spot_img
Wednesday, January 22, 2025
spot_img

ಕನ್ನಡಕ್ಕಾಗಿ ಮಿಡಿಯುವ ಕುಕ್ಕೆಶೆಟ್ರಿಗಿನ್ನು ಪ್ರವೃತ್ತಿಯೇ ವೃತ್ತಿ

ವೃತ್ತಿಯಿಂದ ಹೊರಗೆ ಅತ್ತಿತ್ತ ಕತ್ತು ನೀಕಿಯೂ ಕಾಣದವರಿಗೆ ನಿವೃತ್ತಿಯ ನಂತರ ಮುಂದೇನು ಎಂಬ ಸಮಸ್ಯೆ ಕಾಡಬಹುದು. ವೃತ್ತಿಯಲ್ಲಿದ್ದೂ ಆತ್ಮಸಂತೋಷದ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿ ನಿರಾಸೆಯ ಕೂಪವಾಗುವ ಬದಲು ಹೊಸ ಇನ್ನಿಂಗ್ಸ್‌ಗೆ ರಹದಾರಿಯಾದಂತಾಗುತ್ತದೆ. ಕಳೆದ ತಿಂಗಳು ಕುಂದಾಪುರದಲ್ಲಿ ತೆರಿಗೆ ಇಲಾಖೆಯಿಂದ ನಿವೃತ್ತರಾದ ಉಡುಪಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟರು ಕುಕ್ಕೆ ಕಾವ್ಯನಾಮವಿಟ್ಟುಕೊಂಡು ಬರವಣಿಗೆ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗಳ ಮೂಲಕ ಕನ್ನಡದ ಕೈಕಂರ್ಯದಲ್ಲಿ ಸದಾ ತೊಡಗಿಸಿಕೊಂಡಿರುವ ಸಹೃದಯಿ. ಬಿಕಾಂ, ಎಂ.ಎ.(ಕನ್ನಡ), ಎಲ್.ಎಲ್.ಬಿ., ಪದವಿ ಹೊಂದಿದ ಸುಶಿಕ್ಷಿತರು. ಉಡುಪಿ ಜಿಲ್ಲೆಯಾದ್ಯಂತದ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಯಾವ ಹೊಗಳಿಕೆ-ಸಮ್ಮಾನದ ಅಪೇಕ್ಷೆಯಿಲ್ಲದೇ ಕನ್ನಡದ ಕೆಲಸ ದೇವರ ಕೆಲಸ ಎಂಬಂತೆ ಅಹರ್ನಿಶಿ ದುಡಿಯುತ್ತಿರುವವರು.

ಅಧಿಕಾರ ಮನುಷ್ಯನನ್ನು ಭ್ರಷ್ಟನಾಗಿಸುತ್ತದೆ ಎನ್ನುವುದು ವರ್ತಮಾನದಲ್ಲಿ ಎಲ್ಲೆಡೆ ಕಾಣುವ ನಿತ್ಯ ಸತ್ಯವಾಗಿದೆ. ಅಧಿಕಾರ ಇರುವಲ್ಲಿ ದರ್ಪ, ಅಹಂಕಾರ, ದೌರ್ಜನ್ಯ ಎಗ್ಗಿಲ್ಲದೇ ಮಡುಗಟ್ಟಿರುತ್ತದೆ. ಸರಕಾರಕ್ಕೆ ಆದಾಯ ಸಂಗ್ರಹಿಸಿ ಕೊಡುವ ತೆರಿಗೆ ಇಲಾಖೆಯ ಅಧಿಕಾರಿಗಳ ಬಳಿ ಸಾಕಷ್ಟು ಅಧಿಕಾರ ಇರುತ್ತದೆ. ಸಾಮಾನ್ಯವಾಗಿ ಅಂತಹ ಅಧಿಕಾರಿಗಳು ಅಹಂಕಾರದಲ್ಲಿಯೇ ಇರುತ್ತಾರೆ ಎಂಬ ಧಾರಣೆ ಜನಸಾಮಾನ್ಯರಲ್ಲಿ ಇದೆ. ಆದರೆ ತೆರಿಗೆ ಇಲಾಖೆಯಲ್ಲಿದ್ದು ಸರಳವಾಗಿಯೂ, ಪ್ರಾಮಾಣಿಕರಾಗಿಯೂ, ಸಹೃದಯಿಯಾಗಿಯೂ ಇರಬಹುದು ಎಂದು ತೋರಿಸಿಕೊಟ್ಟವರು ಶ್ರೀ ಸುಬ್ರಹ್ಮಣ್ಯ ಶೆಟ್ಟರು. ತಾವು ಕುಂದಾಪುರಕ್ಕೆ ವರ್ಗವಾಗಿ ಬಂದ ನಂತರ ಅವರು ತಮ್ಮ ಕಚೇರಿಯಲ್ಲಿ ಮಾಡಿದ ಮೊದಲ ಕೆಲಸವೆಂದರೆ ಕೆಲಸದ ಸಲುವಾಗಿ ತಮ್ಮನ್ನು ಭೇಟಿಯಾಗಲು ಬಂದ ಸಾರ್ವಜನಿಕರಿಗಾಗಿ ಎರಡು ಕುರ್ಚಿಗಳನ್ನು ಹಾಕಿಸಿದ್ದು ಎಂಬ ಸತ್ಯವನ್ನು ಅಭಿನಂದನ ಭಾಷಣದಲ್ಲಿ ಮೊಳಹಳ್ಳಿ ಬಾಲಕೃಷ್ಣ ಶೆಟ್ಟರು ಬಿಚ್ಚಿಟ್ಟಾಗ ನೆರೆದವರು ಸುಬ್ರಹ್ಮಣ್ಯ ಶೆಟ್ಟರಿಗೆ ಉಘೇ ಎಂದರು.

ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಮೊನ್ನೆ ಸಾಹಿತ್ಯದ ಅವರ ಮಿತ್ರರು ಅಭಿನಂದನಾ ಕಾರ್ಯಕ್ರಮಕ್ಕೆ ನೆರೆದ ಭಾಷಣಕಾರರು ಈರುಳ್ಳಿಯ ಒಂದೊಂದೇ ಪದರನ್ನು ತೆಗೆಯುವಂತೆ ಸರಳತೆಯ ಸಾಕಾರ ಮೂರ್ತಿಯಾದ ಅವರ ಬದುಕಿನ ಒಂದೊಂದೇ ಮಗ್ಗಲನ್ನು ತೆರೆದಿಡುತ್ತಾ ಹೋದಾಗ ನೆರೆದ ಸಭಿಕರೆಲ್ಲರೂ ಇಂತಹವರು ಸಂತತಿ ಇನ್ನಷ್ಟು ಹೆಚ್ಚಲಿ ಎಂದುಕೊಂಡರು. ಒಳ್ಳೆಯ ಮನಸ್ಸಿನ ಹಾರೈಕೆಗೆ ಭಗವಂತನೂ ತಥಾಸ್ತು ಎನ್ನುತ್ತಾನಂತೆ. ಅಬ್ಬರದ ಪ್ರಚಾರವಿಲ್ಲದ ಸಮಾರಂಭಕ್ಕೆ ವೈಯಕ್ತಿಕ ಆಹ್ವಾನ ಅಪೇಕ್ಷಿಸದೇ ಬಂದ ಸಜ್ಜನ ಅಭಿಮಾನಿ ಬಂಧುಗಳು ಭವಿಷ್ಯದ ಅವರ ಬದುಕು ಇನ್ನಷ್ಟು ಕ್ರಿಯಾಶೀಲವಾಗಿರಲಿ ಎಂದು ಮುಕ್ತ ಮನದಿಂದ ಹಾರೈಸಿದರು. ಈ ಸಣ್ಣ ಅಭಿನಂದನೆಗೂ ಶೆಟ್ಟರ ಬಡಪೆಟ್ಟಿಗೆ ಒಪ್ಪಿರಲಿಲ್ಲ. ಅಭಿನಂದನೆ ಸಮಾರಂಭ ಮಾಡಲು ನಾನೇನು ಕಡಿದು ಗುಡ್ಡೆ ಹಾಕಿದ್ದೆ ಎಂದು ವಿನೀತರಾಗಿಯೇ ಪ್ರಶ್ನಿಸಿದ್ದರು. ವೇದಿಕೆಯೇರಿದ್ದೂ ಮುಜುಗುರದಿಂದಲೇ ಎನ್ನುವುದು ಅವರ ಸಂಕೋಚದ, ದಾಕ್ಷಣ್ಯದ ಭಂಗಿಯಿಂದಲೇ ದೂರದಿಂದ ಗೊತ್ತಾಗುತ್ತಿತ್ತು.

ಪ್ರಸ್ತಾವಿಕ ನುಡಿಯಾಡಿದ ಶಿಕ್ಷಕ ನರೇಂದ್ರಕುಮಾರ ಅವರು ಕಿರು ಕಥೆಯೊಂದಿಗೆ  ಸುಬ್ರಹ್ಮಣ್ಯ ಶೆಟ್ಟರ ವ್ಯಕ್ತಿತ್ವದ ಘನತೆಯನ್ನು ತೆರೆದಿಟ್ಟರು. ಎಂದೂ ಏಕಾಂಗಿಯಾಗಿ ಎಲ್ಲಿಗೂ ಪ್ರಯಾಣ ಮಾಡದ ಬಾಲಕನೋರ್ವ ರೈಲಿನಲ್ಲಿ ಒಂದು ಬಾರಿ ಪ್ರಕೃತಿಯ ಸೊಬಗನ್ನು ಸವಿಯುತ್ತಾ ತಾನೊಬ್ಬನೇ ಬೆಂಗಳೂರಿಗೆ ಪ್ರಯಾಣಿಸುವ ಇಚ್ಚೆ ವ್ಯಕ್ತಪಡಿಸುತ್ತಾನೆ. ಹಠ ಹಿಡಿದ ಬಾಲಕನ ಒತ್ತಾಯಕ್ಕೆ ಕಟ್ಟು ಬಿದ್ದ ಆತನ ತಂದೆ ಶರತ್ತಿನೊಂದಿಗೆ ಸಮ್ಮತಿಸುತ್ತಾರೆ. ಶರತ್ತೇನೆಂದರೆ ಅವರು ಒಂದು ಸಣ್ಣ ಚೀಟಿಯೊಂದನ್ನು ಕೊಡುತ್ತಾರೆ. ಏನಾದರೂ ತೊಂದರೆ, ಹೆದರಿಕೆ ಆದಾಗ ಮಾತ್ರ ಆತ ಚೀಟಿ ಬಿಡಿಸಿ ನೋಡಬೇಕು. ಬಾಲಕ ಸಂತೋಷದಿಂದ ಪ್ರಯಾಣಕ್ಕೆ ಹೊರಡುತ್ತಾನೆ. ಮಾರ್ಗ ಮಧ್ಯದಲ್ಲಿ ಆ ಪುಟ್ಟ ಬಾಲಕ ತೊಂದರೆಗೊಳಗಾಗುತ್ತಾನೆ ಮತ್ತು ಹೆದರಿಕೆಯಿಂದ ನಡುಗುತ್ತಾನೆ. ಆಗ ಆ ಚೀಟಿಯನ್ನು ತೆರೆದು ನೋಡುತ್ತಾನೆ. ಅದರಲ್ಲಿ ಹೀಗೆ ಬರೆದಿರುತ್ತದೆ ‘ಮಗಾ ನೀನು ಹೆದರುವ ಅಗತ್ಯ ಇಲ್ಲ. ನೆಕ್ಷ್ಟ್ ಕಂಪಾರ್ಟ್‌ಮೆಂಟ್‌ನಲ್ಲಿ ನಾನಿದ್ದೇನೆ.  ಸುಬ್ರಹ್ಮಣ್ಯ ಶೆಟ್ಟರು ಉಡುಪಿ ಜಿಲ್ಲೆಯ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸದಾ ತೆರೆಮರೆಯಲ್ಲಿದ್ದುಕೊಂಡು ತಂದೆಯ ಪ್ರೀತಿ ಕೊಟ್ಟು ಕಿರಿಯರನ್ನು ಪ್ರೋತ್ಸಾಹಿಸಿದವರು ಎನ್ನುವ ಆ ಅರ್ಥಗರ್ಭಿತ ಮಾತಿಗೆ ತಲೆದೂಗದವರಿಲ್ಲ.

ಶೈಕ್ಷಣಿಕ, ಸಾಂಸ್ಕೃತಿಕ, ನಾಡು ನುಡಿಯ ಕೆಲಸದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಡಾ. ಮೋಹನ ಆಳ್ವ ಅವರು ತಮ್ಮ ಅಭಿನಂದನ ನುಡಿಯಲ್ಲಿ ಆಳ್ವಾಸ್ ಸಂಸ್ಥೆಯ ಜತೆ ಸುದೀರ್ಘ ಕಾಲದಿಂದ ಶೆಟ್ಟರು ಹೊಂದಿರುವ ನಂಟನ್ನು ಸ್ಮರಿಸಿ ಸಮಾರಂಭದ ಘನತೆ ಹೆಚ್ಚಿಸಿದರು. ಸುಬ್ರಹ್ಮಣ್ಯ ಶೆಟ್ಟರ ಸಂಘಟನಾ ಶಕ್ತಿಯನ್ನು ಕೊಂಡಾಡಿದರು. ಅಭಿನಂದನ ಅವರಿಗೆ ಬೇಕಿಲ್ಲ, ನಮ್ಮೆಲ್ಲರ ಸಂತೋಷಕ್ಕೆ ಅವರು ಬಂದಿದ್ದು ಎನ್ನುವ ಆಶಯದ ನುಡಿ ಶೆಟ್ಟರ ಘನತೆ ಗೌರವದ ವ್ಯಕ್ತಿತ್ವವನ್ನು ಬಲ್ಲ ಅಲ್ಲಿ ನೆರೆದವರಾರಿಗೂ ಒಂದಿನಿತೂ ಅತಿಶಯೋಕ್ತಿ ಎನಿಸಲಿಲ್ಲ.ಕನ್ನಡದ ಕಟ್ಟಾಳು ಎ ಎಸ್ ಎನ್ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಶೆಟ್ಟರ ಮುಂದಿನ ಬದುಕಿಗೆ ಶುಭ ಹಾರೈಸಿದರು.


-ಬೈಂದೂರು ಚಂದ್ರಶೇಖರ ನಾವಡ

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!