Sunday, April 28, 2024

ಭರದಿಂದ ಸಾಗುತ್ತಿದೆ ಮರವಂತೆ ಕರಾವಳಿ ಮಾರ್ಗದ ಮರು ಸಂಪರ್ಕ ಕಾಮಗಾರಿ


ಬೈಂದೂರು : ಕಡಲ್ಕೊರೆತ ಮತ್ತು ಚಂಡಮಾರುತದ ಕಾರಣದಿಂದ ಕಡಿದುಹೋದ ಮರವಂತೆ ಕರಾವಳಿ ಮಾರ್ಗದ ಸಂಪರ್ಕವನ್ನು ತಾತ್ಕಾಲಿಕ ನೆಲೆಯಲ್ಲಿ ಮರುಸ್ಥಾಪಿಸುವ ಕಾಮಗಾರಿ ಈಗ ಭರದಿಂದ ಸಾಗಿದೆ. ಇನ್ನು ಒಂದು ವಾರದಲ್ಲಿ ಕೆಲಸ ಮುಗಿದು, ಜನ, ವಾಹನ ಸಂಚಾರ ಸುಗಮವಾಗಲಿದೆ.


ಮರವಂತೆಯಲ್ಲಿ ಅರ್ಧದಲ್ಲಿ ಸ್ಥಗಿತವಾಗಿರುವ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರ ದಿಕ್ಕಿನ ತೀರದಲ್ಲಿ ಬಿಟ್ಟುಬಿಟ್ಟು ಕಡಲ್ಕೊರೆತ ಸಂಭವಿಸಿತ್ತು. ಅದರಿಂದ ಒಂದಷ್ಟು ಭೂಭಾಗ, ತೆಂಗಿನ ಮರಗಳು ಸಿಲುಕಿ ಸಮುದ್ರ ಸೇರಿದ್ದುವು. ಅದರ ಬೆನ್ನಲ್ಲಿ, ಉರಿಯುವ ಬೆಂಕಿಗೆ ತೈಲ ಸುರಿದಂತೆ ಕಳೆದ ವಾರ ಅಪ್ಪಳಿಸಿದ ತೌತೆ ಚಂಡಮಾರುತ ಸಮುದ್ರದ ಮಟ್ಟವನ್ನು ಹೆಚ್ಚಿಸಿತು. ತೆರೆಗಳು ರುದ್ರನರ್ತನ ನಡೆಸಿದುವು. ಅದರ ಪರಿಣಾಮವಾಗಿ ಸುಮಾರು 350 ಮೀಟರು ಉದ್ದ, 50 ಮೀಟರು ಅಗಲದ ಭೂಭಾಗ, ನೂರಾರು ತೆಂಗಿನ ಮರಗಳು, ಹತ್ತಾರು ಮೀನುಗಾರಿಕಾ ಶೆಡ್‌ಗಳು ನೋಡನೋಡುತ್ತಿದ್ದಂತೆ ಕಡಲು ಪಾಲಾದುವು. ಅಷ್ಟೇ ಉದ್ದದ ಕಾಂಕ್ರೀಟ್ ರಸ್ತೆ ತುಂಡಾಗಿ, ಛಿದ್ರಗೊಂಡಿತು. ಅದರೊಂದಿಗೆ ಮೀನುಗಾರರ ವಸತಿ ಪ್ರದೇಶದ ಏಕೈಕ ಸಂಪರ್ಕದ ಕೊಂಡಿ ತುಂಡಾಯಿತು. ತೆರೆಗಳಿಗೆ ಒಂದು ಹಂತದ ತಡೆಯಾಗಿದ್ದ ರಸ್ತೆ ಕುಸಿದ ಕಾರಣ ಸರಾಗವಾಗಿ ಮುಂದೊತ್ತಿದ ತೆರೆಗಳು ಮನೆಗಳ ಮೇಲೆ ದಾಳಿ ಮಾಡುವ ಹಂತ ತಲುಪಿದುವು. ದಿಕ್ಕು ತೋಚದಂತಾದ ಮೀನುಗಾರರು ತಾವೇ ಶ್ರಮ ವಹಿಸಿ, ಕಲ್ಲು, ಮರಳಿನ ಚೀಲಗಳ ತಡೆ ನಿರ್ಮಿಸಿ ಮನೆಗಳಿಗೆ ಹಾನಿಯಾಗುವುದನ್ನು ದೂರ ಮಾಡಿದರು.


ಈ ಹಂತದಲ್ಲಿ ಭೇಟಿ ನೀಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಕಂದಾಯ ಸಚಿವ ಆರ್. ಅಶೋಕ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಮರುದಿನದಿಂದಲೇ ರಸ್ತೆ ಸಂಪರ್ಕ ಮರುಸ್ಥಾಪಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಂತೆ ಈಗ ಇಲ್ಲಿ ಕುಸಿದು ಹೋದ ರಸ್ತೆಯ ಪಶ್ಚಿಮ ಮಗ್ಗುಲನ್ನು ಕಲ್ಲುಗಳಿಂದ ರಕ್ಷಿಸಿ, ಒಳಭಾಗದಲ್ಲಿ ಮರಳು ಮತ್ತು ಮಣ್ಣು ಸುರಿದು ಕಚ್ಚಾ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಕಂಗೆಟ್ಟಿದ್ದ ಮೀನುಗಾರರಿಗೆ ಇದರಿಂದ ಕೆಲಮಟ್ಟಿನ ತೃಪ್ತಿ ಆಗಿದೆ. ಈ ಪ್ರದೇಶದಲ್ಲಿ ಸಮೀಪದ ಮಾರಸ್ವಾಮಿ ಎಂಬಲ್ಲಿ ಹೆದ್ದಾರಿ ರಕ್ಷಣೆಗೆ ರಚಿಸಿದ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಮಾದರಿಯ ಅಲೆತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಮೀನುಗಾರರು ಸಚಿವರು ಮತ್ತು ಶಾಸಕರನ್ನು ಒತ್ತಾಯಿಸಿದ್ದಾರೆ. ಅದು ಬೇಗ ಕೈಗೂಡುತ್ತದೆ ಎಂಬ ವಿಸ್ವಾಸವಿದೆ ಎಂದು ಇಲ್ಲಿನ ನಿವಾಸಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ ಖಾರ್ವಿ ಆಶಾವಾದ ವ್ಯಕ್ತಪಡಿಸಿದ್ದಾರೆ.


ಶೀಘ್ರವೇ ಶಾಶ್ವತ ರಸ್ತೆ ನಿರ್ಮಾಣ : ಮರವಂತೆ ಕರಾವಳಿಯಲ್ಲಿ ಕಡಿತಗೊಂಡ ಸಂಪರ್ಕ ಮರುಸ್ಥಾಪನೆಗೆ ತಕ್ಷಣ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ. ಬೈಂದೂರು ಕ್ಷೇತ್ರದ ವಿವಿಧೆಡೆ ಸಂಭವಿಸಿದ ಕಡಲ್ಕೊರೆತ ತಡೆಗೂ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಕಡೆಗಳಲ್ಲಿ ಮಳೆಗಾಲದ ಬಳಿಕ ಶಾಶ್ವತ ಕಾಮಗಾರಿ ನಡೆಸಲಾಗುವುದು. -ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!