Thursday, May 2, 2024

ಐಪಿಎಲ್‌ನಲ್ಲಿ ದಿನೇಶ್ ಕಾರ್ತಿಕ್ ಅಬ್ಬರ

———————-
ಎಸ್. ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ
———————
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ದಿನೇಶ್ ಕಾರ್ತಿಕ್. ಇವರ ವಯಸ್ಸು 38. ಆಲ್ ಮೋಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ವಯಸ್ಸು ಇದು . ಆದರೆ , ದಿನೇಶ್ ಕಾರ್ತಿಕ್ ಅಚಲವಾದ ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ ನಡೆಸಿ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡುವ ಕಾತರದಲ್ಲಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಸತತವಾಗಿ  ದಯನೀಯ ಸೋಲು ಕಾಣುತ್ತಿದ್ದರೂ ದಿನೇಶ್ ಕಾರ್ತಿಕ್ ಮಾತ್ರ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ.

ಡಿಕೆ ‘ ಅಂತನೇ ಫೇಮಸ್ ಆಗಿರುವ ದಿನೇಶ್ ಕಾರ್ತಿಕ್ ಪಂದ್ಯದಿಂದ ಪಂದ್ಯಕ್ಕೆ ಬರಸಿಡಿಲಿನ ಬ್ಯಾಟಿಂಗ್​ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಕಳೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ದಿನೇಶ್​ ಕಾರ್ತಿಕ್​ಗೆ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು ಮೈದಾನದಲ್ಲೇ ಇದೇ ರೀತಿ ಆಡಿದರೆ ವಿಶ್ವಕಪ್​ನಲ್ಲಿ ಆಡಬಹುದು ಎಂದು ಬಿಗ್​ ಆಫರ್​ ನೀಡಿದ್ದರು. ಈ ಆಫರ್​ ಗೆ ಪ್ರತ್ಯುತ್ತರ ನೀಡಿದ ದಿನೇಶ್ ಕಾರ್ತಿಕ್ ಕಳೆದ ಸೋಮವಾರ ಸನ್ ರೈಸರ್ಸ್  ಹೈದರಾಬಾದ್​ ವಿರುದ್ಧದ  ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಕೇವಲ 35 ಎಸೆತಗಳಿಂದ 83 ರನ್​ ಹೊಡೆದಿದ್ದಾರೆ.

ದಿನೇಶ್  ಕಾರ್ತಿಕ್​ ತೋರಿದ ಈ ಅಸಾಮಾನ್ಯ ಬ್ಯಾಟಿಂಗ್​ ಕಂಡು ಕ್ರಿಕೆಟ್​ ದಿಗ್ಗಜರೂ ಕೂಡ ಮೂಕವಿಸ್ಮಿತರಾಗಿದ್ದಾರೆ.ವರ್ಷವಿಡಿ ಕ್ರಿಕೆಟ್​ ಆಡುವ ಆಟಗಾರರು ಕೂಡ ಕಾರ್ತಿಕ್ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿಲ್ಲ. ಆದರೆ, ವರ್ಷಕ್ಕೊಮ್ಮೆ ಐಪಿಎಲ್​ ಮೂಲಕ ಕ್ರಿಕೆಟ್​ ಆಡುತ್ತಿರುವ ದಿನೇಶ್  ಕಾರ್ತಿಕ್ ಅವರ ಸಾಹಸಿಕ ಬ್ಯಾಟಿಂಗ್‌ ವೈಭವಕ್ಕೆ  ಅನೇಕ ಕ್ರಿಕೆಟ್​ ದಿಗ್ಗಜರು ಸಲಾಂ ಹೊಡೆದಿದ್ದಾರೆ. ಈಗಾಗಲೇ ಈ ಬಾರಿಯ ಐಪಿಎಲ್‌ ಪಂದ್ಯಾಟದಲ್ಲಿ ಆಡಿರುವ  7 ಪಂದ್ಯಗಳಿಂದ 226 ರನ್​ ಬಾರಿಸಿರುವ ಕಾರ್ತಿಕ್ , 16 ಬೌಂಡರಿ ಮತ್ತು 18 ಸಿಕ್ಸರ್​ ಗಳನ್ನು ಹೊಡೆದಿರುವರು.

ದಿನೇಶ್ ಕಾರ್ತಿಕ್  2022ರ ಐಪಿಎಲ್‌ ಹರಾಜಿನಲ್ಲಿ ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ತಂಡವನ್ನು  ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಇದೇ ಪ್ರದರ್ಶನ ಕಂಡು ಅವರನ್ನು  ಆಸ್ಟ್ರೇಲಿಯಾದಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಆಡಿಸಲಾಗಿತ್ತು. ಆದರೆ , ಅವರು ಅಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಇದೀಗ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ದಿನೇಶ್ ಕಾರ್ತಿಕ್ ಜೂನ್ -1 ರಿಂದ ಆರಂಭಗೊಳ್ಳುವ  ಟ್ವೆಂಟಿ-20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾದರೂ ಕೂಡ ಅಚ್ಚರಿ ಪಡುವಂತದ್ದು ಏನಿಲ್ಲ .

ಸವಾಲೊಡ್ಡುವ ಕ್ರಿಕೆಟರ್ : ಹೌದು , ದಿನೇಶ್ ಕಾರ್ತಿಕ್ ಅವರೊಬ್ಬ ಸವಾಲೊಡ್ಡುವ ಕ್ರಿಕೆಟರ್. ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡರೂ ದಿನೇಶ್ ಕಾರ್ತಿಕ್ ಎಂದಿಗೂ ಕ್ರಿಕೆಟಿನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳದ ಕ್ರಿಕೆಟರ್ . ತನ್ನ ಕ್ರಿಕೆಟ್  ಸಾಮರ್ಥ್ಯದ ಮೇಲೆ ಅಪಾರವಾದ ನಂಬಿಕೆಯನ್ನಿಟ್ಟುಕೊಂಡಿದ್ದ ಇವರು ಎಂದಿಗೂ ತನ್ನತನವನ್ನು ಕಳೆದುಕೊಳ್ಳಲಿಲ್ಲ. ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೂ ದಿನೇಶ್ ಕಾರ್ತಿಕ್ ಸುಮ್ಮನೆ ಕುಳಿತುಕೊಳ್ಳಲಿಲ್ಲ . ದೇಶಿಯ ಕ್ರಿಕೆಟ್‌ನಲ್ಲಿ ಹಾಗೂ ಐಪಿಎಲ್‌ ಪಂದ್ಯಾಟಗಳಲ್ಲಿ ಆಡಿ ತನ್ನ ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದರು. ಟೀಕೆ, ಅವಮಾನಗಳಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು.

2004ರಲ್ಲಿ ಭಾರತ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ದಿನೇಶ್ ಕಾರ್ತಿಕ್, 2007ರಲ್ಲಿ ಐಸಿಸಿ ಟ್ವೆಂಟಿ- 20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದರು. ಆದರೆ,ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಅಬ್ಬರದ ಮಧ್ಯೆ ಕಳೆದು ಹೋಗಿದ್ದ ದಿನೇಶ್  ಕಾರ್ತಿಕ್ , 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ನಂತರ ಕ್ರಿಕೆಟ್’ನಿಂದ ದೂರವಾಗಿದ್ದ ದಿನೇಶ್ ಕಾರ್ತಿಕ್, ಕಾಮೆಂಟರಿ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಜೊತೆ ಕಾಮೆಂಟೇಟರ್ ಆಗಿ ಡಿಕೆ ಕಾಣಿಸಿಕೊಂಡಿದ್ದರು.

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ರೂಪಂತರ ಹೊಂದುತ್ತಿದ್ದ ದಿನೇಶ್ ಕಾರ್ತಿಕ್ ಈ ಬಾರಿಯಂತೂ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಜಬರ್ದಾಸ್ತದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ . ಆರ್ ಸಿಬಿ ತಂಡ ಮ್ಯಾಚ್ ಗೆಲ್ಲದಿದ್ದರೂ ತನ್ನ
ಜವಾಬ್ದಾರಿಯನ್ನು ಮಾತ್ರ ಕಾರ್ತಿಕ್ ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಬ್ಯಾಟ್ ಬೀಸಿದಾಗಲ್ಲೆಲ್ಲ ಸಿಂಗಲ್ ಆರ್ಮಿಯಂತೆ ಆರ್ ಸಿಬಿ ತಂಡದ ಪರ ಹೋರಾಡುವ ದಿನೇಶ್ ಕಾರ್ತಿಕ್  ಅವರ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.

ದಿನೇಶ್  ಕಾರ್ತಿಕ್ ಇದುವರೆಗೆ  ಆಡಿದ 249 ಪಂದ್ಯಗಳಿಂದ 4742 ರನ್ ಗಳಿಸಿದ್ದಾರೆ. 49 ಬಾರಿ ಅಜೇಯರಾಗಿ ಉಳಿದಿದ್ದ  ಕಾರ್ತಿಕ್ ಸ್ಟ್ರೈಕ್ ರೇಟ್ 134.98 ಆಗಿದೆ. ಇದರಲ್ಲಿ 22 ಅರ್ಧಶತಕಗಳು ಸೇರಿವೆ.  ಡೆತ್‌ ಓವರ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ  ಇವರು ಇದುವರೆಗೆ ಐಪಿಎಲ್‌ನಲ್ಲಿ  455 ಬೌಂಡರಿ ಹಾಗೂ 157 ಸಿಕ್ಸರ್ ಗಳ ಮೂಲಕ ರಂಜಿಸಿದ್ದಾರೆ. ದಿನೇಶ್ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟ್ವೆಂಟಿ -20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ ಮಾಡಿದ್ದಾರೆ.

ಎದ್ದು ನಿಂತು ಗೌರವ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ 25 ರನ್ ಗಳಿಂದ ಸೋಲು ಕಂಡಿತ್ತು.  ಹಾಗಿದ್ದರೂ ದಾಖಲೆಯ ಮೊತ್ತವನ್ನು ಚೇಸ್ ಮಾ ಡವ ಹಂತದಲ್ಲಿ   ದಿನೇಶ್ ಕಾರ್ತಿಕ್ ತೋರಿದ ಅದ್ಭುತ ಬ್ಯಾಟಿಂಗ್‌ಗೆ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತು. ಈ ದಾಖಲೆಯ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ತಂಡಕ್ಕೆ ಹೊಸ ಹುರುಪು ತಂದದ್ದು ದಿನೇಶ್ ಕಾರ್ತಿಕ್.  ಕೆಳ ಕ್ರಮಾಂಕದಲ್ಲಿ  ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಬಂದಾಗ ಪಂದ್ಯದ ಚಹರೆಯೇ ಬದಲಾಯಿತು. ಕೇವಲ 35 ಎಸೆತ ಎದುರಿಸಿದ ಡಿಕೆ 7 ಸಿಕ್ಸರ್ ಸಹಿತ 83 ರನ್ ಚಚ್ಚಿದರು. ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ಇರುತ್ತಿದ್ದರೆ ಪಂದ್ಯದ ಗತಿಯೇ ಬದಲಾಗುತ್ತಿತ್ತು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!