Thursday, November 21, 2024

ಸ್ವರ್ಣನೂಪುರ ಕಲಾವಿದರ ಪ್ರಸ್ತುತಿಯ ‘ಅಮರ ಪಾರ್ಥಿ’

ಉಡುಪಿ ಜಿಲ್ಲಾ ಕನ್ನಡ ಪರಿಷತ್ ಕುಂದಾಪುರ ಘಟಕ ಇದರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುಂದಾಪುರದ ಕಲಾಮಂದಿರದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಆಂದಿನ ಪ್ರಸಂಗವೇ ಕುತೂಹಲದ ಕೇಂದ್ರಬಿಂದು. ಕಾರ್ಯಕ್ರಮ ಪೂರ್ವದಲ್ಲಿ ಯಕ್ಷಗಾನ ಅಭಿಮಾನಿಗಳಲ್ಲಿ ಒಂದಿಷ್ಟು ಕುತೂಹಲ ಮಡುಗಟ್ಟಿಸಿದ್ದು ಪ್ರಸಂಗ “ಅಮರ ಪಾರ್ಥಿ”. ಪಾತ್ರಗಳ ಹೆಸರನ್ನು ಕೂಡಾ ವಿಶೇಷವಾಗಿ ಕಾಣಿಸಲಾಗಿತ್ತು. ಕಾರ್ಯಕ್ರಮ ಆರಂಭದ ತನಕ ಕುತೂಹಲ ಉಳಿಸಿಕೊಂಡಿದ್ದು ಕೂಡಾ ಪ್ರದರ್ಶನದ ಯಶಸ್ಸಿನ ಒಂದಂಶ.

ಹವ್ಯಾಸಿ ಕಲಾವಿದರ ಪ್ರಸ್ತುತಿಯಲ್ಲಿ ಮೂಡಿಬಂದ “ಅಮರ ಪಾರ್ಥಿ” ಪ್ರತಿಯೊಬ್ಬ ಪಾತ್ರಧಾರಿಯು ಪ್ರಭುದ್ಧತೆಯಿಂದ ವೃತ್ತಿಪರ ಕಲಾವಿದರಿಗೆ ಸರಿ ಸಮಾನವಾಗಿ ವಿಜೃಂಭಿಸುವುದರ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವುದು ಸ್ವರ್ಣನೂಪುರ ಕಲಾತಂಡಕ್ಕೆ ಹೆಮ್ಮೆಯ ಗರಿ ಎನಿಸಿಕೊಂಡಿತು, ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಾಗೂ ಅವರ ಶಿಷ್ಯ ಪ್ರಶಾಂತ್ ಪೂಜಾರಿ ಪಡುಕೇರಿ ಕಾಣಿಸಿಕೊಂಡರೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಜನಾರ್ಧನ ಆಚಾರ್ಯ ಹಳ್ಳಾಡಿ ಹಾಗೂ ಬೆಳೆಯುತ್ತಿರುವ ಬಾಲ ಪ್ರತಿಭೆ ಅಗಸ್ತ್ಯ ಗುನಗ ಕುಮಟಾ ರಂಗದ ವೈಭವ ಹೆಚ್ಚಿಸಿದರು.ಪುಟಾಣಿ ಪ್ರತಿಭೆ ಅಗಸ್ತ್ಯ ಗುನಗ ಕುಮಟಾ ಚಂಡೆಯ ಪೆಟ್ಟುಗಳ ಮೂಲಕ ವಿಶೇಷವಾಗಿ ಗಮನ ಸಳೆದರು.

ಅಭಿಮನ್ಯುವಾಗಿ ಕಾಣಿಸಿಕೊಂಡ ವಿಘ್ನೇಶ್ ದೇವಾಡಿಗ ಹಾಗೂ ಅಕ್ಷಯ್ ಕೋಟೇಶ್ವರ ಚುರುಕಿನ ಅಭಿನಯದ ಮೂಲಕ ಭೇಷ್ ಎನಿಸಿಕೊಂಡರು. ಕಾಳಗದ ಅಭಿಮನ್ಯು ಪಾತ್ರವೇ ವೇಗ. ಇಲ್ಲೂ ಕೂಡಾ ಉಭಯ ಕಲಾವಿದರು ಸಮರ್ಥವಾಗಿ ಪಾತ್ರವನ್ನು ಕಟ್ಟಿಕೊಟ್ಟರು. ಕೌರವನಾಗಿ ಶಂಕರ್ ಪೂಜಾರಿ ಆನಗಳ್ಳಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಂಗದಲ್ಲಿ ಚಿಟ್ಟಾಣಿಯವರ ನೆನಪು ಮರುಕಳಿಸುವಂತೆ ಮಾಡಿದ ಸಾಂಪ್ರದಾಯಿಕ ನಡೆಯ ಗೋಪಾಲಕೃಷ್ಣ ಪೈ ಗಿಳಿಯಾರು ಅವರು ದ್ರೋಣನಾಗಿ ಕಾಣಿಸಿಕೊಂಡರೆ, ಕರ್ಣನಾಗಿ ಯುವ ಪ್ರತಿಭೆ ಶೋಭಿತ ಐರೋಡಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ರಂಗ ನಡೆ, ಸಾಂಪ್ರಾದಾಯಿಕ ನಿಲುವು ಐರೋಡಿಯವರನ್ನು ಪಾತ್ರದಂತೆ ಕಂಡು ಬಂತು. ರಂಗದಲ್ಲಿ ಭಾವನಾತ್ಮಕ ಅಭಿನಯದ ಮೂಲಕ ಗಮನ ಸೆಳೆದ ಸ್ತ್ರೀ ವೇಷಧಾರಿ ಸುಭದ್ರೆಯಾಗಿ ಶಂಕರ ದೇವಾಡಿಗ ಕಾರ್ಕಡ. ಬೆಳೆಯುತ್ತಿರುವ ಪ್ರತಿಭೆ ಶ್ರೀರಾಣಿ ಹೆಗ್ಡೆ ಕುಂದಾಪುರ ಧರ್ಮರಾಯನ ಪಾತ್ರದಲ್ಲಿ ಕಾಣಿಸಿಕೊಂಡರು. ದುಶ್ಯಾಸನನಾಗಿ ನಗೆಗಡಲಲ್ಲಿ ಪ್ರೇಕ್ಷಕರನ್ನು ತೇಲಾಡಿಸಿದ್ದು ಗುರುಪ್ರಸಾದ ಐತಾಳ ಕಾವಡಿ. ದೊರೆತ ಅವಕಾಶವನ್ನು ಸದ್ಭಳಕೆ ಮಾಡಿಕೊಂಡರು. ಶಲ್ಯ ಹಾಗೂ ಸೈಂದವರಾಗಿ ತುಷಾರ ಪೂಜಾರಿ ಕುಂದಾಪುರ ಹಾಗೂ ನೀಲ್ ಅಚಿಂತ್ಯ ತಮ್ಮ ಪ್ರೌಡಿಮೆ ತೋರಿದರು. ಈ ಯಶಸ್ವಿ ಪ್ರದರ್ಶನದ ಹಿಂದೆ ಸ್ವರ್ಣನೂಪುರ ಸಂಸ್ಥೆಯ ವ್ಯವಸ್ಥಾಪಕರಾದಂತಹ ಗಣೇಶ್ ಗುನುಗರ ಪರಿಶ್ರಮ ಮತ್ತು ಗುರುಗಳಾದ ಪ್ರಸಾದ್ ಮೊಗೆಬೆಟ್ಟುರವರ ದಕ್ಷ ನಿರ್ದೇಶನ, ಮಾರ್ಗದರ್ಶನವಿತ್ತು. ಇನ್ನಷ್ಟು ಇಂಥಹ ಪ್ರಯೋಗಗಳು ಸ್ವರ್ಣ ನೂಪುರ ತಂಡದಿಂದ ಮೂಡಿಬರಲಿ ಎನ್ನುವುದು ಯಕ್ಷಪ್ರೇಮಿಗಳು ಹಾರೈಕೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!