spot_img
Tuesday, February 18, 2025
spot_img

ಗಿರಿ ಶಿಖರಗಳ ಸಿಹಿಮೊಗ್ಗೆಯಲ್ಲಿ ಚುನಾವಣೆಯ ಕಾವು | ತ್ರಿಕೋನ ಸ್ಪರ್ಧೆಗೆ ಅಖಾಡ ಸಿದ್ಧ !

ಶಿವಮೊಗ್ಗ ಲೋಕಸಭಾ ಕ್ಷೇತ್ರ ಕರ್ನಾಟಕ ರಾಜ್ಯದ 28 ಲೋಕಸಭಾ (ಸಂಸದೀಯ) ಕ್ಷೇತ್ರಗಳ ಪೈಕಿ ಒಂದಾಗಿದೆ. ಸದ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿ ದ್ವಯರ ಕುಟುಂಬಗಳ ಪ್ರತಿಷ್ಠೆಯ ಅಖಾಡವೆಂದರೇ ತಪ್ಪಾಗಲಾರದು. ಕಳೆದ ಮೂರು ನಾಲ್ಕು ಚುನಾವಣೆಗಳಿಂದಲೂ ಶಿವಮೊಗ್ಗವೆಂದರೆ ಬಿ.ಎಸ್.ಯಡಿಯೂರಪ್ಪ ವರ್ಸಸ್‌ ಬಂಗಾರಪ್ಪ ಕುಟುಂಬಗಳ ನಡುವಿನ ಕಣವಾಗಿಯೇ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬವೇ ಮೇಲುಗೈ ಸಾಧಿಸುತ್ತಾ ಬಂದಿದೆ.

ಸದ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಅವಲೋಕಿಸುವುದಾದರೇ, ಕ್ಷೇತ್ರದ ವ್ಯಾಪ್ತಿಗೆ  ಒಳಪಡುವ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಉಡುಪಿ ಜಿಲ್ಲೆಯ ಬೈಂದೂರು (ಬಿಜೆಪಿ) ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು, ಮೂವರು ಕಾಂಗ್ರೆಸ್ ಶಾಸಕರು, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ.

1952ರ ಚುನಾವಣೆಯಿಂದ ಈವರೆಗೆ- ಕೆ.ಜಿ.ಒಡೆಯರ್‌, ಎಸ್.ವಿ.ಕೃಷ್ಣಮೂರ್ತಿರಾವ್‌, ಜೆ.ಎಚ್.ಪಟೇಲ್‌, ಟಿ.ವಿ.ಚಂದ್ರಶೇಖರಪ್ಪ, ಎ.ಆರ್‌.ಭದ್ರಿನಾರಾಯಣ್, ಎಸ್‌.ಟಿ.ಕೌದ್ರಿ, ಕೆ.ಜಿ.ಶಿವಪ್ಪ, ಎಸ್.ಬಂಗಾರಪ್ಪ, ಆಯನೂರು ಮಂಜನಾಥ್‌, ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಕರಿಸಿದ ಸಂಸದರಾಗಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ7,31,779 ಪುರುಷರು, 7,51,159 ಮಹಿಳೆಯರು ಸೇರಿದಂತೆ 14,82,938 ಮತದಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಲಿಂಗಾಯತರು, ಈಡಿಗರು (ಬಿಲ್ಲವ/ದೀವರ/ನಾಮಧಾರಿ) ಹೆಚ್ಚಿರುವ ಶಿವಮೊಗ್ಗ ಲೋಗಸಭಾ ಕ್ಷೇತ್ರದಲ್ಲಿ ಗೌಡರು, ಇತರ ಹಿಂದುಳಿದ ಜಾತಿಗಳು, ದಲಿತ ಸಮುದಾಯಗಳು, ಮುಸ್ಲಿಮರೂ ಗಣನೀಯ ಪ್ರಮಾಣದಲ್ಲಿ ಇದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಮತ್ತೊಂದು ಪ್ರಮುಖ ವಿಚಾರವೇನೆಂದರೇ, ಬಹುತೇಕ ಹೆಚ್ಚಿನ ಚುನಾವಣೆಯಲ್ಲಿ ದೀವರು ಹಾಗೂ ಲಿಂಗಾಯತ ಅಭ್ಯರ್ಥಿಗಳ ನಡುವೆಯೇ ಅಖಾಡ ಏರ್ಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಶಿಕಾರಿಪುರದ ಶಾಸಕರೂ ಆಗಿರುವ ಬಿ. ವೈ ವಿಜಯೇಂದ್ರ ಪ್ರಭಾವ, ಹಾಲಿ ಸಂಸದ  ಬಿ. ವೈ. ರಾಘವೇಂದ್ರ ಅವರಿಗಿರುವ ಕ್ಷೇತ್ರದ ಸಂಪರ್ಕ ಮತ್ತು ಹೊಸದಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೂ ಆಗಿರುವ ಮತ್ತು ಸೊರಬ ತಾಲೂಕಿನ ಶಾಸಕರೂ ಆಗಿರುವ ಮಧು ಬಂಗಾರಪ್ಪನವರ ಸಂಘಟನಾ ಚತುರತೆ ಎಲ್ಲವೂ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಮತ್ತಷ್ಟು ಕುತೂಹಲ ಕೆರಳಿಸಿದೆ.

ಇನ್ನು, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಮೇಲೆ ಅಸಮಾಧಾನದಿಂದ ಹಾಗೂ ಹಾವೇರಿಯಲ್ಲಿ ಪುತ್ರ ಕಾಂತೇಶ್‌ಗೆ ಲೋಕಸಭಾ ಕ್ಷೇತ್ರದ ಟಿಕೇಟ್‌ ತಪ್ಪಿಸಿ ದ್ರೋಹ ಬಗೆದಿದ್ದಾರೆ ಎಂದು ಬಹಿರಂಗವಾಗಿಯೇ ಯಡಿಯೂರಪ್ಪ ಹಾಗೂ ಅವರ ಪುತ್ರ ದ್ವಯರ ಮೇಲೆ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ನೇರಾನೇರ ಆರೋಪ ಮಾಡುವ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್‌ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಇಲ್ಲಿ ಕಣದಲ್ಲಿರುವುದು ಈ ಲೋಕಸಭಾ ಕ್ಷೇತ್ರವನ್ನು ಇಡೀ ರಾಜ್ಯವೇ ಕುತೂಹಲದಿಂದ ನೋಡುವ ಹಾಗೆ ಮಾಡಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಸ್‌. ಬಂಗಾರಪ್ಪ ಹಾಗೂ ಬಿ.ಎಸ್. ಯಡಿಯೂರಪ್ಪ ಕುಟುಂಬಗಳ ನಡುವೆ ಈ ಸಲವೂ ಚುನಾವಣೆಯ ಸ್ಪರ್ಧೆ ಏರ್ಪಟ್ಟಿದೆ. ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್‌ ಕ್ರಮವಾಗಿ ಬಿಜೆಪಿ- ಕಾಂಗ್ರೆಸ್‌ನಿಂದ ಮುಖಾಮುಖಿಯಾಗಿದ್ದಾರೆ. ಈ ನಡುವೆ ಕೆ. ಎಸ್‌ ಈಶ್ವರಪ್ಪ ರಾಜಕೀಯ ಮಾಡಿ ಹಿಂದೂ ಮುಖಂಡರನ್ನು ಸೆಳೆಯುವ ನಿರಂತರ ಪ್ರಯತ್ನದಲ್ಲಿದ್ದಾರೆ.

ಬಂಗಾರಪ್ಪ- ಯಡಿಯೂರಪ್ಪ ಕದನದ ಹಿನ್ನೆಲೆಯಲ್ಲಿ ಮುಂಪಂಕ್ತಿಗೆ ಬಂದ ಶಿವಮೊಗ್ಗ ಕ್ಷೇತ್ರ :

2008ರಲ್ಲಿ ಲೋಕಸಭಾ ಕ್ಷೇತ್ರ ಪುನರ್‌ ರಚನೆಯಾಗಿತ್ತು. ಶಿವಮೊಗ್ಗದ ಪರಿಧಿ ಬದಲಾಗಿ, ಚನ್ನಗಿರಿ ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ದಾವಣಗೆರೆ ಲೋಕಸಭೆಗೆ ಸೇರ್ಪಡೆ ಮಾಡಲಾಯಿತು. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಶಿವಮೊಗ್ಗಕ್ಕೆ ಸೇರಿಸಲಾಯಿತು. ಹಿಂದುತ್ವದ ಪ್ರಯೋಗಕ್ಕೆ ಸಿಲುಕಿರುವ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಲು ಯಡಿಯೂರಪ್ಪನವರು ಪ್ರಭಾವ ಬೀರಿದ್ದಾರೆಂಬ ಚರ್ಚೆಯೂ ಬಹಳ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಹಾಗೆ ನೋಡುವುದಾದರೇ, ಇದೊಂದು ಅವೈಜ್ಞಾನಿಕ ಮರು ವಿಂಗಡಣೆಯೂ ಹೌದು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಈ ಬಾರಿ ಮತ್ತೆ ಕ್ಷೇತ್ರ ಮರುವಿಂಗಡಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೈಂದೂರು ಮುಂದಿನ ಕ್ಷೇತ್ರ ಮರು ವಿಂಗಡಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬೇರ್ಪಡುತ್ತದೆ ಎಂಬ ಚರ್ಚೆಗಳೂ ಇವೆ.

2009ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ- ಬಂಗಾರಪ್ಪ ನಡುವೆ ಪ್ರತಿಷ್ಠೆ ಏರ್ಪಟ್ಟಿತ್ತು. ಶಿಕಾರಿಪುರಕ್ಕೆ ಬಂದು ಯಡಿಯೂರಪ್ಪನವರಿಗೆ ಮುಳುವಾಗಿದ್ದ ಬಂಗಾರಪ್ಪನವರನ್ನು ಸೋಲಿಸಲು ಯಡಿಯೂರಪ್ಪ ಸಜ್ಜಾಗಿದ್ದರು. ತಮ್ಮ ಹಿರಿಯ ಪುತ್ರ ರಾಘವೇಂದ್ರರನ್ನು ಬಿಎಸ್‌ವೈ ಅಖಾಡಕ್ಕಿಳಿಸಿದರು. ಅಭ್ಯರ್ಥಿ ರಾಘವೇಂದ್ರರಾದರೂ ಯಡಿಯೂರಪ್ಪನವರೇ ನಿಜವಾದ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಬಂಗಾರಪ್ಪನವರು ಕ್ಷೇತ್ರವನ್ನು ಸುತ್ತಲಿಲ್ಲ. ಆರ್ಥಿಕವಾಗಿಯೂ ದುರ್ಬಲವಾಗಿದ್ದರು. ಯಡಿಯೂರಪ್ಪನವರ ಹಣಬಲದ ಮುಂದೆ ಬಂಗಾರಪ್ಪ ಕಂಗಾಲಾದರೆಂದೇ ರಾಜಕೀಯ ವಿಶ್ಲೇಷಕರು ಇಂದಿಗೂ ಹೇಳುತ್ತಾರೆ. 52,893 ಮತಗಳ ಅಂತರದಲ್ಲಿ ರಾಘವೇಂದ್ರ ವಿರುದ್ಧ ಬಂಗಾರಪ್ಪ ಸೋಲನುಭವಿಸಿದರು.

2013ರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಕಟ್ಟಿ, ಮತ್ತೆ 2014ರ ಲೋಕಸಭಾ ಚುನಾವಣೆಯ  ಸಂದರ್ಭದಲ್ಲಿ ಯಡಿಯೂರಪ್ಪ ತಾವೇ ಬಿಜೆಪಿಯಿಂದ ಹೊರಬಂದು ಕಟ್ಟಿದ್ದ ಕೆಜೆಪಿಯನ್ನು ತಾವೇ ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ್ದ ಮಾತೃ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಬಿಎಸ್‌ವೈ, ಶಿವಮೊಗ್ಗದಿಂದ ಸ್ಪರ್ಧಿಸಿದರು. ಬಂಗಾರಪ್ಪನವರು ನಿಧನರಾದ ಬಳಿಕ, ತಂದೆಯ ಸೋಲಿನ ಸೇಡು ತೀರಿಸಿಕೊಳ್ಳಲು ಮಧು ಬಂಗಾರಪ್ಪ ಬಯಸಿದ್ದರು. ತಮ್ಮ ಸಹೋದರಿ ಗೀತಾರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಿದರು. ಆದರೆ ಗೀತಾ ಶಿವರಾಜ್‌ ಕುಮಾರ್‌ ಯಡಿಯೂರಪ್ಪನವರ ಎದುರು ಹೀನಾಯವಾಗಿ ಸೋಲಬೇಕಾಯಿತು. ಮೂರನೇ ಸ್ಥಾನಕ್ಕೆ ಗೀತಾ ಅವರು ಕುಸಿದರು. ಮೋದಿ ಅಲೆಯಲ್ಲಿ, ಹಿಂದುತ್ವದ ಅಲೆಯಲ್ಲಿ ಯಡಿಯೂರಪ್ಪ ಗೆದ್ದು ಬೀಗಿದರು.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು ಸಿಎಂ ಆಸೆ ಬೆನ್ನೇರಿದರು. ಹೀಗಾಗಿ ಶಿಕಾರಿಪುರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧೆಗಿಳಿದರು. ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮಿದರೂ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ರಚನೆ ಮಾಡಿತ್ತು, ಕೆಲವು ತಿಂಗಳಲ್ಲೇ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹದಿನೇಳು ಶಾಕಸರನ್ನು ಆಪರೇಷನ್‌ ಕಮಲದಲ್ಲಿ ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಈ ಕಾರಣದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರ ತೆರವಾದಾಗ ತಮ್ಮ ಮಗ ರಾಘವೇಂದ್ರರನ್ನು ಉಪಚುನಾವಣೆಗಿಳಿಸಿದರು. ಜೆಡಿಎಸ್‌- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ  ಮಧು ಬಂಗಾರಪ್ಪ ಸ್ಪರ್ಧಿಸಿದರೂ ಬಂಗಾರಪ್ಪ ಕುಟುಂಬದ ಸ್ಪರ್ಧೆಗೆ ಮತ್ತೆ ಸೋಲಾಯಿತು.  52,148 ಮತಗಳ ಅಂತರದಲ್ಲಿ ರಾಘವೇಂದ್ರ ಗೆದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿ. ವೈ ರಾಘವೇಂದ್ರ ಮತ್ತು ಜೆಡಿಎಸ್-ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಎದುರಾದರು. ಮೋದಿ ಅಲೆಯಲ್ಲಿ 2,23,360 ಮತಗಳ ಅಂತರದಲ್ಲಿ ಸುಲಭವಾಗಿ ರಾಘವೇಂದ್ರ ಗೆದ್ದರು. ರಾಘವೇಂದ್ರ 729,872 ಮತಗಳನ್ನು ಪಡೆದರೆ, ಮಧು ಬಂಗಾರಪ್ಪ 5,06,512 ಮತಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಈಗ ಮತ್ತೊಂದು ಲೋಕಸಭಾ ಚುನಾವಣೆ ಬಂದಿದೆ. ಬಂಗಾರಪ್ಪನವರ ಪುತ್ರಿ, ಡಾ. ರಾಜ್‌ ಕುಮಾರ್‌ ಅವರ ಸೊಸೆ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಸಚಿವರೂ ಆಗಿರುವ ಮಧು ಬಂಗಾರಪ್ಪನವರಿಗೆ ಇದು ಪ್ರತಿಷ್ಠೆಯ ಚುನಾವಣೆಯೂ ಹೌದು. ಮಲೆನಾಡು, ಕರಾವಳಿ ಭಾಗದಲ್ಲಿ ಕೇಸರಿ ಹಿಂದುತ್ವದ ಹಿಡಿತಕ್ಕೆ ಸಿಲುಕಿರುವ ಬಿಲ್ಲವ/ನಾಮಧಾರಿ/ಈಡಿಗ/ದೀವರು ಸಮುದಾಯವನ್ನು ಮತ್ತೆ ಮರಳಿ ಕಾಂಗ್ರೆಸ್ ಪಾಳಯಕ್ಕೆ ಮಧು ಬಂಗಾರಪ್ಪ ತರುತ್ತಾರೆಯೇ ಎಂಬುದು ಸದ್ಯದ ಕುತೂಹಲ. ಈಶ್ವರಪ್ಪ ಅವರ ಬಂಡಾಯ ಸ್ಪರ್ಧೆ ಇರುವುದರಿಂದ ಇದು ಕಾಂಗ್ರೆಸ್‌ ಗೆ ಲಾಭ ಎಂಬ ಲೆಕ್ಕಚಾರವೂ ಇದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!