Thursday, May 2, 2024

ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್‌ನರ್ ಶಿಪ್ ಕಂಪನಿ ಅಲ್ಲ- ಬೈಂದೂರಿನಲ್ಲಿ ಕೆ.ಎಸ್ ಈಶ್ವರಪ್ಪ

ಬೈಂದೂರು: ನಾವು ತಪಸ್ಸಿನಿಂದ ಕಟ್ಟಿದ ಪಕ್ಷ ಇವತ್ತು ಅಧೋಗತಿಗೆ ಹೋಗುತ್ತಿದೆ ಎನ್ನುವಾಗ ಬೇಸರವಾಗುತ್ತದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್‌ನರ್ ಶಿಪ್ ಕಂಪನಿ ಅಲ್ಲ. ಅದರೆ ಇವತ್ತಿನ ಸ್ಥಿತಿ ಹಾಗಾಗಿದೆ. ನನಗೆ ಆರ್,ಎಸ್ ಎಸ್, ಸಂಘ ಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆ‌ಎಸ್ ಈಶ್ವರಪ್ಪ ಹೇಳಿದ್ದಾರೆ.

ಅವರು ಬೈಂದೂರು ರಾಷ್ಟ್ರ ಭಕ್ತಬಳಗದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಒಂದೆಡೆ ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎನ್ನುತ್ತಾರೆ. ಅದು ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದದ ಒಳಮರ್ಮ ಹೆಚ್‌ಡಿಕೆಗೆ ಬೇಗ ಅರ್ಥವಾಗಲಿ ಎಂದರು.

ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನ ಇವತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಂದ ಆಗುತ್ತಿದೆ. ಇವರು ಒಂದು ಸಮುದಾಯವನ್ನು ಮೆಚ್ಚಿಸಲು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಉಳಿಗಾಲವಿಲ್ಲ ಎಂದು ನಂಬಿದವ ನಾನು. ಹಾಗಾಗಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದರು.

ನನಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿ ಗೆಲ್ಲಿಸೋದಾಗಿ ಭರವಸೆ ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಂಬಿಸಿ ಮೋಸ ಮಾಡಿದರು. ಡಿವಿ‌ಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಅವರಿಗೂ ಕೂಡಾ ನನ್ನಂತೆ ದ್ರೋಹವಾಯಿತು. ಇದಕ್ಕೆಲ್ಲಾ ಕಾರಣರಾದವರ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದರು.

ಜಾತಿ ರಾಜಕಾರಣಕ್ಕೆ ಒತ್ತು ನೀಡಿ ಚುನಾವಣೆಗೆ ಸಾಧು ಸಂತರನ್ನು ಮಧ್ಯಕ್ಕೆ ತರೋದು ತುಂಬಾ ನೋವಿನ ಸಂಗತಿ. ಇದನ್ನು ರಾಷ್ಟ್ರ ಭಕ್ತಬಳಗ ಉಗ್ರವಾಗಿ ಖಂಡಿಸುತ್ತದೆ. ಹಿಂದುತ್ವಕ್ಕೆ ಒತ್ತು ಕೊಡುತ್ತ ಬಂದಿದೆ, ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ನನ್ನ ಕೂಗು ಕೇಂದ್ರವನ್ನು ತಲುಪಿದೆ. ಇವತ್ತು ಕೂಡ ಫೋನ್ ಬಂದಿದೆ. ಅಮಿತ್ ಶಾಗೆ ಅವರಿಗೂ ನನ್ನ ಮಾತು ತಲುಪಿದೆ ಎಂದ ಅವರು,
ಎರಡು ಮೂರು ದಿನದಲ್ಲಿ ನನ್ನ ಚಿಹ್ನೆ ಅಂತಿಮವಾಗುತ್ತದೆ. ಚಿಹ್ನೆ ವಿಚಾರದಲ್ಲಿ ನನಗೆ ತಕರಾರು ಇದೆ. ಚುನಾವಣೆಯಲ್ಲಿ ಸಿಂಹ ಹುಲಿ ತರದ ಚಿಹ್ನೆ ಬೇಕು. ಹುರುಪು ಬರುವಂತಹ ಚಿಹ್ನೆ ಬೇಕು ಅಂತ ಬೇಡಿಕೆಯಿಟ್ಟು ಪತ್ರ ಬರೆಯುತ್ತೇನೆ. ಈಗ ಕೊಟ್ಟಿರೋ ಪಟ್ಟಿಯಲ್ಲಿ ಯಾವುದು ಒಳ್ಳೆ ಚಿಹ್ನೆಗಳಿಲ್ಲ. ಹಾಗಾಗಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಗೂಳಿಹಟ್ಟಿ ಶೇಖರ, ಶ್ರೀಧರ ಬಿಜೂರು, ನಾರಾಯಣ ಗುಜ್ಜಾಡಿ, ಗೋಪಾಲ ನಾಡ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!