Sunday, September 8, 2024

14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ! ನಾಳೆ ಮನೆಮನೆ ಪ್ರಚಾರಕ್ಕಷ್ಟೇ ಅವಕಾಶ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದಲ್ಲಿ ಮೊದಲ ಹಂತದಲ್ಲಿ (ಏಪ್ರಿಲ್‌ 26) ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು(ಬುಧವಾರ) ಸಂಜೆ ತೆರೆ ಬೀಳಲಿದೆ. ವ್ಯಾಪಕವಾಗಿ ನಡೆಸಿದ ಬಹಿರಂಗ ಸಭೆಗಳು, ಪಾದಯಾತ್ರೆಗಳ, ಬೈಕ್‌ ರ್ಯಾಲಿಗಳ ಮೂಲಕ ಮತದಾರರ ಮನ ಗೆಲ್ಲಲು ಈ ಕ್ಷೇತ್ರಗಳ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ನಾಳೆ (ಗುರುವಾರ) ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಮಾತ್ರ ಅವಕಾಶವಿದೆ.

ರಾಜ್ಯದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಚುನಾವಣಾ ಕಣ ಅಂತಿಮಗೊಂಡಿತ್ತು. ಮಂಗಳವಾರದಿಂದ ಪ್ರಚಾರ ಬಿರುಸು ಪಡೆದಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಘಟಾನುಘಟಿ ನಾಯಕರು ಶುಕ್ರವಾರದಿಂದ ಎರಡನೇ ಹಂತದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಇನ್ನೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳಿಗೆ ಕೊಂಡೊಯ್ಯುವಾಗ ಜಾಗರೂಕರಾಗಿರಬೇಕು. ಏಕೆಂದರೆ, ಬೂತ್‌ಗಳ ಆವರಣದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧವಿರುತ್ತದೆ.

ಬೂತ್‌ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರು ತಮ್ಮ ಮತ ಚಲಾಯಿಸಲು ಹೋಗುವ ಮೊದಲು ತಮ್ಮ ಫೋನ್‌ಗಳನ್ನು ಇಡಲು ವಿಶೇಷ ಸ್ಥಳದ ವ್ಯವಸ್ಥೆ ಮಾಡಲಾಗಿರುತ್ತದೆ.

ಈ ಹಿಂದೆ ಜನರು ನಿಯಮಗಳನ್ನು ಪಾಲಿಸದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಮತದಾನ ಮಾಡುವಾಗ ಫೋಟೋ ಅಥವಾ ವೀಡಿಯೋ ಮಾಡಿ ಸಿಕ್ಕಿಬಿದ್ದ ನಿದರ್ಶನಗಳೂ ಇವೆ. ಹಾಗಾಗಿ ಮೊಬೈಲ್ ಫೋನ್ ಗಳನ್ನು ಇಡಲು ಚುನಾವಣಾ ಸಿಬ್ಬಂದಿ ಟೇಬಲ್ ಬಳಿ ಟ್ರೇ ಇಡಲು ನಿರ್ಧರಿಸಲಾಗಿದೆ. ಟ್ರೇಗೆ ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮತದಾನ ಮಾಡುವಾಗ ಫೋನ್‌ಗಳನ್ನು ಟ್ರೇನಲ್ಲಿ ಇಡಲು ಒತ್ತಾಯಿಸಬೇಕೆ ಅಥವಾ ಅವು ಸೈಲೆಂಟ್ ಮೋಡ್‌ನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕೆ ಎಂಬ ನಿರ್ಧಾರವನ್ನು ಅಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ. ಇದು ಕೇವಲ ಕೆಲವೇ ಸೆಕೆಂಡುಗಳಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ, ಮತದಾನದ ಸಮಯದಲ್ಲಿ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆದಾಗ್ಯೂ ಜನರು ವಿವಿಧ ಕಾರಣಗಳಿಗಾಗಿ ತಮ್ಮ ಫೋನ್‌ಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಬೂತ್‌ಗಳಿಗೆ ಫೋನ್ ತೆಗೆದುಕೊಂಡು ಹೋಗಬೇಡಿ ಎಂದು ನಾವು ಹೇಳುತ್ತಿಲ್ಲ. ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು. ಸಿಇಒ, ಜಿಲ್ಲಾಧಿಕಾರಿಗಳು ಮತ್ತು ಇತರ ಚುನಾವಣಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!