Sunday, September 8, 2024

ಲೋಕಸಭಾ ಚುನಾವಣೆ : ನಮೋ ಪ್ರಧಾನಿಯಾದ ಮೇಲೆ ಭಾರತದ ಬಂಡವಾಳ ವೆಚ್ಚ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಚೇತರಿಕೆ ! : ರಾಜ್ಯ ಬಿಜೆಪಿ

ಜನಪ್ರತಿನಿಧಿ (ಬೆಂಗಳೂರು) : ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ರಾಜ್ಯ ಬಿಜೆಪಿ ಕೇಂದ್ರ ಬಿಜೆಪಿಯನ್ನು ಸಾಧನೆಯನ್ನು ನಿರಂತರವಾಗಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದರ ಜೊತೆಗೆ ಎದುರಾಗಿ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟದ ತೆಗಳಿಕೆಯಲ್ಲಿ ತೊಡಗಿದೆ.

ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ತನ್ನ ಬೆನ್ನನ್ನೇ ತಾನೇ ತಟ್ಟಿಕೊಂಡ ಬಿಜೆಪಿ, ಒಂದು ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಅಥವಾ ಮಜಬೂತಾಗಿದೆ ಎಂಬುದನ್ನು ಪರಿಗಣಿಸಲು ಇರುವ ಪ್ರಮುಖ ಮಾನದಂಡವೇ ಬಂಡವಾಳ ವೆಚ್ಚದ ಅಂಕಿ ಅಂಶ ಹಾಗೂ ಆ ದೇಶದ ಮೂಲಸೌಕರ್ಯ ಅಭಿವೃದ್ಧಿ. ಯುಪಿಎ ಸರ್ಕಾರದ 2004-2014 ರ ಅವಧಿಯಲ್ಲಿ ಗಣನೀಯವಾಗಿ ನೆಲಕಚ್ಚಿದ್ದ ಭಾರತದ ಬಂಡವಾಳ ವೆಚ್ಚ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಚೇತರಿಕೆ ಕಂಡಿದ್ದು ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ಎಂದು ಹೇಳಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ಮೇಲಿನ ಭಾರತದ ಬಂಡವಾಳ ವೆಚ್ಚವಿದ್ದಿದ್ದು ಕೇವಲ 1.7%. ಆದರೆ 2014 ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 10 ವರ್ಷದ ಈ ಸುಲಲಿತ ಆಡಳಿತದಲ್ಲಿ ಭಾರತದ ಬಂಡವಾಳ ವೆಚ್ಚ ಗಮನಾರ್ಹವಾಗಿ ಸುಧಾರಣೆ ಕಂಡಿದ್ದು, ಪ್ರಸ್ತುತ ಬಂಡವಾಳ ವೆಚ್ಚ 3.2% ರಷ್ಟು. ಬಂಡವಾಳ ವೆಚ್ಚ ಹೆಚ್ಚಾದ ಕಾರಣ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಹೊಸ ಅಧ್ಯಾಯವೇ ಪ್ರಾರಂಭವಾಗಿದ್ದು, ಭಾರತ ಹಿಂದೆಂದೂ ಕಂಡು ಕೇಳರಿಯದಂತಹ ಅಭಿವೃದ್ಧಿ ಕಾರ್ಯಕರ್ಮಗಳಿಗೆ ಜ್ವಲಂತ ಸಾಕ್ಷಿಯಾಗಿದೆ ಎಂದು ಹೇಳಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿದ್ದ ವಿಮಾನ ನಿಲ್ದಾಣಗಳು ಕೇವಲ 74. ಇಂದಿನ ಮೋದಿ ಸರ್ಕಾರದಲ್ಲಿ ಭಾರತದಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಬರೋಬ್ಬರಿ 149. ಅಂದರೆ ಪ್ರಧಾನಿ ಮೋದಿಯವರು ತಮ್ಮ 10 ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ತನ್ನ 60 ವರ್ಷಗಳ ಆಡಳಿತದಲ್ಲಿ ನಿರ್ಮಿಸಿದ್ದ ಎರಡು ಪಟ್ಟು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ. “ಮೋದಿ ಹೈ ತೋ, ಮುಮ್ಕಿನ್‌ ಹೈ” ಅಂದರೆ ಇದೇ ನೋಡಿ.  ಭಾರತದಲ್ಲಿ ಬ್ರಿಟಿಷರ ಕಾಲದಿಂದಲೂ ರೈಲುಗಳು ಸಂಚರಿಸುತ್ತಿವೆ. ಆದರೆ ರೈಲ್ವೆ ಮೂಲಸೌಕರ್ಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ್ದು ಮಾತ್ರ ಮೋದಿ ಸರ್ಕಾರ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಜನ ರೈಲು ಹತ್ತಲು ಮೂಗು ಮುರಿಯುತ್ತಿದ್ದ ದಿನಗಳಿದ್ದವು, ಆದರೆ ಇಂದು ರೈಲು ಹಾಗೂ ರೈಲ್ವೆ ಮೂಲಸೌಕರ್ಯವನ್ನು ನೋಡಿ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರು ಎಂದು ಹೇಳಿದೆ.

ಯುಪಿಎ ಸರ್ಕಾರದ 2004-2014ರ ಅವಧಿಯಲ್ಲಿ ಪ್ರತಿ ದಿನ ಕೇವಲ 1.42 ಕಿ.ಮೀ ಮಾತ್ರ ರೈಲ್ವೆ ಹಳಿಗಳ ವಿದ್ಯುದೀಕರಣ ನಡೆಯುತ್ತಿತ್ತು. ಆದರೆ ಇಂದಿನ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿ ದಿನ 18 ಕಿ.ಮೀ. ವಿದ್ಯುದೀಕರಣ ನಡೆಯುತ್ತಿದ್ದು, 2014-2023 ರವರಗೆ ಭಾರತದಲ್ಲಿ ಬರೋಬ್ಬರಿ 40,000 ಕಿ.ಮೀ. ಹಳಿ ವಿದ್ಯುದೀಕರಣಗೊಂಡಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಹೊಸ ರೈಲ್ವೆ ಹಳಿಗಳು, ರೈಲ್ವೆ ಡಬ್ಲಿಂಗ್‌, ಗೇಜ್‌ ಪರಿವರ್ತನೆ ದಿನವೊಂದಕ್ಕೆ ಕೇವಲ 4.2 ಕಿ.ಮೀ.ನಂತೆ ಮಂದಗತಿಯಲ್ಲಿ ಸಾಗುತ್ತಿದ್ದವು. ಆದರೆ ಮೋದಿ ಸರ್ಕಾರದಲ್ಲಿ ಈ ವೇಗ ಮೂರು ಪಟ್ಟು ಹೆಚ್ಚಿದ್ದು ದಿನವೊಂದಕ್ಕೆ 14.4 ಕಿ.ಮೀ.ನಂತೆ ಹೊಸ ರೈಲ್ವೆ ಹಳಿಗಳು, ರೈಲ್ವೆ ಡಬ್ಲಿಂಗ್‌, ಗೇಜ್‌ ಪರಿವರ್ತನೆ ಕಾಮಗಾರಿಗಳು ಭರದಿಂದ ಸಾಗುತ್ತಿವೆ.

ಇನ್ನು ನಗರ ಪ್ರದೇಶಗಳ ಜೀವನಾಡಿಯಾಗಿರುವ ಮೆಟ್ರೋ ನಿರ್ಮಾಣದಲ್ಲಿಯೂ ಸಹ ಯುಪಿಎ ಸರ್ಕಾರ ಹಿಂದೆ ಬಿದ್ದಿತ್ತು. ಯುಪಿಎ ಅವಧಿಯಲ್ಲಿ ಭಾರತದಲ್ಲಿದ್ದು ಕೇವಲ 5 ನಗರಗಳಲ್ಲಿ 248 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಮೆಟ್ರೋ ರೈಲಿತ್ತು. ಆದರೆ ಮೋದಿ ಸರ್ಕಾರದಲ್ಲಿ ಭಾರತದ 20 ನಗರಗಳಲ್ಲಿ ಮೆಟ್ರೋ ಸೇವೆ ವಿಸ್ತಾರವಾಗಿದ್ದು ಬರೋಬ್ಬರಿ 905 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದೆ ಹಾಗೂ ಪ್ರತಿ ನಿತ್ಯ 6 ಕಿ.ಮೀ ಮೆಟ್ರೋ ಮಾರ್ಗ ಹೊಸದಾಗಿ ನಿರ್ಮಾಣವಾಗುತ್ತಿದೆ.

ಇನ್ನು ರಾಷ್ಟ್ರೀಯ ಹೆದ್ದಾರಿ, ಬಂದರು ನಿರ್ಮಾಣ ಹಾಗೂ ಜಲಸಾರಿಗೆಯಲ್ಲಿ ತ್ರಿವಿಕ್ರಮ ಮೆರೆದಿರುವ ಮೋದಿ ಸರ್ಕಾರ ಭಾರತದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿದ್ದ ಒಟ್ಟು ರಾಷ್ಟ್ರೀಯ ಹೆದ್ದಾರಿ ಕೇವಲ 91,287 ಕಿ.ಮೀ ಮಾತ್ರ, ಆದರೆ ಇಂದಿನ ಮೋದಿ ಸರ್ಕಾರದಲ್ಲಿ  ನಿರ್ಮಿಸಿರುವ ಒಟ್ಟು ರಾಷ್ಟ್ರೀಯ ಹೆದ್ದಾರಿ 1,46,145 ಕಿ.ಮೀ

ಕೇವಲ ಇದು ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಗ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ದಿನವೊಂದಕ್ಕೆ ಸರಾಸರಿ 4.2 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿತ್ತು, ಆದರೆ ಇಂದಿನ ಮೋದಿ ಸರ್ಕಾರದಲ್ಲಿ  ದಿನವೊಂದಕ್ಕೆ ಸರಾಸರಿ 14.4 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಾದ್ಯಂತ ಕೇವಲ 5 ಜಲಮಾರ್ಗಗಳಿದ್ದವು, ಆದರೆ ಮೋದಿ ಸರ್ಕಾರದಲ್ಲಿ ಜಲಮಾರ್ಗಗಳ ಸಂಖ್ಯೆ 111ಕ್ಕೆ ತಲುಪಿದ್ದು, ಜಲಸಾರಿಗೆಯಲ್ಲಿಯೂ ಸಹ ಮೋದಿ ಸರ್ಕಾರ ಕಮಾಲ್‌ ಮಾಡಿದೆ. ಹೀಗೆ ಪ್ರತಿ ವಲಯದಲ್ಲಿಯೂ ಮೋದಿ ಸರ್ಕಾರ ಅಭೂತಪೂರ್ವ ಸಾಧನೆಗೈದಿದ್ದು, ಭಾರತವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಸದೃಢ ಮತ್ತು ಸಮರ್ಥವಾಗಿ ಮುನ್ನಡೆಸುತ್ತಿದೆ ಎಂಬುದಕ್ಕೆ ಈ ಮೇಲಿನ ಅಂಕಿ ಅಂಶಗಳೇ ಸಾಕ್ಷಿ ಎಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!