spot_img
Saturday, May 9, 2026
spot_img

ಅಮಾಸೆಬೈಲು: ಯಶಸ್ವಿ ಅಣಬೆ ಬೇಸಾಯ- ತಮ್ಮಯ್ಯ ನಾಯ್ಕರ ಯಶೋಗಾಥೆ ಇದು


ಕೃಷಿ ವಲಯ ವಿಫುಲ ಅವಕಾಶಗಳನ್ನು ವಿಸ್ತರಿಸಿಕೊಂಡಿದೆ. ಆಧುನಿಕ ಹಾಗೂ ವೈಜ್ಞಾನಿಕ ಮಾದರಿಯ ಕೃಷಿ ವಿಧಾನಗಳು ಹೊಸ ಹೊಸ ಆಯಾಮಗಳನ್ನು ತೆರೆದಿವೆ. ಲಾಭದಾಯಕ ಕೃಷಿ ಪದ್ದತಿಗಳ ಜೊತೆ ಆರ್ಥಿಕ ಸುಸ್ಥಿರತೆಗೆ ಪೂರಕವಾಗುವ ಕೃಷಿ ವಿಧಾನಗಳು ಚಾಲ್ತಿಗೆ ಬಂದಿವೆ. ಅಣಬೆ ಬೇಸಾಯ ಇವತ್ತು ತುಸು ಕ್ಲಿಷ್ಟ, ಸಂಕೀರ್ಣ ಎನಿಸಿಕೊಂಡರೂ ಆಸಕ್ತಿ, ಶ್ರದ್ದೆ, ಸಂಯಮ ಇದ್ದರೆ ಇದೊಂದು ಯಶಸ್ವಿ ಕೃಷಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.


ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದಲ್ಲಿ ಒಂದಲ್ಲ ಒಂದು ಕ್ರಾಂತಿಗಳು, ಸಂಚಲನಗಳು, ಸದ್ದಿಲ್ಲದೇ ನಡೆಯುತ್ತಲೇ ಇರುತ್ತದೆ. ತೀರಾ ಗ್ರಾಮೀಣ ಪ್ರದೇಶವಾದರೂ ಇಲ್ಲಿ ಸಾಹಸಿ ಮನೋವೃತ್ತಿಗಳಿಗೆ ಕೊರತೆ ಇಲ್ಲ. ಇಲ್ಲಿನ ಕೆಳಸುಂಕದ ನಿವಾಸಿ ತಮ್ಮಯ್ಯ ನಾಯ್ಕ ಎನ್ನುವ ಉತ್ಸಾಹಿ ರೈತ ಅಣಬೆ ಉತ್ಪಾದನಾ ಘಟಕವನ್ನು ಆರಂಭಿಸಿ, ಯಶಸ್ವಿಯಾಗುತ್ತಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ, ಲಾಭದಾಯಕ ವಿಧಾನಗಳ ಯಶಸ್ವಿ ಅನುಷ್ಠಾನಗಳನ್ನು ಮಾಡುತ್ತಾ, ಶ್ರಮ ವಿನೀಮಯದ ಪ್ರಗತಿಬಂಧುವಾಗಿ ಕೃಷಿಯಲ್ಲಿ ದಾಪುಗಾಲಿಡುತ್ತಾ ಮುಂದೆ ಬಂದವರು. ಇವರ ಆಸಕ್ತಿ ಮತ್ತು ಶೃದ್ದೆ, ಸಾಧಿಸುವ ಛಲವನ್ನು ಗಮನಿಸಿದ ಧ.ಗ್ರಾ.ಯೋಜನೆಯ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಅವರು ಅಣಬೆ ಬೇಸಾಯದ ಬಗ್ಗೆ ಆಸಕ್ತಿ ಮೂಡಿಸಿದರು. ಉಡುಪಿ ಜಿಲ್ಲಾ ರೈತ ಸಂಘದಲ್ಲಿ ಸಕ್ರೀಯವಾಗಿರುವ ತಮ್ಮಯ್ಯ ನಾಯ್ಕ ಕೂಡಲೇ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಿದರು. ಅಲ್ಲಿ ಸಾಕಷ್ಟು ಮಾರ್ಗದರ್ಶನ ಹಾಗೂ ಉತ್ತೇಜನ ಸಿಕ್ಕಿತ್ತು. ಅಣಬೆ ಕೃಷಿಗೆ ದೊರೆಯುವ ಅನುದಾನ, ತರಬೇತಿ ಇತ್ಯಾದಿಗಳ ಮಾಹಿತಿಯೂ ದೊರಕಿತು. ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟರ ಮಾರ್ಗದರ್ಶನ, ತೋಟಗಾರಿಕಾ ಇಲಾಖೆಯ ಸಂಜೀವ ನಾಯ್ಕ, ಮಧುಕರ ಅವರ ಸಹಕಾರ ಮುಂದಿನ ಹೆಜ್ಜೆಗೆ ಧ.ಗ್ರಾ ಯೋಜನೆಯ ಧೈರ್ಯ ಬೆಂಬಲ ಸಿಕ್ಕಿತು.


ಅಣಬೆ ಬೇಸಾಯಕ್ಕೆ ಸೂಕ್ತ ವಿನ್ಯಾಸದ ಉತ್ಪಾದನಾ ಘಟಕ ಅಗತ್ಯವಾದ್ದರಿಂದ ಸುಮಾರು 20 ಲಕ್ಷ ವೆಚ್ಚದಲ್ಲಿ 30×40 ಚದರ ಅಡಿಯ ಘಟಕ ನಿರ್ಮಾಣ ಮಾಡಿದರು. ಉಷ್ಣಾಂಶ ಕಾಪಾಡುವಿಕೆ ಇದರಲ್ಲಿ ಮುಖ್ಯವಾದ್ದರಿಂದ ಸಂಪೂರ್ಣ ಹವಾನಿಯಂತ್ರಿತ ಡಾರ್ಕ್ ರೂಂ, ಅಣಬೆ ಸರಪಣಿ ಜೋಡಿಸುವ ಕೊಠಡಿ, ಹುಲ್ಲು ಬೇಯಿಸಲು ಬಾಯ್ಲರ್, ಸ್ಟ್ಯಾಂಡ್ ಇತ್ಯಾದಿಗಳಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಯೋಜನೆ ಅನುಷ್ಠಾನಿಸಿದರು. ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ 15 ಲಕ್ಷ ಸಾಲ ನೀಡಿ ಪ್ರೋತ್ಸಾಹಿಸಿದರು. ತೋಟಗಾರಿಕಾ ಇಲಾಖೆಯ ಶಿವಮೊಗ್ಗದಲ್ಲಿ ತರಬೇತಿ ಹಾಗೂ ಅಣಬೆ ಬೀಜಗಳನ್ನು ದೊರಕಿಸಿಕೊಟ್ಟರು. ಅಲ್ಲಿ ಉತ್ತಮ ತರಬೇತಿ, ಮಾರ್ಗದರ್ಶನ ತಮ್ಮಯ್ಯ ನಾಯ್ಕರಿಗೆ ಸಾಕಷ್ಟು ಧೈರ್ಯ ಹಾಗೂ ಅನುಭವ ನೀಡಿತು. ಇದರಿಂದ ಪ್ರೇರಿತರಾದ ತಮ್ಮಯ್ಯ ನಾಯ್ಕರು ಎರಡು ತಿಂಗಳ ಹಿಂದೆ ಅಣಬೆ ಉತ್ಪಾದನಾ ಘಟಕ ಕೆಳಸುಂಕದಲ್ಲಿ ಆರಂಭಗೊಂಡಿತು.


ಈಗ ದಿನಕ್ಕೆ 10 ಕೆಜಿಯ ತನಕ ಅಣಬೆ ಮಾರಾಟಕ್ಕೆ ಸಿಗುತ್ತಿದೆ. ಸ್ಥಳೀಯ ಅಮಾಸೆಬೈಲುವಿನಲ್ಲಿಯೇ ಮಾರಾಟ ಆಗುತ್ತಿದ್ದು ಪ್ರತೀ ಕೆಜಿಗೆ ರೂ.200 ಸಿಗುತ್ತದೆ. ಇದು ಪ್ರಾರಂಭದ ಹೆಜ್ಜೆಗಳಾದ್ದರಿಂದ ತಾಳ್ಮೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ದಿನಕ್ಕೆ 25 ಕೆಜಿ ಅಣಬೆ ತಗೆಯುವ ಗುರಿ ಇದೆ. ಅದಕ್ಕೆ ಸರಿಯಾಗಿ ಗುಣಮಟ್ಟದ ಅಣಬೆ ಬೀಜ ಬೇಕಾಗುತ್ತದೆ ಎನ್ನುತ್ತಾರೆ ತಮ್ಮಯ್ಯ ನಾಯ್ಕ.
ಅಣಬೆ ಕೃಷಿಯಲ್ಲಿ ತಾಂತ್ರಿಕತೆ, ಸೂಕ್ಷ್ಮತೆ, ವೈಜ್ಞಾನಿಕವಾದ ತಿಳುವಳಿಕೆ ಅಗತ್ಯ. ಇಲ್ಲಿ ಅಯಿಸ್ಟರ್ ಅಣಬೆ ಬೇಸಾಯ ಮಾಡಲಾಗುತ್ತಿದೆ. 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ 21 ದಿನಗಳ ಕಾಲ ಇಟ್ಟು ಬಳಿಕ 28 ಡಿಗ್ರಿ ಸೆಲ್ಸಿಯಸ್ ತನಕದ ಕೊಠಡಿಯಲ್ಲಿ ಬ್ಯಾಗ್‍ನ್ನು ತೂಗು ಹಾಕಬೇಕು. ಆ ಕೊಠಡಿ ಶುಭ್ರವಾಗಿರಬೇಕು. ಯಾರಿಗೂ ಆ ಕೊಠಡಿಗೆ ಪ್ರವೇಶ ನೀಡಬಾರದು. ಒಳ ಬರುವಾಗ ಸರಿಯಾಗಿ ಕೈಕಾಲುಗಳನ್ನು ಶಿಫಾರಸ್ಸು ಮಾಡಿದ ಸೋಪ್ ಆಯಿಲ್ ಬಳಿಸಿ ಶುಚಿಗೊಳಿಸಿಕೊಂಡು ಬರಬೇಕು. ಒಂದು ವೇಳೆ ಪಂಗಸ್ ಬಂದರೆ ಅಣಬೆ ಕೃಷಿಯಲ್ಲಿ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ.


ತಮ್ಮಯ್ಯ ನಾಯ್ಕರು ಬೆಳಿಗ್ಗೆ 10 ಗಂಟೆಯೊಳಗೆ ಅಣಬೆ ತಗೆದು ಪ್ಯಾಕ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ. ಇವರೊಂದಿಗೆ ಪತ್ನಿ, ಮಕ್ಕಳು ಕೈ ಜೋಡಿಸುತ್ತಾರೆ. ಯಾವುದೇ ಕೃಷಿ ಕಾರ್ಯವಿದ್ದರೂ ಖುಷಿಯಿಂದ ಮಾಡುವ ಇವರು ಜಟ್ಟಿಗೇಶ್ವರ ಪ್ರಗತಿಬಂಧು ಸ್ವಸಹಾಯ ಸಂಘದ ಮೂಲಕ ಶ್ರಮ ವಿನಿಮಯ ಮಾಡುತ್ತಾ ಇತರ ಕೃಷಿಯಲ್ಲಿಯೂ ತೊಡಗಿಸಿಕೊಳ್ಳುತ್ತಾರೆ.


ಅಣಬೆ ಬೇಸಾಯದ ಹಿನ್ನೆಲೆ, ಯಶಸ್ಸಿನ ಬಗ್ಗೆ ಹೇಳುವ ತಮ್ಮಯ್ಯ ನಾಯ್ಕರು, ನಾನು ಅಣಬೆ ಕೃಷಿ ಮಾಡಲು ಮೂಲ ಪ್ರೇರಣೆ ಶ್ರೀ ಕ್ಷೇ.ಧ.ಗ್ರಾ ಯೋಜನೆ, ತೋಟಗಾರಿಕಾ ಇಲಾಖೆ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ, ಸದಾ ಮಾರ್ಗದರ್ಶನ ಮಾಡಿದ ಅಧಿಕಾರಿಗಳು, ಉಡುಪಿ ಜಿಲ್ಲಾ ರೈತ ಸಂಘ ಇವರುಗಳ ಸಹಕಾರ, ಬೆಂಬಲ, ಧೈರ್ಯ ನನಗೆ ಶ್ರೀರಕ್ಷೆಯಾಯಿತು. ಶಿವಮೊಗ್ಗದ ತೋಟಗಾರಿಕಾ ಇಲಾಖೆಯಲ್ಲಿ ಉತ್ತಮ ತರಬೇತಿ ಸಿಕ್ಕಿತ್ತು. ಅಣಬೆ ಬೀಜವನ್ನು ಅಲ್ಲಿಂದಲೇ ಪೂರೈಕೆ ಮಾಡಿದರು. ಅಣಬೆ ಬೇಸಾಯ ಶ್ರದ್ದೆಯಿಂದ ಮಾಡಿದರೆ ಲಾಭದಾಯಕ ಬೇಸಾಯ. ತಾಳ್ಮೆ ಅಗತ್ಯವಾಗಿ ಇರಬೇಕಾಗುತ್ತದೆ. ಸ್ವ ಉದ್ಯೋಗವಾಗಿಯೂ ಮಾಡಬಹುದು ಎನ್ನುತ್ತಾರೆ.


ತಮ್ಮಯ್ಯ ನಾಯ್ಕ್ ಅಣಬೆ ಕೃಷಿ ಮಾಡಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ. ಯಶಸ್ವಿಯಾಗಿ ಬದುಕು ನಡೆಸಲು ಸಾಕಷ್ಟು ದಾರಿಗಳಿವೆ ಎನ್ನುವುದಕ್ಕೆ ಕುಗ್ರಾಮದ ಈ ಕ್ರಾಂತಿ ಮಾದರಿಯಂತಿದೆ.
ತಮ್ಮಯ್ಯ ನಾಯ್ಕರ ದೂರವಾಣಿ ಸಂಖ್ಯೆ-9483408412


ಅಣಬೆ ಬೇಸಾಯ ಹೇಗೆ?
ಭತ್ತದ ಹುಲ್ಲನ್ನು ಸಣ್ಣಗೆ ಕತ್ತರಿಸಿಕೊಂಡು ಸರಿಯಾಗಿ ಬೇಯಿಸಬೇಕು. ಬಳಿಕ ಅದನ್ನು ಗಾಳಿಗೆ ಹರವಬೇಕು. ಶೇ.60ರಷ್ಟು ಅದು ಒಣಗಬೇಕು. ಬಳಿಕ ಅದನ್ನು 12 ಇಂಚು ಉದ್ದ, 8 ಇಂಚು ಅಗಲ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ 2-3 ಇಂಚಿನಷ್ಟು ಭತ್ತದ ಹುಲ್ಲು ತುಂಬಿ ಅದರ ತುದಿಯಲ್ಲಿ 50 ಗ್ರಾಂನಷ್ಟು ಅಯಿಸ್ಟರ್ ಅಣಬೆ ಬೀಜ ಹಾಕಬೇಕು. ಇದೇ ರೀತಿ ನಾಲ್ಕೈದು ಹಂತದಲ್ಲಿ ಹುಲ್ಲು ಮತ್ತು ಬೀಜ ಹಾಕಬೇಕು. ನಂತರ ಬ್ಯಾಗಿನ ಕೆಳಗೆ ಮತ್ತು ಸುತ್ತ ಚುಚ್ಚಿ 4-5 ರಂಧ್ರ ಮಾಡಬೇಕು. 21 ದಿನಗಳ ಕಾಲ ಈ ಬ್ಯಾಗ್‍ಗಳನ್ನು ಡಾರ್ಕ್ ರೂಮ್‍ನಲ್ಲಿ ಇಡಬೇಕು. ಅಣಬೆಗೆ ಪ್ರಾರಂಭದ 21 ದಿನಗಳ ಕಾಲ ಬೆಳಕು ಸೋಕಬಾರದು. ಉಷ್ಣಾಂಶ 24 ಡಿಗ್ರಿಯಷ್ಟಿರಬೇಕು. 21 ದಿನಗಳು ಆಗುವಾಗ ಪ್ಯಾಕೇಟ್‍ನಲ್ಲಿ ಮೊಳಕೆಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಜತನವಾಗಿ ಮೊದಲೇ ಸಿದ್ಧ ಪಡಿಸಿದ 24 ಡಿಗ್ರಿ ಸೆಲ್ಸಿಯಸ್‍ಗಿಂತ ಮೇಲೆ 28 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶರುವ ಸ್ವಚ್ಛವಾಗಿರುವ ಕೊಠಡಿಯಲ್ಲಿ ಹಗ್ಗದ ಸರಪಣಿ ಮಾಡಿ, ಅದರಲ್ಲಿ ಇಡಬೇಕು. ದಿನವೂ ನೀರು ಸಿಂಪರಣೆ ಮಾಡಬೇಕು. ಬಳಿಕ ಅಣಬೆ ಬೆಳೆಯುತ್ತದೆ. 15 ದಿನಗಳ ತನಕ ನಿತ್ಯವೂ ಅಣಬೆಯನ್ನು ತಗೆಯಬಹುದು. ಬಳಿಕ ಅಣಬೆಯ ಗುಣಮಟ್ಟ ಕಡಿಮೆಯಾಗುತ್ತದೆ. ಆಗ ಅದನ್ನು ತಗೆದು ಬೇರೆ ಫ್ಯಾಕೆಟ್ ಇಡಬೇಕು. ಇದು ನಿರಂತರ ಪ್ರಕ್ರಿಯೆ.


ಅಣಬೆ ತಳಿಗಳು
ಬೇಸಾಯಕ್ಕೆ ಯೋಗ್ಯವಾದ ಹಲವಾರು ಅಣಬೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಬಿಳಿಗುಂಡಿ (ಬಟನ್) ಅಣಬೆ ಅಥವಾ ಯುರೋಪಿನ ಬಿಳಿಗುಂಡಿ ಅಣಬೆ, (ಅಯಿಸ್ಟರ್) ಅಣಬೆ, ಹಾಲು (ಮಿಲ್ಕಿ) ಅಣಬೆ, ಭತ್ತದ ಹುಲ್ಲಿನ ಅಣಬೆ, ಜಪಾನಿನ ಶಿಟಾಕೆ ಮುಂತಾದ ಅಣಬೆಗಳನ್ನು ಬೆಳೆಯುತ್ತಾರೆ. ತಮ್ಮಯ್ಯ ನಾಯ್ಕರು ಅಯಿಸ್ಟರ್ ಅಣಬೆ ಬೆಳೆಯುತ್ತಾರೆ.

(ಲೇಖನ-ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!