spot_img
Saturday, March 28, 2026
spot_img

ಕೃಷ್ಣಮೂರ್ತಿ ಮಂಜರು ಮತ್ತು ಕುಟುಂಬಸ್ಥರಿಂದ ಕೊಲ್ಲೂರಿನಲ್ಲಿ ಶ್ರೀ ವೀರಭದ್ರ ಸ್ವಾಮಿ ಶಿಲಾಮಯ ದೇವಸ್ಥಾನ ನಿರ್ಮಾಣ-ಲೋಕಾರ್ಪಣೆ

ಧರ್ಮನಿಷ್ಠರು, ಸತ್ಯಸಂದರಾದ ಕೃಷ್ಣಮೂರ್ತಿ ಮಂಜರಿಗೆ ಶ್ರೀ ವೀರಭದ್ರ ಸ್ವಾಮಿ ದೇವಳ ನಿರ್ಮಾಣದ ಪುಣ್ಯವಕಾಶ-ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ

ಕೊಲ್ಲೂರು, ಮೇ.26: 1200 ವರ್ಷಗಳ ಇತಿಹಾಸ ಇರುವ ಕೊಲ್ಲೂರು ದೇವಸ್ಥಾನದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಹಲವಾರು ಮಂದಿ ಆಸಕ್ತಿ ತಾಳಿದರೂ ಕೂಡಾ ಆ ಸೌಭಾಗ್ಯ ಧರ್ಮನಿಷ್ಠರು, ಸತ್ಯಸಂದರು ಆಗಿರುವ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಲಭಿಸಿದೆ. ಇಂಥಹ ಮಹಾನ್ ಕಾರ್ಯ ಮಾಡಲು ಪರಮಾತ್ಮನ ಅನುಗ್ರಹ ಬೇಕಾಗುತ್ತದೆ. ಆದಿಪರಾಶಕ್ತಿಯ ಪ್ರೇರಣೆಯಿಂದ ಮಂಜರು ಈ ಸೇವೆ ಮಾಡಿದ್ದಾರೆ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮತ್ತು ಕುಟುಂಬಸ್ಥರು ನೂತನವಾಗಿ ನಿರ್ಮಿಸಿಕೊಟ್ಟಿರುವ ಶ್ರೀ ಅಮ್ಮನವರ ಪರಿವಾರದ ದೇವರಾದ ಶ್ರೀ ವೀರಭದ್ರ ಸ್ವಾಮಿಯ ಶಿಲಾಮಯ ದೇಗುಲದ ಲೋಕಾರ್ಪಣೆ ಕಾರ್ಯಕ್ರಮದ ಶಿಲಾಫಲಕ ಅನಾವರಣ, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊಲ್ಲೂರು ದೇವಳದ ಹೊರ ಪ್ರಾಕಾರ ಅಭಿವೃದ್ದಿ, ಸುಸಜ್ಜಿತ ಯಾಗ ಶಾಲೆಯ ನಿರ್ಮಾಣ ಆಗಬೇಕಿದೆ. ದೇವಸ್ಥಾನದ ವತಿಯಿಂದ ಗೋಶಾಲೆ ನಿರ್ಮಿಸಲು ಸರಕಾರ 10 ಎಕ್ರೆ ಸ್ಥಳವನ್ನು ಎಳಜಿತ್‌ನಲ್ಲಿ ಗುರುತಿಸಿ ದೇವಸ್ಥಾನಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ವ್ಯವಸ್ಥಿತವಾದ ಗೋಶಾಲೆ ಅಲ್ಲಿ ನಿರ್ಮಾಣವಾಗಲಿದೆ ಎಂದರು.
20 ವರ್ಷಗಳ ಹಿಂದೆ ಕೊಲ್ಲೂರಲ್ಲಿ ಅಷ್ಟಬಂಧ ಬ್ರಹ್ಮಕಲಶ ಆಗಿತ್ತು. 12 ವರ್ಷಕ್ಕೊಮ್ಮೆ ಅಷ್ಟಬಂಧ ಬ್ರಹ್ಮಕಲಶ ಆಗಬೇಕು. 2023ರ ಜನವರಿಯಲ್ಲಿಯಾದರೂ ಈ ಕಾರ್ಯ ನಡೆಸಲು ಸಿದ್ಧತೆಗಳನ್ನು ನಡೆಸಬೇಕಾಗಿದೆ. ದಕ್ಷಿಣ ಭಾರತದಲ್ಲಿ ಮಧುರೆಯ ಮೀನಾಕ್ಷಿ ದೇವಸ್ಥಾನದಷ್ಟೇ ಪ್ರಸಿದ್ಧವಾದ ಈ ದೇವಸ್ಥಾನದಲ್ಲಿ ಸಂಪ್ರದಾಯಗಳ ವ್ಯವಸ್ಥಿತವಾಗಿ ನಡೆಯಬೇಕು ಎಂದರು.

16 ವರ್ಷಗಳ ಸಂಕಲ್ಪ ಈಡೇರಿದೆ-ಕೃಷ್ಣಮೂರ್ತಿ ಮಂಜರು
ಶ್ರೀವೀರಭದ್ರ ಸ್ವಾಮಿ ದೇವಳದ ಸೇವಾಕರ್ತರಾದ ಕೃಷ್ಣಮೂರ್ತಿ ಮಂಜರು ಮಾತನಾಡಿ, ಸುಮಾರು 16 ವರ್ಷಗಳ ಕನಸು ಈಗ ಕೈಗೂಡಿದೆ. ಇದು 16 ವರ್ಷಗಳ ಹಿಂದಿನ ಸಂಕಲ್ಪ. ಹಲವಾರು ಮಂದಿ ವೀರಭದ್ರಸ್ವಾಮಿ ದೇವಳ ನಿರ್ಮಾಣ ಮಾಡಲು ಆಸಕ್ತಿ ಹೊಂದಿದ್ದರು. ಆದರೆ ಆ ಸದವಕಾಶ ನಮ್ಮ ಪಾಲಿಗೆ ದೊರಕಿದ್ದು ಎಷ್ಟು ಜನ್ಮದ ಪುಣ್ಯ ಫಲವೋ ಗೊತ್ತಿಲ್ಲ. ಈ ಮಹತ್ಕಾರ್ಯದಿಂದ ಲೋಕಕ್ಕೆ ಒಳ್ಳೆದಾಗಬೇಕು. ಎಲ್ಲರಿಗೂ ಒಳ್ಳೆದಾಗಬೇಕು. ಈ ಪುಣ್ಯ ಎಲ್ಲರಿಗೂ ಲಭಿಸಲಿ ಎಂದರು.

ವೀರಭದ್ರ ದೇವಸ್ಥಾನ ನಿರ್ಮಾಣದ ಅವಕಾಶ ನನಗೆ ಸಿಕ್ಕಿರುವ ವಿಚಾರ ತಿಳಿಸಲು ನನ್ನ ಮನೆಗೆ ಬಂದ ಸಂದರ್ಭ ನನ್ನ ಕೈಯಲ್ಲಿ ಹಣವಿರಲಿಲ್ಲ. ಆ ಕ್ಷಣ ಕಣ್ಣೀರು ಬಂತು ಎಂದು ಭಾವುಕರಾದ ಮಂಜರು, ದೇವರು ನನ್ನ ಸಂಕಲ್ಪ ಈಡೇರಿಸಿದ್ದಾನೆ. ಆ ಸಂದರ್ಭ ನನಗೆ ಈ ದೇವಸ್ಥಾನ ನಿರ್ಮಾಣದ ಅವಕಾಶ ನೀಡುವಲ್ಲಿ ನಿರ್ಣಯ ಮಾಡಿದ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಹರೀಶ ಶೆಟ್ಟಿ, ಕೊಲ್ಲೂರು ರಮೇಶ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ ಹಾಗೂ ಎಲ್ಲ ಟ್ರಸ್ಟಿಗಳಿಗೂ, ಪ್ರಸ್ತುತ ಅಧ್ಯಕ್ಷರು ಎಲ್ಲ ಟ್ರಸ್ಟಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ವೀರಭದ್ರ ದೇವಳದ ಸೇವಾಕರ್ತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ದಂಪತಿಗಳು, ನಾಗರಾಜ ಮಂಜ ದಂಪತಿಗಳು, ಶ್ರೀಧರ ಮಂಜ ದಂಪತಿಗಳನ್ನು ಸನ್ಮಾನಿಸಲಾಯಿತು.

ಶಿಲಾಮಯ ದೇವಳದ ಶಿಲ್ಪಿ ದಿನೇಶ ಕಾರ್ಕಳ, ದಾರುಶಿಲ್ಪಿ ಚಂದ್ರಯ್ಯ ಆಚಾರ್ಯ ಕಳಿ, ತಾಮ್ರ ಹೊದಿಕೆ ಕೆಲಸ ನಿರ್ವಹಿಸಿದ ವಿಶ್ವಾಸ್ ಭಟ್ ಹಾಗೂ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.

ಮೂಕಾಂಬಿಕಾ ದೇವಳದ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಮಹೇಶ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಚಿನ್ ಕುಮಾರ್ ಶೆಟ್ಟಿ ಮತ್ತು ಸುಕೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಗಣೇಶ ಉಡುಪ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!