spot_img
Monday, March 23, 2026
spot_img

ಕಲಾವಿದರಿಗೇಕೆ ರಾತ್ರಿ ಧಾವಂತದ ಪಯಾಣ?

ಈಗ ಎಲ್ಲವೂ ವೇಗ, ಗಡಿಬಿಡಿ. ಧಾವಂತದ ಬದುಕಿನ ಕ್ರಮಕ್ಕೆ ಎಲ್ಲರೂ ಸಜ್ಜಾಗುತ್ತಿದ್ದಾರೆ. ಆಧುನಿಕ ಸೌಲಭ್ಯಗಳು, ಅವಶ್ಯಕತೆಗಳು, ಸೌಕರ್ಯಗಳು ಲಭಿಸಿವೆ. ಆದರೆ ತಾಳ್ಮೆ, ಸಂಯಮ ಈ ನಡುವೆ ಕುಸಿಯತೊಡಗಿದೆ. ಹಾಗಾಗಿ ಅನಾಹುತಗಳನ್ನು ನಾವಾಗಿಯೇ ಆಹ್ವಾನಿಸಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ.

ಕಳೆದ ಐದಾರು ವರ್ಷಗಳಿಂದ ಈಚೆಗೆ ಯಕ್ಷಗಾನ ಕಲಾವಿದರು ರಸ್ತೆ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಳ್ಳುವುದು, ಕೆಲವರು ಅಸುನೀಗಿರುವ ವರದಿಗಳು ಹೆಚ್ಚಾಗುತ್ತಲೇ ಇದೆ. ಇದು ಆಕಸ್ಮಿಕವೆಂದು ಕಂಡು ಬಂದರೂ ಕೂಡಾ ನಮ್ಮದೇ ನಿರ್ಲಕ್ಷ್ಯ, ಹಾಗೂ ಆತುರದ ನಿರ್ಧಾರ, ಅನಗತ್ಯ ಓಡಾಟವೂ ಇದಕ್ಕೆ ಕಾರಣವಾಗಿದೆ. ಇವತ್ತು 70ರಷ್ಟು ಯಕ್ಷಗಾನ ಕಲಾವಿದರು ಸ್ವಂತ ವಾಹನ ಹೊಂದಿದ್ದಾರೆ. ನಿತ್ಯವೇಷ ಮಾಡುವ ಯುವ ಕಲಾವಿದರೂ ಕೂಡಾ ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಹಾಗಾಗಿ ಬಹುತೇಕ ಕಲಾವಿದರು ಮೇಳದ ವಾಹನಗಳನ್ನು ಕಾಯದೇ ತಮ್ಮ ವಾಹನದಲ್ಲಿಯೇ ಆಟ ಆಗುವ ಸ್ಥಳ ತಲುಪುತ್ತಾರೆ. ರಾತ್ರಿ ತಮ್ಮ ಪಾತ್ರ ಮುಗಿದ ಬಳಿಕ ತಕ್ಷಣ ಎಷ್ಟೇ ರಾತ್ರಿಯಾಗಿರಲಿ ಚೌಕಿಯಿಂದ ಹೊರಡುತ್ತಾರೆ. ನಿದ್ದೆ ಮಂಪರಿನಲ್ಲಿ ಅನಾಹುತಗಳು ಸಂಭವಿಸುತ್ತವೆ. ಕಲಾವಿದರು ರಸ್ತೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ.

ರಾತ್ರಿ ನಿದ್ದೆ ಬಿಟ್ಟವರಿಗೆ ಹಗಲು ವೇಳೆ ಎಷ್ಟೇ ನಿದ್ದೇ ಮಾಡಿದರೂ ಕೂಡಾ ಸರಿದೂಗಿಸಿಕೊಳ್ಳುವುದು ಕಷ್ಟ. ಹಾಗಾಗಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಕಣ್ಣು ಮಂಜಾಗುವುದು, ಇತ್ಯಾದಿ ಸಣ್ಣ ತೊಡಕ್ಕಾದರೂ ಕೂಡಾ ಅಪಘಾತವಾಗುತ್ತದೆ. ಇವತ್ತು ಕಲಾವಿದರಿಗೆ ಸಾಕಷ್ಟು ಅನುಕೂಲತೆಗಳನ್ನು ಮೇಳದ ಯಜಮಾನರು ಮಾಡುತ್ತಾರೆ. ಹರಕೆ ಆಟದ ಮೇಳದವರಿಗೆ ಉತ್ತಮ ವ್ಯವಸ್ಥೆಗಳನ್ನು ಸೇವಾಕರ್ತರು ಮಾಡುತ್ತಾರೆ. ನಮ್ಮ ಹಿರಿಯ ಕಲಾವಿದರು ಕಾಲ್ನಡಿಗೆಯಲ್ಲಿ ಮೇಳದ ಸರಂಜಾಮುಗಳನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಒಂದು ಆಟದಿಂದ ಇನ್ನೊಂದು ಆಟಕ್ಕೆ ಹೋಗುತ್ತಿದ್ದದನ್ನು ಊಹಿಸಿಕೊಂಡರೇ ಭಯವಾಗುತ್ತದೆ. ಕಾಲ ಬದಲಾಗಿದೆ. ಪರಿವರ್ತನೆಗಳು ಆಗಿವೆ. ಆಧುನಿಕತೆ ಪ್ರತಿವೋರ್ವರ ಜೀವನಶೈಲಿಯನ್ನು ಆವರಿಸಿಕೊಂಡಿದೆ. ಬದಲಾವಣೆ ಎಲ್ಲರ ಬದುಕಿನಲ್ಲೂ ಸಹಜ ಪ್ರಕ್ರಿಯೆಯಾಗಿ ಪ್ರವೇಶಿಸಿದೆ. ಕೆಲವೇ ವರ್ಷಗಳ ಹಿಂದೆ ಬಸ್‌ನ ರಿಯಾಯತಿಯಾಗಿ ಕಲಾವಿದರ ಹೋರಾಟ, ಕೆಲವು ಕಲಾವಿದರು ಅನಿವಾರ್ಯ ಸಂದರ್ಭದಲ್ಲಿ ಬಸ್‌ಗಳನ್ನೇ ಅವಲಂಬಿಸಿದ ಸಮಯ (ಈಗಲೂ ಇದೆ), ಸಣ್ಣ ಸಣ್ಣ ಮೇಳಗಳು ಹಿಂದೆ ಹತ್ತು ಸಮಸ್ತರ ಆಟ ಮಾಡುವಾಗ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲು ಪಟ್ಟ ಶ್ರಮ ಇವತ್ತು ಇತಿಹಾಸ. ಈಗ ಎಷ್ಟೇ ಕಷ್ಟವಿದ್ದರೂ ಯಕ್ಷಗಾನ ಕಲಾವಿದರನ್ನು ಜನ ಗೌರವಿಸಿ, ಉಪಚರಿಸುತ್ತಾರೆ. ಹಿಂದೆಯೂ ಇತ್ತು ಆದರೆ ಆಗ ಮೂಲ ಸೌಕರ್ಯಗಳ ಕೊರತೆ ಇತ್ತು. ಹರಕೆ ಆಟ ಮಾಡಿಸುವ ಸೇವಾರ್ಥಿಗಳು ಮಧ್ಯಾಹ್ನ ಕಲಾವಿದರು ನಿದ್ದೆ ಮಾಡಲು ಹತ್ತಿರದಲ್ಲಿ ದೇವಸ್ಥಾನವಿಲ್ಲದೇ ಇದ್ದರೆ ಯಾರ್‍ಯಾರದ್ದೋ ಮನೆಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದರು. ಕಲಾವಿದರು ಕೂಡಾ ಅಷ್ಟೇ ಮಧ್ಯಾಹ್ನ ಊಟಕ್ಕೆ ಶಿಬಿರಕ್ಕೆ ಮೈಲುಗಟ್ಟಲೆ ನಡೆಯುತ್ತಿದ್ದರು. ಇವತ್ತು ಹಾಗಿಲ್ಲ, ಮೇಳದ ಶಿಬಿರದಲ್ಲಿ ಹಗಲುವೇಳೆ ಇರುವುದು ಬೆರಳೆಣಿಕೆ ಕಲಾವಿದರು ಅಷ್ಟೆ. ನೇಪಥ್ಯ ಕಲಾವಿದರು ಕೂಡಾ ಇವತ್ತು ಸ್ವಂತ ವಾಹನದಲ್ಲಿ ಮನೆಗೆ ಹೋಗಿ ಬರುತ್ತಾರೆ. ಇತ್ತೀಚೆಗೆ ಒಬ್ಬರು ಕಲಾವಿದರು ಹೇಳಿದ ಮಾತು ನೆನಪಾಗುತ್ತಿದೆ. ನಾವು ಆಗ ಮೇಳ ಆರಂಭವಾಗುವಾಗ ಮನೆ ಬಿಟ್ರೆ ಮತ್ತೆ ಮನೆ ಸೇರುವುದರು ತಿರುಗಾಟ ಮುಗಿದ ಬಳಿಕವೇ ಅಂತೆ. ಹಾಗಿತ್ತು ಮುವತ್ತು ನಲವತ್ತು ವರ್ಷಗಳ ಹಿಂದಿನ ಸಂದರ್ಭ.ಇವತ್ತು ಧಾವಂತದ ಜೀವನ ಕ್ರಮ, ಆತುರತೆಯನ್ನು ಸೃಷ್ಟಿಸಿ ಬಿಟ್ಟಿದೆ.

ಐದಾರು ವರ್ಷಗಳ ಹಿಂದೆ ಬಸ್‌ನ ರಿಯಾಯತಿ ಪಾಸ್‌ಗೆ ಸಾಕಷ್ಟು ಒತ್ತಡ ಕೇಳಿಬರುತ್ತಿತ್ತು. ಸಾಕಷ್ಟು ಕಲಾವಿದರು ಇದನ್ನು ಬಳಸಿಕೊಳ್ಳುತ್ತಿದ್ದರು. ಈಗಲೂ ಬಸ್ ಪಾಸ್ ವ್ಯವಸ್ಥೆ ಇದೆಯಾದರೂ ಅದನ್ನು ಬಳಕೆ ಮಾಡುವುದು ತೀರಾ ವಿರಳ. ಕಲಾವಿದರು ಆರ್ಥಿಕವಾಗಿ ಶಕ್ತರಾಗುತ್ತಿರುವುದು ಸಂತಷದ ವಿಚಾರ. ಆದರೆ ಪ್ರತಿಷ್ಠೆ, ಅನುಕರಣೆ ಸಂಸ್ಕೃತಿಯಡಿ ಜೀವವನ್ನು ಪಣಕ್ಕಿಡುವಂತಹ ವಿಪರ್ಯಾಸಗಳು ಏಕೆ?
ರಾತ್ರಿಯ ಏಕಾಂಗಿ ಪಯಣ ಕಲಾವಿದರಿಗಂತಲ್ಲ ಯಾರಿಗೂ ಶೋಭೆಯಲ್ಲ. ಅಪಘಾತಗಳು ವ್ಯಾಪಕವಾಗಿ ಬಿಟ್ಟಿವೆ. ಯಕ್ಷಗಾನ ಬಯಲಾಟಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುತ್ತದೆ. ಕಚ್ಚಾ ರಸ್ತೆಗಳು ಇರುತ್ತದೆ. ಕಾಡು ಮಾರ್ಗವಾಗಿರುತ್ತದೆ. ರಾತ್ರಿ ವೇಳೆ ಕಾಡು ಪ್ರಾಣಿಗಳು ವಾಹನಕ್ಕೆ ಅಡ್ಡ ಬರುವುದು ಸರ್ವೇ ಸಹಜ. ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ವೇಳೆ ಅಸುರಕ್ಷಿತವಾಗಿರುತ್ತದೆ. ಕಾಡು ಪ್ರಾಣಿಗಳು ಆಹಾರ ಮತ್ತು ನೀರನ್ನು ಹುಡುಕುತ್ತ ಸಂಚರಿಸುತ್ತವೆ. ಸ್ವಾಭಾವಿಕವಾಗಿ ಅವು ಜೀವಭಯಕ್ಕೆ ರಸ್ತೆ ದಾಟುವ ಧಾವಂತಕ್ಕೆ ವಾಹನಗಳನ್ನು ಅವುಗಳಿಗೆ ಢಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತದೆ. ಕಾಡಿನ ಮಾರ್ಗ, ರಾತ್ರಿ ಸಮಯವಾದ್ದರಿಂದ ವಾಹನ ಸಂಚಾರ ಇರುವುದಿಲ್ಲ. ಅಪಘಾತಕ್ಕಿಡಾದ ವ್ಯಕ್ತಿಗೆ ಪ್ರಾಣಕ್ಕೆ ಸಮಸ್ಯೆಯಾಗದಿದ್ದರೂ ಬೆಳಗಿನ ತನಕ ನೋವಿನಲ್ಲಿ ನರಳುತ್ತಿರಬೇಕಾಗುತ್ತದೆ. ಅಥವಾ ತೀವ್ರ ರಕ್ತಸ್ರಾವದಿಂದ ಜೀವ ಹೋಗಲುಬಹುದು. ಕೆಲವೊಂದು ಸಂದರ್ಭದಲ್ಲಿ ತಪ್ಪು ನಮ್ಮದ್ದಲ್ಲದಿದ್ದರೂ ಢಿಕ್ಕಿ ಹೊಡೆದ ವಾಹನದವ ನಿಲ್ಲಿಸಿದೇ ಹೋಗಬಹುದು. ಅಪಘಾತಕ್ಕಿಡಾಗಿ ರಸ್ತೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಸಂದರ್ಭ ನೆರವಿಗೆ ಯಾರೂ ಸಿಗದೆಯೂ ಇರಬಹುದು. ಹಾಗಾಗಿ ನಿರ್ಜನ ಪ್ರದೇಶ, ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ ಪಯಣ ಎಂದಿಗೂ ಶ್ರೇಯಸ್ಕರವಲ್ಲ.

ಪ್ರಸಂಗಪೂರ್ವ ಅವಲೋಕನ ಈಗಿಲ್ಲ:
ಹಿಂದೆ ಶಿಬಿರದಲ್ಲೇ ಇರುವುದರಿಂದ ಮಧ್ಯಾಹ್ನ ಭೋಜನದ ಬಳಿಕ ಕೆಲವು ಕಲಾವಿದರಾದರೂ ಅಂದಿನ ಪ್ರಸಂಗದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಕಿರಿಯ ಕಲಾವಿದರು ಹಿರಿಯ ಕಲಾವಿದರಲ್ಲಿ ಕೇಳಿ ತಿಳಿದುಕೊಳ್ಳುವ ಪರಿಪಾಠವಿತ್ತು. ಈಗೀಗ ಹೆಚ್ಚಿನ ಕಲಾವಿದರು ಸ್ವಂತ ವಾಹನ ಹೊಂದಿರುವುದರಿಂದ, ಕೆಲವು ಕಲಾವಿದರು ಬಸ್‌ಗಳ ಮೂಲಕ ಮನೆಗೆ ಹೋಗಿ ಸಂಜೆ ಆಟಕ್ಕೆ ಬರುವುದರಿಂದ ಪ್ರಸಂಗದ ಬಗ್ಗೆ ಚರ್ಚೆ ಏನಿದ್ದರೂ ಗಣಪತಿ ಪೂಜೆ ಬಳಿಕವೇ. ಕೆಲವು ಕಲಾವಿದರು ಚೌಕಿ ಬಂದವರು ಮೊಬೈಲ್ ಹಿಡಿದು ಕುಳಿತು ಬಿಡುತ್ತಾರೆ. ಇನ್ನೂ ಕೆಲವರಿಗೆ ತನ್ನ ಪಾತ್ರ ಎಷ್ಟು ಹೊತ್ತಿಗೆ ಮುಗಿಯುತ್ತದೆ. ಎಷ್ಟು ಹೊತ್ತಿಗೆ ನಾನು ಮನೆಗೆ ಹೊರಡುವುದು ಎನ್ನುವುದು ತಲೆ ಇರುತ್ತದೆ. ಕೆಲವು ಕಲಾವಿದರು ಒಂದು ಕಾರ್ಯಕ್ರಮ ಮುಗಿಸಿ ಇನ್ನೊಂದು ಕಡೆ ಹೋಗುವ ಸಂಕಷ್ಟದಲ್ಲಿರುತ್ತಾರೆ. ಇವತ್ತು ಕಲಾವಿದರ ಕೊರತೆ ಕೂಡಾ ವ್ಯವಸ್ಥಾಪಕರಲ್ಲಿ ಖಡಾಖಂಡಿತವಾಗಿ ನಿಯಮಗಳ ರೂಪಿಸದ ಸ್ಥಿತಿ ಇರುತ್ತದೆ.

ಕಲಾವಿದರ ಹಿತಾಸಕ್ತಿಯಿಂದ ಕಠಿಣ ನಿಯಮ ಅಗತ್ಯ:
ಕಲಾವಿದರ ಹಿತರಕ್ಷಣೆಗಾಗಿ ಕೆಲವೊಂದು ಕಠಿಣ ನಿಯಮಗಳನ್ನು ಸಂಚಾಲಕರು ತಗೆದುಕೊಳ್ಳಲೇಬೇಕಾದ ಸ್ಥಿತಿ ಈಗ ಇದೆ. ಕಾಲ ಬದಲಾಗಿದೆ. ಬಹುತೇಕ ಮೇಳಗಳು ಕಾಲಮಿತಿಗೆ ಒಗ್ಗಿಕೊಂಡಿವೆ. ರಾತ್ರಿ ಆಟ ಮುಗಿದ ಬಳಿಕ ಚೌಕಿಯಲ್ಲಿಯೇ ಮಲಗಿ ಬೆಳಿಗ್ಗೆ ಹೋದರೆ ಸಮಸ್ಯೆ ಏನು? ಮೊದಲಿನಂತೆ ಬೆಳಗಿನ ತನಕ ನಿದ್ದೆ ಬಿಡುವ ತಾಪತ್ರೆಯ ಹೆಚ್ಚಿನ ಮೇಳಗಳಿಗೆ ಇಲ್ಲ. ಹಾಗಾಗಿ ತಮ್ಮ ಸುರಕ್ಷತೆಯ ದೃಷ್ಟಿಯಿಂದಲಾದರೂ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಗಿದೆ.

ಕಲಾವಿದರು ಕೂಡಾ ಸ್ವಲ್ಪ ಆಲೋಚನೆ ಮಾಡಬೇಕಾಗಿದೆ. ಯಕ್ಷಗಾನ ಕಲೆಯಲ್ಲಿ ಪರಿಪೂರ್ಣ ಆಗುವುದು ಅಸಾಧ್ಯ. ನಿರಂತರ ಕಲಿಕೆಗೆ ಕಲಾವಿದ ನಿರಂತರ ವಿದ್ಯಾರ್ಥಿಯೇ ಆಗಿರಬೇಕು. ಚೌಕಿ ಹಾಗೂ ರಂಗದಲ್ಲಿ ಕಲಿಯಲು ಸಿಗುವ ಅವಕಾಶ ಗರಿಷ್ಠ ಮಟ್ಟದ್ದು ಎಂದು ಹಿರಿಯ ಕಲಾವಿದರೇ ಹೇಳುತ್ತಾರೆ. ಇವತ್ತಿನ ಯಾಂತ್ರಿಕ ಬದುಕಿನ ಶೈಲಿನಲ್ಲಿ ಕೆಲವೊಮ್ಮೆ ಅನಿವಾರ್ಯ ಎನಿಸಿದರೂ ಕೂಡಾ ನಿರಂತರ ಅದು ಪುನರಾವರ್ತನೆಯಾಗಬಾರದು. ಜೀವ ಅಮೂಲ್ಯ, ಮನೆಯಲ್ಲಿ ತಮ್ಮನ್ನೇ ನಂಬಿಕೊಂಡ ಜೀವಗಳು ಇರುತ್ತವೆ. ಈ ಬಗ್ಗೆಯೂ ಯೋಚಿಸಿ ಹೆಜ್ಜೆ ಇಡಬೇಕಾಗುತ್ತದೆ.


(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!