spot_img
Sunday, April 5, 2026
spot_img

ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪೋಷಕ-ಶಿಕ್ಷಕ ಮತ್ತು ಆಡಳಿತ ಮಂಡಳಿ ಸಭೆ

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2022-23 ನೇ ಸಾಲಿನ ಪೋಷಕರ, ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಸಭೆ ಜು.16 ರಂದು ಜರುಗಿತು.

ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರೋ. ವೃಷಭರಾಜ್ ಜೈನ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ,ಮಗುವಿನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ತಂದೆ-ತಾಯಿ ಇಬ್ಬರ ಪಾತ್ರ ಪ್ರಧಾನವಾದದ್ದು. ತಂದೆ ತಾಯಿಗಳು ಅಧ್ಯಾಪಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು, ಅವರ ಕಲಿಕಾ ಪ್ರಗತಿಯ ಕುರಿತಾಗಿ ನಿರಂತರ ಸಮಾಲೋಚನೆ ನೆಡೆಸುತ್ತಿರಬೇಕು. ಉತ್ತಮ ಪೋಷಕರಾಗಲು ಯಾವುದೇ ಸಿದ್ಧಪಡಿಸಿದ ಮಾದರಿಗಳಿಲ್ಲ. ಮಗುವಿನ ವ್ಯಕ್ತಿಗತ ಭಿನ್ನತೆಯನ್ನು ಅರಿತುಕೊಂಡು ಸರಿಯಾದ ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇಂದಿದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದಲ್ಲಿ ಪೋಷಕರ ಬೆಂಬಲ ಅತೀ ಅಗತ್ಯ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕಾದ ಹೊಣೆ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಮಕ್ಕಳು ಬಾಹ್ಯ ಆಕರ್ಷಣೆಗಳಿಗೆ ಬಲಿಯಾಗದಂತೆ, ಅವರನ್ನು ಸುಸಂಸ್ಕೃತರನ್ನಾಗಿಸುವಲ್ಲಿ ವಿಶೇಷ ಆಸ್ಥೆ ವಹಿಸಬೇಕು. ಸಂಸ್ಕಾರ ಎನ್ನುವುದು ತಲೆಮಾರಿನಿಂದ ತಲೆಮಾರಿಗೆ ನಿರಂತರವಾಗಿ ಪ್ರವಹಿಸುತ್ತಲೇ ಇರಬೇಕು. ಸಂಸ್ಕಾರವನ್ನು ಮರೆತರೆ ಸಮಾಜದ ಸ್ವಾಸ್ಥ್ಯವೇ ಕೆಟ್ಟು ಹೋಗುವುದು. ಮಕ್ಕಳಿಗೆ ಅತಿಯಾದ ಕಟ್ಟುನಿಟ್ಟಿನ ಶಿಸ್ತನ್ನು ವಿಧಿಸದೆ, ಅತಿಯಾಗಿ ಮುದ್ದನ್ನೂ ಮಾಡದೇ, ಶಿಸ್ತು ಮತ್ತು ಮುದ್ದಿನಲ್ಲಿ ಇತಿಮಿತಿಯನ್ನು ಕಾಯ್ದುಕೊಳ್ಳಬೇಕು. ಮಕ್ಕಳು ತಪ್ಪಿದಾಗ ಶಿಕ್ಷೆ ವಿಧಿಸುವ ಬದಲು ಕ್ಷಮೆ ನೀಡಿ, ಅವರ ತಪ್ಪನ್ನು ತಿಳಿಸಿಕೊಟ್ಟು, ತಿದ್ದುವ ಕಾರ್ಯ ಮಾಡಬೇಕು. ಮಕ್ಕಳ ಭಾವನೆಗಳನ್ನು ಗೌರವಿಸಬೇಕು. ಮನೆಯ ವ್ಯವಹಾರಗಳನ್ನೆಲ್ಲ ಅವರಿಗೆ ತಿಳಿಸಿಕೊಟ್ಟು, ಅವರಿಗೂ ಜವಾಬ್ದಾರಿಗಳನ್ನು ಹಂಚಬೇಕು. ಅವರದ್ದು ಚಿಕ್ಕ ಪುಟ್ಟ ಸಾಧನೆಗಳಾಗಿದ್ದರೂ ಅದಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿರಬೇಕು. ಎಂದು ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಕುರಿತಾಗಿ ಸಾಕಷ್ಟು ಕಿವಿಮಾತುಗಳನ್ನು ನೀಡಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರೂ ಆದ ಶರಣ ಕುಮಾರ ಮಾತನಾಡಿ ಕ್ಷೇತ್ರದ ಅಧಿಪತಿ ಶ್ರೀ ಸಿದ್ಧಿವಿನಾಯಕನ ಅನುಗ್ರಹ ಮತ್ತು ಪೋಷಕರ ಪ್ರೀತಿ-ಅಭಿಮಾನದ ಫಲವಾಗಿ ನಮ್ಮೀ ಸಂಸ್ಥೆ ಬೆಳೆದಿದೆ; ಬೆಳೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಸರಳ ಜೀವನ ಮತ್ತು ಕಷ್ಟ ಸಹಿಷ್ಣುತೆಯ ಪಾಠವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದೇವೆ. ಇಂದು ಸಮಾಜದಲ್ಲಿ ವಸ್ತುಗಳ ಮೇಲೆ ಪ್ರೀತಿ ಹೆಚ್ಚು; ವ್ಯಕ್ತಿಗಳ ಮೇಲಿಲ್ಲ. ಹಣ ಕೊಟ್ಟು ವಸ್ತುಗಳನ್ನು ಕೊಂಡುಕೊಳ್ಳಬಹುದು; ಪ್ರೀತಿ-ವಿಶ್ವಾಸಗಳನ್ನಲ್ಲ. ಆದ್ದರಿಂದ ಮನೆಯಲ್ಲಿನ ಮಕ್ಕಳೊಂದಿಗೆ, ಕುಟುಂಬದವರೊಂದಿಗೆ, ಬಂಧು-ಬಾಂಧವರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಕಲ್ಪಿಸಬೇಕಾದ ಅಗತ್ಯತೆಯಿದ್ದು, ಆ ನಿಟ್ಟಿನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ ಎಂದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್.ಟಿ.ತಿಮ್ಮಪ್ಪನವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಮಕ್ಕಳನ್ನು ತಿದ್ದುವುದು, ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ಇಷ್ಟವಾದ ಕಾರ್ಯವಾಗಬೇಕು. ಸದಾ ಮಕ್ಕಳ ಮುಂದೆ ಒಳ್ಳೆಯ ವಿಚಾರಗಳನ್ನೇ ಇಡಬೇಕು; ಅದನ್ನು ನೋಡುತ್ತಾ ನೋಡುತ್ತಾ ಮಕ್ಕಳು ಕಲಿಯುವಂತಾಗಬೇಕು. ಮಕ್ಕಳು ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದಾರಾ ಅನ್ನೋದಕ್ಕಿಂತ ಅವರು ಕಲಿಕೆಯಲ್ಲಿ ಸಂತೋಷವನ್ನು ಹೊಂದುತ್ತಿದ್ದಾರಾ? ಎನ್ನುವುದನ್ನು ಯಾವಾಗಲೂ ಗಮನಿಸುತ್ತಿರಬೇಕು. ಅವರಿಗೆ ಯೋಗ್ಯವಾದ ಶಿಕ್ಷಣವನ್ನು ಕೊಟ್ಟು ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್ ಬಾಲಚಂದ್ರ ಭಟ್, ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಪ್ರೋ. ನಾರಾಯಣ ರಾವ್, ಪೋಷಕರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಸ್ವಾಗತಿಸಿದರು, ಸಹ ಶಿಕ್ಷಕರಾದ ಶ್ರೀಮಧು ಕೆ.ಎಲ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸವಿತಾ ಭಟ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!