Monday, May 13, 2024

ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಂಡಾಯ ಅಭ್ಯರ್ಥಿ ಕೆ.ಎಸ್‌ ಈಶ್ವರಪ್ಪ ಅವರ ಸಂಕ್ಷಿಪ್ತ ಪರಿಚಯ !

ಶರಣಪ್ಪ ಮತ್ತು ಬಸಮ್ಮ ದಂಪತಿಗಳ 4ನೇ ಪುತ್ರರಾಗಿ ಕೆ. ಎಸ್. ಈಶ್ವರಪ್ಪ 1948ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಶಾಲಾ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡರು. ನಗರದ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ ವಿದ್ಯಾಭ್ಯಾಸ ಮುಗಿಸಿ ನಂತರ ನ್ಯಾಷನಲ್ ಕಾಮರ್ಸ್ ಕಾಲೇಜು ಸೇರಿದರು. ಎರಡನೇ ವರ್ಷದ ಬಿ.ಕಾಂ. ಓದುವಾಗಲೇ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ನಾಯಕತ್ವದ ಗುಣ ತೋರಿದ್ದರು.

ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳ ನಂಬಿಕೆಗೆ ಪಾತ್ರರಾದರು. ಈ ಸಂದರ್ಭದಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯರಾದರು. ಸದಾ ಮುನ್ನುಗ್ಗುವ ಸ್ವಭಾವದಿಂದಾಗಿ ಶೀಘ್ರವಾಗಿ ಎಬಿವಿಪಿಯ ರಾಜ್ಯ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ದಾರಿ ಹೊತ್ತರು. ಸಂಘದ ಶಾಖೆಗಳಲ್ಲಿ ಮೈಗೂಡಿಸಿಕೊಂಡಿದ್ದ ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿಯ ಗುಣಗಳಿಂದಾಗಿ 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಹಜವಾಗಿಯೇ ಹೋರಾಟಕ್ಕೆ ಧುಮುಕಿದರು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚಳುವಳಿ ನಡೆಸಿ, ಹಲವಾರು ತಿಂಗಳ ಸೆರೆಮನೆ ವಾಸ ಅನುಭವಿಸಿದರು.

ವಿದ್ಯಾಭ್ಯಾಸದ ನಂತರ ತಮ್ಮದೇ ಸ್ವಂತ ವ್ಯವಹಾರ ಆರಂಭಿಸಿದ ಕೆ. ಎಸ್. ಈಶ್ವರಪ್ಪ ಸ್ವಾಮಿ ವಿವೇಕಾನಂದರಿಂದ ತೀವ್ರವಾಗಿ ಆಕರ್ಷಿತರಾಗಿದ್ದರು. ಅವರ ಉದ್ದಿಮೆಗಳೆಲ್ಲವೂ ‘ವಿವೇಕ್’ ಎಂಬ ಏಜೆನ್ಸೀಸ್ ಹಾಗೂ ವಿವೇಕ್ ಅಗರಬತ್ತಿ ಹೆಸರಿನಲ್ಲಿದ್ದವು. ಉದ್ಯಮಗಳನ್ನು ನಡೆಸುವ ಹಂತದಲ್ಲಿಯೇ ಜಯಲಕ್ಷ್ಮೀ ಜೊತೆ ವಿವಾಹವಾದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಜನ ಸಂಘ ನಂತರ ಭಾರತೀಯ ಜನತಾ ಪಾರ್ಟಿಯ ತಳಹಂತದ ಕಾರ್ಯಕರ್ತರಾಗಿ ರಾಜಕೀಯ ಚಟುವಟಿಕೆ ಆರಂಭಿಸಿದರು. ಶಿವಮೊಗ್ಗ ನಗರ ಘಟಕದ ಕಾರ್ಯದರ್ಶಿಯಾಗಿ, ನಂತರ ಶಿವಮೊಗ್ಗ ನಗರ ಸಮಿತಿಯ ಬಿಜೆಪಿ. ಅಧ್ಯಕ್ಷರಾಗಿ ಕೆಲಸ ಮಾಡಿದರು. ಎಲ್ಲರೊಡನೆ ಬೆರೆಯುವ ಸ್ನೇಹ ಪ್ರವೃತ್ತಿ, ಹಾಸ್ಯಭರಿತ ಮಾತುಗಳು ಹಾಗೂ ಸರಳ ವ್ಯಕ್ತಿತ್ವ ಈಶ್ವರಪ್ಪಗೆ ಒಳ್ಳೆ ಹೆಸರು ತಂದಿತು.
ವಿಧಾನಸಭೆ ಚುನಾವಣೆಗೆ ಸ್ಪರ್ಧೆ

ಬಿಜೆಪಿ ಪಕ್ಷ 1989ರಲ್ಲಿ ಶಿವಮೊಗ್ಗದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತು. ಮೊದಲ ಚುನಾವಣೆಯಲ್ಲೇ ಜಯಗಳಿಸಿದರು. ಅಂದು ಸಚಿವರಾಗಿದ್ದ ಕೆ. ಹೆಚ್. ಶ್ರೀನಿವಾಸರಂತಹ ದೊಡ್ಡ ನಾಯಕರನ್ನು ಸೋಲಿಸುವ ಮೂಲಕ ರಾಜ್ಯದ ಗಮನ ಸೆಳೆದರು. ಮೊದಲ ಅವಧಿಯಲ್ಲೇ ಶಿವಮೊಗ್ಗದ ಕುಡಿಯುವ ನೀರಿನ ಯೋಜನೆ, ಸರ್ಕಾರಿ ಬಸ್ ನಿಲ್ದಾಣ, ವಸತಿಯುಕ್ತ ಮಹಿಳಾ ಪಾಲಿಟೆಕ್ನಿಕ್, ದೂರದರ್ಶನ ಕೇಂದ್ರ ಮೊದಲಾದ ಯೋಜನೆ ಈಶ್ವರಪ್ಪ ಪ್ರಯತ್ನದಿಂದ ಸಾಕಾರಗೊಂಡವು.

ಇದರ ಜೊತೆಗೆ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತರು. ಜಿಲ್ಲಾ ಘಟಕದ ನಂತರ 1991ರಲ್ಲಿ ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷರಾದರು. ಎಲ್ಲೆಡೆ ಯುವ ವೃಂದವನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡರು, ಬಿರುಸಿನಿಂದ ಪಕ್ಷದ ಸಂಘಟನೆಗೆ ಮುಂದಾದರು. ಅವರು ತೋರಿದ ಕುಶಲತೆ, ಜಾಣ್ಮೆ ಹಾಗೂ ಅಚಲ ನಿಷ್ಠೆಗಳು, ಸಹಜವಾಗೆ ಇವರಿಗೆ ಒಳ್ಳೆಯ ಹೆಸರು ತಂದಿತು.

ಕುರುಬ ಸಮುದಾಯದ ನೇತಾರ

1993ರಲ್ಲಿ ಯಡಿಯೂರಪ್ಪ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. ಈ ಮೂಲಕ ರಾಜಕೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾದ ಮೊದಲ ಹಿಂದುಳಿದ ವರ್ಗದ (ಕುರುಬ) ನಾಯಕ ಎಂಬ ಕೀರ್ತಿಗೆ ಈಶ್ವರಪ್ಪ ಪಾತ್ರರಾದರು. ತಮ್ಮ ಸಾಮರ್ಥ್ಯದಿಂದಲೇ 1995ರಲ್ಲಿ ಎರಡನೇ ಅವಧಿಗೂ ರಾಜ್ಯಾಧ್ಯಕ್ಷರಾಗಿ ಚುನಾಯಿತರಾದರು. ಅಂದು ವಿಧಾನ ಸಭೆಯಲ್ಲಿ ಕೇವಲ 4 ಶಾಸಕರನ್ನು ಹೊಂದಿದ್ದ ಬಿಜೆಪಿ ಕೆ. ಎಸ್. ಈಶ್ವರಪ್ಪ ನಾಯಕತ್ವದಲ್ಲಿ 40 ಸ್ಥಾನಗಳನ್ನು ಪಡೆಯಿತು.

ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟ, ಶ್ರೀನಗರಕ್ಕೆ ತಿರಂಗಯಾತ್ರೆ, ಬಗರ್ ಹುಕುಂ ಚಳವಳಿ, ಅಯೋಧ್ಯೆರಾಮ ಮಂದಿರದ ಹೋರಾಟಗಳಿಂದ ಈಶ್ವರಪ್ಪ ಪ್ರಸಿದ್ಧಿ ಪಡೆದರು. 1989 ಹಾಗೂ 1994ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಸೋಲು ಕಂಡರು. ಆದರೆ ಕೇಂದ್ರ ಸರ್ಕಾರವು ಅವರನ್ನು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾನ್ನಾಗಿ ನೇಮಿಸಿತು. ಅಲ್ಲಿಯವರೆಗೂ ಕೇವಲ ಸಂಶೋಧನಾ ಲ್ಯಾನ್‌ಗಳಿಗೆ ಮಾತ್ರ ಸೀಮಿತವಾಗಿದ್ದ ರೇಷ್ಮೆ ಮಂಡಳಿಯನ್ನು ರೈತರ ಹೊಲಗಳಿಗೆ ತಂದ ಈಶ್ವರಪ್ಪ ತಾವು ರೈತರ, ಜನಸಾಮಾನ್ಯರ ಸ್ನೇಹಿತ ಎಂಬುದನ್ನು ಸಾಬೀತುಪಡಿಸಿದರು. 2001ರ ಕನಕಪುರ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಎದುರಿಸುವ ಮೂಲಕ ಸಂಸತ್ ಚುನಾವಣೆಗೆ ಸ್ಪರ್ಧಿಸಿದ ಈಶ್ವರಪ್ಪ ರಾಷ್ಟ್ರದ ಗಮನ ಸೆಳೆದರು. ಚುನಾವಣೆಯ ನಂತರ ಮತ್ತೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಂಡರು.

ಜಲಸಂಪನ್ಮೂಲ ಸಚಿವರಾಗಿ ಕಾರ್ಯ

2004ರ ಚುನಾವಣೆಯಲ್ಲಿ 3ನೇ ಅವಧಿಗೆ ಶಿವಮೊಗ್ಗದಿಂದ ಶಾಸಕರಾದರು. ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯರಾಗಿದ್ದು, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಅಧ್ಯಕ್ಷರಾದರು. 2007ರಲ್ಲಿ ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. ಕಳಸಾ-ಬಂಡೂರಿ ಯೋಜನೆಯನ್ನು ಆರಂಭಿಸುವಲ್ಲಿ ಈಶ್ವರಪ್ಪ ತೋರಿದ ಧೈರ್ಯ ಜನ ಮೆಚ್ಚುಗೆ ಗಳಿಸಿತು. ಹತ್ತಾರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ 39 ಯೋಜನೆಗಳನ್ನು ಮುಗಿಸಿದ್ದೂ ಗಮನಾರ್ಹ ಸಾಧನೆ. ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ, ಕೆರೆಗಳ ಪುನರುಜ್ಜೀವನದಂತಹ ಜನಪರ ಕಾರ್ಯಗಳಿಂದ ‘ಝೀ’ ಟೆಲಿವಿಷನ್ ನಡೆಸಿದ ಸ್ಪರ್ಧೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಎಸ್ಎಂಎಸ್ ಗಳಿಸಿ ರಾಜ್ಯದ ಅತ್ಯುತ್ತಮ ಸಚಿವ ಎಂಬ ಮನ್ನಣೆ ಗಳಿಸಿದರು. 2008ರಲ್ಲಿ ನಡೆದ ಚುನಾವಣೆಯಲ್ಲಿ 4ನೇ ಬಾರಿಗೆ ಗೆದ್ದದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದರು.

ಭಾರತೀಯ ಜನತಾ ಪಾರ್ಟಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತದನಂತರ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದರು. 2018ರ ಚುನಾವಣೆಯಲ್ಲಿ ಮತ್ತೆ ಶಿವಮೊಗ್ಗ ನಗರ ಕ್ಷೇತ್ರದಿಂದ ಗೆದ್ದರು. 2019ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

4೦% ಕಮಿಷನ್‌ ಪ್ರಕರಣದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ. ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸದ್ಯ ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ.

ಬಂಡಾಯ ಸ್ಪರ್ಧೆಯಿಂದ ಕಣಕ್ಕಿಳಿದಿದ್ದ ಈಶ್ವರಪ್ಪ ಅವರನ್ನು ಸಮಾಧಾನ ಪಡಿಸಲು ಬಿಜೆಪಿ ಸಂದಾನ ಸಭೆ ಕರೆದಿತ್ತು. ಸಂದಾನಕ್ಕೂ ಬಗ್ಗದ ಈಶ್ವರಪ್ಪ ಅವರನ್ನು ಬಿಜೆಪಿ ಈಗ ಉಚ್ಚಾಟನೆ ಮಾಡಿದೆ ಎನ್ನುವುದು ಕೂಡ ಇಲ್ಲಿ ಉಲ್ಲೇಖಾರ್ಹ.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!