spot_img
Thursday, May 14, 2026
spot_img

ಏನಿದು ಸ್ಕಿಝೋಫ್ರೆನಿಯಾ ?

ಡಾ.ಪಿ.ವಿ ಭಂಡಾರಿ
ಮನೋ ವೈದ್ಯರು, ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ

ಮೇ 24 ಪ್ರತಿ ವರುಷ “ವಿಶ್ವ ಸ್ಕಿಝೋಫ್ರೆನಿಯಾ ದಿನಾಚರಣೆ” ಎಂದು ಆಚರಿಸಲಾಗುತ್ತದೆ. ಸ್ಕಿಝೋಫ್ರೆನಿಯಾವನ್ನು ಕನ್ನಡ ಭಾಷೆಯಲ್ಲಿ ಇಚ್ಛಿತ ಚಿತ್ತ ವಿಕಲತೆ ಎಂದು ಕರೆಯುತ್ತಾರೆ. ಇದು ತೀವ್ರ ಬಗೆಯ ಮಾನಸಿಕ ರೋಗಗಳಲ್ಲಿ ಒಂದು. ಮನೋ ವಿಜ್ಞಾನ ಎಷ್ಟೇ ಮುಂದುವರೆದರು ಇಂದಿಗೂ ಈ ಸ್ಕಿಜೋಫ್ರೇನಿಯಾಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಈಗಲೂ ನಾವು ಹಲವಾರು ಜನ ರಸ್ತೆಯಲ್ಲಿ ಓಡಾಡುತ್ತ, ಶೂನ್ಯದಲ್ಲಿ ಮಾತನಾಡುತ್ತ, ನಿದ್ರೆ ಇಲ್ಲದೆ ವೈಯಕ್ತಿಕ ಸ್ವಚ್ಛತೆ ಇಲ್ಲದೆ, ಹಗಲು ರಾತ್ರಿ ಎನ್ನದೆ, ರಸ್ತೆ ಬದಿಯಲ್ಲಿ, ಬಸ್ ನಿಲ್ದಾಣಗಳಲ್ಲಿ ಮಲಗಿಕೊಂಡು, ಹಳೆ ಬಟ್ಟೆಗಳ ರಾಶಿಯನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿಕೊಂಡು ಓಡಾಡುವ ಹಲವಾರು ಜನ ನೋಡುತ್ತೇವೆ. ಇವರಲ್ಲಿ ಹೆಚ್ಚಿನವರು ಈ “ಇಚ್ಛಿತ ಚಿತ್ತ ವಿಕಲತೆ” ಯಿಂದ ಬಳಲುತ್ತಾ ಇರುವವರು. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ, ಮಿದುಳಿನ ಮೇಲ್ಮೈಯಲ್ಲಿ ಶಾಶ್ವತ ರಚನಾತ್ಮಕ ಬದಲಾವಣೆಗಳನ್ನು ಹೊಂದಿ ಮುಂದೆ ಚಿಕಿತ್ಸೆ ಸಿಕ್ಕರು ಅದಕ್ಕೆ ಸ್ಪಂದಿಸದ ಸ್ಥಿತಿಯಲ್ಲಿ ಇವರುಗಳು ಇರುತ್ತಾರೆ. ಸಮಾಜ ಇವರನ್ನು ಹುಚ್ಚರು ಎಂದು ಕರೆದು ಸಾಮಾಜಿಕವಾಗಿ ಪ್ರತ್ಯೇಕಿಸಿ ಬಿಡುತ್ತದೆ. ಹಲವಾರು ಜನ ಕೊನೆಯವರೆಗು ರಸ್ತೆ ಬದಿಯಲ್ಲಿ ಜೀವಿಸಿದರೆ ಹಲವರು ನಿರಾಶ್ರಿತರ ನಿವಾಸಗಳ ಪಾಲಾಗುತ್ತಾರೆ. ಹಾಗಿದ್ದರೆ ಎಲ್ಲ ಸ್ಕಿಝೋಫ್ರೆನಿಯಾ ರೋಗಿಗಳು ಹೀಗೆಯೇ? ಇಲ್ಲ, ಮುಂದೆ ಓದಿ.

ಸ್ಕಿಝೋಫ್ರೆನಿಯಾ ರೋಗವು ಹೆಚ್ಚಾಗಿ ಇಪ್ಪತ್ತರಿಂದ ಮೂವತ್ತರ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈ ರೋಗದಿಂದ ಬಳಲುವ ವ್ಯಕ್ತಿ ಈ ವಯಸ್ಸಿನಲ್ಲಿ ಇದ್ದಕಿದ್ದಂತೆ ಮೌನವಾಗಿ ಬಿಡುವುದು, ಅಕ್ಕಪಕ್ಕದವರ ಮೇಲೆ, ಪ್ರೀತಿಪಾತ್ರರ ಮೇಲೆ ಸಂಶಯ ಪಡುವುದು, ಯಾರು ಮಾತನಾಡದಿದ್ದರು ಕಿವಿಯಲ್ಲಿ ಇವರಿಗೆ ಮಾತು ಕೇಳಿಸಿದಂತೆ ಆಗುವುದು, ತಮ್ಮ ಯೋಚನೆಗಳು ಬೇರೆಯವರಿಗೆ ಗೊತ್ತಾಗುತ್ತಾ ಇದೆ ಅನ್ನಿಸಲು ಪ್ರಾರಂಭವಾಗುವುದು. ತಾವು ಯೋಚನೆ ಮಾಡಿದ್ದು ಟಿವಿಯಲ್ಲಿ ಬರುತ್ತಿದೆ. ರೇಡಿಯೋ ದಲ್ಲಿ ಬರುತ್ತಿದೆ ಎಂಬಂತೆ ಭಾಸವಾಗುತ್ತದೆ. ಒಟ್ಟಾರೆಯಾಗಿ ವ್ಯಕ್ತಿ ವಾಸ್ತವ ಜಗತ್ತಿನಿಂದ ದೂರವಾಗಿ ತನ್ನದೇ ಒಂದು ವಿಚಿತ್ರ ಲೋಕದಲ್ಲಿ ಇರುತ್ತಾನೆ. ತನಗೆ ಇದು ಒಂದು ಮಾನಸಿಕ ಕಾಯಿಲೆ ಎಂಬ ಒಳ ಹರಿವು ಈ ವ್ಯಕ್ತಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮನೆಯವರು ಯಾರಾದರೂ ಗುರುತಿಸಿ ಈ ವ್ಯಕ್ತಿಯನ್ನು ಚಿಕಿತ್ಸೆಗೆ ಕರೆದುಕೊಂಡು ಬಂದರೆ ವ್ಯಕ್ತಿ ಕಾಯಿಲೆ ಶುರುವಾದ ಶುರುವಿನಲ್ಲೇ ಸರಿಯಾದ ಚಿಕಿತ್ಸೆ ಪಡೆದರೆ, ಚಿಕಿತ್ಸೆ ಮುಂದುವರೆಸುತ್ತ ಈ ಕಾಯಿಲೆಯ ಹೊರತಾಗಿಯೂ ಸಾಮಾನ್ಯ ಜೀವನ ನಡೆಸಬಹುದು. ಈ ಕಾಯಿಲೆ ಬಿಪಿ ಶುಗರ್ ಇದ್ದ ಹಾಗೆಯೇ. ಮಾತ್ರೆಗಳಿಂದ ಹತೋಟಿಯಲ್ಲಿ ಇಡಬಹುದು ಹೊರತು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.

ಈ ಕಾಯಿಲೆ ಮಿದುಳಿನ ಕಾಯಿಲೆಯಾಗಿದ್ದು ಮಿದುಳಿನ ಮೇಲ್ಮೈಯಲ್ಲಿ ಹಾಗು ಮಿದುಳಿನ ನರವಾಹಕಗಳು ಅಂದರೆ ಸೆರೋಟೋನಿನ್, ಡೋಪಮಿನ್ ಇವುಗಳ ಅಸಮತೋಲನದಿಂದ ಉಂಟಾಗುತ್ತದೆ ಎಂದು ವಿಜ್ಞಾನ ತಿಳಿಸುತ್ತದೆ. ಇಂತಹುದೇ ಕಾರಣದಿಂದ ಮಿದುಳಿನಲ್ಲಿ ಈ ರಚನಾತ್ಮಕ ಬದಲಾವಣೆಗಳು ಹಾಗು ನರವಾಹಕಗಳಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಮಿದುಳಿಗೆ ವೈರಸ್ ಸೋಂಕಿನಿಂದ ಹಿಡಿದು ಚಳಿಗಾಲದಲ್ಲಿ ಹುಟ್ಟಿದ ಮಕ್ಕಳಲ್ಲಿ, ಹಾಗೆಯೇ ಜನನ ಸಂದರ್ಭದಲ್ಲಿ ತಾಯಿಯ ಜನನನಾಳದಲ್ಲಿ ಮಗು ಸಿಕ್ಕಿಹಾಕಿಕೊಂಡಾಗ ಉಂಟಾದ ಬದಲಾವಣೆಗಳನ್ನು ಸಂಶೋಧಿಸಿ ಸ್ಕಿಝೋಫ್ರೆನಿಯಾ ಕಾಯಿಲೆಗೆ ಕಾರಣವಿರಬಹುದು ಎಂದು ವಿಜ್ಞಾನಿಗಳು ನಾನಾ ವಿಧದ ಅಭಿಪ್ರಾಯಗಳನ್ನು ಚರ್ಚಿಸಿದ್ದಾರೆ. ಹಲವು ಒಂದೇ ಕುಟುಂಬದ ಸದಸ್ಯರಲ್ಲಿ ಈ ಕಾಹಿಲೆ ಕಾಣಸಿಗುವುದರಿಂದ ಅನುವಂಶಿಕ ಕಾರಣಗಳು ಕೂಡ ಉಲ್ಲೇಖಿಸಿದ್ದಾರೆ. ಈ ಕಾಹಿಲೆಯಿಂದ ಬಳಲುತ್ತಿರುವವರ ಮಿದುಳಿನ ಸಿಟಿ ಸ್ಕ್ಯಾನ್, mri ಸ್ಕ್ಯಾನ್, ಹಾಗೆಯೇ ಮಿದುಳಿನ ರಕ್ತ ಪರಿಚಲನೆ ಬಗ್ಗೆ ಪೆಟ್ ಮತ್ತು ಸ್ಪೆಕ್ಟ್ ಸ್ಕ್ಯಾನ್ ಇವುಗಳನ್ನು ಗಮನಿಸಿ ಸಂಶೋಧಕರು ಈ ರೋಗದಿಂದ ಬಳಲುತ್ತಾ ಇರುವವರ ಮಿದುಳಿನಲ್ಲಿ ಜನಸಾಮಾನ್ಯರಿಗಿಂತ ಹಲವಾರು ರಚನತ್ಮಾಕ ಬದಲಾವಣೆಗಳನ್ನು ಗಮನಿಸಿರುತ್ತಾರೆ. ಆದರೂ ಇವತ್ತಿನವರೆಗೂ ವೈದ್ಯಕೀಯ ಜಗತ್ತು ಈ ಕಾಯಿಲೆಗೆ ಇದೆ ಕಾರಣ, ಈ ಕಾಯಿಲೆಗೆ ಇದೆ ರಾಮಬಾಣ ಎಂಬ ಚಿಕಿತ್ಸೆ ಕಂಡು ಹಿಡಿದಿಲ್ಲ.

ಈ ಕಾಯಿಲೆಯಲ್ಲಿ ಡೆಲ್ಯೂಷನ್ಸ್ ಅಂದರೆ ಯಾವುದೊ ಒಂದು ವಿಚಾರದಲ್ಲಿ ಬಲವಾದ ತಪ್ಪು ನಂಬಿಕೆಗಳು. ಉದಾಹರಣೆಗೆ ಯಾರೋ ತನ್ನ ಮಿದುಳನ್ನು ನಿಯಂತ್ರಿಸುತ್ತಾರೆ, ತನಗೆ ಊಟಕ್ಕೆ ಮನೆಯವರೇ ವಿಷ ಹಾಕುತ್ತಾರೆ ಇತ್ಯಾದಿ ಕೆಲವರಲ್ಲಿ ಕಂಡು ಬಂದರೆ ಇನ್ನು ಕೆಲವರಲ್ಲಿ ಹಾಲುಸಿನಶನ್ಸ್. ಶೂನ್ಯದಲ್ಲಿ ಯಾರೋ ಮಾತನಾಡಿದ ಹಾಗೆ, ಯಾರೋ ತಮ್ಮ ನಡವಳಿಕೆಯ ಬಗ್ಗೆ ಕಾಮೆಂಟರಿ ಹೇಳುತ್ತಾ ಇರುವ ಹಾಗೆ, ಕಣ್ಣಿಗೆ ಶೂನ್ಯದಲ್ಲಿ ವಸ್ತುಗಳು ಕಂಡಹಾಗೆ ಭಾಸವಾಗಬಹುದು. ವಿಚಿತ್ರವೆಂದರೆ ಕೆಲವರಲ್ಲಿ ತಮ್ಮ ಮನಸ್ಸಿನ ಯೋಚನೆಗಳನ್ನು ಯಾರೋ ಹೊರಗಿನಿಂದ ನಿಯಂತ್ರಿಸುತ್ತಾರೆ, ತನ್ನ ತಲೆಯಲ್ಲಿ ಯಾರೋ ಮೈಕ್ರೋಚಿಪ್ ಇಟ್ಟು ಮನಸ್ಸನ್ನು ನಿಯಂತ್ರಿಸುತ್ತಾರೆ ಮುಂತಾದ ವಿಚಿತ್ರ ಯೋಚನೆಗಳು ಇವರಿಗೆ ಬರುತ್ತದೆ. ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದಲ್ಲಿ ಈ ವ್ಯಕ್ತಿಗಳು ಸಮಾಜದಿಂದ ದೂರ ಸರಿದು ಒಬ್ಬಂಟಿಗರಾಗಿ ಮೇಲೆ ತಿಳಿಸಿದ ಹಾಗೆ ಒಬ್ಬರೇ ರಸ್ತೆಯಲ್ಲಿ ಓಡಾಡಿಕೊಂಡು “ಹುಚ್ಚರು” ಎಂದು ಕರೆಯಲ್ಪಡುತ್ತಾರೆ. ಇವರ ಮಾತು ಕಡಿಮೆಯಾಗುತ್ತದೆ, ನಿರಾಸಕ್ತರಾಗುತ್ತಾರೆ, ವಯಕ್ತಿಕ ಸ್ವಚ್ಛತೆಯಂತ ವಿಷಯಗಳಲ್ಲಿ ಕೂಡ ಆಸಕ್ತಿ ಕಳೆದುಕೊಂಡು ವಿರಕ್ತರಾಗುತ್ತಾರೆ.

ಮೇಲೆ ತಿಳಿಸಿರುವ ವಿಷಯಗಳನ್ನು ಗಮನಿಸಿದರೆ ಈ ಕಾಯಿಲೆಗೆ ಮದ್ದು ಅಂದರೆ ಡೋಪಮೈನ್ ಸೆರಟೋನಿನ್ ನರವಾಹಕಗಳ ಅಸಮತೋಲನ ಸರಿಪಡಿಸುವುದನ್ನು ಪ್ರಯತ್ನಿಸುವುದು. ಈ ಬಗ್ಗೆ ಆಧುನಿಕ ವೈದ್ಯಕೀಯ ಶಾಸ್ತ್ರ ಸಾಕಷ್ಟು ಗೆಲುವು ಕಂಡಿದೆ. ಆಂಟಿ ಸೈಕಾಟಿಕ್ಸ್ ಎಂಬ ಮಾತ್ರೆಗಳು ಸರಿಯಾದ ಸಮಯದಲ್ಲಿ ಈ ರೋಗಿಗೆ ಸಿಕ್ಕಲ್ಲಿ ಕಾಯಿಲೆ ಸಾಕಷ್ಟು ಗುಣಮುಖವಾಗಿ ರೋಗಿ ಸಮಾಜದಲ್ಲಿ ಎಲ್ಲರಂತೆಯೇ ಬದುಕಬಹುದು. ಸರಿಯಾದ ಸಮಯಕ್ಕೆ ಅಂದರೆ ಕಾಹಿಲೆ ಪ್ರಾರಂಭವಾದ ಸಮಯದಲ್ಲೇ ಚಿಕಿತ್ಸೆಗೆ ಬಂದಲ್ಲಿ ಹೆಚ್ಚಿನವರು ಸಂಪೂರ್ಣ ಗುಣಮುಖರಾದರು ಕೂಡ ಮಾತ್ರೆಗಳನ್ನು ಮುಂದುವರೆಸಿಕೊಂಡು ಹೋಗ ಬೇಕಾಗಬಹುದು. ಹೆಚ್ಚಿನವರು ಈ ಕಾಯಿಲೆ ಬಂದಾಗ ಇದಕ್ಕೆ ಕಾರಣ ತಿಳಿಯದೆ ಮಾಟ ಮಂತ್ರ ವಶೀಕರಣ ಎಂದೆಲ್ಲ ತಿಳಿದು ಸಾಂಪ್ರದಾಯಿಕ, ಅವೈಜ್ಞಾನಿಕ ಚಿಕಿತ್ಸಾ ಕ್ರಮಗಳಿಗೆ ಮಾರುಹೋಗಿ ಕಾಯಿಲೆ ಉಲ್ಬಣಗೊಂಡ ಮೇಲೆಯೋ ಅಥವಾ ರೋಗಿಯು ತನ್ನ ಕಾಹಿಲೆಯ ಚಿಹ್ನೆಯಾದ ಅಪನಂಬಿಕೆಗಳಿಂದ ಯಾರದೋ ಮೇಲೆ ಆಕ್ರಮಣ ಮಾಡುವುದೋ ಮಾಡಿದಾಗ ವೈಜ್ಞಾನಿಕ ಚಿಕಿತ್ಸೆಗೆ ಕರೆದುಕೊಂಡು ಬಂದದ್ದು ಉಂಟು. ಹಾಗೆಯೇ ರೋಗ ಗುಣವಾಯಿತು ಎಂದು ಚಿಕಿತ್ಸೆ ನಿಲ್ಲಿಸಿ ಸಮಸ್ಯೆ ಜಾಸ್ತಿ ಮಾಡಿಕೊಳ್ಳುವುದು ಇದೆ. ಆಧುನಿಕ ಆವಿಷ್ಕಾರಗಳ ಫಲವಾಗಿ ಹಲವು ದೀರ್ಘಕಾಲೀನ ಸ್ಕಿಝೋಫ್ರೆನಿಯಾಗಳು ಕೂಡ ಈಗ ಚಿಕಿತ್ಸೆಗೆ ಸ್ಪಂದಿಸುತ್ತ ಇರುವುದು ಆಶಾದಾಯಕ ವಿಷಯ. ಅದರಿಂದ ಇಂತಹ ಕಾಯಿಲೆಗಳಿಗೆ better late than never ಎಂಬಂತೆ ವೈಜ್ಞಾನಿಕ ಚಿಕಿತ್ಸೆಗೆ ಒಳಪಡಿಸುವುದು ಒಳ್ಳೆಯದು.

ಕಾಯಿಲೆ ದೀರ್ಘಕಾಲೀನವಾದಾಗ ರೋಗಿ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಾಗ ಸಮಾಜದ ಬೆಂಬಲ, ವೃತ್ತಿಪರ ಪುನರ್ವಸತಿಯ ಪ್ರಯತ್ನ ಕೂಡ ಅಗತ್ಯ.

ಕೊನೆಯಲ್ಲಿ ಆಶ್ಚರ್ಯಕರ ಸಂಗಾತಿಯೊಂದನ್ನು ಹೇಳಿ ಲೇಖನ ನಿಲ್ಲಿಸುತ್ತೇನೆ. ಈ ಕಾಯಿಲೆಯಿಂದ ಬಳಲುತ್ತಾ ಇದ್ದ ಜಾನ್ ನಾಶ್ ಎಂಬ ವ್ಯಕ್ತಿ ಗಣಿತದಲ್ಲಿ ನೊಬೆಲ್ ಪ್ರಶಸ್ತಿಗಳಿಸಿದ್ದಾನೆ. ಈತನ ಜೀವನದ ಬಗ್ಗೆ beautiful mind ಎಂಬ ಸಿನೆಮಾ ಕೂಡ ಬಂದಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!