-6.1 C
New York
Saturday, January 22, 2022

Buy now

spot_img

ಈಗ ಭತ್ತದ ಸಿದ್ಧ ಸಸಿಮಡಿ ಟ್ರೆಯಲ್ಲಿ ರೆಡಿ: ಭತ್ತದ ಸಸಿಮಡಿ ತಯಾರಿಗೂ ಬಂತು ಹೊಸ ಆವಿಷ್ಕಾರ


ಕುಂದಾಪುರ: ಈಗ ಎಲ್ಲವೂ ಸುಲಭ ಹಾಗೂ ಸರಳೀಕರಣ. ಕಡಿಮೆ ಶ್ರಮದಿಂದ ಕೆಲಸ ಆಗಬೇಕು. ಎನ್ನುವ ಮನೋಸ್ಥಿತಿಗೆ ಅನುಗುಣವಾಗಿ ಹೊಸ ಹೊಸ ಸುಧಾರಣೆಗಳು ಬರುತ್ತಿವೆ. ಅದಕ್ಕೆ ಕೃಷಿ ಕ್ಷೇತ್ರ ಕೂಡಾ ಹೊರತಾಗಿಲ್ಲ. ಸಂಕೀರ್ಣವಸ್ಥೆಯಲ್ಲಿದ್ದ ಭತ್ತ ಬೇಸಾಯ ಪದ್ದತಿ ಇವತ್ತು ಸಂಪೂರ್ಣ ಯಾಂತ್ರೀಕರಣವಾಗಿದೆ. ಮಾನವ ಶ್ರಮಗಳ ಬದಲು ಎಲ್ಲವೂ ಯಂತ್ರಗಳಿಂದಲೇ ಆಗುತ್ತಿದೆ. ಇದಕ್ಕೆ ಪೂರಕವಾಗಿ ಸಸಿ ಮಡಿ ತಯಾರಿಸುವ ಕೆಲಸ ಇನ್ನೂ ಬೇಡ. ರೈತರು ಗದ್ದೆಯನ್ನು ಹದಗೊಳಿಸಿ ನಾಟಿಗೆ ಅಣಿಗೊಳಿಸಿ ನರ್ಸರಿಗೆ ಹೋಗಿ ಭತ್ತದ ಸಸಿಮಡಿಗಳನ್ನು ತಂದು ನಾಟಿ ಮಾಡಬಹುದಾಗಿದೆ.

ಭತ್ತದ ಸಸಿ ಮಡಿ ನರ್ಸರಿ ಕುಂದಾಪುರಕ್ಕೂ ಪರಿಚಿತವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತನ್ನ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಯಂತ್ರಶ್ರೀಗೆ ಪೂರಕವಾಗಿ ಕುಂದಾಪುರ ತಾಲೂಕಿನ ಮೂರು ಕಡೆಗಳಲ್ಲಿ ಸಿದ್ಧವನ ಉಪ ನರ್ಸರಿಯನ್ನು ತೆರೆದಿದೆ. ಕಾಳಾವರದ ಸುಜಿತ್ ಕುಮಾರ್ ಶೆಟ್ಟಿಯವರ ಕೃಷಿ ತಾಕುವಿನಲ್ಲಿ ವಿಸ್ತಾರವಾದ ಭತ್ತದ ಸಸಿ ನರ್ಸರಿ ತಲೆ ಎತ್ತಿದೆ. ಈಗಾಗಲೇ ಭತ್ತ ಸಸಿಮಡಿ ಖರೀದಿ ಕಾರ್ಯವೂ ಭರದಿಂದಲೆ ಆರಂಭವಾಗಿದೆ. ರೈತರಿಂದ ಉತ್ತಮ ಪ್ರತಿಕ್ರಿಯೆ ಕೂಡಾ ಕಂಡು ಬರುತ್ತಿದೆ.

ಭತ್ತ ಬೇಸಾಯದಲ್ಲಿ ಸಾಂಪ್ರಾದಾಯಿಕ ವಿಧಾನ ಇವತ್ತು ಬಹುತೇಕ ಮರೆಯಾಗಿದೆ. ಕೂಲಿಯಾಳುಗಳ ಸಮಸ್ಯೆಯಿಂದ ಎಲ್ಲರೂ ಯಂತ್ರನಾಟಿ, ಸಾಲು ನಾಟಿಯನ್ನೇ ಆಶ್ರಯಿಸಿದ್ದಾರೆ. ಯಂತ್ರನಾಟಿ ಎಂದಾಗ ಸಸಿಮಡಿ ತಯಾರಿ ಬಹುತೇಕ ರೈತರಿಗೆ ತ್ರಾಸದಾಯಕವಾಗುತ್ತದೆ. ಸ್ವಲ್ಪ ಸಂಕೀರ್ಣ ರೀತಿಯಲ್ಲಿ ಸಸಿ ಮಡಿ ತಯಾರಿ ಆದ್ದರಿಂದ ರೈತರು ಯಂತ್ರನಾಟಿಗೆ ತುಸು ಹಿಂದೇಟು ಹಾಕುತ್ತಾರೆ. ಅಲ್ಲದೇ ಬಿತ್ತನೆ ಬೀಜ ಖರೀದಿ, ಬೀಜೋಪಚಾರ, ನಿರ್ವಹಣೆ ಇತ್ಯಾದಿಗೆ ಶ್ರಮ ಹಾಗೂ ಸಮಯ ಬೇಕಾಗುತ್ತದೆ. ಇದಕ್ಕೆಲ್ಲ ಪರಿಹಾರ ನರ್ಸರಿ ಪದ್ದತಿ.

ಟ್ರೆ ಪದ್ದತಿಯಲ್ಲಿ ಸಸಿಮಡಿ:
ಭತ್ತದ ಸಸಿ ನರ್ಸರಿಯಲ್ಲಿ ಭತ್ತದ ಸಸಿಮಡಿ ತೆಳುವಾದ ಪ್ಲಾಸ್ಟಿಕ್ ಟ್ರೆಯಲ್ಲಿ ಸಿಗುತ್ತದೆ. 12-15 ದಿನದ ನಾಟಿ ಪ್ರಶಸ್ತವಾದ ಸಸಿಗಳು ಸಿಗುತ್ತದೆ. ಒಂದು ಎಕರೆ ಭೂ ಪ್ರದೇಶಕ್ಕೆ ಸುಮಾರು 70 ಟ್ರೆ ಬೇಕಾಗುತ್ತದೆ. ಒಂದು ಟ್ರೇ ಸಸಿಮಡಿಗೆ 40 ರೂ.ತನಕ ಇದೆ.

ಇಲ್ಲಿ ವ್ಯವಸ್ಥಿತವಾಗಿ ಸಸಿಮಡಿ ತಯಾರಿಸಲಾಗುತ್ತದೆ. ಉತ್ತಮ ಗುಣಮಟ್ಟದ ಬೀಜವನ್ನು ಆಯ್ಕೆ ಮಾಡಿ ಸೂಕ್ತ ಬೀಜೋಪಚಾರ ಮಾಡಿ, ಸಸಿ ಮಾಡಲಾಗುತ್ತದೆ. ಸಸ್ಯ ಸಂರಕ್ಷಣೆಗೆ ಮೊನೊಕ್ರೊಟೊಫಾಸ್ ಸಿಂಪರಣೆ ಮಾಡಲಾಗುತ್ತದೆ. ಸಸಿ ಮಡಿಯ ಶುಚಿತ್ವ, ಕಳೆ ನಿರ್ವಹಣೆ ಮಾಡಲಾಗುತ್ತದೆ. ಯಂತ್ರನಾಟಿಗೆ ಹೆಚ್ಚು ಪೂರಕವಾಗುವಂತೆ ಸಸಿಮಡಿ ತಯಾರಿಸಲಾಗುತ್ತದೆ.

ಯಂತ್ರಶ್ರೀ ಯೋಜನೆಯನ್ನು ಅನುಷ್ಠಾನ ಮಾಡಿದಾಗ ರೈತರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು ಹಲವು ಕಡೆ ಸಸಿ ಮಡಿ ತಯಾರಿ ರೈತರಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಸಸಿ ಮಡಿಯನ್ನು ತಯಾರಿಸಿ ರೈತರಿಗೆ ನೀಡುವ ಸಲುವಾಗಿ ಈ ಯೋಜನೆ ಕಾರ್ಯಗತಗೊಳಿಸಲಾಯಿತು. ಇದು ರೈತಸ್ನೇಹಿ ಕಾರ್ಯಕ್ರಮವಾಗಿದ್ದು ಉತ್ಸಾಹಿ ರೈತರು ಮನಸ್ಸು ಮಾಡಿದರೆ ತಾವೇ ನರ್ಸರಿ ಮಾಡಿ ಭತ್ತದ ಸಸಿ ಮಾರಾಟ ಮಾಡಬಹುದಾದ ಕಾರ್ಯಕ್ರಮ.

ಯಂತ್ರಶ್ರೀ ಕಾರ್ಯಕ್ರಮವನ್ನು ಇನ್ನಷ್ಟು ಜನಪ್ರಿಯಗೊಳಿಸುವುದು, ಭತ್ತ ಬೇಸಾಯದ ಬಗ್ಗೆ ಯುವ ಜನತೆಯಲ್ಲಿ ಇನ್ನಷ್ಟು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಸಿ ಮಡಿ ತಯಾರಿಯಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಭತ್ತ ಬೇಸಾಯವನ್ನು ಇನ್ನಷ್ಟು ವಿಸ್ತರಣೆ ಮಾಡುವುದೇ ಈ ಎಲ್ಲಾ ಕಾರ್ಯಕ್ರಮಗಳ ಒಟ್ಟಂಶ. ಸಿ.ಎಚ್.ಎಸ್.ಸಿ ಮಧ್ಯಮ ವಲಯ ಶಿವಮೊಗ್ಗ ಇದರ ನಿರ್ದೇಶಕ ದಿನೇಶ್ ಎ ಅವರ ಮಾರ್ಗದರ್ಶನದಲ್ಲಿ ಉಡುಪಿ ವಿಭಾಗೀಯ ಸಿ.ಎಚ್.ಎಸ್.ಸಿ ಯೋಜನಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಸ್ಥಳೀಯ ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಉಸ್ತುವಾರಿಯಲ್ಲಿ ನರ್ಸರಿ ವಿಧಾನ ರೂಪಿಸಲಾಗಿದೆ.

ಈಗ ಕಾಳಾವರದಲ್ಲಿ ಸುಮಾರು 500 ಎಕರೆಗಾಗುವಷ್ಟು ಭತ್ತದ ಸಸಿಗಳನ್ನು ತಯಾರಿಸಲಾಗಿದೆ. ಹೆಚ್ಚು ಬೇಡಿಕೆ ಇರುವ ಎಂ.ಓ-4 ಹಾಗೂ ಪಂಚಮುಖಿ ಭತ್ತದ ತಳಿಯ ಸಸಿಗಳನ್ನು ಸಿದ್ಧ ಪಡಿಸಲಾಗಿದೆ. ರೈತರ ಬೇಡಿಕೆಯನ್ನು ಪಡೆದುಕೊಂಡು ಸಸಿ ಮಡಿಗಳನ್ನು ಮಾಡಿ ಕೊಡಲಾಗುತ್ತದೆ. 15 ದಿನಗಳ ಒಳಗೆ ನಾಟಿ ಮಾಡುವುದರಿಂದ ಮತ್ತೆ ಅಲ್ಲಿ ಹೊಸ ಟ್ರೆಗಳನ್ನಿಡಲು ಅನುಕೂಲವಾಗುತ್ತದೆ. ಈ ವಿನೂತನ ಪ್ರಯೋಗಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗಿದ್ದು ಈಗಾಗಲೇ 600 ಎಕರೆಗೂ ಹೆಚ್ಚು ಬೇಡಿಕೆ ರೈತರಿಂದ ಬಂದಿದೆ ಎನ್ನಲಾಗಿದೆ.
ಒಟ್ಟಾರೆ ಪ್ರಸ್ತುತ ಭತ್ತ ಬೇಸಾಯದ ಅವಶ್ಯಕತೆ, ಪರಿವರ್ತನೆಗನುಗುಣವಾಗಿ ಹೊಸ ವಿಧಾನ ಗಮನ ಸಳೆಯುತ್ತಿದೆ.

”ಭತ್ತದ ಸಸಿಮಡಿ ನರ್ಸರಿ ತಯಾರಿಯ ಬಗ್ಗೆ ವಿವಿಧ ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಅದರಿಂದ ಪ್ರೇರಿತರಾಗಿ ಇಂದು 8 ಕಡೆಗಳಲ್ಲಿ ನರ್ಸರಿ ಆರಂಭವಾಗಿದೆ. ಯಂತ್ರಶ್ರೀ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಇದು ಇನ್ನಷ್ಟು ವೃದ್ದಿಗೆ ನರ್ಸರಿ ವಿಧಾನವೂ ಅನುಕೂಲವಾಗುತ್ತದೆ. ಯಂತ್ರಶ್ರೀಗೆ ಇನ್ನಷ್ಟು ಜನಪ್ರಿಯಗೊಳಿಸಲು ತಯಾರಿಗಳು ನಡೆದಿವೆ. ಚಾಲಕರಿಗೆ ತರಬೇತಿ ನೀಡಲಾಗಿದೆ. ಯಂತ್ರಶ್ರೀ ಯೋಧರನ್ನು ನೇಮಕ ಮಾಡಲಾಗಿದೆ”
-ಅಶೋಕ್, ಉಡುಪಿ ವಿಭಾಗೀಯ ಸಿ.ಎಚ್.ಎಸ್.ಸಿ ಯೋಜನಾಧಿಕಾರಿ

ಯಂತ್ರನಾಟಿ ನೇಜಿ ತಯಾರಿಯೇ ಸವಾಲು
ಭತ್ತದ ಸಸಿಮಡಿ ತಯಾರಿಸುವುದೆಂದರೆ ಸಾಕಷ್ಟು ಕೆಲಸಗಳಿರುತ್ತದೆ. ಮೊದಲಾಗಿ ಬಿತ್ತನೆ ಬೀಜ ತರಬೇಕು. ಅದನ್ನು ಮುಂಚಿತವಾಗಿ ನೆನೆಹಾಕಿ ಇಡಬೇಕು. ಬಳಿಕ ಮೇಲೆತ್ತಿ ಮೊಳಕೆ ಬರಿಸಲು ಇಡಬೇಕು. ಇತ್ತ ಸಸಿಮಡಿಗೆ ಮಣ್ಣು ಜರಡಿ ಹಿಡಿಯಬೇಕು. ನಿರ್ದಿಷ್ಟ ಆಕಾರದಲ್ಲಿ ಒಂದು ಇಂಚು ಎತ್ತರದಲ್ಲಿ ಸಾವಭರಿತ ಮಣ್ಣನ್ನು ಹರಡಿ ಮೊಳಕೆ ಬರಿಸಿದ ಬೀಜ ಬಿತ್ತಿ ಹೊದಿಕೆ ಮಾಡಬೇಕು. ಮೊಳಕೆ ಮೇಲೆ ಬರುತ್ತಲೆ ಹೊದಿಕೆ ತಗೆಯಬೇಕು. ಅದರ ಲಾಲನೆ-ಪಾಲನೆ ಮಾಡಬೇಕು. ಹೀಗೆ ಸಾಕಷ್ಟು ಕೆಲಸಗಳು ಇರುತ್ತದೆ. ಶೃದ್ದೆ ಹಾಗೂ ಆಸಕ್ತಿ, ಪರಿಣತಿ ಇದ್ದರೆ ಕಡಿಮೆ ಖರ್ಚಿನಲ್ಲಿ ಸಸಿಮಡಿ ತಯಾರಿಸಬಹುದು.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,126FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!