spot_img
Thursday, December 5, 2024
spot_img

ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ, ಜಾತಿ ಮತಗಳ ವಿಭಜನೆ ಖಚಿತ !? | ಶೇ.60 ರಷ್ಟು ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿದ್ದಾರೆ : ಈಶ್ವರಪ್ಪ

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಹೊಸ ಕುತೂಹಲಕ್ಕೆ ಕಾರಣವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದ್ವಯರ ಎರಡನೇ ತಲೆಮಾರಿನ ನೇರಾನೇರ ಹಣಾಹಣಿಗೆ ಮತ್ತೊಮ್ಮೆ ಸಾಕ್ಷಿಯಾಗುವುದರೊಂದಿಗೆ ಬಿಜೆಪಿಯಿಂದ ತಮ್ಮ ಮಗನಿಗೆ ಟಿಕೇಟ್‌ ತಪ್ಪಿರುವ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಮಗ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ ವಿಜಯೇಂದ್ರ ಮೇಲೆ ಸಿಡಿದೆದ್ದ ಮಾಜಿ ಸಚಿವ ಈಶ್ವರಪ್ಪ ಅವರ ಬಂಡಾಯ ಸ್ಪರ್ಧಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉದ್ದಗಲಕ್ಕೂ ಪ್ರಚಾರದಲ್ಲಿ ತೊಡಗಿರುವ ಈಶ್ವರಪ್ಪ ಹಿಂದೂ ಮತಗಳನ್ನು ಪರಿಣಾಮಕಾರಿಯಾಗಿ ಈಗಾಗಲೇ ವಿಭಜಿಸಿದ್ದಾರೆ ಎಂಬಂತೆ ಕಾಣಿಸುತ್ತಿದ್ದು, ಬೈಂದೂರು ಭಾಗದಲ್ಲಿ ಪ್ರಭಾವಿ ಹಿಂದೂ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿರುವ ಶ್ರೀಧರ್‌ ಬಿಜೂರ್‌ ಹಾಗೂ ಪ್ರಮುಖರು ಈಶ್ವರಪ್ಪ ಬಣಕ್ಕೆ ಸೇರ್ಪಡೆಗೊಂಡು ಅವರ ಪರ ಪ್ರಚಾರದಲ್ಲಿದ್ದಾರೆ. ಈಶ್ವರಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಹಿಂದೂ ಕಾರ್ಯಕರ್ತರು ಬಿಜೆಪಿ ಬಗ್ಗೆ ನೀಡುತ್ತಿರುವ ಹೇಳಿಕೆಗಳು ನಿಜಕ್ಕೂ ಆಶ್ಚರ್ಯಕರವಾಗಿದೆ.

ಮೂಲ ಬಿಜೆಪಿಗರನ್ನು ಈಶ್ವರಪ್ಪ ಅತ್ಯಂತ ಕಡಿಮೆ ಅವಧಿಯಲ್ಲಿ ಬಿ. ವೈ ರಾಘವೇಂದ್ರ ಅವರ ವಿರುದ್ಧವಾಗಿ, ಬಿ. ಎಸ್‌ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ಧ ನಿಲ್ಲಿಸಿದ್ದಾರೆ ಎನ್ನುವ ರಾಜಕೀಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಇತ್ತ, ಬಿ. ವೈ ರಾಘವೇಂದ್ರ ಅವರು ಬಹಿರಂಗವಾಗಿಯೇ ಈಶ್ವರಪ್ಪ ಅವರ ಸ್ಪರ್ಧೆಯಿಂದ ಕ್ಷೇತ್ರದಿಂದ ಬಿಜೆಪಿಗೆ ಯಾವ ವ್ಯತ್ಯಾಸವಾಗುವುದಿಲ್ಲ, ಯುವಕರೆಲ್ಲಾ ಮೋದಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿರುವ ಗೀತಾ ಶಿವರಾಜ್‌ ಕುಮಾರ್‌ ಬಣ ಹಳ್ಳಿಹಳ್ಳಿಗೆ ಕಾಂಗ್ರೆಸ್‌ ಗ್ಯಾರಂಟಿಗಳನ್ನು ತಲುಪಿಸುವುದರ ಜೊತೆಗೆ ಮೂಲಕ ಹೊಸ ಹುಮ್ಮಸ್ಸಿನಲ್ಲಿದೆ.

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಿಂದ ಶಿವಮೊಗ್ಗದಲ್ಲಿನ ಜೆಡಿಎಸ್‌ನ ನಿಷ್ಠಾವಂತ ಮತಗಳು ಬಿಜೆಪಿ ಮೇಲಿನ ಸಿಟ್ಟಿನಿಂದ ಈ ಬಾರಿ ಕಾಂಗ್ರೆಸ್‌ ಕಡೆಗೆ ವಾಲಬಹುದೆಂಬ ವಿಶ್ಲೇಷಣೆಯೂ ಇದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪರ ಜಗಳದಿಂದ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಮೋದಿಯವರನ್ನು ಬೆಂಬಲಿಸುವ ಮತಗಳು ಬದಲಾಗಲ್ಲ, ಬದಲಾದರೇ ಕ್ಷೇತ್ರದ ಎಲ್ಲಾ ಭಾಗಗಳಿಂದ ಜಾತಿ ಮತಗಳೇ ವಿಭಜನೆಯಾಗಬೇಕಷ್ಟೇ ಎನ್ನುವ ವಿಶ್ಲೇಷಣೆ ರಾಜಕೀಯ ವಲಯದಲ್ಲಿವೆ.

ಈಶ್ವರಪ್ಪ ಯಾವ ಸಂಧಾನಕ್ಕೂ ಒಪ್ಪಲಿಲ್ಲ. ತಮ್ಮ ಉತ್ತರಾಧಿಕಾರಿಗೆ ಟಿಕೇಟ್‌ ನಿರಾಕರಿಸಿದ ಕಾರಣದಿಂದಲೇ ನೇರಾನೇರ ರಾಜ್ಯ ಬಿಜೆಪಿಯಲ್ಲಿನ ವಂಶಾಡಳಿತದ ವಿರುದ್ಧವೇ ಬಂಡಾಯ ಎದ್ದಿರುವುದು ವಿಪರ್ಯಾಸವೇ ಸರಿ. ಉಚ್ಛಾಟನೆ ಮಾಡಲಿ ಎಂದೇ ಕಾಯುತ್ತಿದ್ದೇನೆ, ಶೇ. 60 ರಷ್ಟು ಕಾರ್ಯಕರ್ತರು ನನ್ನ ಪರವಾಗಿಯೇ ಇದ್ದಾರೆ ಎಂದು ಬಹಿರಂಗವಾಗಿ ಹೇಳಿ ನಾಮಪತ್ರ ಸಲ್ಲಿಕೆಗೂ ಮುಂದಾಗಿರುವುದು ಈ ಭಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣವನ್ನು ಹುಬ್ಬೇರಿಸಿ ನೋಡುವಂತೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!