Wednesday, September 11, 2024

ಶಿವಮೊಗ್ಗ ಲೋಕಸಭಾ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರ ಸಂಕ್ಷಿಪ್ತ ಪರಿಚಯ !

2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಅವರು ಮತ್ತೆ ಹತ್ತು ವರ್ಷದ ಬಳಿಕ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ನಟ ಶಿವರಾಜ್‌ಕುಮಾರ್ ಅವರ ಪತ್ನಿಯಾಗಿರುವ ಗೀತಾ ಅವರು ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಒಂದು ಕಡೆ ರಾಜಕಾರಣ, ಮತ್ತೊಂದು ಕಡೆ ಸಿನಿಮಾ. ಹೀಗೆ ಎರಡು ಪ್ರಬಲ ಕುಟುಂಬಗಳ ಹಿನ್ನೆಲೆಯುಳ್ಳವರು ಗೀತಾ ಶಿವರಾಜ್‌ಕುಮಾರ್. ಶಿವಮೊಗ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ಅವರಿಗೆ ಚುನಾವಣಾ ಅಖಾಡ ತೀರಾ ಹೊಸತೇನಲ್ಲ. ಈಗಾಗಲೇ ಎರಡು ಬಾರಿ ಅವರು ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದರು. ಆದರೆ ಈ ಎರಡೂ ಸಲ ಅವರಿಗೆ ಸೋಲಿನ ಆಘಾತ ಎದುರಾಗಿತ್ತು. ಆದರೆ ಈ ಬಾರಿ ಕಣಕ್ಕಿಳಿಯುವಾಗ ಅವರು ಪ್ರತಿನಿಧಿಸುವ ಪಕ್ಷ ಬದಲಾಗಿದೆ.

ಖ್ಯಾತ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮಗಳು ಗೀತಾ, ತಂದೆ ಹಾಗೂ ಸಹೋದರರಂತೆ ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಅತ್ತ ವರನಟ ಡಾ ರಾಜ್‌ಕುಮಾರ್ ಹಾಗೂ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸೊಸೆ ಮತ್ತು ನಟ ಶಿವರಾಜ್ ಕುಮಾರ್ ಅವರ ಪತ್ನಿಯಾಗಿ ಸಿನಿಮಾ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕಿಯಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

58 ವರ್ಷದ ಗೀತಾ ಶಿವರಾಜ್‌ಕುಮಾರ್ ಅವರು ಈ ಹಿಂದೆ ಜೆಡಿಎಸ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದರು. 1986ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಮದುವೆಯಾದರು.

ತಂದೆ ಎಸ್ ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಮಗಳಾಗಿ ಶಿವಮೊಗ್ಗದ ಸೊರಬ ಜಿಲ್ಲೆಯಲ್ಲಿ ಜನಿಸಿದರು. ನಟ ಹಾಗೂ ರಾಜಕಾರಣಿ ಕುಮಾರ್ ಬಂಗಾರಪ್ಪ, ರಾಜಕಾರಣಿ ಮಧು ಬಂಗಾರಪ್ಪ ಇವರ ಸಹೋದರರು. ಸುಜಾತ ಮತ್ತು ಅನಿತಾ ಇವರ ಇಬ್ಬರು ಸಹೋದರಿಯರು.

ತಂದೆಯಂತೆಯೇ ಸಹೋದರರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದರಿಂದ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಗೀತಾ ಶಿವರಾಜ್ ಕುಮಾರ್ ಕೂಡ ರಾಜಕೀಯದ ಸೆಳೆತಕ್ಕೆ ಒಳಗಾದವರು. ಬಂಗಾರಪ್ಪ ಅವರು ಶಾಸಕರಾಗಿದ್ದಾಗ ಗೀತಾ ಅವರು ಎರಡು ವರ್ಷದ ಮಗುವಾಗಿದ್ದರು.

ಸಹೋದರ ಮಧು ಬಂಗಾರಪ್ಪ ಅವರ ಹೆಜ್ಜೆಯನ್ನು ಗೀತಾ ಅನುಸರಿಸುತ್ತಿದ್ದಾರೆ. 2023ರ ಏಪ್ರಿಲ್‌ನಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡರು. ಅದಕ್ಕೂ ಮುನ್ನ ಸೊರಬ ವಿಧಾನಸಭೆ ಚುನಾವಣೆಯಲ್ಲಿ ಸಹೋದರನ ಪರ ಪ್ರಚಾರ ನಡೆಸಿದ್ದರು.

ಮೊದಲ ಚುನಾವಣೆಯಲ್ಲಿ ಸೋಲು

2024ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರವು ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವಿನ ಸಮರಕ್ಕೆ ಮತ್ತೆ ಸಾಕ್ಷಿಯಾಗಲಿದೆ. 2019ರ ಚುನಾವಣೆಯಲ್ಲಿ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2018ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಕೂಡ ಬಿವೈ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ಪೈಪೋಟಿ ನಡೆದಿತ್ತು. 2014ರಲ್ಲಿ ರಾಘವೇಂದ್ರ ಅವರ ತಂದೆ ಬಿಎಸ್ ಯಡಿಯೂರಪ್ಪ ಅವರ ಎದುರು ಗೀತಾ ಕಣಕ್ಕಿಳಿದಿದ್ದರು. ಆದರೆ ಈ ಎಲ್ಲಾ ಚುನಾವಣೆಗಳಲ್ಲಿ ಮತದಾರ ಬಿಜೆಪಿ ಕೈಹಿಡಿದಿದ್ದ.

2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಮೂರನೇ ಸ್ಥಾನ ಪಡೆದು ಸೋಲು ಕಂಡಿದ್ದರು. ಆಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್‌ನಿಂದ ಮಂಜುನಾಥ್ ಭಂಡಾರಿ ಕಣಕ್ಕಿಳಿದಿದ್ದರು. ಇದರಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ 6.06 ಲಕ್ಷ ಮತಗಳು ಸಿಕ್ಕಿದ್ದರೆ, ಗೀತಾ ಶಿವರಾಜ್‌ಕುಮಾರ್ ಅವರು 2.40 ಲಕ್ಷ (ಶೇ 21.3) ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಎರಡನೇ ಸ್ಥಾನ ಪಡೆದಿದ್ದ ಮಂಜುನಾಥ್ ಭಂಡಾರಿ ಅವರಿಗಿಂತ ಕೇವಲ 2 ಸಾವಿರ ಕಡಿಮೆ ಮತಗಳನ್ನು ಪಡೆದಿದ್ದರು. 2024ರ ಲೋಕಸಭಾ ಚುನಾಚಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ಧಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!