spot_img
Monday, March 30, 2026
spot_img

ಕಾಡುತ್ತಿರುವ ಅನಾರೋಗ್ಯ, ಮಲಗಿಕೊಂಡೇ ಓದಿ ಎಸ್.ಎಸ್.ಎಲ್.ಸಿಯಲ್ಲಿ 579 ಅಂಕ ಪಡೆದ ಸಾಧಕಿ ಶ್ರಾವ್ಯಾ

(ನಾಗರಾಜ್ ವಂಡ್ಸೆ)

ಮೂರು ವರ್ಷದಿಂದ ಕಾಡುತ್ತಿರುವ ಅನಾರೋಗ್ಯ, ತರಗತಿಗೆ ಹೋಗಲಾಗದ ವ್ಯಥೆ, ಆದರೂ ಶೈಕ್ಷಣಿಕವಾಗಿ ಸಾಧಿಸುವ ಛಲ, ದೇಹದ ಅನಾರೋಗ್ಯ ದೂರವಿಟ್ಟು ಗಟ್ಟಿ ಆತ್ಮವಿಶ್ವಾಸದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು 579 ಗಳಿಸುವ ಮೂಲಕ ರಾಜ್ಯದ ಶೈಕ್ಷಣಿಕ ವಲಯವೇ ಗಮನಿಸುವಂತಹ ಸಾಧನೆ ಮಾಡಿದ್ದು ಬೈಂದೂರು ಶೈಕ್ಷಣಿಕ ವಲಯದ ಆತ್ರಾಡಿ ವಿಜಯ ಮಕ್ಕಳಕೂಟ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಆರ್.

ಹಕ್ಲಾಡಿ ಗ್ರಾ.ಪಂ. ವ್ಯಾಪ್ತಿಯ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾ ದಂಪತಿಗಳ ಪುತ್ರಿ ಶ್ರಾವ್ಯಾ ಆರ್ ನಿಜಕ್ಕೂ ಮಾದರಿ ಹೆಣ್ಣು ಮಗಳು. ಮನೆಯಲ್ಲಿ ಮಲಗಿಕೊಂಡೇ ನೋಟ್ಸ್, ಜೆರಾಕ್ಸ್ ಓದಿ, ಎಸ್.ಎಸ್.ಎಲ್.ಸಿಯಲ್ಲಿ ಈ ಸಾಧನೆ ಮಾಡಿದ್ದಾಳೆ.

ಶ್ರಾವ್ಯಾ ಬಾಲ್ಯದಿಂದಲೂ ಬಲು ಚೂಟಿ. ಚುರುಕುಮತಿಯ ಬಾಲಕಿ. ಕಲಿಕೆ, ಆಟೋಟ, ಮಾನವೀಯ ಅಂತಃಕರಣ ಒಟ್ಟಾರೆಯಾಗಿ ಶ್ರಾವ್ಯಾ ಒಂಥರಾ ಪಾದರಸ. ವಿಜಯಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಶ್ರಾವ್ಯಾ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿದ್ದಳು. ಆದರೆ 7ನೇ ತರಗತಿ ವಿದ್ಯಾರ್ಥಿ ಸೆಮಿಸ್ಟರ್ ಬಳಿಕ ಶ್ರಾವ್ಯಾಳಿಗೆ ಅನಾರೋಗ್ಯ ಕಾಡಲಾರಂಭಿಸಿತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಕರುಳಿಗೆ ಸಂಬಂಧಪಟ್ಟ (ಬಿ‌ಐಡಿ ಕ್ರೋಮ್ಸ್) ಎನ್ನುವ ಸಮಸ್ಯೆ ಶ್ರಾವ್ಯಾಳನ್ನು ಹಿಂಡಿ ಹಿಪ್ಪೆ ಮಾಡಿತು. 35 ಕೆ.ಜಿ ದೇಹ ತೂಕ ಹೊಂದಿ ಆರೋಗ್ಯವಾಗಿದ್ದ ಹುಡುಗಿಯ ದೇಹತೂಕ ಗಣನೀಯವಾಗಿ ಇಳಿಯ ತೊಡಗಿತು. ಈಗ ಶ್ರಾವ್ಯಾ ಅಂದಾಜು 18 ಕೆ.ಜಿ ಇರಬಹುದು. ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯದಲ್ಲಿ ಇನ್ನೂ ತೂಕ ಕಡಿಮೆ ಇತ್ತು. ಈಗ ಸ್ಪಲ್ಪ ಸುಧಾರಣೆ ಕಾಣುತ್ತಿದೆ. ಶಿರಸಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

7ನೇ ತರಗತಿಯ ಬಳಿಕ ಶ್ರಾವ್ಯಾಗೆ ನಿರಂತರ ತರಗತಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ ವಿಜಯ ಮಕ್ಕಳಕೂಟ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಶೆಟ್ಟಿಯವರು ಶ್ರಾವ್ಯಾಳ ಕಲಿಕಾಸಕ್ತಿ, ಆಕೆಯ ಆತ್ಮವಿಶ್ವಾಸವನ್ನು ಗಮನಿಸಿ ತರಗತಿಗೆ ಬರದೇ ಇದ್ದರೂ ಕೂಡಾ ನೋಟ್ಸ್‌ಗಳನ್ನು ಒದಗಿಸಿ, ಆಕೆಗೆ ನಿರ್ದಿಷ್ಟ ತರಗತಿ ನಡೆಸಿ ಎಸ್.ಎಸ್.ಎಲ್.ಸಿ ತನಕ ಸಿದ್ಧ ಪಡಿಸಿದರು. ಎಸ್.ಎಸ್.ಎಲ್.ಸಿಯ ಪ್ರಾರಂಭದ ಆರು ತಿಂಗಳು ಶಿರಸಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ನೋಟ್ಸ್, ಪಿಡಿಫ್‌ಗಳನ್ನು ಒದಗಿಸಿದರು. ಕೆಲವೊಂದು ದಿನ ಶ್ರಾವ್ಯಾಗಳನ್ನು ಶಾಲೆಗೆ ಕರೆದುಕೊಂಡು ಹೋಗಿ ಪ್ರತ್ಯೇಕವಾಗಿ ಆಕೆಗೆ ಪಾಠ ಮಾಡಲಾಯಿತು. ಮೂರು ವರ್ಷಗಳ ಕಾಲ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಲಾಯಿತು. ರಾತ್ರಿ 3 ಗಂಟೆಗೆ ಎದ್ದು ಓದುತ್ತಿದ್ದಳು. ಪರೀಕ್ಷಾ ಕೇಂದ್ರಕ್ಕೆ ಹೋಗುವಾಗಲೂ ಕೂಡಾ ಶಾಲಾ ಸಂಚಾಲಕ ಸುಭಾಶ್ಚಂದ್ರ ಶೆಟ್ಟ ತನ್ನ ವಾಹನದಲ್ಲಿಯೇ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಕರೆದೋಯ್ಯುತ್ತಿದ್ದರು. ಕೆಲವೊಂದು ಪರೀಕ್ಷೆ ಸಂದರ್ಭ ನಿತ್ರಾಣದಿಂದ ತುಂಬಾ ಸಮಸ್ಯೆಯಾಗುತ್ತಿತ್ತು. ಸಂಕಟವಾಗುತ್ತಿತ್ತು. ಆರು ಪರೀಕ್ಷೆಗಳನ್ನು ಬರೆಯುವುದು ನಿಜಕ್ಕೂ ಶ್ರಾವ್ಯಗೆ ಸಾಹಸವಾಗಿತ್ತು.

ಫಲಿತಾಂಶ ಪ್ರಕಟವಾದಾಗಲೇ ಗೊತ್ತಾಗಿದ್ದು ಶ್ರಾವ್ಯಾ ಎನ್ನುವ ಮಗು ಅಪರೂಪದ ಸಾಧಕಿ ಎಂದು. ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ 116 ಅಂಕ, ಕನ್ನಡದಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 81, ವಿಜ್ಞಾನದಲ್ಲಿ 83, ಸಮಾಜ ವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ. ಕನ್ನಡ ಮತ್ತು ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ.

ಶ್ರಾವ್ಯಾಳ ಆತ್ಮವಿಶ್ವಾಸ, ಧೈರ್ಯ, ಛಲ ನಿಜಕ್ಕೂ ಭೇಷ್ ಎನ್ನಿಸುವಂತಹದ್ದು. ಶ್ರಾವ್ಯಾ ಈಗ ಪಿಯುಸಿಗೆ ಎಡ್ಮಿಷನ್ ಪಿಸಿ‌ಎಂಬಿಗೆ ಆಗಿದ್ದಾಳೆ. ಕುಂದಾಪುರ ಆರ್.ಎನ್.ಶೆಟ್ಟಿ ಕಾಲೇಜಲ್ಲಿ ಶ್ರಾವ್ಯಗೆ ಉಚಿತ ಸೀಟು ಸಿಗಲಿದೆ. ಶ್ರಾವ್ಯಾಳ ಕಂಗಳಲ್ಲಿ ಕಾಣುವ ಭರವಸೆ, ಆಕೆಯನ್ನು ಮುಂದೆ ದೊಡ್ಡ ಸಾಧಕರ ಸ್ಥಾನದಲ್ಲಿ ನಿಲ್ಲಿಸಬಹುದು.

ಸಹಕಾರ, ಪ್ರೋತ್ಸಾಹ ಬೇಕು

ಶ್ರಾವ್ಯಾಳ ಮುಂದೆ ಭವಿಷ್ಯದ ಕನಸು ಇದೆ. ಇದಕ್ಕೆ ಸಹೃದಯಿಗಳ ಪ್ರೋತ್ಸಾಹ ಬೇಕಾಗಿದೆ. ಶ್ರಾವ್ಯಾ ಬಡ ಕುಟುಂಬದ ಮಗಳು. ತಂದೆ ಹೆಮ್ಮಾಡಿಯಲ್ಲಿ ಸಣ್ಣದೊಂದು ಪಾಸ್ಟ್‌ಪುಡ್ ಅಂಗಡಿ ಇಟ್ಟುಕೊಂಡಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅನೇಕರು ಸಹಕಾರ ನೀಡಿದ್ದಾರೆ. ಸಹಕಾರ ನೀಡಿದ ಸಹೃದಯಿಗಳನ್ನು ಶ್ರಾವ್ಯಾ ಕುಟುಂಬ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಿದೆ. ಶ್ರಾವ್ಯಾಗೆ ಇನ್ನೂ ಚಿಕಿತ್ಸೆ ಮುಂದುವರಿಯಬೇಕು. ದೇಹತೂಕ ಯಥಾಸ್ಥಿತಿಗೆ ಬರಬೇಕಿದೆ.
ಸಹಕಾರ ನೀಡುವ ಸಹೃದಯಿಗಳು ಶ್ರಾವ್ಯಾಳ ದೂರವಾಣಿ ಸಂಖ್ಯೆ-7022088015 ಸಂಪರ್ಕಿಸಬಹುದು.

ಕೊಡಗಿನ ಪ್ರಕೃತಿ ವಿಕೋಪಕ್ಕೆ ಮಿಡಿದ ಶ್ರಾವ್ಯ
ಶ್ರಾವ್ಯಳಲ್ಲಿ ನಾಯಕತ್ವವನ್ನು ಪ್ರಾರಂಭದಲ್ಲಿಯೇ ಶಾಲೆಯಲ್ಲಿ ಗುರುತಿಸಲಾಗಿತ್ತು. ಆಗ ಹೊಸದಾಗಿ ಆರಂಭಗೊಂಡ ಶಾಲೆ ಆದ್ದರಿಂದ ಮೊದಲ ಬ್ಯಾಚ್ ವಿದ್ಯಾರ್ಥಿಗಳಾಗಿದ್ದರು ಇವರು. ಕೊಡಗಿನಲ್ಲಿ ಪ್ರಕೃತಿ ವಿಕೋಪದ ಸಮಯ ಕೊಡಗು ಸಂತ್ರಸ್ತರ ಪರವಾಗಿ ವಿದ್ಯಾರ್ಥಿ ಪೋಷಕರು, ಶಿಕ್ಷಣ ಪ್ರೇಮಿಗಳ ಮೂಲಕ 60 ಸಾವಿರ ಹಣ ಸಂಗ್ರಹಿಸುವಲ್ಲಿ ಶ್ರಾವ್ಯಾಳ ನಾಯಕತ್ವ ಎಲ್ಲಡೆಗೆ ಗಮನ ಸಳೆದಿತ್ತು.

ಇಂಜಿನಿಯರ್ ಆಗ್ತೇನೆ
ನಾನು ವೈದ್ಯೆಯಾಗಬೇಕು ಎನ್ನುವ ಕನಸು ಕಂಡಿದ್ದೆ. ಛಲ ಬಿಡುವುದಿಲ್ಲ, ಕೊನೆಗೆ ಇಂಜಿನಿಯರ್ ಆದರೂ ಆಗಿಯೇ ಆಗ್ತೇನೆ. ಅದಕ್ಕಾಗಿ ಪಿಯುನಲ್ಲಿ ಪಿಸಿ‌ಎಂಬಿ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸ್ನೇಹಿತರ ಜೊತೆ ಕಾಲೇಜಿಗೆ ಹೋಗ್ತೇನೆ, ಆಗ ಈ ಏಕಾಂಗಿತನ ದೂರಾಗುತ್ತದೆ. ನಾನು ಸಾಧಿಸಿ ತೋರಿಸುತ್ತೇನೆ
-ಶ್ರಾವ್ಯಾ ಆರ್., ಸಾಧಕ ವಿದ್ಯಾರ್ಥಿನಿ

ಶ್ರಾವ್ಯಾ ಎಲ್ಲರಂತೆ ತರಗತಿಗೆ ಬಂದಿದ್ದರೆ 625 ಅಂಕ ಪಡೆಯುತ್ತಿದ್ದಳೋ ಏನೋ. ಆದರೂ ಆಕೆಯ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದು. ಪರೀಕ್ಷೆ ಸಂದರ್ಭದಲ್ಲಿ ನನಗೆ ಆತಂಕವಾಗುತ್ತಿತ್ತು. ಒಂದು ಪರೀಕ್ಷೆ ಮುಗಿಸಿದ ಬಂದ ಶ್ರಾವ್ಯಾಗೆ ತುಂಬಾ ಸಮಸ್ಯೆಯಾಗಿತ್ತು. ಆಕೆಗೆ ಒಳ್ಳೆಯ ಭವಿಷ್ಯವಿದೆ. ಶ್ರಾವ್ಯಾ ನಮ್ಮೀ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿ”
-ಸುಭಾಶ್ಚಂದ್ರ ಶೆಟ್ಟಿ, ಸಂಚಾಲಕರು, ವಿ‌ಎಂಕೆ ಆತ್ರಾಡಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!