spot_img
Friday, January 17, 2025
spot_img

ಬಿಜೆಪಿಯವರು ಹೇಳಿದ್ದನ್ನು ಮಾಡಿದ್ದಿದ್ದರೇ, ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ! : ಜೆಪಿ ಹೆಗ್ಡೆ

ಜನಪ್ರತಿನಿಧಿ (ಕೋಟೇಶ್ವರ) : ಅವಿಭಜಿತ  ದಕ್ಷಿಣ ಕನ್ನಡದ ಭಾಗವಾಗಿದ್ದ ಉಡುಪಿಯನ್ನು ಜಿಲ್ಲೆಯಾಗಿ ಪರಿವರ್ತಿಸಿ ಸರ್ಕಾರವನ್ನು ನಿಮ್ಮ ಬಳಿಗೆ ತಂದು ನಿಮ್ಮ ಕೆಲಸಗಳು ಸುಲಭವಾಗುವ ಹಾಗೆ ಮಾಡಿದ ತೃಪ್ತಿ ಇದೆ. ಅಭಿವೃದ್ಧಿಯ ಬಗ್ಗೆ ಮಾತ್ರ ಮಾಡುತ್ತೇನೆ, ನಾನು ಮಾಡಿದ ಕೆಲಸವನ್ನೇ ಮುಂದಿಟ್ಟು ನಾನು ಮತ ಯಾಚಿಸುತ್ತೇನೆ, ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಕೋಟೇಶ್ವರ ಪೇಟೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಅಗತ್ಯವಿರುವ ಮೆಡಿಕಲ್ ಕಾಲೇಜು ತರುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಚುನಾವಣೆಯಲ್ಲಿ ಗೆದ್ದರೇ ಆದ್ಯತೆಯಲ್ಲಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು ತರುವಂತಹ ಕೆಲಸವನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.  ಮೀನುಗಾರರಿಗೆ, ಅಡಿಕೆ ಬೆಳೆಗಾರರಿಗೆ ನೀಡಿದ ಯೋಜನೆಗಳನ್ನು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆಂದು ಭಾವಿಸುತ್ತೇನೆ ಎಂದರು.

ಅವರು(ಬಿಜೆಪಿಯವರು) ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಕೊಡ್ತೇವೆ ಎಂದರು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು, ಅವರು(ಬಿಜೆಪಿ) ಹೇಳಿದ ಹಾಗೆ ಮಾಡಿದ್ದಿದ್ದರೇ ಈಗಾಗಲೇ ಹತ್ತು ವರ್ಷಗಳಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು ಆದರೇ ಅವರು ಹೇಳಿದ್ದನ್ನು ಯಾವುದೂ ಮಾಡುವುದಿಲ್ಲ. ಜನರು ಅವರನ್ನು ಪ್ರಶ್ನಿಸಲೇ ಇಲ್ಲ. ಇಲ್ಲಿನ ಬಿಜೆಪಿ ನಾಯಕರು, ಸಂಸದರು ಜನರ ಸಂಪರ್ಕಕ್ಕೆ ಸಿಗುವುದೇ ಇಲ್ಲ. ಜನರು ಯಾರನ್ನು ಕೇಳಬೇಕು ..? ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಈ ಭಾರಿಯ ಚುನಾವಣೆಗೆ 25 ಲಕ್ಷ ಜೀವ ವಿಮೆಯ ಭರವಸೆಯನ್ನು ನಮ್ಮ ಕಾಂಗ್ರೆಸ್ ಕೊಟ್ಟಿದೆ. ನಮ್ಮದು ಭರವಸೆ ಮಾತ್ರವಲ್ಲ. ಅಧಿಕಾರಕ್ಕೆ ಕಾಂಗ್ರೆಸ್ ಪಕ್ಷ ಬಂದರೇ ನೀಡಿದ ಭರವಸೆಯನ್ನು ಕಾರ್ಯರೂಪಕ್ಕೂ ತರುತ್ತೇವೆ. ಅದಕ್ಕೆ ದೊಡ್ಡ ಉದಾಹರಣೆಯೆ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಈ ಚುನಾವಣೆ ಬದುಕು ಮತ್ತು ಭಾವನೆಗಳನ್ನು ಕೆರಳಿಸುವ ಸಿದ್ಧಾಂತದ ನಡುವೆ ನಡೆಯುವ ಚುನಾವಣೆ. ಬದುಕನ್ನು ಕೊಟ್ಟ ಪಕ್ಷಕ್ಕೆ ಮತದಾನ ಮಾಡಬೇಕೋ ಅಥವಾ ಭಾವನೆಗಳನ್ನು ಕೆರಳಿಸುವ ಪಕ್ಷಕ್ಕೆ ಮತದಾನ ಮಾಡಬೇಕೋ ಎಂದು ಪ್ರಾಮಾಣಿಕವಾಗಿ ಪ್ರತಿ ಮತದಾರ ನಿರ್ಧರಿಸುವ ತುರ್ತಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಮುಂದುವರಿಯಬೇಕಾದರೇ ನಿಮ್ಮ ಮತದಾನ ಕಾಂಗ್ರೆಸ್ ಗೆ ಮಾಡಬೇಕಿದೆ, ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಂದಾಪುರ ಬ್ಲಾಕ್ ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ,‌ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಅಶೋಕ್‌ ಪೂಜಾರಿ ಬೀಜಾಡಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!