spot_img
Wednesday, January 22, 2025
spot_img

‘ಜನಪ್ರತಿನಿಧಿ’ ರಾಜ್ಯಮಟ್ಟದ ಮುಂಗಾರು ಕಥಾಸ್ಪರ್ಧೆ: ಬಹುಮಾನ ವಿತರಣೆ | ಮುಂಗಾರು ಕಥಾಗೋಷ್ಠಿ

kundapura: ಕಥೆಯೆಂದರೆ ಮನಸ್ಸಿನ ಎಲ್ಲ ಭಾವನೆಗಳನ್ನು ಸೂಕ್ತ ರೀತಿಯಲ್ಲಿ ಅಭಿವ್ಯಕ್ತಗೊಳಿಸುವುದು. ಜರುಗಿದ ಎಲ್ಲ ಘಟನೆಗಳೂ ಕಥೆಯಾಗಲಾರವು. ಮಾತಲ್ಲಿ ಆಡಿ ಮುಗಿಸಲಾಗದ್ದು, ಕಂಡದ್ದು, ಅನುಭವಿಸಿದ್ದು ಅಥವಾ ಯಾವುದೋ ಕಾಡುವ ಹಳೆಯ ನೆನಪೊಂದು ಸೂಕ್ತ ವಿವರಣೆಯೊಂದಿಗೆ ಕಥೆಯ ಪಾತ್ರವಾಗಬಹುದು, ಕಥೆಯಾಗಬಹುದು. ಕಥೆ ಕಟ್ಟುವ ಕಲೆಯೊಂದು ಕಥಾಗಾರನಾಗುವವನಿಗೆ ತಿಳಿದಿರಬೇಕಷ್ಟೇ. ಆ ಬಗೆಯ ಅರಿತವರು ಮಾತ್ರ ಓದುಗರನ್ನು ತಲುಪುತ್ತಾರೆ.

ಜನಪ್ರತಿನಿಧಿ ಪತ್ರಿಕೆ ವತಿಯಿಂದ ನಮ್ಮ ರಾಜ್ಯದ ಬರಹಗಾರರ ಬರವಣಿಗೆಯನ್ನು ಗುರುತಿಸುವ ಸಲುವಾಗಿ ರಾಜ್ಯಮಟ್ಟದ ಕಥಾಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ಅದಕ್ಕಿಟ್ಟ ಚೆಂದದ ಹೆಸರೇ “ಮುಂಗಾರು ಕಥಾಸ್ಪರ್ಧೆ”. ಅದರ ಸಲುವಾಗಿ ದಿನಾಂಕ ೦೪-೦೯-೨೦೨೨ ರಂದು ಈ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಆಯ್ಕೆಯಾದ ಕಥೆಗಳ ಕಥಾಗೋಷ್ಠಿ ಜನಪ್ರತಿನಿಧಿ ಪತ್ರಿಕಾ ಕಛೇರಿಯಲ್ಲಿ ನಡೆಯಿತು. ಬಹಳ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಕಥೆಗಾರರು, ವಾಗ್ಮಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟಕರಾಗಿ ಪಂಚಾಯತ್ ರಾಜ್ ವಿಷಯ ತಜ್ಞರಾದ ಎಸ್. ಜನಾರ್ದನ ಮರವಂತೆಯವರು ಉದ್ಘಾಟನಾ ಭಾಷಣ ಮಾಡುವ ಮೂಲಕ ಕಾರ್ಯಕ್ರಮ ಚಾಲನೆ ಮಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕರು ಹಾಗೂ ಹಿರಿಯ ಲೇಖಕರಾದ ಡಾ. ಪಾರ್ವತಿ ಜಿ. ಐತಾಳರು ಹಾಗೂ ನಿವೃತ್ತ ಉಪನ್ಯಾಸಕರಾದ ಡಾ. ರೇಖಾ ಬನ್ನಾಡಿ, ವಿಜ್ಞಾನ ಲೇಖಕರು, ಶಿಕ್ಷಕರಾದ ಉದಯ್ ಗಾಂವ್ಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಪ್ರತಿನಿಧಿ ಸಂಪಾದಕರಾದ ಸುಬ್ರಹ್ಮಣ್ಯ ಪಡುಕೋಣೆಯವರು ವಹಿಸಿದ್ದರು. ನಾಡಗೀತೆಯ ಮೂಲಕ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದವರು ಕುಂದಾಪುರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

ಕಥಾಗೋಷ್ಠಿಗೆ ಆಯ್ಕೆಯಾದ ಕಥೆಗಳ ಕುರಿತು ತೀರ್ಪುಗಾರರಾದ ಸುಧಾ ಆಡುಕಳ ಬರೆದ ಕಥೆಗಳ ಬಗೆಗಿನ ವಿಮರ್ಶೆಯನ್ನು ಕು. ರಶ್ಮಿ ವಾಚಿಸಿದರು. ಕಾರ್ಯಕ್ರಮದ ಸಂಯೋಜಕ ಶ್ರೀರಾಜ್ ವಕ್ವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅತಿಥಿಗಳಿಂದ ಮಾತು-ಬಹುಮಾನ ವಿತರಣೆಯ ನಂತರ ಕಥಾಗೋಷ್ಠಿ ಕಾರ್ಯಕ್ರಮವು ನಡೆಯಿತು.

ಕಥಾಗೋಷ್ಠಿಗೆ ದೂರದೂರುಗಳಿಂದ ಕಥಾಗಾರರು ಆಗಮಿಸಿದ್ದು ವಿಶೇಷವಾಗಿತ್ತು. ಕಥೆಯಲ್ಲಿ ಪ್ರಥಮ ಬಹುಮಾನವನ್ನು ಮುಂಜುನಾಥ ಹಿಲಿಯಾಣ ಅವರ “ನೆರಿ” ಎಂಬ ಕಥೆಯು ಪಡೆಯಿತು. ಗ್ರಾಮ್ಯಭಾಷೆಯನ್ನು ಬಳಸಿ ಕಟ್ಟಿದ ಕಥೆ ಇದಾಗಿದ್ದು ರೆಸಾರ್ಟ್ ಸಂಸ್ಕೃತಿಯೊಂದು ಹಳ್ಳಿಯ ಬದುಕನ್ನು ಹಾಳುಗೆಡಹುವ ಬಗೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಕುಂದಕನ್ನಡವನ್ನು ಉಪಮೆಯಾಗಿ ಅಗತ್ಯವಿದ್ದಲ್ಲಿ ಬಳಸಿದ್ದರಿಂದ ಕಥೆಯ ಅಂದವು ಹೆಚ್ಚಾಗಿದೆ. ಮನುಷ್ಯ ಆಧುನಿಕತೆಗೆ ಕಾಲಿಟ್ಟಂತೆಲ್ಲಾ ಹೇಗೆ ಭೂಮಿಯನ್ನು ನಾಶಮಾಡಬಲ್ಲ ಹಾಗೂ ಅದರ ಪ್ರತ್ಯುತ್ತರ ಅವನಿಗೇ ದೊರಕಬಲ್ಲದು ಎಂಬುದನ್ನು ಈ ಕಥೆಯು ಸ್ಪಷ್ಟವಾಗಿ ವಿವರಿಸುತ್ತದೆ.

ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡ ಪೂರ್ಣಿಮಾ ಕಮಲಶಿಲೆಯವರ “ಮುಂಬೈ ಮನೆಯ ಪ್ಯಾರಿಯ ಕಥೆ” ಯು ಪತ್ತೇದಾರಿ ಕಥೆಯಂತೆ ಆರಂಭಗೊಂಡು ಬಡಹೆಣ್ಣುಮಗಳ ಬವಣೆಯ ಕುರಿತು ಸಾಗುತ್ತದೆ. ಕಥೆಯಲ್ಲಿ ಮುಂದಿನ ತಿರುವು ಹೇಗಿರಬಹುದು ಎನ್ನುವುದರ ಕುರಿತು ಕುತೂಹಲಕ್ಕೆಡೆ ಮಾಡಿಕೊಟ್ಟು ಸಾಗುವ ಕಥೆಯು ನೀರಸವೆನಿಸುವುದಿಲ್ಲ. ಉಳಿದೆಲ್ಲ ಕಥೆಗಳನ್ನು ಕಥೆಗಾರರು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದ್ದು ಕಥಾಪ್ರೀಯರಿಗೆ ಅಚ್ಚುಮೆಚ್ಚಾಗಬಹುದು.

ಕಥೆಯಲ್ಲಿ ಬಳಸಲಾದ ಗಾದೆಗಳು, ಆಯಾ ಊರಿನ ವಿಶೇಷಣಗಳು, ಉಪಮೆಗಳು, ಗ್ರಾಮ್ಯ ಪದಗಳು ,ನಡೆದ ಭಾವನಾತ್ಮಕ ಸನ್ನಿವೇಶಗಳು ಕಥೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ. ಇಂತದೊಂದು ಅತ್ಯುತ್ತಮ ವೇದಿಕೆಗೆ ಈ ಎಲ್ಲ ಕಥೆಗಳು ಸೂಕ್ತವೆನಿಸಿವೆ.
ಫಲಕ, ಪ್ರಶಸ್ತಿ ಪತ್ರದ ಜೊತೆ ಪ್ರಥಮ ಬಹುಮಾನವು ಐದು ಸಾವಿರ ನಗದು ಒಳಗೊಂಡಿದ್ದರೆ, ದ್ವಿತೀಯ ಬಹುಮಾನವು ಎರಡು ಸಾವಿರ ನಗದನ್ನು ಒಳಗೊಂಡಿತ್ತು. ಭಾಗವಹಿಸಿದ ಎಲ್ಲರಿಗೂ ಗೌರವ ಸ್ಮರಣಿಕೆ, ನಗದು, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗಿತ್ತು.

ಕಥಾಸ್ಪರ್ಧೆಗೆ ಎಂಭತ್ತಕ್ಕೂ ಹೆಚ್ಚು ಕಥೆಗಳು ಬಂದಿದ್ದು ಮೊದಲ ಸುತ್ತಿಗೆ ಹನ್ನೊಂದು ಕಥೆಗಳನ್ನಷ್ಟೇ ಆಯ್ಕೆಗೊಳಿಸಲಾಗಿತ್ತು. ಬಹುಮಾನಿತರ ಜೊತೆಗೆ ವಿಮಲಾ ಭಾಗ್ವತ್ ಶಿರಸಿ, ವಿಭಾ ಡೋಂಗ್ರೆ ಶಿವಮೊಗ್ಗ, ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ, ಉಮೇಶ ಆಚಾರ್ಯ ಕೊಳಂಬೆ, ಶೈಲೇಶ್ ಆಚಾರ್ಯ ಉಡುಪಿ, ರಾಘವೇಂದ್ರ ಡಿ. ಆಲೂರು, ಶ್ರೀಲಕ್ಷ್ಮಿ ಉಪಾಧ್ಯ, ಸಚಿನ್ ಅಂಕೋಲ ಕಥಾಗೋಷ್ಠಿಯಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಕಥಾವಾಚನಗೈದರು.

ವಿನಯಾ ಕೌಂಜೂರು ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!