲ ನೀಡಿದ್ದಾರೆ. ಗೀತಾ ಪಿಕ್ಚರ್ಸ್‌ಗೆ ಶಿವಣ್ಣ 6 ಕೋಟಿ ರೂ. ಸಾಲ ನೀಡಿದ್ದರೆ, ಇತರರಿಗೆ 2.13 ಕೋಟಿ ರೂ. ಕೈ ಸಾಲ ನೀಡಿದ್ದಾರೆ.

ಗೀತಾ ಬಳಿಯಲ್ಲಿ 1.07 ಕೋಟಿ ರೂ. ಮೊತ್ತದ ಟೊಯೋಟಾ ಹೈಬ್ರಿಡ್‌ ಕಾರ್‌ ಇದೆ, ಶಿವಣ್ಣ ಬಳಿಯಲ್ಲಿ ಟೊಯೋಟಾ ಫಾರ್ಚುನರ್‌, ಮಾರುತಿ ಎರ್ಟಿಗಾ ಹಾಗೂ ವೋಲ್ವೋ ಎಸ್‌90 ಕಾರ್‌ ಇದೆ. ಇವುಗಳ ಮೌಲ್ಯ 87.70 ಲಕ್ಷ ಎಂದು ಗೀತಾ ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ.

ಗೀತಾ ಅವರ ಬಳಿಯಲ್ಲಿ ಬರೋಬ್ಬರಿ 11.54 ಕೆಜಿ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳಿವೆ. ಇದರ ಮೌಲ್ಯ 3.5 ಕೋಟಿ ರೂ. ಆಗಿದೆ. 30 ಕೆಜಿ ಬೆಳ್ಳಿಯೂ ಅವರ ಬಳಿ ಇದೆ.

ಒಟ್ಟಾರೆ ಗೀತಾ ಶಿವರಾಜ್‌ ಕುಮಾರ್‌ ಬಳಿ 5.54 ಕೋಟಿ ರೂ. ಹಾಗೂ ಶಿವರಾಜ್‌ ಕುಮಾರ್‌ 18 ಕೋಟಿ ರೂ. ಚರಾಸ್ತಿ ಇದೆ.

ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್ ಕುಮಾರ್‌ ಜಂಟಿ ಒಡೆತನದಲ್ಲಿ ಕನಕಪುರದಲ್ಲಿ 5.05 ಎಕರೆ ವಿಸ್ತೀರ್ಣದ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮೌಲ್ಯ ಒಟ್ಟು 3 ಕೋಟಿ ರೂ. ಎಂದು ನಮೂದಿಸಿದ್ದಾರೆ.

ಶಿವಣ್ಣಗೆ ತಮಿಳುನಾಡಿನ ಈರೋಡ್‌ನಲ್ಲಿ 3.46 ಎಕರೆ ವಿಸ್ತೀರ್ಣದ ಇನ್ನೊಂದು ಕೃಷಿ ಭೂಮಿಯೂ ಇದೆ. ಇದರ ಮೌಲ್ಯ 2.50 ಕೋಟಿ ರೂ. ಆಗಿದೆ. ಇಬ್ಬರ ಬಳಿಯಲ್ಲೂ ಕೃಷಿಯೇತರ ಭೂಮಿ ಇಲ್ಲ. ಕೋರಮಂಗಲದಲ್ಲಿ ಗೀತಾ ಹೆಸರಲ್ಲಿ ವಾಣಿಜ್ಯ ಕಟ್ಟಡವಿದ್ದು ಇದರ ಮೌಲ್ಯ 6 ಕೋಟಿ ರೂ. ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಮಾನ್ಯತಾ ರೆಸಿಡೆನ್ಸಿಯಲ್ಲಿ 1.48 ಎಕರೆಯಲ್ಲಿ ಜಂಟಿಯಾಗಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಮನೆ ಹೊಂದಿದ್ದು, ಇದರ ಮೌಲ್ಯವೇ 54 ಕೋಟಿ ರೂ. (ತಲಾ 27 ಕೊಟಿ ರೂ.) ಎಂದು ನಮೂದಿಸಿದ್ದಾರೆ. ಇದರಲ್ಲಿ ಬರೋಬ್ಬರಿ ಸುಮಾರು ಮುಕ್ಕಾಲು ಎಕರೆ ವಿಸ್ತೀರ್ಣದ ಮನೆ ಇದೆ.

ಹೀಗೆ ಒಟ್ಟು 34.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಗೀತಾ ಹೇಳಿದ್ದರೆ, ಶಿವರಾಜ್‌ಕುಮಾರ್‌ 31 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಸಿನಿಮಾಗಳಿಗಾಗಿ 13 ಕೋಟಿ ಅಡ್ವಾನ್ಸ್‌ ಪಡೆದ ಶಿವಣ್ಣ

ಗೀತಾ ಶಿವರಾಜ್‌ ಕುಮಾರ್‌ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 57.40 ಕೋಟಿ ರೂ. ಕಾರು ಸಾಲ ಹೊಂದಿದ್ದು, ಶಿವರಾಜ್‌ ಕುಮಾರ್‌ ಅವರಿಂದ 6 ಕೋಟಿ ರೂ. ಸಾಲ ಪಡೆದಿದ್ದಾರೆ. ಇತರ 57.55 ಲಕ್ಷ ರೂ. ಸಾಲವೂ ಹೊಂದಿದ್ದಾರೆ. ಶಿವರಾಜ್‌ಕುಮಾರ್‌ ಕೋಟಕ್‌ ಬ್ಯಾಂಕ್‌ನಲ್ಲಿ 3.94 ಕೋಟಿ ರೂ. ಸಾಲ ಹೊಂದಿದ್ದರೆ, ಸಿನಿಮಾಗಳಿಗಾಗಿ ಹಾಗೂ ಜಾಹೀರಾತುಗಳಿಗಾಗಿ ಬರೋಬ್ಬರಿ 13.06 ಕೋಟಿ ರೂ. ಮುಂಗಡ ಪಡೆದಿದ್ದಾರೆ.

ಹೀಗೆ ಗೀತಾ 7.14 ಕೋಟಿ ರೂ. ಸಾಲ ಹೊಂದಿದ್ದರೆ, ಶಿವರಾಜ್‌ ಕುಮಾರ್‌ 17.01 ಕೋಟಿ ರೂ. ಸಾಲ ಹೊಂದಿದ್ದಾರೆ. ಶಿವಣ್ಣ 95.79 ಲಕ್ಷ ರೂ. ಆದಾಯ ತೆರಿಗೆ ಬಾಕಿಯೂ ಉಳಿಸಿಕೊಂಡಿದ್ದಾರೆ. 63.49 ಲಕ್ಷ ಆದಾಯ ತೆರಿಗೆಗೆ ಸಂಬಂಧಿಸಿದಂತೆ ವಿವಾದ ಇರುವುದಾಗಿಯೂ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಮನೆ ಸ್ವತ್ತು ಹಾಗೂ ಉದ್ಯಮ ತಮ್ಮ ಆದಾಯದ ಮೂಲ ಎಂದು ಗೀತಾ ಶಿವರಾಜ್‌ ಕುಮಾರ್‌ ಹೇಳಿದ್ದರೆ, ಸಿನಿಮಾ ಹಾಗೂ ಜಾಹೀರಾತಿನಲ್ಲಿನ ನಟನೆ ಶಿವರಾಜ್‌ ಕುಮಾರ್‌ ಆದಾಯದ ಮೂಲ ಎಂದು ತಿಳಿಸಿದ್ದಾರೆ. 1985ರಲ್ಲಿ ಬೆಂಗಳೂರು ವಿವಿಯಿಂದ ಬಿಎ ಪದವಿ ಪಡೆದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!