spot_img
Thursday, December 5, 2024
spot_img

ಲೋಕಸಭಾ ಚುನಾವಣೆ : ಮೋದಿ ಕಾರ್ಡ್ ಬಲ | ಸಮೀಕ್ಷೆಗಳನ್ನು ಸುಳ್ಳಾಗಿಸಬಹುದೇ ಪ್ರತಿಪಕ್ಷಗಳು ?

ದೊಡ್ಡ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ಇತ್ತೀಚೆಗೆ(ಏಪ್ರಿಲ್ 6 ರಂದು) ತನ್ನ 44ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ. ಬಿಜೆಪಿಯ ಸಂಸ್ಥಾಪನಾ ದಿನದ ಥೀಮ್ “ಫಿರ್ ಏಕ್ ಬಾರ್ ಮೋದಿ ಸರ್ಕಾರ್”. ಹ್ಯಾಟ್ರಿಕ್‌ ಸಾಧನೆಯ ಬೆನ್ನೇರಿದ ಬಿಜೆಪಿ ದೇಶದಾದ್ಯಂತ ಚುನಾವಣಾ ಗುಂಗಿನಲ್ಲಿದೆ. ದೇಶದಾದ್ಯಂತ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವಗಳಿಂದ ʼಗೌಣವನ್ನಾಗಿಸಲ್ಪಟ್ಟʼ ಆಡಳಿತ ವಿರೋಧಿ ಅಲೆಯ ನಡುವೆ ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವುದಕ್ಕೆ ಈ ಚುನಾವಣೆ ಕೂಡ ಒಂದು ಹಂತಕ್ಕೆ ನಿರ್ಣಾಯಕವಾಗಲಿದೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಕೋಟೆ ಎಂದು ಬಣ್ಣಿಸಲ್ಪಟ್ಟ ವಿಚಾರ ಎಷ್ಟು ಸತ್ಯವಾಗಲಿದೆ ಎಂಬುದನ್ನು ನೋಡಲು ಇದು ಸೂಕ್ತ ಸಂದರ್ಭವಾಗಿದೆ.

ಗುಜರಾತ್‌ ಮಾಡೆಲ್‌ ಎಂಬ ಅಸ್ತ್ರ ಮುಂದಿಟ್ಟುಕೊಂಡು 2014ರಲ್ಲಿ ಚುನಾವಣೆ ಎದರಿಸಿದ ಬಿಜೆಪಿ, ಆ ಚುನಾವಣೆಯಲ್ಲಿ ದೇಶದಾದ್ಯಂತ ಭಾರಿ ದೊಡ್ಡ ಮಟ್ಟದ ರಾಜಕೀಯ ಹವಾದೊಂದಿಗೆ ಬರೋಬ್ಬರಿ 282 ಕ್ಷೇತ್ರಗಳನ್ನು ಜಯಿಸುವುದರೊಂದಿಗೆ ಶೇ. 31ರಷ್ಟು ಮತಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಮೋದಿ ಹವಾ, ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ಧು, ಪುಲ್ವಾಮ ಅಟ್ಯಾಕ್ ವಿಷಯಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಸ್ತ್ರಗಳನ್ನಾಗಿ ಬಿಜೆಪಿ ಬಳಸಿಕೊಂಡಿತು. 2019ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ 303 ಕ್ಷೇತ್ರಗಳನ್ನು ಗೆಲ್ಲುವುದರೊಂದಿಗೆ ಬರೋಬ್ಬರಿ ಶೇ. 37 ರಷ್ಟು ಹೆಚ್ಚಿನ ಮತಗಳ ಹಂಚಿಕೆಯೊಂದಿಗೆ ದಾಖಲೆ ಬರೆಯಿತು.

  1. ದೇಶದಾದ್ಯಂತ ಪ್ರಬಲಗೊಂಡ ಬಿಜೆಪಿ :

ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ, ಆದರೆ ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ದುರ್ಬಲವಾಗಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದು ನಿಜವಾಗಿದ್ದರೂ, ನಾಲ್ಕೂ ಭಾಗಗಳಲ್ಲಿಯೂ ಬಿಜೆಪಿ ತನ್ನ ಕಾರ್ಯಕರ್ತರ ಸಂಖ್ಯಾಬಲವನ್ನು ಈಗ ವೃದ್ಧಿಸಿಕೊಂಡಿದೆ ಎನ್ನುವುದು ಅಷ್ಟೇ ಸತ್ಯ. ಬಿಜೆಪಿ ಪೂರ್ವ ಹಾಗೂ ದಕ್ಷಿಣ ಭಾಗಗಳಲ್ಲಿಯೂ ಅನೇಕ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ, ಅವುಗಳು ಪ್ರಭಾವ ಬಿಜೆಪಿಗೆ ಸಹಜವಾಗಿ ಬಲ ತಂದಿದೆ.

ಉತ್ತರ ಮತ್ತು ಪಶ್ಚಿಮವು ಬಿಜೆಪಿಯ ಭದ್ರಕೋಟೆಗಳಾಗಿವೆ, ಅಲ್ಲಿ ಅದು ಕ್ರಮವಾಗಿ 191 ಕ್ಷೇತ್ರಗಳಲ್ಲಿ 155 (ಶೇ. 81 ರಷ್ಟು ಸ್ಟ್ರೈಕ್ ರೇಟ್ ನಲ್ಲಿ ಮತ ಹಂಚಿಕೆ ) ಮತ್ತು 78 ರಲ್ಲಿ 51 ಕ್ಷೇತ್ರಗಳನ್ನು ( ಶೇ.65ರಷ್ಟು ಸ್ಟ್ರೈಕ್ ರೇಟ್ ನಲ್ಲಿ ಮತ ಹಂಚಿಕೆ) ಗೆದ್ದಿದೆ. ಆದರೆ, ಪೂರ್ವ ಮತ್ತು ದಕ್ಷಿಣದಲ್ಲಿ ಬಿಜೆಪಿಯ ಸಾಧನೆ ದುರ್ಬಲವಾಗಿತ್ತು. ಪೂರ್ವದಲ್ಲಿ 142 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳನ್ನು ಗಳಿಸಿದೆ. ಅಂದರೇ, ಶೇ. 25ರಷ್ಟು ಮತ ಹಂಚಿಕೆ. ಇನ್ನು ದಕ್ಷಿಣ ಭಾಗದಲ್ಲಿ 132 ಕ್ಷೇತ್ರಗಳ ಒಟ್ಟು ಪೈಕಿ ಕೇವಲ 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಎರಡು ಭಾಗಗಳು, ವಿಶೇಷವಾಗಿ ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳು 2024ರಲ್ಲಿ ಬಿಜೆಪಿಯ ಕೇಂದ್ರಬಿಂದುಗಳಾಗಿವೆ. ಮತ್ತು ದಕ್ಷಿಣದಲ್ಲಿ ಬಿಜೆಪಿ ʼಮಿಷನ್‌ 50ʼ  ಬೆನ್ನೇರಿದೆ.

  1. 2019ರ ಚುನಾವಣೆಯಲ್ಲಿ ಗೆಲುವಿನ ಪ್ರಮಾಣ :

2019ರ ಚುನಾವಣೆಯಲ್ಲಿ, ಬಿಜೆಪಿ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ 224 ಕ್ಷೇತ್ರಗಳನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲಿ ಅಂದರೇ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗಳಲ್ಲಿ ಬಿಜೆಪಿ ಶೇ. 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮತ ಹಂಚಿಕೆಯೊಂದಿಗೆ ತನ್ನ ಎಲ್ಲಾ ಕ್ಷೇತ್ರಗಳನ್ನು ಗೆದ್ದರೆ, ಆರು ಇತರ ರಾಜ್ಯಗಳಲ್ಲಿ ಅಂದರೇ, ಬಿಹಾರ, ಕರ್ನಾಟಕ, ಅಸ್ಸಾಂ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶ ನಾಲ್ಕನೇ ಮೂರರಷ್ಟು ಮತಗಳೊಂದಿಗೆ ಗೆದ್ದಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿಯೂ ಸುಮಾರು ಮೂರನೇ ಎರಡರಷ್ಟು ಮತಗಳೊಂದಿಗೆ ಜಯ ಸಾಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಕೇವಲ ಕಾಲು ಭಾಗದಷ್ಟು ಮತ ಪ್ರಮಾಣ ಹಾಗೂ ತ್ರಿಕೋನ ಸ್ಪರ್ಧೆಯನ್ನು ಕಂಡ ಒಡಿಶಾದಲ್ಲಿ, ಬಿಜೆಪಿ ಶೇ.50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಯಾವುದೇ ಕ್ಷೇತ್ರಗಳು ಇಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ.

ಒಟ್ಟು 303 ಕ್ಷೇತ್ರಗಳ ಪೈಕಿ 226ರಲ್ಲಿ ಬಿಜೆಪಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಪೈಕಿ 105 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 3 ಲಕ್ಷ ಮತಗಳನ್ನು ಮೀರಿದೆ.  40 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ಅಂಚು 50,000 ಮತಗಳಿಗಿಂತ ಕಡಿಮೆ ಇತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಅಲ್ಲದೆ, ಬಿಜೆಪಿ ಶೇ.50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮತ ಪ್ರಮಾಣದೊಂದಿಗೆ ಗೆದ್ದ 224 ಕ್ಷೇತ್ರಗಳಲ್ಲಿ 153 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅದರ ಎದರುರಾಳಿ ಪಕ್ಷವಾಗಿತ್ತು. ಒಟ್ಟಾರೆಯಾಗಿ, 2019 ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ 190 ನೇರನೇರಾ ಸ್ಪರ್ಧೆಗಳಲ್ಲಿ, ಬಿಜೆಪಿ 175 ಮತ್ತು ಕಾಂಗ್ರೆಸ್ ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು. ಬಿಜೆಪಿ ಗೆದ್ದ 175 ಕ್ಷೇತ್ರಗಳಲ್ಲಿ 153 ಕ್ಷೇತ್ರಗಳಲ್ಲಿ ಬಿಜೆಪಿ ಶೇ.50ಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿವೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. 185 ಕ್ಷೇತ್ರಗಳ ಮತ್ತೊಂದು ಸೆಟ್‌ನಲ್ಲಿ ಬಿಜೆಪಿ 128 ಕ್ಷೇತ್ರಗಳನ್ನು ಗೆದ್ದಿದೆ.

ಅಷ್ಟೇ ಅಲ್ಲ. ಬಿಜೆಪಿಯು ಶೇ. 40-50ರಷ್ಟು ಮತಗಳನ್ನು ದಾಖಲಿಸಿದ 101 ಕ್ಷೇತ್ರಗಳಲ್ಲಿಯೂ ಸಹ, 79 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಸಾಧಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಪ್ರಮುಖ ಎದುರಾಳಿಯಾದ ಕಾಂಗ್ರೆಸ್ ಕೇವಲ 19 ಕ್ಷೇತ್ರಗಳನ್ನು ಗೆದ್ದಿದ್ದು, ಗೆದ್ದ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳೊಂದಿಗೆ ಗೆದ್ದಿದೆ ಎಂದು ದಾಖಲೆಗಳು ಉಲ್ಲೇಖಿಸುತ್ತವೆ.

  1. ಮ್ಯಾಜಿಕ್‌ ನಂಬರ್‌ : ಸಲೀಸಾಗಿ ಮೀರುವ ನಂಬಿಕೆಯಲ್ಲಿ ಬಿಜೆಪಿ :

2014 ಮತ್ತು 2019 ರಲ್ಲಿ ಬಿಜೆಪಿ ಗೆದ್ದ 247 ಕ್ಷೇತ್ರಗಳನ್ನು ಬಿಜೆಪಿಯ ಪ್ರಬಲ ಕ್ಷೇತ್ರಗಳೆಂದು ಪರಿಗಣಿಸಬಹುದು. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ ಒಂದು ಹಂತದಲ್ಲಿ ಕ್ಷೇತ್ರದಲ್ಲಿನ ಹಿಸ್ಟಾರಿಕಲ್‌ ಟ್ರೆಂಡ್‌ ನ ಆಧಾರದ ಮೇಲೆ, 95 ಕ್ಷೇತ್ರಗಳನ್ನು ಸತತ ಮೂರು ಬಾರಿ ಗೆದ್ದಿದೆ ಮತ್ತು ಬಿಜೆಪಿ ಒಟ್ಟು ಜಯ ಗಳಿಸಿದ ಕ್ಷೇತ್ರಗಳ ಪೈಕಿ ಸತತವಾಗಿ ಎರಡು ಬಾರಿ ಗೆದ್ದಿರುವ 167 ಕ್ಷೇತ್ರಗಳಿವೆ. ಹೀಗಾಗಿ ಒಟ್ಟು 262 ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ನಿರೀಕ್ಷೆ ಇದೆ. ಈ ನಿರೀಕ್ಷೆ ಮ್ಯಾಜಿಕ್‌ ನಂಬರ್‌  272 ಕ್ಕಿಂತ ಕೇವಲ 10 ಕಡಿಮೆ ಅಷ್ಟೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ದಾಖಲೆಗಳೇ ಬಿಜೆಪಿಗೆ ಈ ಚುನಾವಣೆಯನ್ನು ನಿರಾಯಾಸವಾಗಿ ಎದರಿಸುವ ಹಾಗೆ ಮಾಡಿದೆ ಎನ್ನುವುದರಲ್ಲಿ ತಪ್ಪಿಲ್ಲ.

ಮಾತ್ರವಲ್ಲದೆ, ಬಿಜೆಪಿ 2019ರ ಚುನಾವಣೆಯಲ್ಲಿ 72 ಕ್ಷೇತ್ರಗಳಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಆ ಪೈಕಿ 17 ಕ್ಷೇತ್ರಗಳಲ್ಲಿ ಕೇವಲ ಶೇ. 5ಕ್ಕಿಂತ ಕಡಿಮೆ ಅಂತರದಿಂದ ಸೋತಿದೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. 2019 ರಲ್ಲಿ, ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ 35 ಕ್ಷೇತ್ರಗಳನ್ನು ಕಳೆದುಕೊಂಡಿತು. ಇವುಗಳಲ್ಲಿ 20 ಕ್ಷೇತ್ರಗಳು ಉತ್ತರ ಪ್ರದೇಶ ಮತ್ತು ಬಿಹಾರದ ಭದ್ರಕೋಟೆಗಳಲ್ಲಿವೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

  1. ಬಲವಾದ ಮೈತ್ರಿಯೊಂದಿಗೆ ಬಿಜೆಪಿ :

2019ರ ಲೋಕಸಭಾ ಚುನಾವಣೆಗಿಂತ ಈ ಚುನವಾಣೆಯಲ್ಲಿ ಬಿಜೆಪಿ ಕೆಲವು ಪ್ರಬಲ ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಜನತಾ ದಳ (ಜಾತ್ಯತೀತ) (ಜೆಡಿ-ಎಸ್), ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ), ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮತ್ತು ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದೊಂದಿಗೆ ಮೈತ್ರಿ ಸಾಧಿಸಿದೆ. ಆದರೇ, ಈ ಮೈತ್ರಿಗಳು ಎಷ್ಟರ ಮಟ್ಟಿಗೆ ಕೈ ಹಿಡಿಯಲಿವೆ, ಯಶಸ್ವಿಯಾಗಲಿವೆ ಎನ್ನುವುದು ಎರಡನೇ ಹಂತದ ಚರ್ಚೆ. ಅದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ನಾಲ್ಕು ರಾಜ್ಯಗಳು 181 ಕ್ಷೇತ್ರಗಳನ್ನು ಒಳಗೊಂಡಿವೆ.

  1. ಮೋದಿ ಕಾರ್ಡ್

ಎಂದಿನಂತೆ ಈ ಭಾರಿಯ ಚುನಾವಣೆಯನ್ನೂ ಬಿಜೆಪಿ ಮೋದಿ ನಾಮವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯ ಪ್ರಣಾಳಿಕೆಯಿಂದ ಹಿಡಿದು ಎಲ್ಲೆಲ್ಲೂ ಮೋದಿ ಮೋದಿ ಮೋದಿ. ಬಿಜೆಪಿಯ ಅಭ್ಯರ್ಥಿಗಳು, ಕಾರ್ಯಕರ್ತರು ಪರೋಕ್ಷವಾಗಿ ಪ್ರಜಾಪ್ರಭುತ್ವ ಭಾರತದಲ್ಲಿ ʼಪ್ರಭುತ್ವʼ ರಾಜಕೀಯವನ್ನು ಒಪ್ಪಿಕೊಂಡಿದ್ದಾರೆ. ಸಹಜವಾಗಿ ಆ ದೊರೆಗೆ ಬಹುಪರಾಕ್‌ ಹೇಳುವುದು ಅನಿವಾರ್ಯವಾಗಿದೆ. ಆಡಳಿತಾರೂಢ ಪಕ್ಷ ಬಿಜೆಪಿ ಮಾಧ್ಯಮಗಳನ್ನು ತನ್ನ ತೆಕ್ಕೆಯೊಳಗೆ ಹಾಕಿಕೊಂಡು ಪ್ರತಿಪಕ್ಷಗಳ ಪ್ರಚಾರವನ್ನು ಗೌಣವನ್ನಾಗಿಸುವಲ್ಲಿ ಯಶಸ್ವಿಯಾಗಿವೆ. ಕಾಂಗ್ರೆಸ್‌ನ ರಾಹುಲ್‌ ಗಾಂಧಿಯ ಪ್ರಚಾರದಲ್ಲಿಯೂ ಜನರು ಸಾಗರೋಪಾದಿಯಲ್ಲಿ ಸೇರುತ್ತಿದ್ದರೂ ಅದನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ಆಡಳಿತ ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಪ್ರಶ್ನಿಸಬೇಕಿರುವ ಮಾಧ್ಯಮಗಳು ಹೊಗಳುಭಟರ ಸ್ಥಾನ ಅಲಂಕರಿಸಿರುವುದು ವಿಷಾದನೀಯ. ಕಾಂಗ್ರೆಸ್‌ ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಹುರುಪಿನಲ್ಲಿದೆ. ಮೋದಿ ಗ್ಯಾರಂಟಿಯ ಎದುರು ಕಾಂಗ್ರೆಸ್‌ ಪಂಚ ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿದೆ. ʼಇಂಡಿಯಾʼ ಮೈತ್ರಿಕೂಟವೂ ಮೋದಿ ಕಾರ್ಡ್‌ ಎದುರು ಬಲವಾಗಿಯೇ ಧ್ವನಿ ಎತ್ತಿದೆ. ಇವೆಲ್ಲವೂ ವರ್ಕೌಟ್‌ ಆದರೇ, ಬಿಜೆಪಿಯ ಲೆಕ್ಕಚಾರ ಅಡಿಮೇಲಾಗಬಹುದು ಎಂಬ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿವೆ.

ರಾಮ ಮಂದಿರ (ಅಪೂರ್ಣ ಮಂದಿರ)ಲೋಕಾರ್ಪಣೆಯ ಕಾರಣದಿಂದ ಈ ಚುನಾವಣೆಯಲ್ಲಿಯೂ ಬಿಜೆಪಿಯೇ  ಮೇಲುಗೈ ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ. ಆದರೂ ಪ್ರತಿಪಕ್ಷಗಳು ಈ ಸಮೀಕ್ಷೆಯನ್ನು ಸುಳ್ಳಾಗಿಸಬಹುದೇ ? ಎಂಬ ಪ್ರಶ್ನೆಯೂ ಮುಂದಿದೆ.

-ಶ್ರೀರಾಜ್‌ ವಕ್ವಾಡಿ  

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!