Saturday, October 12, 2024

ಗಾನಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನು ನೆನಪು ಮಾತ್ರ

ಕುಂದಾಪುರ, ಎ.25: ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸದೊಂದು ಕ್ರಾಂತಿಗೆ ಕಾರಣವಾಗಿದ್ದ ಗಾನಮಾಂತ್ರಿಕ, ಯಕ್ಷಗಾನ ಭಾಗವತಿಕೆಯಲ್ಲಿ ಹೊಸ ಅನ್ವೇಷಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನೂ ನೆನಪು ಮಾತ್ರ. ಬಡಗುತಿಟ್ಟಿನ ಹಿರಿಯ ಭಾಗವತ, ರಂಗ ನಿರ್ದೇಶಕ ಸುಬ್ರಹ್ಮಣ್ಯ ಧಾರೇಶ್ವರ (67ವ) ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಕಾಲವಶರಾದರು.

ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನವಾರ್ತೆ ಕೇಳುತ್ತಿದ್ದಂತೆ ಅವರ ಅಭಿಮಾನಿಗಳು, ಯಕ್ಷಗಾನ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಹೊಸ ಮನ್ವಂತರವೊಂದಕ್ಕೆ ಅವರು ಕಾರಣರಾಗಿದ್ದರು. ಆಧುನಿಕ ಪ್ರಸಂಗಗಳನ್ನು ಅತ್ಯಂತ ವಿಭಿನ್ನವಾಗಿ, ವಿಶಿಷ್ಠವಾಗಿ ರಂಗಕ್ಕೆ ತಂದವರು. ಖ್ಯಾತ ಪ್ರಸಂಗಕರ್ತ ದೇವದಾಸ ಈಶ್ವರಮಂಗಲ ಅವರ ಪ್ರಸಂಗಗಳನ್ನು ರಂಗದಲ್ಲಿ ಸಮರ್ಥವಾಗಿ ನಿರ್ದೇಶಿಸಿದ್ದರು. ಅವರ ನಿರ್ದೇಶನ, ಭಾಗವತಿಕೆಯಲ್ಲಿ ಪ್ರತಿ ತಿರುಗಾಟದಲ್ಲೂ ಪೆರ್ಡೂರು ಮೇಳ ದಾಖಲೆ ನಿರ್ಮಿಸಿತ್ತು.

ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದ ಇವರು ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿದ್ದರು. ಭಾಗವತನಾಗುವ ಕನಸು ಅವರು ಕಂಡವರಲ್ಲ. ಯಕ್ಷಗಾನ ಅವರಿಗೆ ಅನಿರೀಕ್ಷಿತ. ಎಲೆಕ್ಟ್ರಿಕ್ ಅಂಗಡಿ ನಡೆಸುತ್ತಿದ್ದ ಅವರು ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಬಂದವರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳವೇರಿದವರು. ಆ ಕಾಲಘಟ್ಟಕ್ಕೆ ಅನಿವಾರ್ಯವಾಗಿದ್ದ ಆಧುನಿಕ, ಸಾಮಾಜಿಕ ಪ್ರಸಂಗಗಳನ್ನು ಜನರ ಅಭಿರುಚಿಗೆ ತಕ್ಕಂತೆ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿಕೊಂಡವರು. ಕಂದಾವರ ರಘುರಾಮ ಶೆಟ್ಟರ ಶೂದ್ರ ತಪಸ್ವಿನಿಯಲ್ಲಿ ‘ಕೊರವಂಜಿ’ ಪದ್ಯವನ್ನು ವಿಭಿನ್ನವಾಗಿ ಕಟ್ಟಿಕೊಟ್ಟವರು.

ಕಾಳಿಂಗ ನಾವಡರ ಅಗಲಿಕೆಯ ಬಳಿಕ ಅವರ ಸ್ಥಾನವನ್ನು ತುಂಬಿ ಯುವ ಪ್ರೇಕ್ಷಕರನ್ನು ರಂಗದತ್ತು ಕರೆತಂದವರು. ಮೇಳ ಬಿಟ್ಟು ೧೦ ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ ಮಾಡಿದ್ದರು. ಅತಿಥಿ ಭಾಗವತರಾಗಿ ಕಲಾಭಿಮಾನಿಗಳ ಅಪೇಕ್ಷೆಯಂತೆ ಭಾಗವಹಿಸುತ್ತಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!