Sunday, September 8, 2024

ಬಡಗುತಿಟ್ಟು ಯಕ್ಷಗಾನದ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅಸ್ತಂಗತ | ಸಿಎಂ ಸಂತಾಪ

ಜನಪ್ರತಿನಿಧಿ (ಬೆಂಗಳೂರು) : ಬಡಗು ತಿಟ್ಟು ಯಕ್ಷಗಾನದ ಪ್ರಖ್ಯಾತ ಭಾಗವತ, ತೆಂಕುತಿಟ್ಟಿನಲ್ಲೂ ಹೆಸರು ಗಳಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು(ಗುರುವಾರ) ಬೆಳಗ್ಗೆ ಇಹಲೋಕ ತ್ಯಜಿಸಿದರು.

ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ನಸುಕಿನ ಜಾವ ಅಸ್ತಂಗತರಾದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

46 ವರ್ಷಗಳ ಕಾಲ ಸುದೀರ್ಘ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು. ಬಡಗು ತಿಟ್ಟಿನ ಜನಪ್ರಿಯ ಮೇಳವಾಗಿರುವ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

1957ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಅವರು ಚಿಕ್ಕವರಿದ್ದಾಗಲೇ ಸಂಗೀತ ಕಲಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಇದೇ ವೇಳೆ ಎಲೆಕ್ಟ್ರಿಕ್ ಅಂಗಡಿ ಪ್ರಾರಂಭಿಸಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡುಕೊಟ್ಟಿದ್ದರು. ಇವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಾರಣಪ್ಪ ಉಪ್ಪೂರರು ಕಂಡು ರಂಗಸ್ಥಳಕ್ಕೆ ಕರೆತಂದರು.

ಅಲ್ಲಿಂದ ತಿರುಗಿ ನೋಡದ ಸುಬ್ರಹ್ಮಣ್ಯ ಧಾರೇಶ್ವರ ಅಲ್ಪ ಸಮಯದಲ್ಲೇ ಜನಪ್ರೀತಿ ಗಳಿಸಿದರು. ಪೌರಾಣಿಕ ಮಾತ್ರವಲ್ಲದೆ ಸಾಮಾಜಿಕ ಕಥಾಹಂದರವುಳ್ಳ ಪ್ರಸಂಗಳಲ್ಲಿ ಹೊಸತನದ ಪ್ರಯೋಗ ಮಾಡಿ ಯಶಸ್ವಿಯಾದರು. ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಅಪ್ರತಿಮ ಭಾಗವತ ಕಾಳಿಂಗ ನಾವುಡರ ಅಗಲುವಿಕೆಯಿಂದ ಉಂಟಾಗಿದ್ದ ನಿರ್ವಾತವನ್ನು ತುಂಬುವಲ್ಲಿ ಸುಬ್ರಹ್ಮಣ್ಯ ಧಾರೇಶ್ವರ ಯಶಸ್ವಿಯಾಗಿದ್ದರು. ಅಚ್ಚರಿಯೆಂಬಂತೆ ಕೀರ್ತಿಯ ಉತ್ತುಂಗದಲ್ಲಿರುವಾಗಲೇ ಅವರು ನಿವೃತ್ತರಾಗಿದ್ದರು.

ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ: ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸಂತಾಪ ಸೂಚಿಸಿದ ಸಿಎಂ, ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ.

ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

https://x.com/siddaramaiah/status/1783352572100980932

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!