Thursday, March 28, 2024

ಬುದ್ಧ ಪೂರ್ಣಿಮೆ


ವಿನಯಾ ಕೌಂಜೂರು


ವೈಶಾಖ ಶುದ್ಧ ಪೌರ್ಣಮಿ ಬುದ್ಧನ ಜನ್ಮದಿನ ಹಾಗೂ ಆತನಿಗೆ ಜ್ಞಾನೋದಯವಾದ ದಿನ. ಬೌದ್ಧಧರ್ಮದ ಸ್ಥಾಪಕನಾದ ಬುದ್ಧನು ಮೊದಲು ಸಿದ್ಧಾರ್ಥನೆಂಬ ಹೆಸರಿನಿಂದ ರಾಜಕುಮಾರನಾಗಿ ಜೀವನ ನಡೆಸಿದವನು. ಕ್ರಿ.ಪೂ. 563 ರಲ್ಲಿ ರಾಜನಾದ ಶುದ್ಧೋದನ ಹಾಗೂ ಮಾಯಾದೇವಿಯವರ ಪುತ್ರನಾಗಿ ಲುಂಬಿನಿಯಲ್ಲಿ ಜನಿಸಿದ ಈತನಿಗೆ ಸಿದ್ಧಾರ್ಥನೆಂದು ನಾಮಕರಣ ಮಾಡಲಾಯಿತು. ಈ ರಾಜಕುಮಾರ ಜನಿಸಿದಾಗ ಅವನಲ್ಲಿ ಮಹಾಪುರುಷನ ಲಕ್ಷಣಗಳಿರುವುದನ್ನು ದೈವಜ್ಞರು ತಿಳಿದುಕೊಂಡಿದ್ದರು. ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ ರೋಮಧಾರೆ, ಮೃದುವಾದ ಹಸ್ತ ಹಾಗೂ ನವಿರಾದ ಪಾದಗಳನ್ನು ಹೊಂದಿದ್ದರಿಂದ ಈತ ಒಬ್ಬ ಮಹಾಪುರುಷ ಆಗುತ್ತಾನೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ತಂದೆ ಶುದ್ಧೋದನ ಮುಂದೆ ತನ್ನ ಮಗನು ಚಕ್ರವರ್ತಿಯಾಗುವವನು ಎಂದುಕೊಂಡು ಆತನು ಸಕಲ ವಿದ್ಯಾಪಾರಂಗತನಾಗುವಂತೆ ಹಲವು ವಿದ್ವಾಂಸರಿಂದ ಶಿಕ್ಷಣವನ್ನು ಕೊಡಿಸಿದನು. ಸಿದ್ಧಾರ್ಥನು ತನ್ನ 16 ನೇ ವಯಸ್ಸಿನಲ್ಲಿ ಯಶೋಧರೆಯೊಂದಿಗೆ ವಿವಾಹವಾದನು. ನಂತರ ಮಗನ ಜನನವಾಯಿತು. ಅವನಿಗೆ ರಾಹುಲನೆಂಬ ಹೆಸರನ್ನಿಟ್ಟರು.


ಸಿದ್ಧಾರ್ಥನು ಬುದ್ಧಿ ಬೆಳವಣಿಗೆಯ ಜೊತೆಗೆ ಹೃದಯ ವೈಶಾಲ್ಯತೆಯನ್ನೂ ಹೊಂದಿದ್ದನು ಎಂಬುದನ್ನು ಈ ಉದಾಹರಣೆಗಳ ಮೂಲಕ ತಿಳಿಯಬಹುದು. ಒಮ್ಮೆ ಕಪಿಲವಸ್ತುವಿನಲ್ಲಿ ಕೃಷಿ ಆರಂಭೋತ್ಸವ ಸಮಾರಂಭವೊಂದು ಏರ್ಪಟ್ಟಾಗ ರಾಜಕುಮಾರ ಸಿದ್ದಾರ್ಥನು ಅದರಲ್ಲಿ ಪಾಲ್ಗೊಂಡಿದ್ದನು. ಆ ಆಚರಣೆಯ ಅಂಗವಾಗಿ ನೇಗಿಲಿನಿಂದ ಉಳುಮೆ ಪ್ರಾರಂಭಿಸಲಾಯಿತು. ಆಗ ನೆಲದಿಂದ ಅನೇಕ ಕ್ರಿಮಿ- ಕೀಟಗಳು ಹೊರಬರುತ್ತಿದ್ದಂತೆ ಆಕಾಶದಲ್ಲಿ ಹಾರಾಡುತ್ತಿದ್ದ ಹಕ್ಕಿಗಳು ಅವುಗಳನ್ನು ಕೊಕ್ಕಿನಿಂದ ಕುಕ್ಕಿ ತಿಂದವು. ಇದನ್ನು ಕಂಡ ಸಿದ್ಧಾರ್ಥನ ಮನಸ್ಸಿನಲ್ಲಿ ದುಃಖ ಉಂಟಾಯಿತು. ಇನ್ನೊಮ್ಮೆ ಸಿದ್ಧಾರ್ಥನ ಸೋದರ ದೇವದತ್ತನು ಉದ್ಯಾನವನದಲ್ಲಿ ಹಾರಾಡುತ್ತಿದ್ದ ಹಂಸಕ್ಕೆ ಬಾಣ ಹೂಡಿದನು. ಆ ಪಕ್ಷಿಯು ನೋವನ್ನು ತಾಳಲಾರದೆ ಕೆಳಕ್ಕೆ ಬಿದ್ದು ಒದ್ದಾಡಿತು. ಇದರಿಂದಲೂ ಸಿದ್ಧಾರ್ಥನು ಸಾಕಷ್ಟು ನೊಂದು ಅದನ್ನು ಉಪಚರಿಸಿ ಗುಣಪಡಿಸಿದನು.


ಹೀಗೆ ಜೀವನವನ್ನು ಸಾಗಿಸುತ್ತಿದ್ದ ಸಿದ್ಧಾರ್ಥನು ತನ್ನ ಸಾರಥಿಯಾದ ಚೆನ್ನನೊಂದಿಗೆ ನಗರ ಸಂಚಾರ ಮಾಡುತ್ತಿದ್ದನು. ಆಗ ಶವ, ರೋಗಿ ಹಾಗೂ ವೃದ್ಧನನ್ನು ಕಂಡು ಬದುಕಿನಲ್ಲಿ ಖಾಯಿಲೆ, ವೃದ್ಧಾಪ್ಯ, ಸಾವು ಎಲ್ಲರಿಗೂ ಅನಿವಾರ್ಯವೇ ಎಂಬ ಪ್ರಶ್ನೆ ಹುಟ್ಟಿ ತಾನೂ ಎಲ್ಲವನ್ನೂ ತೊರೆದು ವಿರಾಗಿಯಾಗುವ ಕುರಿತು ಆಲೋಚಿಸಿದನು.


ತನ್ನ 26ನೇ ವಯಸ್ಸಿನಲ್ಲಿಯೇ ಸಂಸಾರವನ್ನು ತೊರೆದು ಗಯಾಗೆ ತೆರಳಿ ಅಲ್ಲಿರುವ ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನದಲ್ಲಿ ತೊಡಗುತ್ತಾನೆ. ಹೀಗೆ 47 ದಿವಸಗಳ ಕಠಿಣ ತಪಸ್ಸು ಕೈಗೊಂಡು ವೈಶಾಖ ಶುದ್ಧ ಪೌರ್ಣಮೆಯಂದು ಜ್ಞಾನೋದಯ ಹೊಂದುತ್ತಾನೆ. ಬೋಧಿವೃಕ್ಷದ ಕೆಳಗೆ ಕುಳಿತ ಸಿದ್ಧಾರ್ಥನು ಬುದ್ಧನಾಗುತ್ತಾನೆ. ರಾಜಕುಮಾರನಾಗಿದ್ದರೂ ಕೂಡಾ ಆ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕತೆಯತ್ತ ಹೊರಳಿದ ಬುದ್ಧನು ಈ ಜಗತ್ತಿನಲ್ಲಿ ಶಾಂತಿಯ ಭೋದನೆ ಮಾಡಿದವರಲ್ಲಿ ಮೊದಲನೆಯವನಾಗುತ್ತಾನೆ.
ಅಹಿಂಸೆ, ಸತ್ಯವಾಕ್ಯ ಪರಿಪಾಲನೆ, ಆಸೆಯೇ ದುಖಃಕ್ಕೆ ಮೂಲ, ಹೃದಯದಲ್ಲಿ ಪ್ರೀತಿ ಇದ್ದಾಗ ಯಾವುದೇ ನಕಾರಾತ್ಮಕ ವಿಷಯಗಳಿಗೆ ಅವಕಾಶವಿರುವುದಿಲ್ಲ, ಯಾವತ್ತೂ ವರ್ತಮಾನದಲ್ಲಿ ಬದುಕಿ ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ, ಸಕಲ ಜೀವಿಗಳಲ್ಲಿ ಸಹನೆ ಇರಲಿ ಮುಂತಾದವುಗಳು ಬುದ್ಧನ ತತ್ವಗಳಾಗಿದ್ದವು. ಸಂಪೂರ್ಣ ಮುಕ್ತಿ ಮಾರ್ಗದ ಸಿದ್ಧಿಗಾಗಿ ತ್ರಿಪಿಟಕಗಳನ್ನು ಭೋದಿಸಿದನು. ಅವುಗಳೆಂದರೆ: 1. ವಿನಯ ಪಿಟಕ (ಇದರಲ್ಲಿ ಭಿಕ್ಕು ಹಾಗೂ ಭಿಕ್ಕು ಸಂಘಗಳ ನಡವಳಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದೆ.), 2. ಸುತ್ತ ಪಿಟಕ (ಇದರಲ್ಲಿ ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ-ಉಪಕಥೆಗಳನ್ನು ಸಂಗ್ರಹಿಸಲಾಗಿದೆ), 3. ಅಬಿಧಮ ಪಿಟಕ (ಇದರಲ್ಲಿ ಸುತ್ತ ಪಿಟಕದಲ್ಲಿನ ಬೋಧನೆಗಳನ್ನು, ಮೂಲ ತತ್ವಗಳನ್ನು ವಿಶಾದೀಕರಿಸಲಾಗಿದೆ)


ತನ್ನ 80ನೇ ವಯಸ್ಸಿನಲ್ಲಿ ಭಾರತದ ಉತ್ತರ ಪ್ರದೇಶ ರಾಜ್ಯದ ಕುಶಿನಗರದಲ್ಲಿ ಬುದ್ಧನ ಮರಣವಾಗುತ್ತದೆ. ಸುಮಾರು 45 ವರ್ಷಗಳ ಕಾಲ ಹಲವು ದೇಶಗಳಲ್ಲಿ ಬೌದ್ಧಧರ್ಮವನ್ನು ಪ್ರಸಾರ ಮಾಡಿ ಜನರಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಅಳಿಸಿಹೋಗಲು ಅಹಿಂಸೆಯೇ ಪರಮ ಧರ್ಮ ಎಂದು ಸದಾ ಸಾರಿದ ಮಹಾಪುರುಷನ ಮರಣವಾದರೂ ಆತನ ತತ್ವಗಳು ಅಮರವಾಗುತ್ತವೆ. ಹೀಗಾಗಿ ಬುದ್ಧನ ನೆನಪಿಗಾಗಿ ಬುದ್ಧ ಪೂರ್ಣಿಮೆಯನ್ನು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಆಚರಿಸಲಾಗುತ್ತದೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!