spot_img
Monday, March 23, 2026
spot_img

ಮಕ್ಕಳ ಮೇಲೆ ದೌರ್ಜನ್ಯ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗಲೆಲ್ಲ ಸುದ್ದಿಯಾಗುತ್ತದೆ ನಂತರ ಸಮಾಜ ಮರೆತು ಬಿಡುತ್ತದೆ. ಮಕ್ಕಳ ಮೇಲೆ ದೈಹಿಕ ಹಾಗು ಮಾನಸಿಕ ದೌರ್ಜನ್ಯಗಳು ಎಸುಗಿ ತಪ್ಪಿಸಿಕೊಳ್ಳುವುದು ಬಹಳ ಸುಲಭ. ಈ ದೌರ್ಜನ್ಯಗಳು ಎಸಗುವವರು ಅಪರಿಚಿತರು ಅಲ್ಲ ಹೆಚ್ಚಾಗಿ ಚಿರ ಪರಿಚಿತರು, ಆಪ್ತ ಸಂಬಂಧಿಗಳು, ಕುಟುಂಬ ಸ್ನೇಹಿತರು, ಮಕ್ಕಳನ್ನು ನೋಡಿಕೊಳ್ಳಲು ನೇಮಕಗೊಂಡಂತಹ ಮನೆಕೆಲಸದ ಸಿಬ್ಬಂದಿಗಳು, ಶಾಲಾ ಬಸ್ ಯಾ ಆಟೋ ಸಿಬ್ಬಂದಿಗಳು ಕೆಲವೊಮ್ಮೆ ಶಿಕ್ಷಕರು. ಅನಾಥಾಲಯಗಳು ಅಥವಾ ಹಾಸ್ಟೆಲ್ಗಳು, ಬುದ್ಧಿಮಾಂದ್ಯ ಮಕ್ಕಳ ಶಾಲೆಗಳು ಮುಂತಾದ ಸ್ಥಳಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದು ಸುಲಭ.

ಮಕ್ಕಳನ್ನು ದೈಹಿಕವಾಗಿ ದಂಡಿಸುವುದು, ಮಾತುಗಳಿಂದ ಭಾವನಾತ್ಮಕ ಕಿರುಕುಳ ಕೊಡುವುದು ಒಂದು ಬಗೆಯ ದೌರ್ಜನ್ಯವಾದರೆ ಇನ್ನೊಂದೆಡೆ ಲೈಂಗಿಕ ಮಾತುಗಳು, ಸೆಕ್ಸ್ಟಿಂಗ್ ಅಂದರೆ ಕೆಟ್ಟ ಮೆಸ್ಸಜೆಗಳನ್ನು ಕಳಿಸುವುದು ಲೈಂಗಿಕ ಚಿತ್ರಗಳನ್ನು ರವಾನೆ ಮಾಡುವುದು, ಮಕ್ಕಳ ನಗ್ನ ಫೋಟೋಗಳನ್ನು ತೆಗೆಯುವುದು ಮುಂತಾದ ಬಗೆಯಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಹಾಗೆಯೇ ಅವರನ್ನು ಮುಟ್ಟಬಾರದಂತಹ ಸ್ಥಳಗಳಿಗೆ ಮುಟ್ಟಿ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವುದು ಮಕ್ಕಳನ್ನು ಲೈಂಗಿಕ ಸಂಭೋಗಕ್ಕಾಗಿ ಪ್ರೇರೇಪಿಸುವುದು, ಅವರ ಮುಗ್ಧತೆ ಮತ್ತು ಅಸಾಹಾಯಕತೆ ಬಳಸಿಕೊಳ್ಳುವುದು ಸರ್ವೇ ಸಾಮಾನ್ಯ. ಮಕ್ಕಳಿಗೆ ಚಾಕಲೇಟ್, ಆಟದ ಸಾಮಾನು, ಮೊಬೈಲ್ ಅಥವಾ ಮತ್ತಿತರ ಆಸೆ ತೋರಿಸಿ ಬಳಸಿಕೊಳ್ಳಬಹುದು ಅಥವಾ ಆಟ ಆಡುವಾಗ ಅವರ ಖಾಸಗಿ ಭಾಗವನ್ನು ಕೆಟ್ಟದಾಗಿ ಮುಟ್ಟಬಹುದು, ಆದರೆ ಮಕ್ಕಳಿಗೆ ಈ ಕುರಿತು ಏನೂ ತಿಳಿದಿರುವುದಿಲ್ಲ, ಅದರಿಂದ ಅವರು ಅದರ ಕುರಿತು ಪೋಷಕರಿಗೆ ಹೇಳದೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಎಷ್ಟೋ ಮಕ್ಕಳಿಗೆ ಈ ರೀತಿಯ ಲೈಂಗಿಕ ವರ್ತನೆಗಳು ಅಸಹನೀಯ ಎಂಬುದೇ ಗೊತ್ತಿರುವುದಿಲ್ಲ. ಕೆಲವೊಮ್ಮೆ ಗೊತ್ತಾಗುವಾಗ ಅಂದರೆ ಶಾಲೆಯ ಪಠ್ಯದಲ್ಲೊ ಅಥವಾ ಶಾಲೆಯ ಶೈಕ್ಷಣಿಕ ಅರಿವು ಕಾರ್ಯಕ್ರಮದಲ್ಲಿ ಈ ವರ್ತನೆಗಳ ಬಗ್ಗೆ ಅರಿವು ಮೂಡಿ ಬಂದು ಈ ಬಗ್ಗೆ ದೂರು ನೀಡಿದರೆ ಮಗುವಿನ ಮನೆಯವರು ಸೇರಿ ಇದನ್ನು ಯಾರು ನಂಬುವುದಿಲ್ಲ. ವೈದ್ಯರಿರುವ ವಾಟ್ಸಪ್ಪ್ ಗುಂಪುಗಳ ಚರ್ಚೆ ಗಮನಿಸಿದ್ದೇನೆ ಎರಡು ಮೂರು ವರುಷ ಲೈಂಗಿಕ ದೌರ್ಜನ್ಯ ನಡೆಯುತ್ತಾ ಇದ್ದರೂ ಮಗು ಸುಮ್ಮನೆ ಇದ್ದದ್ದು ಏಕೆ? ಈಗಿನ ಕಾಲದಲ್ಲಿ ದುಡ್ಡು ಕೊಟ್ಟರೆ ಯಾರು ಕೂಡ ದೂರು ಕೊಡುತ್ತಾರೆ ಮುಂತಾದ ಚರ್ಚೆಗಳನ್ನು ಗಮನಿಸಿದೆ.

ಮಗು ನಮ್ಮ ಸಮಾಜದ ಒಂದು ಮುಖ್ಯ ಘಟಕ. ಮಗುವಿಗೆ ಅನ್ಯಾಯಗಳು ನಡೆದರೆ ಅದನ್ನು ಹೇಳುವ ಅವಕಾಶಗಳನ್ನು ಮಾಡಿಕೊಡುವುದು ಸಮಾಜದ ಕರ್ತವ್ಯ. ಸಮಾಜ ಇದರಲ್ಲಿ ಸೋತಿದೆ ಅಂತ ನನ್ನ ಅನಿಸಿಕೆ.

ಇಂತಹ ಘಟನೆ ನಡೆದ ಮೇಲೆ ಚರ್ಚೆ ಆಗಬೇಕಾಗಿರುವುದು ಸಮಾಜದ ನಡೆಯ ಬಗ್ಗೆ ಹೊರತು ಯಾವುದೇ ವಿಕೃತ ಕಾಮಿಯ ಬಗ್ಗೆ ಅಲ್ಲ. ಇಂತಹ ಕೃತ್ಯಗಳನ್ನು ಯಾರೇ ಕೂಡ ಎಸಗಬಹುದು. ಮಕ್ಕಳು ಇಂತಹ ವಿಷಯಗಳ ಬಗ್ಗೆ ಸುಳ್ಳು ಹೇಳುವುದಿಲ್ಲ ಅನ್ನುವ ಒಂದು ನಂಬಿಕೆಯ ಮೇಲೆ ಅವರು ಹೇಳಿದ್ದನ್ನು ನಂಬಲೇಬೇಕು ಮತ್ತು ಕಾನೂನಿನಂತೆ ಮುಂದುವರೆಯಬೇಕು. ಇದು ದೇಶದ ಅತ್ಯುತ್ತಮ ಕಾಯ್ದೆಗಳಲ್ಲಿ ಒಂದಾದ ಪೋಕ್ಸೊ ಕಾಯ್ದೆ ಇದರ ಆಶಯ.

ಸಮಾಜ ಮಾಡಬೇಕಾದದ್ದು ಮಕ್ಕಳಿಗೆ ಒಂದನೇ ತರಗತಿಯಿಂದಲೇ ಲೈಂಗಿಕ ದೌರ್ಜನ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುವುದು. ಈ ಹಿನ್ನೆಲೆಯಲ್ಲಿ ಮಗುವಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ನಡುವಿನ ವ್ಯತ್ಯಾಸಗಳನ್ನು ತಿಳಿಸುವುದು ಅತ್ಯಗತ್ಯ. ಇದು ಮನೆಯಲ್ಲಿ ತಾಯಿತಂದೆಯರು ಸ್ವತಹ ತಿಳಿದುಕೊಂಡು ಮಾಡಿದರೆ ಹಾಸ್ಟೆಲ್ಗಳಲ್ಲಿ ಅದರಲ್ಲೂ ಅನಾಥಾಲಯಗಳು, ಧಾರ್ಮಿಕ ಮಂದಿರ, ಮದ್ರಾಸ, ಚರ್ಚ್‌ಗಳು ನಡೆಸುವ ಬಡವರ ಮಕ್ಕಳ ವಿದ್ಯಾರ್ಥಿನಿಲಯಗಳು, ಬುದ್ಧಿಮಾಂದ್ಯ ಮಕ್ಕಳ ಶಾಲೆಗಳು ಇಲ್ಲಿ ಸರ್ಕಾರವೇ ನಿಯಮಿತವಾಗಿ ಇಂತಹ ಕಾರ್ಯಕ್ರಮ ನಡೆಸುವ ಕೆಲಸ ಮಾಡಬೇಕು. ಇದನ್ನು ಪರಿಣತಿ ಪಡೆದ ಸಮಾಜಕಾರ್ಯ ಅಥವಾ ಮನಶಾಸ್ತ್ರ ಸ್ನಾತಕೋತ್ತರ ಪದವೀಧರರು ಅಥವಾ ವೈದ್ಯರುಗಳು ಮಾಡಿದರೆ ಒಳ್ಳೆಯದು.

ಗುಡ್ ಟಚ್ ಖುಷಿ ನೀಡುವ ಜೊತೆಗೆ ಸುರಕ್ಷಿತ ಹಾಗೂ ಸುಭದ್ರತೆಯ ಭಾವನೆಯನ್ನು ಮೂಡಿಸುತ್ತದೆ. ಹೀಗಾಗಿ ಮಕ್ಕಳಿಗೆ ಯಾವ ರೀತಿ ಅಪ್ಪಿಕೊಂಡರೆ, ಮುದ್ದು ಮಾಡಿದರೆ ಖುಷಿಯಾಗುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸಿ. ಹಾಗೆಯೇ ಈ ಮುದ್ದು ಮಾಡುವವರು ಯಾರು ಯಾರು ಹಾಗೆ ಮುಟ್ಟುವವವರು ಯಾರು ಅನ್ನುವುದು ಕೂಡ ಮುಖ್ಯವಾಗುತ್ತದೆ. ಮಗುವನ್ನು ಅಪ್ಪಿಕೊಂಡು ಮುತ್ತಿಡಲು ಹಕ್ಕು ಇರುವುದು ಅದರ ತಾಯಿ ತಂದೆ ಹತ್ತಿರದ ಸಂಬಂಧಿಗಳಿಗೆ ಅಣ್ಣ ತಮ್ಮ ಅಜ್ಜ ಅಜ್ಜಿ ಮುಂತಾದವರು ಮಾತ್ರ. ಈ ಬಗ್ಗೆ ಮಗುವಿನೊಂದಿಗೆ ಚರ್ಚೆ ಅಗತ್ಯ.
ದೇಹದ ಮೇಲೆ ಮಗುವಿಗೆ ಸಂಪೂರ್ಣ ಹಕ್ಕಿದ್ದು, ನೀವೂ ಸೇರಿದಂತೆ ಯಾರಾದರೂ ಮುಟ್ಟಿದಾಗ ಕಿರಿಕಿರಿ ಅನಿಸಿದರೆ ಅದನ್ನು ತಕ್ಷಣ ವ್ಯಕ್ತಪಡಿಸುವಂತೆ ತಿಳಿಸಿ.

ಬ್ಯಾಡ್ ಟಚ್ ಹೇಗಿರುತ್ತೆ?:

ಮಗುವಿಗೆ ದೇಹದ ಯಾವುದಾದರೊಂದು ಭಾಗವನ್ನು ಯಾರಾದರೂ ಮುಟ್ಟಿದಾಗ ಮನಸ್ಸಿಗೆ ಕಿರಿಕಿರಿ ಅನಿಸುವ, ಮುಜುಗರ ಮೂಡಿಸುವ ಅಥವಾ ಇಷ್ಟವಾಗದ ಭಾವನೆ ಮೂಡಿದರೆ ಅದನ್ನು ಬ್ಯಾಡ್ ಟಚ್ ಎನ್ನಬಹುದು. ಮಗುವಿಗೆ ಬ್ಯಾಡ್ ಟಚ್ ಎಂದರೇನು ಎಂಬುದನ್ನು ವಿವರಿಸಲೇಬೇಕು.

ದೇಹದಲ್ಲಿನ ಕೆಲವು ಭಾಗಗಳನ್ನು ಬೇರೆಯವರು ಟಚ್ ಮಾಡುವುದು ತಪ್ಪು ಎಂಬುದನ್ನು ತಿಳಿಸಿ ಹೇಳಿ. ಎದೆ ಭಾಗ, ಜನನಾಂಗ, ತೊಡೆಗಳ ನಡುವೆ ಮತ್ತು ಪೃಷ್ಠದ ಭಾಗಗಳನ್ನು ಬೇರೆಯವರು ಮುಟ್ಟಬಾರದು ಎಂಬುದನ್ನು ತಿಳಿಸಿ.

ಖಾಸಗಿ ಜಾಗಗಳನ್ನು ಯಾರಾದರೂ ಮುಟ್ಟಿದರೆ ತಕ್ಷಣ ಎಚ್ಚೆತ್ತುಕೊಂಡು ಆ ಪರಿಸ್ಥಿತಿಯಿಂದ ಪಾರಾಗಲು ಪ್ರಯತ್ನಿಸಬೇಕು ಎಂಬುದನ್ನು ತಿಳಿಸಿ.

ತನ್ನ ಜೊತೆಗೆ ಯಾರಾದರೂ ಅಸಭ್ಯವಾಗಿ ನಡೆದುಕೊಂಡರೆ ತಕ್ಷಣ ಸಹಾಯಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿ ಕೊಡಿ. ಉದಾಹರಣೆಗೆ ಶಾಲೆಯಲ್ಲಿ ಅಂಥ ಅನುಭವವಾದ ತಕ್ಷಣ ತರಗತಿಯ ಶಿಕ್ಷಕಿ ಅಥವಾ ಮಗುವಿಗೆ ಆತ್ಮೀಯರಾಗಿರುವ ಶಿಕ್ಷಕಿಯ ಗಮನಕ್ಕೆ ತರುವಂತೆ ತಿಳಿಸಿ.

ಹಾಗೆಯೇ ವಿದ್ಯಾರ್ಥಿ ನಿಲಯಗಳಲ್ಲಿ ಇಂತಹ ಘಟನೆಗಳು ನಡೆದರೆ ಮಕ್ಕಳ ಸಹಾಯವಾಣಿ ೧೦೯೮ ಬಳಸಿಕೊಂಡು ಮಗು ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಬೇಕು ಅನ್ನುವ ಮಾಹಿತಿ ಪ್ರತಿಯೊಂದು ಮಗುವಿಗೆ ಮುಟ್ಟಬೇಕು. ಜಿಲ್ಲಾವಾರು ಕೆಲಸ ಮಾಡುತ್ತಾ ಇರುವ ಮಕ್ಕಳ ರಕ್ಷಣಾ ಘಟಕಗಳು ಕೂಡ ಈ ಮಾಹಿತಿ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಹಾಗು ಮಕ್ಕಳಿಗೆ ಈ ಮಾಹಿತಿ ತಿಳಿಸಬೇಕು.

ಕೆಲವರ ಬಳಿ ಮಗು ಹೋಗುವುದಿಲ್ಲ, ಅವರ ಜೊತೆ ಹೋಗಿ ಆಟವಾಡು ಎಂದು ಒತ್ತಾಯ ಮಾಡಬೇಡಿ. ಮಗು ಅವರ ಬಳಿ ಆರಾಮವಾಗಿ ಇರುವ ಆಗಿದ್ದರೆ ಮಾತ್ರ ಆಟವಾಡಲು ಬಿಡಿ. ಆ ವ್ಯಕ್ತಿ ನಿಮಗೆ ಎಷ್ಟೇ ಕ್ಲೋಸ್ ಆಗಿರಲಿ ಮಗು ಅವರ ಬಳಿ ಹೋಗಲು ಹಿಂಜರಿಯುತ್ತಿದೆ ಎಂದಾದರೆ ಗಮನ ಹರಿಸಿ, ಮಗುವನ್ನು ಅವರ ಜೊತೆ ಒಂಟಿಯಾಗಿ ಬಿಡಲೇ ಬೇಡಿ. ಎಷ್ಟೋ ಬಾರಿ ಮಕ್ಕಳು ಹತ್ತಿರದ ಸಂಬಂಧಿಕರ ಮೇಲೆ, ಸಮಾಜದ ಉನ್ನತ ವ್ಯಕ್ತಿಗಳ ಮೇಲೆ ದೂರು ಹೇಳಿದರು ನಾವು ನಂಬುವುದಿಲ್ಲ. ಮಗು ಟಿವಿ ನೋಡಿ ಅದರಿಂದ ಪ್ರೇರಿತವಾಗಿ ಈ ರೀತಿ ದೂರು ಕೊಡುತ್ತದೆ ಎಂದು ಹೇಳಿರುವ ಅಮ್ಮ ಅಪ್ಪಂದಿರು ಇದ್ದಾರೆ. ಹಾಗೆಯೇ ಮಕ್ಕಳು ಕೂಡ ಕೆಲವೊಮ್ಮೆ ಆ ವ್ಯಕ್ತಿ ಬಂದಾಗ ತುಂಬಾ ಖುಷಿಯಾಗುವುದು, ಅವರು ಗಿಫ್ಟ್ಸ್ ಮುಂತಾದವುಗಳನ್ನು ತರುವುದು, ಮಗು-ಅವರು ಇಬ್ಬರೇ ರೂಂನಲ್ಲಿ ಸಮಯ ಕಳೆಯುವುದು ಮಾಡುತ್ತಿದ್ದರೆ ಎಚ್ಚರವಹಿಸಬೇಕಾದದ್ದು ತಾಯಿ ತಂದೆಯರ ಕರ್ತವ್ಯ.

ಕೋಣೆಯಲ್ಲಿ ಬಾಗಿಲು ಹಾಕಿ ಇಬ್ಬರನ್ನು ಆಡಲು ಕುಳಿತುಕೊಳ್ಳುವುದು, ಇಂಥ ಸಂದರ್ಭದಲ್ಲಿ ತುಂಬಾ ಸೂಕ್ಷ್ಮವಾಗಿ ನಿರ್ವಹಿಸಬೇಕು, ಮಗು ಅವರ ಜೊತೆ ಆಡಬೇಡ ಎಂದರೆ ಕೇಳುವುದಿಲ್ಲ, ಅಲ್ಲದೆ ಮಕ್ಕಳು ನಿಮ್ಮ ಹಿಂದೆಯೇ ಸಂಚು ಮಾಡಬಹುದು. ಹೀಗೆ ಕಂಡು ಬಂದರೆ ನಿಧಾನಕ್ಕೆ ಮಗುವಿಗೆ ಈ ಕುರಿತು ತಿಳಿ ಹೇಳಲು ಪ್ರಯತ್ನಿಸಬೇಕು. ಕೆಲವೊಮ್ಮೆ ಕೋನ್ಸೆಲ್ಲಿಂಗ್ /ಆಪ್ತ ಸಲಹೆ ಕೊಡಿಸುವುದು ಅಗತ್ಯ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!