Wednesday, September 11, 2024

ಕಾಂಗ್ರೆಸ್‌ ಬೃಹತ್‌ ಪಾದಯಾತ್ರೆ : ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಂಸದರು 60 ಕೋಟಿ ಸಂಸದರ ಅನುದಾನವನ್ನು ಯಾವುದಕ್ಕೆ ಖರ್ಚು ಮಾಡಿದ್ದಾರೆ ? : ಕೆ. ಜಯಪ್ರಕಾಶ್‌ ಹೆಗ್ಡೆ

ಜನಪ್ರತಿನಿಧಿ (ಕುಂದಾಪುರ) : ‘ನಮ್ಮ ಜೆಪಿ, ನಮ್ಮ ಎಂಪಿ’, ‘ಬೇಕು ಬೇಕು ಬದಲಾವಣೆ ಬೇಕು’ ಎಂಬ ಘೋಷಣೆಯೊಂದಿಗೆ ಬೃಹತ್ ಪಾದಯಾತ್ರೆಯ ಮೂಲಕ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಚುನಾವಣಾ ಪ್ರಚಾರ ಮಾಡಲಾಯಿತು.

ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ಮೊದಲ್ಗೊಂಡು ಕುಂದಾಪುರ ಪೇಟೆಯ ಸುತ್ತ ಬೃಹತ್ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಮತಯಾಚನೆ ನಡೆಸಲಾಯಿತು.

ಪಾದಯಾತ್ರೆಯ ಉದ್ದಕ್ಕೂ ಕೆ. ಜಯಪ್ರಕಾಶ್ ಹೆಗ್ಡೆ ಸಚಿವರಾಗಿದ್ದಾಗ, ಸಂಸದರಾಗಿದ್ದ ಸಂದರ್ಭಗಳಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದ ಯೋಜನೆಗಳನ್ನು ತಿಳಿ ಹೇಳಲಾಯಿತು.

ತೆರೆದ ವಾಹನದಲ್ಲಿ ಕಾಂಗ್ರೆಸ್ (‘ಇಂಡಿಯಾ’ ಮೈತ್ರಿಕೂಟ) ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಕುಂದಾಪುರ ಪೇಟೆಯ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಜನರೆಡೆಗೆ ಕೈ ಬೀಸಿ ಮತ ಚಲಾಯಿಸುವಂತೆ ವಿನಂತಿಸಿಕೊಂಡರು.

ಸಾವಿರಾರು ಯುವಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಯೂಥ್ ಕಾಂಗ್ರೆಸ್ ಕಾರ್ಯಕರ್ತರು,  ಎನ್.ಎಸ್.ಯು‌.ಐ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು,  ಜೆಪಿ ಹೆಗ್ಡೆ ಅಭಿಮಾನಿಗಳು, ನೂರಾರು ಮಹಿಳೆಯರು, ಕಾಂಗ್ರೆಸ್ ಪಕ್ಷದ ಬೆಂಬಲಿಗರು ಸುಡು ಬಿಸಿಲನ್ನು ಲೆಕ್ಕಿಸದೇ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸುವಂತೆ ಅತ್ಯುತ್ಸಾಹದಿಂದ ಮತಯಾಚನೆ ಮಾಡಿದರು.

ಜನರಿಗೆ ಅನುಕೂಲ ಆಗುವ ಹಾಗೆ ಉಡುಪಿಯನ್ನು ಜಿಲ್ಲೆಯನ್ನಾಗಿಸಿದ ತೃಪ್ತಿ ಇದೆ :

ಈ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡ ಅವಿಭಾಜ್ಯ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದಾಗ ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಇಲ್ಲಿನ ಜನರಿಗೆ ಅನುಕೂಲ ಮಾಡಿರುವ ತೃಪ್ತಿ ನನ್ನಲ್ಲಿದೆ. ಉಡುಪಿಯ ಜನರ ಮನೆ ಬಾಗಲಿಗೆ ಸರ್ಕಾರವನ್ನು ಬರುವ ಹಾಗೆ ಮಾಡಿ ಜನರಿಗೆ ಅನುಕೂಲವಾಗುವ ಹಾಗೆ ಆಯ್ತು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಿದ್ದೆ. ಜನರ ಕೆಲಸಗಳನ್ನು ಮಾಡಿಕೊಡುವುದು ಜನಪ್ರತಿನಿಧಿಯ ಕರ್ತವ್ಯ ಎಂದರು.

ನಾನು ಕೊಟ್ಟ ಯೋಜನೆಗಳ ಬಗ್ಗೆ ಪ್ರಚಾರ ತೆಗೆದುಕೊಳ್ಳದೆ ಇದ್ದಿದ್ದೆ ನನ್ನ ದೊಡ್ಡ ತಪ್ಪು :

ಕಾನೂನು ತೊಡಕಾದರೇ, ಅದನ್ನು ಸರಿಪಡಿಸುವಂತಹ ಕೆಲಸ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ರೇಷನ್‌ ಕಾರ್ಡ್‌ನ ಸಮಸ್ಯೆ ಇದ್ದಾಗ ಸಂಸದರ ಅನುದಾನದಲ್ಲಿ ಎಲ್ಲಾ ಪಂಚಾಯತ್‌ಗಳಿಗೆ ಕಂಪ್ಯೂಟರ್‌ ಮತ್ತು ಪ್ರಿಂಟರ್‌ಗಳನ್ನು ಕೊಡಿಸಿ ಎಲ್ಲರಿಗೂ ರೇಷನ್‌ ಕಾರ್ಡ್‌ ದೊರಕುವ ಹಾಗೆ ಮಾಡಿದೆ. ಇಂತಹ ಅನೇಕ ಯೋಜನೆಗಳನ್ನು ಜನರಿಗೆ ಅನುಕೂಲ ಆಗುವ ಹಾಗೆ ಮಾಡಿದ್ದೇನೆ. ಮುಂದೆ ಬಂದ ಸಂಸದರು ಹತ್ತು ವರ್ಷಗಳ ಕಾಲ ಇಲ್ಲಿ ಅಧಿಕಾರದಲ್ಲಿದ್ದರು ಸುಮಾರು ಅರವತ್ತು ಕೋಟಿ ರೂ. ಸಂಸದರ ಅನುದಾನವನ್ನು ಯಾವ ಕಾರಣಕ್ಕೆ ಖರ್ಚು ಮಾಡಿದ್ದಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. ನಾನು ತಂದ ಯೋಜನೆಗಳನ್ನು ಎಂದಿಗೂ ಹೇಳಿಕೊಳ್ಳುವುದಕ್ಕೆ. ಪ್ರಚಾರ ಮಾಡಿಕೊಳ್ಳುವುದಕ್ಕೆ ಹೋಗಿಲ್ಲ. ಬ್ಯಾನರ್‌ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಈಗ ನಾನು ತಂದ ಯೋಜನೆಗಳನ್ನು ನೆನಪಿಸಿಕೊಳ್ಳುವ ಅಗತ್ಯ ಬಂದಿದೆ. ನಾನು ತಂದ ಯೋಜನೆಗಳನ್ನು ಹೇಳಿಕೊಳ್ಳದೇ ಇದ್ದಿದ್ದೆ ತಪ್ಪು ಎನ್ನುವ ಭಾವನೆ ಈಗ ಬಂದಿದೆ ಎಂದು ಹೇಳಿದರು.

ಉಪ್ಪು ನೀರಿನ ಅಣೆಕಟ್ಟು ಮಾಡದೇ ಇದ್ದಿದ್ದರೇ, ಕುಂದಾಪುರದ ಜನರು ಉಪ್ಪು ನೀರು ಕುಡಿಯುವಂತಹ ಪರಿಸ್ಥಿತಿ ಬರುತ್ತಿತ್ತು. ಉಪ್ಪು ನೀರಿನ ಅಣೆಕಟ್ಟಿನ ಕಾರಣದಿಂದ ಇಲ್ಲಿನ ಜನರು ಸಿಹಿ ನೀರು ಕುಡಿಯುವಂತಾಯಿತು. ಡಿಸೇಲ್‌ ಮೇಲೆ ಕೇವಲ ಮೂವತ್ತೈದು ಪೈಸೆ ಸಬ್ಸಿಡಿ ಇತ್ತು, ಅದನ್ನು ತೆಗೆದು ಸಂಪೂರ್ಣ ಸೇಲ್ಟ್‌ ಟ್ಯಾಕ್ಸ್‌ ಎಕ್ಸೆಂಪ್ಶನ್‌ ಮೇಲೆ ಒಂದು ಲೀಟರ್‌ ಮೇಲೆ ಹತ್ತು ರೂ. ಸಿಗುತ್ತಿದೆ. ಇದು ಮೀನುಗಾರರ ಅಭಿವೃದ್ಧಿಗೆ ಮಾಡಿದ ಯೋಜನೆ. ಡಿಸೇಲ್‌, ಪೆಟ್ರೋಲ್‌ ಬೆಲೆ ಜಾಸ್ತಿಯಾಗುತ್ತಾ ಹೋಯ್ತು. ಆದರೇ, ಈ ಬಗ್ಗೆ ಜನರು ಪ್ರಶ್ನೆಯನ್ನೇ ಮಾಡುತ್ತಿಲ್ಲ. ಕುಂದಾಪುರದ ಫ್ಲೈ ಓವರ್‌ ಮಾಡಿಸಿರುವುದರಿಂದ ಊರು ಆಚೆಯಿಂದ ಈಚೆ ಕಾಣುವ ಹಾಗಾಯ್ತು.

ಕುಂದಾಪುರ ಕನ್ನಡ ಅಧ್ಯಯನ ಪೀಠಕ್ಕೆ ಅನುಮೋದನೆ ಕೊಡಿಸಿದ ಖುಷಿ ಇದೆ :

ಕೋಡಿ ಮತ್ತು ಗಂಗೊಳ್ಳಿ ಬ್ರೇಕ್‌ ವಾಟರ್‌ ಗೆ 102 ಕೋಟಿ ಅನುದಾನವನ್ನು ಸ್ಯಾಂಕ್ಶನ್‌ ಮಾಡಿಸಿ ತಂದೆ. ಕೋಡಿ ಮತ್ತು ಗಂಗೊಳ್ಳಿಯ ಬ್ರೇಕ್‌ ವಾಟರ್‌ ಮೇಲೆ ಕಾಂಕ್ರೀಟ್‌ ಹಾಕುವುದರ ಮೂಲಕ, ಅಲ್ಲಿ ಸ್ಟ್ರೀಟ್‌ ಲೈಟ್ಸ್‌ ಹಾಕಿಸಿರುವುದರಿಂದ ಬ್ರೇಕ್‌ ವಾಟರ್‌ ಸೀ ವಾಕ್‌ ಆಗಿಯೂ ಪರಿವರ್ತನೆಯಾಯಿತು. ಇಂತಹ ಯೋಜನೆಗಳು ಜನರಿಗೆ ಅನುಕೂಲವಾದಾಗ ಜನರಿಗೆ ಸಂಪೂರ್ಣ ತೃಪ್ತಿಯಾಗುತ್ತದೆ. ದುಡ್ಡಿನ ಆಸೆಯೇ ಇಲ್ಲ. ಜನಪ್ರತಿನಿಧಿಗೆ ಬೇಕಾಗಿರುವುದು ತೃಪ್ತಿ. ಜನರಿಗೆ ಅನುಕೂಲ ಆಗುವ ಹಾಗೆ ಕೆಲಸ ಮಾಡಿದ ತೃಪ್ತಿ ನನಗಿದೆ ಕುಂದಾಪುರ ಕನ್ನಡದ ಅಧ್ಯಯನ ಪೀಠ ಮಾಡುವುದಕ್ಕೆ ಸರ್ಕಾರದಿಂದ ಅನುಮೋದನೆ ಕೊಡಿಸಿದ ಖುಷಿ ಇದೆ ಎಂದು ಅವರು ಹೇಳಿದರು.

ಜನರಿಗೆ ಅನುಕೂಲವಾಗುವ ಹಾಗೆ ಕೆಲಸ ಮಾಡಿದ ತೃಪ್ತಿ ಶಾಶ್ವತ :

ಬ್ಯಾಲೆಟ್‌ ನಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವವರ ಹೆಸರು ಇರುತ್ತದೆ. ಮತದಾರರು ಇಲ್ಲಿ ಸ್ಪರ್ಧೆಯಲ್ಲಿ ಇರುವವರ ಹೆಸರು ನೋಡಿ ಮತ ಹಾಕಬೇಕು. ಕೇಂದ್ರದ ನಾಯಕರನ್ನು ನೋಡಿ ಮತ ಚಲಾಯಿಸುವುದಲ್ಲ. ನಾಯಕರಿಗೆ (ಮೋದಿಗೆ) ವಾರಣಾಸಿಯಲ್ಲಿ ಅಲ್ಲಿನ ಜನರು ಮತ ಹಾಕುತ್ತಾರೆ. ಕೇಂದ್ರದ ನಾಯಕರ ಹೆಸರಿನಲ್ಲಿ ನಾವು ಮತ ಕೇಳಿಲ್ಲ. ಮತದಾರರೂ ಕೂಡ ಇಲ್ಲಿ ಸ್ಪರ್ಧೆ ಮಾಡುವವರಿಗೆ ಮತ ಹಾಕಬೇಕು. ಬರುವ ಚುನಾವಣೆಯಲ್ಲಿ ನಮ್ಮ ಕೆಲಸದ ಮೇಲೆ ಮತ ಕೇಳಬೇಕು. ಕೆಲವೊಮ್ಮೆ ಇದು ಗೆಲ್ಲದೇ ಇರಬಹುದು. ಜನರಿಗೆ ಅನುಕೂಲ ಆಗುವ ಹಾಗೆ ಯೋಜನೆಗಳನ್ನು ಮಾಡಿದ ತೃಪ್ತಿ ಶಾಶ್ವತ ಎಂದು ಹೇಳಿದರು.

ಮೆಡಿಕಲ್‌ ಕಾಲೇಜು, ಕೋಸ್ಟಲ್‌ ಟೂರಿಸಂ ಹಾಗೂ ಟೆಂಪಲ್‌ ಟೂರಿಸಂ ಗೆ ಆಧ್ಯತೆ :

ಜಿಲ್ಲೆಯಲ್ಲೊಂದು ಮೆಡಿಕಲ್‌ ಕಾಲೇಜು ಆಗಬೇಕು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು. ಜಿಲೆಲಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಪರಿಸರ ಸ್ನೇಹಿ ಉದ್ಯಮಗಳು ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಕೋಸ್ಟಲ್‌ ಟೂರಿಸಂ ಹಾಗೂ ಟೆಂಪಲ್‌ ಟೂರಿಸಂ ಅಗತ್ಯವಾಗಿ ಇಲ್ಲಿ ಅಭಿವೃದ್ಧಿಯಾಗಬೇಕಿದೆ. ದೇವಸ್ಥಾನದ ಬಗ್ಗೆ ಕೇವಲ ಮತಗಳನ್ನು ಕೇಳುವುದಲ್ಲ, ದೇವಸ್ಥಾನದ ಬಗ್ಗೆ ನಾವೇನು ಮಾಡಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಧಾರ್ಮಿಕ ಭಾವನೆಗಳನ್ನು ಚುನಾವಣೆಯೊಂದಿಗೆ ಬೆರಸಬಾರದು. ನಾವೂ ದೇವಸ್ಥಾನಗಳನ್ನು ಕಟ್ಟಿಸಿದ್ದೇವೆ. ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇವೆ. ಆದರೇ, ಇವನ್ನೆಲ್ಲಾ ಎಲ್ಲೂ ಹೇಳಿಕೊಳ್ಳಲಿಲ್ಲ ಎಂದರು.

ನೀವು ಚಲಾಯಿಸಿದ ಮತವನ್ನು ಜಾಗೃತೆಯಿಂದ ಪರಿಶೀಲಿಸಿ :

ನಿಮ್ಮ ಮತಗಟ್ಟೆಯಲ್ಲಿ ಕೊನೆಯ ಮತ ಬೀಳುವ ತನಕ ಅಲ್ಲಿ ಇದ್ದು ಕಾಯಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇವಿಎಂ ನಲ್ಲಿ ಮತಗಳು ಕಾಂಗ್ರೆಸ್‌ಗೆ ಹಾಕಿದ್ದು, ಬಿಜೆಪಿಗೆ ಹೋಗುತ್ತದೆ ಎಂಬ ಒಂದು ಕೇಸ್‌ ಕೇರಳದಲ್ಲಿ ಆಗಿದೆ. ಆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎನ್ನುವುದು ಗೊತ್ತಿಲ್ಲ. ಮತದಾರರು ಜಾಗೃತೆಯಿಂದ ಮತ ಚಲಾಯಿಸಿ. ನೀವು ಹಾಕಿದ ಮತ ಸರಿಯಾಗಿ ದಾಖಲಾಗಿದೆಯೇ ಎನ್ನುವುದನ್ನು ಪರಿಶೀಲಿಸಿ. ನಿಮ್ಮ ಮತ ಬೇರೆಯವರಿಗೆ ಹೋದರೇ ಮತ ಕೇಂದ್ರದಲ್ಲಿರುವ ಅಧಿಕಾರಿಗಳಿಗೆ ವಿಷಯ ತಿಳಿಸಿ ದೂರು ಕೊಟ್ಟರೇ, ಇಂತಹದ್ದು ಆಗುವುದನ್ನು ತಡೆಯಬಹುದು ಎಂದು ಹೇಳಿದರು. ಮತವನ್ನು ಚಲಾಯಿಸುವಾಗ ಬಹಳ ಜಾಗೃತರಾಗಿರಿ. ಕಾಂಗ್ರೆಸ್‌ ಪಕ್ಷದ ಹಸ್ತದ ಗುರುತಿಗೆ ನಿಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿ ಎಂದು ವಿನಂತಿಸಿಕೊಂಡರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮೂಲೆ ಗುಂಪು ಮಾಡಿದ ಶ್ರೀನಿವಾಸ ಪೂಜಾರಿ ಅವರನ್ನು ಮನೆಗೆ ಕಳುಹಿಸಿ ಜೆಪಿ ಹೆಗ್ಡೆಯವರನ್ನು ಸಂಸತ್ ಗೆ ಕಳುಹಿಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದು ಹೇಳಿದರು.

ಇನ್ನು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುಕುಮಾರ್‌ ಶೆಟ್ಟಿ, ಕೆ. ಜಯಪ್ರಕಾಶ್‌ ಹೆಗ್ಡೆ ಒಬ್ಬ ಪ್ರಬುದ್ಧ ರಾಜಕಾರಣಿ. ಒಬ್ಬ ಒಳ್ಳೆಯ ಸಂಸತ್‌ ಪಟು. ಎದುರಾಳಿ ಕೋಟ ಶ್ರೀನಿವಾಸ ಪೂಜಾರಿಗೆ ಹಿಂದಿ, ಇಂಗ್ಲೀಷ್‌ ಏನೂ ಬರುವುದಿಲ್ಲ. ಕೆ. ಜಯಪ್ರಕಾಶ್‌ ಹೆಗ್ಡೆ ಗೆದ್ದರೇ, ಇಡೀ ಉಡುಪಿಯೇ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಇಲ್ಲಿನ ಎಲ್ಲರೂ ಜವಾಬ್ದಾರಿಯಿಂದ ಮತ ಚಲಾಯಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ,  ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಜು ಪೂಜಾರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!